Gardening: ಮನೆ ಬಾಲ್ಕನಿಯಲ್ಲಿ ಬೆಳೆದುಕೊಳ್ಳಿ ಅಡುಗೆಗೆ ಬೇಕಾದ ಫ್ರೆಶ್ ಸೊಪ್ಪುಗಳು
ಮನೆಯಲ್ಲಿ ದೊಡ್ಡ ಜಾಗವಿಲ್ಲದಿದ್ದರೂ ಪಾಟ್‌ಗಳಲ್ಲಿ ಸುಲಭವಾಗಿ ತಾಜಾ ಸೊಪ್ಪುಗಳನ್ನು ಬೆಳೆಸಬಹುದು. ಈ ಲೇಖನದಲ್ಲಿ ಮೆಂತ್ಯ, ಪುದೀನಾ, ತುಳಸಿ, ಕರಿಬೇವು ಮತ್ತು ಕೊತ್ತಂಬರಿ ಸೊಪ್ಪಿನಂತಹ ಭಾರತೀಯ ಸೊಪ್ಪುಗಳನ್ನು ಮನೆಯಲ್ಲಿಯೇ ಬೆಳೆಸುವ ಸರಳ ವಿಧಾನಗಳನ್ನು ವಿವರಿಸಲಾಗಿದೆ.

ತಾಜಾ ಸೊಪ್ಪು
ಮನೆಯಲ್ಲಿ ತಾಜಾ ಸೊಪ್ಪು ಬೆಳೆಸಲು ದೊಡ್ಡ ಜಾಗವೇ ಬೇಕು ಅಥವಾ ಗಾರ್ಡನಿಂಗ್‌ನಲ್ಲಿ ಅನುಭವ ಇರಲೇಬೇಕು ಅಂತೇನಿಲ್ಲ. ಭಾರತದ ಕೆಲವು ಸೊಪ್ಪುಗಳನ್ನ ಪಾಟ್‌ಗಳಲ್ಲಿ ಸುಲಭವಾಗಿ ಬೆಳೆಸಬಹುದು. ಇವು ಅಡುಗೆಗೆ ತಾಜಾ ಸೊಪ್ಪು ನೀಡುವುದರ ಜೊತೆಗೆ ಮನೆಗೆ ಹಸಿರು ತುಂಬುತ್ತವೆ. ಆರಂಭಿಕರು ಕೂಡ ಬೆಳೆಸಬಹುದಾದ ಸುಲಭವಾದ ಭಾರತೀಯ ಸೊಪ್ಪುಗಳು ಯಾವುವು ಎಂದು ನೀವು ಯೋಚಿಸುತ್ತಿದ್ದರೆ, ಇಲ್ಲಿದೆ ಕೆಲವು ಉದಾಹರಣೆಗಳು.
ಮೆಂತ್ಯೆ ಸೊಪ್ಪು
ಮನೆಯಲ್ಲಿ ಬೆಳೆಯಲು ಅತ್ಯಂತ ಸುಲಭವಾದ ಸೊಪ್ಪು ತರಕಾರಿಗಳಲ್ಲಿ ಮೆಂತ್ಯ ಅಥವಾ ಫೆನುಗ್ರೀಕ್ ಕೂಡ ಒಂದು. ಮೆಂತ್ಯ ಬೀಜಗಳನ್ನು ನೇರವಾಗಿ ಪಾಟ್‌ನಲ್ಲಿ ನೆಡಬಹುದು. ಪಾಟ್‌ನಲ್ಲಿ ನೀರು ಸರಾಗವಾಗಿ ಬಸಿದು ಹೋಗುವಂತಿರಲಿ ಹಾಗೂ ಗಿಡಕ್ಕೆ ಸಾಕಷ್ಟು ತೇವಾಂಶ ಮತ್ತು ಸೂರ್ಯನ ಬೆಳಕು ಸಿಗುವಂತೆ ನೋಡಿಕೊಳ್ಳಿ.
ಪುದೀನಾ
ಪುದೀನಾ ಅಥವಾ ಮಿಂಟ್ ಮತ್ತೊಂದು ಸುಲಭವಾಗಿ ಬೆಳೆಯುವ ಗಿಡಮೂಲಿಕೆ. ಇದು ಬೇಗನೆ ಹರಡಿಕೊಳ್ಳುವುದರಿಂದ, ಇದನ್ನು ಪಾಟ್‌ನಲ್ಲಿ ಬೆಳೆಸುವುದು ಉತ್ತಮ ಆಯ್ಕೆ. ಮಣ್ಣು ಯಾವಾಗಲೂ ಸ್ವಲ್ಪ ತೇವವಾಗಿರುವಂತೆ ನೋಡಿಕೊಳ್ಳಿ ಮತ್ತು ಗಿಡಕ್ಕೆ ಸಾಕಷ್ಟು ಬೆಳಕು ಸಿಗಲಿ. ಅದರಲ್ಲೂ ಬೇಸಿಗೆಯ ಬಿಸಿಲಿದ್ದಾಗ ಮಧ್ಯಾಹ್ನದ ಸೂರ್ಯನ ಕಿರಣಗಳಿಂದ ರಕ್ಷಣೆ ನೀಡಿ.
ತುಳಸಿ
ತುಳಸಿ ಅಥವಾ ಹೋಲಿ ಬೇಸಿಲ್ ಭಾರತದ ಪ್ರತಿಯೊಂದು ಮನೆಯಲ್ಲೂ ಸಾಮಾನ್ಯವಾಗಿ ಕಂಡುಬರುವ ಗಿಡಮೂಲಿಕೆ. ಇದಕ್ಕೆ ಸಾಕಷ್ಟು ಸೂರ್ಯನ ಬೆಳಕು ಮತ್ತು ನೀರು ನಿಲ್ಲದಂತಹ ಮಣ್ಣು ಒದಗಿಸಿದರೆ ಪಾಟ್‌ಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಹಳೆಯ ಎಲೆಗಳು ಮತ್ತು ಹೂವುಗಳನ್ನು ನಿಯಮಿತವಾಗಿ ಕತ್ತರಿಸುವುದರಿಂದ ಹೊಸ ಬೆಳವಣಿಗೆಗೆ ಸಹಾಯವಾಗುತ್ತದೆ. ಪಾಟ್‌ನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ, ಯಾಕೆಂದರೆ ಹೆಚ್ಚಿನ ತೇವಾಂಶವು ಬೇರಿನ ವ್ಯವಸ್ಥೆಗೆ ಹಾನಿ ಮಾಡಬಹುದು.
ಕರೀಬೇವು
ಭಾರತೀಯ ಅಡುಗೆಮನೆಗೆ ಹೆಚ್ಚು ಪ್ರಯೋಜನಕಾರಿ ಎನಿಸುವ ಗಿಡವೆಂದರೆ ಅದು ಕರಿಬೇವು. ಇದಕ್ಕೆ ಬೆಚ್ಚಗಿನ ವಾತಾವರಣ, ಸಾಕಷ್ಟು ಸೂರ್ಯನ ಬೆಳಕು ಮತ್ತು ನೀರು ಬಸಿದು ಹೋಗುವ ಮಣ್ಣು ಇಷ್ಟ. ಎಳೆಯ ಗಿಡವು ಬೆಳೆದು ನಿಲ್ಲಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ಆದ್ದರಿಂದ ಇಲ್ಲಿ ತಾಳ್ಮೆ ಬಹಳ ಮುಖ್ಯ. ಪಾಟ್‌ನಲ್ಲಿ ಬೆಳೆಸಿದರೆ, ಪ್ರತಿಕೂಲ ವಾತಾವರಣವಿದ್ದಾಗ ಗಿಡವನ್ನು ಮನೆಯೊಳಗೆ ಅಥವಾ ಬೇರೆಡೆಗೆ ಸ್ಥಳಾಂತರಿಸುವುದು ಸುಲಭ.
ಕೋತಂಬರಿ
ಕೆಲವೇ ಕೆಲವು ಬೀಜಗಳಿಂದ ಧನಿಯಾ ಅಥವಾ ಕೊತ್ತಂಬರಿಯನ್ನು ಪಾಟ್‌ನಲ್ಲಿ ಸುಲಭವಾಗಿ ಬೆಳೆಸಬಹುದು. ಬೀಜವನ್ನು ತೇವಾಂಶವುಳ್ಳ ಮತ್ತು ನೀರು ನಿಲ್ಲದ ಮಣ್ಣಿನಲ್ಲಿ ಬಿತ್ತಬೇಕು. ಇದರಿಂದ ಬೇರುಗಳಿಗೆ ತೊಂದರೆಯಾಗುವುದನ್ನು ತಪ್ಪಿಸಬಹುದು. ಸೂರ್ಯನ ಬೆಳಕು ಮತ್ತು ತೇವಾಂಶವು ಸಸಿಗಳ ಸರಿಯಾದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಗಿಡ ಬಲಿತ ನಂತರ ಎಲೆಗಳನ್ನು ಕತ್ತರಿಸಿಕೊಳ್ಳಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

