ಅತಿಯಾದ ಬಿಳಿ ಉಪ್ಪಿನ ಸೇವನೆಯಿಂದ ಉಂಟಾಗುವ ಭೀಕರ ಅನಾರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಿಗರೇಟ್ ಪ್ಯಾಕೆಟ್‌ಗಳಂತೆ ಉಪ್ಪಿನ ಪ್ಯಾಕೆಟ್ ಮೇಲೂ ಎಚ್ಚರಿಕೆ ಲೇಬಲ್ ಅಳವಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದರೊಂದಿಗೆ ಪೋಷಕಾಂಶ ವರ್ಧಿತ ಉಪ್ಪು ಮಾರಾಟ ಮತ್ತು ಅಳತೆ ಚಮಚ ಒದಗಿಸುವ ಬಗ್ಗೆಯೂ ಸರ್ಕಾರ ಪರಿಶೀಲಿಸುತ್ತಿದೆ.
ಬೆಂಗಳೂರು: ಸಿಗರೇಟ್ ಸೇವನೆ ಅಪಾಯಕಾರಿ (Cigarette smoking is injurious to health) ಎಂದು ಸಿಗರೆಟ್ ಪ್ಯಾಕೇಟ್ ಮೇಲೆ ಬರೆಯುವುದನ್ನು ಬಹುತೇಕ ಮಂದಿ ನೋಡಿರುತ್ತೀರಿ. ಆದರೆ ಇದೀಗ ನಾವು ದಿನನಿತ್ಯ ಬಳಸುವ ಉಪ್ಪು ಕೂಡ ಅಷ್ಟೇ ಡೇಂಜರಸ್ ಆಗಿದ್ದು, ಅದರ ಪ್ಯಾಕೆಟ್ ಮೇಲೆಯೂ ಇದೇ ಲೇಬಲ್ ಅಳವಡಿಕೆಗೆ ರಾಜ್ಯ ಸರ್ಕಾರ ಚಿಂತನೆ ನಡೆದಿದೆ. ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನೋದು ನಿಜವಾದರೂ, ಅತಿಯಾದ ಉಪ್ಪು ಸೇವನೆಯಿಂದ ಭೀಕರ ಅನಾರೋಗ್ಯ ಸಮಸ್ಯೆಗಳೂ ಬರುವುದು ಅಷ್ಟೇ ದಿಟ. ಮಾರಣಾಂತಿಕ ಕಾಯಿಲೆಗಳಿಗೂ ಕೆಲವೊಮ್ಮೆ ಅತಿಯಾದ ಉಪ್ಪಿನ ಬಳಕೆ ಅದರಲ್ಲಿಯೂ ಬಿಳಿ ಉಪ್ಪಿನ ಬಳಕೆ ಇನ್ನಷ್ಟು ಡೇಂಜರಸ್ ಆಗಿದೆ. ಆದರೆ ಬಿಳಿ ಉಪ್ಪನ್ನು ಸೇವಿಸುವ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಕೆಂಪು ಉಪ್ಪಿನ ಬೇಡಿಕೆ ಹೆಚ್ಚಾದಂತೆ ಬಿಳಿ ಉಪ್ಪಿಗೇ ಕೆಂಪು ಬಣ್ಣ ಸೇರಿಸಿ ದುಬಾರಿ ದರದಲ್ಲಿ ಮಾರಾಟ ಮಾಡುತ್ತಿರುವುದು ಕೂಡ ಅತ್ಯಂತ ಶೋಚನೀಯವಾಗಿದೆ.
ಇದೇ ಕಾರಣಕ್ಕೆ, ಕೆಲವಷ್ಟು ಗ್ರಾಹಕರಾದರೂ ಈ ಲೇಬಲ್ ನೋಡಿ ಉಪ್ಪಿನ ಬಳಕೆಯನ್ನು ಕಡಿಮೆ ಮಾಡಿಯಾರು ಎನ್ನೋದು ರಾಜ್ಯ ಸರ್ಕಾರದ ಕಳಕಳಿ. ಸಿಗರೆಟ್ ಪ್ಯಾಕೆಟ್ ಮೇಲೆ ಎಚ್ಚರಿಕೆ ಇದ್ದ ಮಾತ್ರಕ್ಕೆ ಅದನ್ನು ಚಟವಾಗಿಸಿಕೊಂಡಿರುವವರು ಬಿಡುವುದಿಲ್ಲ ಎನ್ನೋದು ನಿಜವಾದರೂ, ಅಡುಗೆ ಮನೆಯಲ್ಲಿ ಉಪ್ಪನ್ನು ಬಳಸುವವರ ಪೈಕಿ ಮಹಿಳೆಯರೇ ಹೆಚ್ಚಿನವರಾಗಿರುವ ಕಾರಣ, ಈ ಲೇಬಲ್ನಿಂದ ಅವರು ಜಾಗೃತರಾಗಬಹುದು ಎನ್ನುವುದು ಸರ್ಕಾರದ ಚಿಂತನೆ. ಆರೋಗ್ಯಕ್ಕೆ ಪ್ರಯೋಜನಕಾರಿಯೆಂದು ಪರಿಗಣಿಸಲಾದ ಉಪ್ಪನ್ನು ಮಾತ್ರ ತಯಾರಿಸಿ ಮಾರಾಟ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಕಾನೂನು ಜಾರಿಗೆ ತರುವ ಬಗ್ಗೆಯೂ ಸರ್ಕಾರ ಪರಿಶೀಲಿಸುತ್ತಿದೆ.
ಮಹಿಳೆಯರು ಜಾಗೃತರಾಗುವ ವಿಶ್ವಾಸ
ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಸಚಿವ ಯು.ಟಿ. ಖಾದರ್, ಆರೋಗ್ಯಕರವೆಂದು ಪರಿಗಣಿಸಲಾದ ಉಪ್ಪನ್ನು ಮಾತ್ರ ತಯಾರಿಸಿ ಮಾರಾಟ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಕಾನೂನು ಜಾರಿಗೆ ತರುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದರು. ಈ ಕ್ರಮಗಳ ಭಾಗವಾಗಿ ಫೋರ್ಟಿಫೈಡ್ (ಪೋಷಕಾಂಶ ವರ್ಧಿತ) ಉಪ್ಪಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು. ಉಪ್ಪಿನ ಪ್ಯಾಕೆಟ್‌ಗಳನ್ನು ಸೂಕ್ತ ಪ್ರಮಾಣವನ್ನು ಸೂಚಿಸುವ ಚಮಚದೊಂದಿಗೆ ಮಾರಾಟ ಮಾಡಬೇಕು ಎಂದು ಸಲಹೆ ನೀಡಿದರು. ಗ್ರಾಹಕರು ಪ್ರಮಾಣವನ್ನು ಅಳೆಯದೆ ಉಪ್ಪನ್ನು ಬಳಸುತ್ತಾರೆ. ಹೀಗಾಗಿ ಚಮಚವನ್ನು ಒದಗಿಸುವುದರಿಂದ ಉಪ್ಪಿನ ಪ್ರಮಾಣವನ್ನು ನಿಯಂತ್ರಿಸಲು ಸಹಾಯವಾಗಬಹುದು ಎಂದು ಹೇಳಿದರು.
ಇದು ಮೊದಲ ಹೆಜ್ಜೆ
ಆದರೆ, ಸಾರ್ವಜನಿಕ ಆರೋಗ್ಯ ತಜ್ಞರು ಉಪ್ಪಿನ ಪ್ಯಾಕೆಟ್‌ಗಳ ಮೇಲೆ ಎಚ್ಚರಿಕೆ ಸ್ಟಿಕ್ಕರ್‌ಗಳನ್ನು ಅಳವಡಿಸುವುದು ಕೇವಲ ಮೊದಲ ಹೆಜ್ಜೆಯಾಗಿದ್ದು, ಇದರ ಜತೆಗೆ ವ್ಯಾಪಕವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕ (SAAK)ದ ಸಾರ್ವಜನಿಕ ಆರೋಗ್ಯ ಸಂಶೋಧಕ ಪ್ರಸನ್ನ ಸಾಲಿಗ್ರಾಮ್ ಮಾತನಾಡಿ, ವಿಶೇಷವಾಗಿ ಪ್ಯಾಕೇಜ್ ಮಾಡಿದ ಆಹಾರಗಳಲ್ಲಿ ಉಪ್ಪಿನ ಪ್ರಮಾಣವನ್ನು ಸ್ಪಷ್ಟವಾಗಿ ನಮೂದಿಸುವುದು ಅತ್ಯಗತ್ಯ ಎಂದರು. ಇದು ಮೊದಲ ಹೆಜ್ಜೆ, ಆದರೆ ಇದು ಸಾಕಾಗುವುದಿಲ್ಲ. ಲೇಬಲ್ ಅಳವಡಿಸುವುದೇ ಮೊದಲ ಹೆಜ್ಜೆಯಾಗಬೇಕು ಎಂದು ಹೇಳಿದರು.


