ಮೇಕೆದಾಟು ಯೋಜನೆಗೆ ತಮಿಳುನಾಡು ಸೇರಿದಂತೆ ಕೆಳಮುಖ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಸ್ಪಷ್ಟಪಡಿಸಿದೆ.  ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಅಂತಹ ಯಾವುದೇ ಷರತ್ತು ಇಲ್ಲವೆಂದು ತಿಳಿಸಿರುವುದು, ಕರ್ನಾಟಕಕ್ಕೆ ದೊಡ್ಡ ನೈತಿಕ ಜಯ ತಂದುಕೊಟ್ಟಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಕಾವೇರಿ ನದಿ ನೀರು ಹಂಚಿಕೆ ಹಾಗೂ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕಾವೇರಿ ಅಂಗಳದಲ್ಲಿ ಭಾರಿ ಸಂಚಲನ ಸೃಷ್ಟಿಸುವಂತಹ ಬೆಳವಣಿಗೆಯೊಂದು ನಡೆದಿದೆ. ಮೇಕೆದಾಟು ಯೋಜನೆ ಜಾರಿಗೆ ತಮಿಳುನಾಡು ಸೇರಿದಂತೆ ಇತರ ಕೆಳಮುಖ ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ ಎಂಬಂತೆ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ನೀಡಿರುವ ಹೇಳಿಕೆ ಕರ್ನಾಟಕಕ್ಕೆ ದೊಡ್ಡ ಮಟ್ಟದ ನೈತಿಕ ಜಯ ಸಿಕ್ಕಂತಾಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ತಮಿಳುನಾಡು ಸಂಸದರ ಪ್ರಶ್ನೆಗೇನು?

ತಮಿಳುನಾಡಿನ ಪಿಎಂಕೆ (PMK) ನಾಯಕ ಹಾಗೂ ಸಂಸದ ಅನ್ಬುಮಣಿ ರಾಮದಾಸ್ ಅವರು ಸಂಸತ್ತಿನಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವಾಲಯಕ್ಕೆ ಪ್ರಶ್ನೆಯೊಂದನ್ನು ಕೇಳಿದ್ದರು. "ಕಾವೇರಿ ನದಿಗೆ ಅಡ್ಡಲಾಗಿ ಯಾವುದೇ ಯೋಜನೆಯನ್ನು ನಿರ್ಮಿಸಲು ಕರ್ನಾಟಕವು ಕೆಳಭಾಗದಲ್ಲಿರುವ ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ಅನುಮತಿ ಪಡೆಯುವುದು ಕಡ್ಡಾಯ ಎಂದು 2018ರ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಲಾಗಿದೆಯಲ್ಲವೇ? ಕರ್ನಾಟಕ ಸರ್ಕಾರ ಈ ರೀತಿ ಒಪ್ಪಿಗೆ ಪಡೆದಿದೆಯೇ? ಪ್ರಸ್ತುತ ಮೇಕೆದಾಟು ಯೋಜನೆಯ ಸ್ಥಿತಿ ಏನು?" ಎಂದು ಪ್ರಶ್ನಿಸಿದ್ದರು.

ಕೇಂದ್ರ ನೀಡಿದ ಬೊಂಬಾಟ್ ಸ್ಪಷ್ಟನೆ!

ತಮಿಳುನಾಡು ಸಂಸದರ ಪ್ರಶ್ನೆಗೆ ಕೇಂದ್ರ ಜಲಶಕ್ತಿ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ ಅವರು ನೀಡಿರುವ ಉತ್ತರ ತಮಿಳುನಾಡಿಗೆ ತೀವ್ರ ಮುಖಭಂಗ ತಂದಿದೆ. ಸಚಿವರು ಸ್ಪಷ್ಟಪಡಿಸುತ್ತಾ, 16 ಫೆಬ್ರವರಿ 2018 ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ, ಕಾವೇರಿ ನದಿಗೆ ಅಡ್ಡಲಾಗಿ ಯಾವುದೇ ನಿರ್ಮಾಣ ಅಥವಾ ಜಲಾಶಯ ಕಟ್ಟಲು ಕರ್ನಾಟಕವು ತಮಿಳುನಾಡು, ಕೇರಳ ಅಥವಾ ಪುದುಚೇರಿಯ ಒಪ್ಪಿಗೆ ಕಡ್ಡಾಯವಾಗಿ ಪಡೆಯಬೇಕು ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ ಎಂದು ಹೇಳಿದ್ದಾರೆ.

ರಾಜ್ಯಕ್ಕಿರುವ ಅಧಿಕಾರವೇನು?

ಇದರೊಂದಿಗೆ, 2007 ರ ಕಾವೇರಿ ಜಲ ನ್ಯಾಯಮಂಡಳಿಯ ತೀರ್ಪಿನ ಸೆಕ್ಷನ್ ಅನ್ನು ಉಲ್ಲೇಖಿಸಿದ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ ಆದೇಶದಂತೆ ಪ್ರತಿಯೊಂದು ರಾಜ್ಯಕ್ಕೂ ತನ್ನ ಗಡಿಯೊಳಗೆ ಲಭ್ಯವಿರುವ ನೀರನ್ನು ಬಳಸಿಕೊಳ್ಳುವ ಹಾಗೂ ಅದರ ಪ್ರಯೋಜನ ಪಡೆಯುವ ಸಂಪೂರ್ಣ ಹಕ್ಕಿದೆ. ನ್ಯಾಯಮಂಡಳಿ ನಿಗದಿಪಡಿಸಿದ ನೀರಿನ ಪ್ರಮಾಣವನ್ನು ಕೆಳಭಾಗದ ರಾಜ್ಯಗಳಿಗೆ ಹರಿಸುವಲ್ಲಿ ಯಾವುದೇ ಲೋಪವಾಗದಿದ್ದರೆ, ರಾಜ್ಯಕ್ಕೆ ತನ್ನ ವ್ಯಾಪ್ತಿಯಲ್ಲಿ ಯೋಜನೆ ರೂಪಿಸುವ ಅಧಿಕಾರವಿದೆ ಎಂದು ಪುನರುಚ್ಚರಿಸಿದೆ.

ಮೇಕೆದಾಟು ಯೋಜನೆಯ ಪ್ರಸ್ತುತ ಸ್ಥಿತಿ ಏನು?

ಕರ್ನಾಟಕ ಸರ್ಕಾರವು ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ 2019 ರಲ್ಲೇ ವಿವರವಾದ ಯೋಜನಾ ವರದಿ ಸಲ್ಲಿಸಿತ್ತು. ಆದರೆ, ಕಾವೇರಿ ಜಲ ನ್ಯಾಯಮಂಡಳಿಯ ತೀರ್ಪು ಮತ್ತು ಕೇಂದ್ರ ಜಲ ಆಯೋಗದ ಪ್ರಸ್ತುತ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕೆಲವು ಬದಲಾವಣೆಗಳನ್ನು ಮಾಡಿ, ಪರಿಷ್ಕೃತ ಡಿಪಿಆರ್ ಸಲ್ಲಿಸುವಂತೆ ಕೋರಿ ಯೋಜನಾ ಪ್ರಾಧಿಕಾರಕ್ಕೆ ಹಿಂತಿರುಗಿಸಲಾಗಿದೆ ಎಂದು ಕೇಂದ್ರ ಸಚಿವರು ವಿವರಿಸಿದ್ದಾರೆ.

ಕರ್ನಾಟಕಕ್ಕೆ ಏಕೆ ಇದು ಬೃಹತ್ ಗೆಲುವು?

ಇಷ್ಟು ದಿನಗಳ ಕಾಲ ನಮ್ಮ ಒಪ್ಪಿಗೆಯಿಲ್ಲದೆ ಕರ್ನಾಟಕ ಮೇಕೆದಾಟು ಕಟ್ಟುವಂತಿಲ್ಲ" ಎಂದು ತಮಿಳುನಾಡು ಸರ್ಕಾರ ಪದೇ ಪದೇ ಹಟ ಹಿಡಿಯುತ್ತಿತ್ತು. ಆದರೆ, 'ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಅಂತಹ ಯಾವುದೇ ಷರತ್ತು ಇಲ್ಲ' ಎಂದು ಕೇಂದ್ರ ಸರ್ಕಾರವೇ ಅಧಿಕೃತವಾಗಿ ಸಂಸತ್ತಿನಲ್ಲಿ ಸ್ಪಷ್ಟಪಡಿಸಿರುವುದರಿಂದ, ಮೇಕೆದಾಟು ಯೋಜನೆ ಜಾರಿಗೆ ಎದುರಾಗಿದ್ದ ಅತಿ ದೊಡ್ಡ ಕಾನೂನು ಮತ್ತು ರಾಜಕೀಯ ತಡೆಗೋಡೆ ತೆರವಾದಂತಾಗಿದೆ. ತಮಿಳುನಾಡಿಗೆ ಹರಿಯಬೇಕಾದ ನಿಗದಿತ ನೀರಿಗೆ ಧಕ್ಕೆಯಾಗದಂತೆ, ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗಾಗಿ ಕರ್ನಾಟಕವು ತನ್ನ ಗಡಿಯೊಳಗೆ ಮೇಕೆದಾಟು ಯೋಜನೆ ನಿರ್ಮಿಸಲು ಸುಪ್ರೀಂ ತೀರ್ಪು ಯಾವುದೇ ಅಡ್ಡಿಪಡಿಸುವುದಿಲ್ಲ ಎಂಬುದು ಈ ಮೂಲಕ ಸಾಬೀತಾಗಿದೆ.