ಹಿಂದೂ ಧರ್ಮದ ಆಹಾರ ಪದ್ಧತಿ ಕೇವಲ ಸಸ್ಯಾಹಾರಕ್ಕೆ ಮಾತ್ರ ಸೀಮಿತವೇ? ಪ್ರದೇಶ ಮತ್ತು ಸಂಪ್ರದಾಯಕ್ಕೆ ಅನುಗುಣವಾಗಿ ಹಿಂದೂ ಆಚರಣೆಗಳಲ್ಲಿ ಆಹಾರ ಪದ್ಧತಿ ಹೇಗೆ ಬದಲಾಗುತ್ತದೆ? ಭಗವದ್ಗೀತೆಯ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಆಹಾರದ ವಿವರಣೆ ಏನು ಹೇಳುತ್ತದೆ?

ಹಿಂದೂ ಧರ್ಮದಲ್ಲಿ ಮಾಂಸಾಹಾರ ನಿಷಿದ್ಧವೇ?

ಹಿಂದೂ ಪರಂಪರೆ ಎಂದರೆ ಕೇವಲ ಸಸ್ಯಾಹಾರಕ್ಕೆ ಮಾತ್ರ ಸೀಮಿತವೇ? ಹಾಗೆ ಹೇಳುವುದು ಸರಿಯೇ? ಶ್ರೀಮದ್ಭಗವದ್ಗೀತೆ ಮತ್ತು ಭಾರತದ ವಿವಿಧ ಪ್ರಾದೇಶಿಕ ಸಂಪ್ರದಾಯಗಳು ಆಹಾರ ಪದ್ಧತಿಯನ್ನು ಹೇಗೆ ರೂಪಿಸಿವೆ ಎಂಬುದನ್ನು ತಿಳಿದುಕೊಳ್ಳಿ. ಹಿಂದೂ ಧರ್ಮದ ಆಹಾರ ಪದ್ಧತಿ ಕೇವಲ ಸಸ್ಯಾಹಾರಕ್ಕೆ ಸೀಮಿತವಾಗಿದೆ ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಆದರೆ ವಾಸ್ತವದಲ್ಲಿ ಹಿಂದೂ ಸಂಪ್ರದಾಯಗಳಲ್ಲಿ ಆಹಾರದ ವೈವಿಧ್ಯ ಬಹಳಷ್ಟಿದೆ. ಭಾರತದಲ್ಲಿ ಯಾವ ಪ್ರದೇಶದಲ್ಲಿ ಯಾವ ರೀತಿಯ ಆಹಾರ ಸೇವಿಸಲಾಗುತ್ತದೆ ಎಂಬುದು ಧರ್ಮದ ಜೊತೆಗೆ ಸ್ಥಳೀಯ ನಂಬಿಕೆಗಳು, ಸಂಪ್ರದಾಯಗಳು ಮತ್ತು ಆಚರಣೆಗಳ ಮೇಲೂ ಅವಲಂಬಿತವಾಗಿದೆ.

ಪ್ರದೇಶ ಮತ್ತು ಸಂಪ್ರದಾಯಕ್ಕೆ ತಕ್ಕಂತೆ ಬದಲಾಗುವ ಆಹಾರ

ಶಾಕ್ತ ಮತ್ತು ಕಾಶ್ಮೀರಿ ಪರಂಪರೆ:

ಬಂಗಾಳ, ಅಸ್ಸಾಂ ಮತ್ತು ಒಡಿಶಾ ಭಾಗಗಳಲ್ಲಿ ದೇವಿಯ ಆರಾಧನೆಯ ಸಂದರ್ಭದಲ್ಲಿ ಮೀನು ಮತ್ತು ಕೆಲವು ಬಲಿಯ ಪದ್ಧತಿಗಳಿಗೆ ಸಂಬಂಧಿಸಿದ ಆಹಾರವನ್ನು ಪವಿತ್ರ ಭೋಗವೆಂದು ಪರಿಗಣಿಸುವ ಸಂಪ್ರದಾಯಗಳಿವೆ. ಅದೇ ರೀತಿ, ಕಾಶ್ಮೀರದ ಕೆಲವು ಕಾಶ್ಮೀರಿ ಪಂಡಿತ ಸಮುದಾಯಗಳಲ್ಲಿ ಮಹಾಶಿವರಾತ್ರಿಯ ಸಂದರ್ಭದಲ್ಲಿ ಮಟನ್‌ನ್ನು ವಿಶೇಷ ನೈವೇದ್ಯವಾಗಿ ತಯಾರಿಸುವ ಸಂಪ್ರದಾಯವೂ ಕಂಡುಬರುತ್ತದೆ.

ವೈಷ್ಣವ ಪರಂಪರೆ:

ರಾಜಸ್ಥಾನ, ಗುಜರಾತ್ ಮತ್ತು ಉತ್ತರ ಭಾರತದ ಬ್ರಜ್ ಪ್ರದೇಶಗಳಲ್ಲಿ ವಿಷ್ಣು ಮತ್ತು ಕೃಷ್ಣ ಭಕ್ತಿಯ ಕೆಲವು ಪರಂಪರೆಗಳು ಕಟ್ಟುನಿಟ್ಟಿನ ಸಸ್ಯಾಹಾರವನ್ನು ಅನುಸರಿಸುತ್ತವೆ. ಕೆಲವು ಆಚರಣೆಗಳಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನೂ ಆಹಾರದಿಂದ ದೂರವಿಡಲಾಗುತ್ತದೆ.

ದಕ್ಷಿಣ ಭಾರತದ ದೇವಾಲಯಗಳ ಪರಂಪರೆ:

ದಕ್ಷಿಣ ಭಾರತದಲ್ಲಿ ತೆಂಗಿನಕಾಯಿ, ಹುಣಸೆಹಣ್ಣು, ಕಾಳುಮೆಣಸು ಮತ್ತು ಉದ್ದಿನಬೇಳೆ ಮುಂತಾದ ಪದಾರ್ಥಗಳಿಂದ ತಯಾರಿಸುವ ಸಾತ್ವಿಕ ಪ್ರಸಾದದ ಶ್ರೀಮಂತ ಪರಂಪರೆ ಇದೆ.

ಗೀತೆಯ ತ್ರಿಗುಣ ಸಿದ್ಧಾಂತ

ಶ್ರೀಮದ್ಭಗವದ್ಗೀತೆಯ 17ನೇ ಅಧ್ಯಾಯದಲ್ಲಿ ಆಹಾರವನ್ನು ದೇಹ ಮತ್ತು ಮನಸ್ಸಿನ ಗುಣಗಳೊಂದಿಗೆ ಸಂಬಂಧಿಸಿ ಮೂರು ರೀತಿಯ ಗುಣಗಳ ಆಧಾರದ ಮೇಲೆ ವಿವರಿಸಲಾಗಿದೆ.

“ಆಯುಃಸತ್ತ್ವಬಲಾರೋಗ್ಯಸುಖಪ್ರೀತಿವಿವರ್ಧನಾಃ ।

ರಸ್ಯಾಃ ಸ್ನಿಗ್ಧಾಃ ಸ್ಥಿರಾ ಹೃದ್ಯಾ ಆಹಾರಾಃ ಸಾತ್ತ್ವಿಕಪ್ರಿಯಾಃ ॥”

— ಗೀತೆ 17.8

ಅರ್ಥಾತ್, ಆಯುಷ್ಯ, ಶುದ್ಧತೆ, ಶಕ್ತಿ, ಆರೋಗ್ಯ, ಸುಖ ಮತ್ತು ಸಂತೋಷವನ್ನು ಹೆಚ್ಚಿಸುವ, ರುಚಿಕರ ಹಾಗೂ ಹಿತಕರವಾದ ಆಹಾರವು ಸಾತ್ವಿಕ ಸ್ವಭಾವದವರಿಗೆ ಪ್ರಿಯವಾಗಿರುತ್ತದೆ.

ಆಹಾರದಲ್ಲಿ ಮೂರು ವಿಧಗಳಿವೆ

ಸಾತ್ವಿಕ ಆಹಾರ: ಹಣ್ಣುಗಳು, ಹಾಲು, ಧಾನ್ಯಗಳು ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸಾತ್ವಿಕ ಆಹಾರವೆಂದು ಪರಿಗಣಿಸಲಾಗುತ್ತದೆ. ಇಂತಹ ಆಹಾರ ಮನಸ್ಸಿಗೆ ಶಾಂತಿ ನೀಡುತ್ತದೆ ಎಂಬ ನಂಬಿಕೆ ಇದೆ.

ರಾಜಸಿಕ ಆಹಾರ: ಅತಿಯಾಗಿ ಖಾರ, ಮಸಾಲೆಯುಕ್ತ ಮತ್ತು ಕರಿದ ಆಹಾರವನ್ನು ರಾಜಸಿಕ ಗುಣಕ್ಕೆ ಸಂಬಂಧಿಸಲಾಗುತ್ತದೆ. ಇವು ಉತ್ಸಾಹವನ್ನು ಹೆಚ್ಚಿಸಿದರೂ ಮನಸ್ಸಿನಲ್ಲಿ ಚಂಚಲತೆಯನ್ನು ಉಂಟುಮಾಡಬಹುದು ಎಂಬ ನಂಬಿಕೆ ಇದೆ.

ತಾಮಸಿಕ ಆಹಾರ: ಹಳಸಿದ, ಹೆವಿ ಆಹಾರ ಮತ್ತು ಕೆಲವು ಪರಂಪರೆಯ ವ್ಯಾಖ್ಯಾನಗಳಲ್ಲಿ ಮಾಂಸಾಹಾರವನ್ನೂ ತಾಮಸಿಕ ಗುಣಕ್ಕೆ ಸಂಬಂಧಿಸಲಾಗುತ್ತದೆ. ಇವು ದೇಹದಲ್ಲಿ ಆಲಸ್ಯ ಮತ್ತು ಜಡತ್ವವನ್ನು ಹೆಚ್ಚಿಸುತ್ತವೆ.