ಕೇವಲ ಸಿಹಿ ತಿಂದರೆ ಹೊಟ್ಟೆಯಲ್ಲಿ ಹುಳುಗಳಾಗುತ್ತವೆ ಎನ್ನುವುದು ತಪ್ಪು ಕಲ್ಪನೆ. ನೈರ್ಮಲ್ಯದ ಕೊರತೆಯೇ ಈ ಸಮಸ್ಯೆಗೆ ಮೂಲ ಕಾರಣ. ಮಗುವಿನಲ್ಲಿ ಮೇಲೆ ತಿಳಿಸಿದ ಲಕ್ಷಣಗಳಿದ್ದರೆ ಸ್ವಯಂ ಚಿಕಿತ್ಸೆ ಮಾಡದೆ ವೈದ್ಯರನ್ನು ಸಂಪರ್ಕಿಸಿ.
ಇತ್ತೀಚೆಗೆ ಪ್ರಖ್ಯಾತ ಕಾಮಿಡಿಯನ್ ಗೌರವ್ ಕಪೂರ್ ತಮ್ಮ ಹೊಟ್ಟೆ ನೋವು ಮತ್ತು ಅಸಿಡಿಟಿ ಸಮಸ್ಯೆಯಿಂದಾಗಿ ತಪಾಸಣೆಗೆ ಒಳಗಾದಾಗ ಅವರ ಹೊಟ್ಟೆಯಲ್ಲಿ ಜಂತು ಹುಳುಗಳಿರುವುದು (Intestinal Worms) ಪತ್ತೆಯಾಗಿತ್ತು. ಇದು ಕೇವಲ ಮಕ್ಕಳ ಸಮಸ್ಯೆ ಎಂದು ನಾವು ಭಾವಿಸುತ್ತೇವೆ, ಆದರೆ ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಪ್ರಪಂಚದಾದ್ಯಂತ ಸುಮಾರು 150 ಕೋಟಿ ಜನರು ಈ ಪರಾವಲಂಬಿ ಜೀವಿಗಳ ಸೋಂಕಿಗೆ ಒಳಗಾಗಿದ್ದಾರೆ.
ಮುಖ್ಯವಾಗಿ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಮಕ್ಕಳ ಹೊಟ್ಟೆಯಲ್ಲಿ ಹುಳುಗಳಾದರೆ ಅದನ್ನು ಗುರುತಿಸುವುದು ಹೇಗೆ? ಅದಕ್ಕೆ ಕಾರಣಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಜಂತು ಆಗಲು ಕಾರಣವೇನು?
ಜಂತು ಹುಳುಗಳು ಪರಾವಲಂಬಿ ಜೀವಿಗಳು. ಇವು ನಮ್ಮ ಕರುಳಿನಲ್ಲಿ ವಾಸಿಸುತ್ತಾ, ನಾವು ಸೇವಿಸುವ ಆಹಾರದ ಪೌಷ್ಟಿಕಾಂಶಗಳನ್ನು ತಾವೇ ಹೀರಿಕೊಳ್ಳುತ್ತವೆ. ಕಲುಷಿತ ನೀರು, ಸರಿಯಾಗಿ ತೊಳೆಯದ ಆಹಾರ, ಮಣ್ಣಿನಲ್ಲಿ ಆಡುವುದು ಮತ್ತು ಕೈಗಳ ನೈರ್ಮಲ್ಯ ಕಾಪಾಡಿಕೊಳ್ಳದಿದ್ದರೆ ಈ ಹುಳುಗಳ ಮೊಟ್ಟೆಗಳು ಅಥವಾ ಲಾರ್ವಾಗಳು ದೇಹವನ್ನು ಪ್ರವೇಶಿಸುತ್ತವೆ.
ಮಕ್ಕಳಲ್ಲಿ ಜಂತು ಹುಳು ಪತ್ತೆ ಹಚ್ಚುವುದು ಹೇಗೆ?
- ಪದೇ ಪದೇ ಹೊಟ್ಟೆ ನೋವು ಎನ್ನುವುದು.
- ಮುಖ್ಯವಾಗಿ ರಾತ್ರಿ ಸಮಯದಲ್ಲಿ ಗುದದ್ವಾರದ ಸುತ್ತ ವಿಪರೀತ ತುರಿಕೆ ಉಂಟಾಗುವುದು
- ಸರಿಯಾಗಿ ಆಹಾರ ಸೇವಿಸಿದರೂ ಮಗುವಿನ ತೂಕ ಹೆಚ್ಚಾಗದಿರುವುದು ಅಥವಾ ಇದ್ದಕ್ಕಿದ್ದಂತೆ ತೂಕ ಇಳಿಯುವುದು
- ಹುಳುಗಳು ಪೌಷ್ಟಿಕಾಂಶವನ್ನು ಹೀರುವುದರಿಂದ ಮಗು ಸದಾ ಸುಸ್ತಾಗಿರುವುದು
- ಅತಿಯಾದ ಹಸಿವು ಅಥವಾ ಹಸಿವು ಇಲ್ಲದಿರುವುದು
- ಆಗಾಗ ವಾಂತಿಯಾಗುವಂತೆ ಭಾಸವಾಗುವುದು
- ಅತಿಸಾರ (Diarrhea) ಅಥವಾ ಮಲದೊಂದಿಗೆ ರಕ್ತ ಹೋಗುವುದು
- ಹುಳುಗಳು ರಕ್ತವನ್ನು ಹೀರುವುದರಿಂದ ಮಗುವಿನ ಮುಖ ಬಿಳಿಚಿಕೊಳ್ಳುವುದು
- ಹೊಟ್ಟೆ ಸದಾ ಉಬ್ಬಿದಂತೆ ಕಾಣುವುದು
- ಕೆಲವು ರೀತಿಯ ಹುಳುಗಳ ಸೋಂಕು ಇದ್ದಾಗ ಉಸಿರಾಟದ ತೊಂದರೆ ಅಥವಾ ಕೆಮ್ಮು ಕಾಣಿಸಿಕೊಳ್ಳಬಹುದು
ಅಪಾಯಗಳೇನು?
ಜಂತು ಹುಳುಗಳು ಕೇವಲ ಹೊಟ್ಟೆಗೆ ಸೀಮಿತವಾಗದೆ, ರಕ್ತದ ಮೂಲಕ ಯಕೃತ್ತು (Liver), ಶ್ವಾಸಕೋಶ ಮತ್ತು ಅಪರೂಪದ ಸಂದರ್ಭಗಳಲ್ಲಿ ಮೆದುಳಿಗೂ ತಲುಪಬಹುದು. ಮೆದುಳಿಗೆ ಹೋದರೆ ತಲೆನೋವು, ಫಿಟ್ಸ್ ಅಥವಾ ಪಾರ್ಶ್ವವಾಯುವಿನಂತಹ ಗಂಭೀರ ಸಮಸ್ಯೆಗಳು ಉಂಟಾಗಬಹುದು.
ತಡೆಗಟ್ಟಲು 13 ಮುನ್ನೆಚ್ಚರಿಕೆ ಕ್ರಮಗಳು
- ಊಟಕ್ಕೆ ಮೊದಲು ಮತ್ತು ಶೌಚಾಲಯದ ನಂತರ ಕೈಗಳನ್ನು ಸೋಪಿನಿಂದ ಚೆನ್ನಾಗಿ ತೊಳೆಯಿರಿ
- ಮಕ್ಕಳ ಉಗುರುಗಳನ್ನು ಆಗಾಗ ಕತ್ತರಿಸಿ, ಉಗುರು ಕಚ್ಚುವ ಅಭ್ಯಾಸ ಬಿಡಿಸಿ
- ತರಕಾರಿ ಮತ್ತು ಹಣ್ಣುಗಳನ್ನು ಬಳಸುವ ಮುನ್ನ ಶುದ್ಧ ನೀರಿನಲ್ಲಿ ತೊಳೆಯಿರಿ
- ಕುದಿಸಿ ಆರಿಸಿದ ನೀರನ್ನು ಮಾತ್ರ ಕುಡಿಯಿರಿ
- ಹೊರಗಿನ ತೆರೆದಿಟ್ಟ ಆಹಾರ ಪದಾರ್ಥಗಳನ್ನು ಸೇವಿಸಬೇಡಿ
- ಮಾಂಸಾಹಾರವನ್ನು ಚೆನ್ನಾಗಿ ಬೇಯಿಸಿ ಸೇವಿಸಿ
- ಮಣ್ಣಿನಲ್ಲಿ ಆಡುವಾಗ ಚಪ್ಪಲಿ ಅಥವಾ ಶೂ ಧರಿಸುವಂತೆ ಮಕ್ಕಳಿಗೆ ತಿಳಿಸಿ
- ಮನೆಯ ಸಾಕುಪ್ರಾಣಿಗಳಿಗೂ ನಿಯಮಿತವಾಗಿ ಡಿ-ವಾರ್ಮಿಂಗ್ ಮಾಡಿಸಿ
- ಮನೆಯ ಸುತ್ತಮುತ್ತ ನೈರ್ಮಲ್ಯ ಕಾಪಾಡಿ
- ಸೋಂಕಿತ ವ್ಯಕ್ತಿಯ ಬಟ್ಟೆ ಅಥವಾ ಟವೆಲ್ ಬಳಸಬೇಡಿ
- ಮಕ್ಕಳ ಒಳಉಡುಪುಗಳನ್ನು ಪ್ರತಿದಿನ ಬಿಸಿ ನೀರಿನಲ್ಲಿ ತೊಳೆದು ಒಣಗಿಸಿ
- ಸ್ವಿಮ್ಮಿಂಗ್ ಪೂಲ್ ನೀರನ್ನು ಕುಡಿಯದಂತೆ ಎಚ್ಚರವಹಿಸಿ
- ವೈದ್ಯರ ಸಲಹೆಯಂತೆ ವರ್ಷಕ್ಕೊಮ್ಮೆ ಕುಟುಂಬದವರೆಲ್ಲರೂ ಡಿ-ವಾರ್ಮಿಂಗ್ ಮಾತ್ರೆ ತೆಗೆದುಕೊಳ್ಳುವುದು ಉತ್ತಮ.
ಕೇವಲ ಸಿಹಿ ತಿಂದರೆ ಹೊಟ್ಟೆಯಲ್ಲಿ ಹುಳುಗಳಾಗುತ್ತವೆ ಎನ್ನುವುದು ತಪ್ಪು ಕಲ್ಪನೆ. ನೈರ್ಮಲ್ಯದ ಕೊರತೆಯೇ ಈ ಸಮಸ್ಯೆಗೆ ಮೂಲ ಕಾರಣ. ಮಗುವಿನಲ್ಲಿ ಮೇಲೆ ತಿಳಿಸಿದ ಲಕ್ಷಣಗಳಿದ್ದರೆ ಸ್ವಯಂ ಚಿಕಿತ್ಸೆ ಮಾಡದೆ ವೈದ್ಯರನ್ನು ಸಂಪರ್ಕಿಸಿ.


