ಪಾಕಿಸ್ತಾನ ಮೂಲದ ಗ್ಯಾಂಗ್‌ಸ್ಟರ್ ಶೆಹಜಾದ್‌ ಭಟ್ಟಿ, ಭಾರತದಲ್ಲಿ ಇತ್ತೀಚೆಗೆ ಬಂಧಿತರಾದ 250 ಜನರು ತನ್ನ ಸಂಘಟನೆಗೆ ಸೇರಿದವರಲ್ಲ ಎಂದು ಹೇಳಿದ್ದಾನೆ. ವಿಡಿಯೋ ಮೂಲಕ ಮೋದಿ ಸರ್ಕಾರಕ್ಕೆ ಸವಾಲು ಹಾಕಿರುವ ಆತ, ತನ್ನ ತಂಡದ ಇನ್ನೂ 3000 ಜನರು ಭಾರತದಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದಾರೆ ಎಂದು ವ್ಯಂಗ್ಯ.

ನವದೆಹಲಿ (ಆ.21): ಕರ್ನಾಟಕದಲ್ಲಿ ಮೂವರು ಸೇರಿದಂತೆ ಭಾರತದಾದ್ಯಂತ ಭದ್ರತಾ ಸಂಸ್ಥೆಗಳು ಇತ್ತೀಚೆಗೆ ಸೆರೆಹಿಡಿದ 250 ಜನರು ತನ್ನ ಸಂಘಟನೆಗೆ ಸೇರಿದವರಲ್ಲ ಎಂದಿರುವ ಪಾಕಿಸ್ತಾನ ಮೂಲದ ಗ್ಯಾಂಗ್‌ಸ್ಟರ್‌ ಶೆಹಜಾದ್‌ ಭಟ್ಟಿ, ನನ್ನ ತಂಡದ ಇನ್ನೂ 3000 ಜನರು ಭಾರತದಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದಾರೆ ಎಂದು ಮೋದಿ ಸರ್ಕಾರಕ್ಕೆ ಸವಾಲು ಹಾಕಿದ್ದಾನೆ.

ನೀವು 300 ಜನರನ್ನು ಬಂಧಿಸಿದರೆ, ನನ್ನ 3,000 ಜನ ಭಾರತದಲ್ಲಿದ್ದಾರೆ

ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಭಟ್ಟಿ, ‘ಭಾರತೀಯ ಅಧಿಕಾರಿಗಳಿಂದ ಬಂಧಿಸಲ್ಪಟ್ಟವರು ನನ್ನ ಸಂಗಡಿಗರಲ್ಲ. ಬದಲಿಗೆ ಅವರೆಲ್ಲ ಕಾಕ್ರೋಚ್‌ ಜನತಾ ಪಕ್ಷಕ್ಕೆ (ಸಿಜೆಪಿ) ಸೇರಿದವರಾಗಿದ್ದಾರೆ. ನೀವು 300 ಜನರನ್ನು ಬಂಧಿಸಿದರೆ, ನನ್ನ 3,000 ಜನ ಭಾರತದಲ್ಲಿ ಇನ್ನೂ ಮುಕ್ತವಾಗಿ ಓಡಾಡಿಕೊಂಡಿದ್ದಾರೆ. ಕಳೆದ 6 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದರೂ ನಮ್ಮನ್ನು ಪತ್ತೆ ಮಾಡುವಲ್ಲಿ ನಿಮ್ಮ ಭದ್ರತಾ ಪಡೆಗಳು ವಿಫಲವಾದವೇ? ಇಷ್ಟು ತಡವಾಗಿ ಕಾರ್ಯಾಚರಣೆ ಆರಂಭಿಸಿದ್ದೇಕೆ?’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಅಂತೆಯೇ, ಬಂಧಿತರ ಗುರುತುಗಳನ್ನು ಬಹಿರಂಗಪಡಿಸಿ, ಅವರಿಂದ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುವಂತೆಯೂ ಚ್ಯಾಲೆಂಜ್‌ ಮಾಡಿದ್ದಾನೆ.

ಇತ್ತೀಚೆಗೆ 14 ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ, ಭಟ್ಟಿ ಗ್ಯಾಂಗ್‌ಗೆ ಸೇರಿದ 253 ಜನರನ್ನು ಬಂಧಿಸಿರುವುದಾಗಿ ಭಾರತ ಸರ್ಕಾರ ಘೋಷಿಸಿತ್ತು.