ಓವನ್ ಇಲ್ಲದಿದ್ದರೂ ಮನೆಯಲ್ಲೇ ಮೃದುವಾದ ಮತ್ತು ರುಚಿಕರವಾದ ಬನ್‌ಗಳನ್ನು ತಯಾರಿಸಬಹುದು. ಇಡ್ಲಿ ಪಾತ್ರೆ ಅಥವಾ ಕಳಾಯಿ ಬಳಸಿ ಬನ್ ಮಾಡುವ ಸುಲಭ ವಿಧಾನ ಇಲ್ಲಿದೆ. ಹಾಲು, ಮೈದಾ, ಸಕ್ಕರೆ ಮತ್ತು ಡ್ರೈ ಈಸ್ಟ್‌ನಂತಹ..

ಸಂಜೆಯ ಟೀ ಸಮಯದಲ್ಲಿ ಬಿಸಿ ಬಿಸಿ ಟೀ ಜೊತೆ ಮೃದುವಾದ, ರುಚಿಕರವಾದ ಬನ್‌ ಸವಿಯುವ ಮಜವೇ ಬೇರೆ. ಸಾಮಾನ್ಯವಾಗಿ ಬನ್‌ ಬೇಕೆಂದರೆ ಬೇಕರಿಗೆ ಹೋಗಿ ಖರೀದಿಸುತ್ತೇವೆ. ಆದರೆ ಇನ್ಮುಂದೆ ಅಂಗಡಿಗೆ ಹೋಗಬೇಕಾದ ಅಗತ್ಯವಿಲ್ಲ. ಮನೆಯಲ್ಲೇ ಇರುವ ಕೆಲವೇ ಪದಾರ್ಥಗಳನ್ನು ಬಳಸಿ, ಓವನ್ ಇಲ್ಲದಿದ್ದರೂ ಮೃದುವಾದ ಬನ್‌‌ಗಳನ್ನು ಸುಲಭವಾಗಿ ತಯಾರಿಸಬಹುದು.

ಇಡ್ಲಿ ಪಾತ್ರೆ ಅಥವಾ ಮನೆಯಲ್ಲಿ ಬಳಸುವ ಕಳಾಯಿ ಸಹಾಯದಿಂದಲೇ ಈ ಬನ್‌ ತಯಾರಿಸಬಹುದು. ಸರಿಯಾದ ವಿಧಾನದಲ್ಲಿ ಹಿಟ್ಟನ್ನು ಕಲಸಿ, ಪ್ರೂಫ್ ಮಾಡಿದರೆ ಹೊರಗಿನಿಂದ ಖರೀದಿಸುವ ಬನ್‌‌ಗಿಂತಲೂ ಮೃದುವಾಗಿ, ರುಚಿಯಾಗಿ ಬನ್‌ ಸಿದ್ಧವಾಗುತ್ತದೆ. ಮಕ್ಕಳು, ದೊಡ್ಡವರು ಎನ್ನದೇ ಎಲ್ಲರಿಗೂ ಇಷ್ಟವಾಗುವ ಈ ಬನ್‌ ಅನ್ನು ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನೋಡಿ.

ಬೇಕಾಗುವ ಪದಾರ್ಥಗಳು
ಉಗುರು ಬೆಚ್ಚಗಿನ ಹಾಲು - ½ ಕಪ್
ಪುಡಿ ಮಾಡಿದ ಸಕ್ಕರೆ - 3ರಿಂದ 4 ಟೀ ಸ್ಪೂನ್
ಡ್ರೈ ಈಸ್ಟ್ - ½ ಟೀ ಸ್ಪೂನ್
ಮೈದಾ ಹಿಟ್ಟು - 1 ಕಪ್
ಎಣ್ಣೆ / ತುಪ್ಪ / ಬೆಣ್ಣೆ - ಅಗತ್ಯಕ್ಕೆ ತಕ್ಕಷ್ಟು

ಬನ್‌ ತಯಾರಿಸುವ ವಿಧಾನ

1. ಮೊದಲು ಈಸ್ಟ್ ಆಕ್ಟಿವೇಟ್ ಮಾಡಿಕೊಳ್ಳಿ

ಮೊದಲು ಒಂದು ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದಕ್ಕೆ ಅರ್ಧ ಕಪ್ ಉಗುರು ಬೆಚ್ಚಗಿನ ಹಾಲು ಹಾಕಿ. ಸಕ್ಕರೆಯನ್ನು ಪುಡಿ ಮಾಡಿಕೊಂಡು ಹಾಲಿಗೆ ಸೇರಿಸಿ ಚೆನ್ನಾಗಿ ಕಲಸಿ. ಬಳಿಕ ಅರ್ಧ ಟೀ ಸ್ಪೂನ್ ಡ್ರೈ ಈಸ್ಟ್ ಹಾಕಿ ಯಾವುದೇ ಗಂಟುಗಳಿಲ್ಲದಂತೆ ಚೆನ್ನಾಗಿ ಮಿಶ್ರಣ ಮಾಡಿ. ಬೌಲ್‌ಗೆ ಮುಚ್ಚಳ ಹಾಕಿ ಸುಮಾರು 10 ನಿಮಿಷಗಳ ಕಾಲ ಹಾಗೆಯೇ ಇಡಿ. 10 ನಿಮಿಷಗಳ ಬಳಿಕ ಹಾಲಿನ ಮೇಲೆ ಈಸ್ಟ್ ನೊರೆ ಬಂದಿದ್ದರೆ ಈಸ್ಟ್ ಚೆನ್ನಾಗಿ ಆಕ್ಟಿವೇಟ್ ಆಗಿದೆ ಎಂದರ್ಥ.

2. ಬನ್‌ ಹಿಟ್ಟು ತಯಾರಿಸಿ

ಈಗ ಆಕ್ಟಿವೇಟ್ ಆಗಿರುವ ಈಸ್ಟ್ ಮಿಶ್ರಣಕ್ಕೆ ಒಂದು ಕಪ್ ಮೈದಾ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತಾ ಕಲಸಿ. ಬನ್‌‌ಗೆ ಸಾಮಾನ್ಯವಾಗಿ ಮೈದಾ ಬಳಸಲಾಗುತ್ತದೆ. ಬೇಕಿದ್ದರೆ ಗೋಧಿ ಹಿಟ್ಟನ್ನೂ ಬಳಸಬಹುದು. ಆದರೆ ರುಚಿ ಮತ್ತು ಟೆಕ್ಸ್ಚರ್‌ನಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು. ಹಿಟ್ಟನ್ನು ಚೆನ್ನಾಗಿ ಕಲಸುತ್ತಾ ಮೃದುವಾದ, ಸ್ವಲ್ಪ ಜಿಗುಟಾಗಿರುವ ಹಿಟ್ಟಿನ ಹದಕ್ಕೆ ತರಬೇಕು. ಹಿಟ್ಟು ತುಂಬಾ ಗಟ್ಟಿಯಾಗಬಾರದು, ಹಾಗೆಯೇ ತುಂಬಾ ಸಡಿಲವಾಗಿಯೂ ಇರಬಾರದು. ಹಿಟ್ಟನ್ನು ಚೆನ್ನಾಗಿ ನಾದಿದಷ್ಟೂ ಬನ್‌ ಚೆನ್ನಾಗಿ ಉಬ್ಬಿ ಮೃದುವಾಗುತ್ತದೆ.

3. ಮೊದಲ ಪ್ರೂಫಿಂಗ್ ಮಾಡಿಸಿ

ತಯಾರಾದ ಹಿಟ್ಟನ್ನು ಸ್ವಲ್ಪ ಎಣ್ಣೆ ಸವರಿದ ದೊಡ್ಡ ಬೌಲ್‌ನಲ್ಲಿ ಹಾಕಿ. ಹಿಟ್ಟಿನ ಮೇಲೂ ಸ್ವಲ್ಪ ಎಣ್ಣೆ ಸವರಿ, ಮುಚ್ಚಳ ಹಾಕಿ ಸುಮಾರು 10 ನಿಮಿಷಗಳ ಕಾಲ ಬಿಡಿ. ಈಸ್ಟ್‌ನಿಂದ ಹಿಟ್ಟು ನಿಧಾನವಾಗಿ ಉಬ್ಬಿ ಗಾತ್ರದಲ್ಲಿ ಹೆಚ್ಚಾಗುತ್ತದೆ. ಹಿಟ್ಟು ಚೆನ್ನಾಗಿ ಉಬ್ಬಿದ ಬಳಿಕ ಕೈಗೆ ಸ್ವಲ್ಪ ಎಣ್ಣೆ ಅಥವಾ ಬೆಣ್ಣೆ ಸವರಿಕೊಂಡು ಮತ್ತೊಮ್ಮೆ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ. ಇದರಿಂದ ಬನ್‌ ಇನ್ನಷ್ಟು ಮೃದುವಾಗುತ್ತದೆ.

4. ಬನ್‌‌ಗೆ ಆಕಾರ ನೀಡಿ

ಈಗ ಸಿದ್ಧವಾಗಿರುವ ಹಿಟ್ಟನ್ನು ನಾಲ್ಕು ಸಮಾನ ಭಾಗಗಳಾಗಿ ವಿಂಗಡಿಸಿಕೊಳ್ಳಿ. ಚಿಕ್ಕ ಗಾತ್ರದ ಬನ್‌ ಬೇಕಿದ್ದರೆ ಇನ್ನಷ್ಟು ಭಾಗಗಳಾಗಿ ಮಾಡಿಕೊಳ್ಳಬಹುದು. ಪ್ರತಿಯೊಂದು ಭಾಗವನ್ನೂ ಕೈಯಿಂದ ಚೆನ್ನಾಗಿ ಸುತ್ತಿ, ಮೇಲಿನಿಂದ ಕೆಳಕ್ಕೆ ಫೋಲ್ಡ್ ಮಾಡುತ್ತಾ ಗೋಲಾಕಾರದ ಬನ್‌‌ನಂತೆ ಮಾಡಿಕೊಳ್ಳಿ. ಕೆಳಭಾಗವನ್ನೂ ಚೆನ್ನಾಗಿ ಸೀಲ್ ಮಾಡಿ.

5. ಎರಡನೇ ಪ್ರೂಫಿಂಗ್

ಇಡ್ಲಿ ತಟ್ಟೆಗಳಿಗೆ ಸ್ವಲ್ಪ ಎಣ್ಣೆ ಸವರಿ. ಸಿದ್ಧಪಡಿಸಿಕೊಂಡ ಬನ್‌‌ಗಳನ್ನು ಅವುಗಳ ಮೇಲೆ ಸ್ವಲ್ಪ ಅಂತರ ಬಿಟ್ಟು ಇಡಿ. ಈಗ ಒಂದು ಕಳಾಯಿಯಲ್ಲಿ ಸ್ವಲ್ಪ ನೀರು ಹಾಕಿ, ಅದರೊಳಗೆ ಸ್ಟ್ಯಾಂಡ್ ಇಟ್ಟು ಮುಚ್ಚಳ ಹಾಕಿ ಪ್ರೀಹೀಟ್ ಮಾಡಿಕೊಳ್ಳಿ. ಕಳಾಯಿ ಬಿಸಿಯಾದ ಬಳಿಕ ಬನ್‌ ಇಟ್ಟಿರುವ ಇಡ್ಲಿ ತಟ್ಟೆಯನ್ನು ಒಳಗೆ ಇಟ್ಟು ಮುಚ್ಚಳ ಹಾಕಿ 5ರಿಂದ 10 ನಿಮಿಷಗಳ ಕಾಲ ಬಿಡಿ. ಈ ಸಮಯದಲ್ಲಿ ಬನ್‌ ಮತ್ತೊಮ್ಮೆ ಚೆನ್ನಾಗಿ ಉಬ್ಬುತ್ತವೆ.

6. ಓವನ್ ಇಲ್ಲದೇ ಬನ್‌ ಬೇಯಿಸುವುದು ಹೇಗೆ?

ಸುಮಾರು 10 ನಿಮಿಷಗಳ ಬಳಿಕ ಬನ್‌ ಚೆನ್ನಾಗಿ ಉಬ್ಬಿರುತ್ತವೆ. ಈಗಾಗಲೇ ಬಿಸಿಯಾಗಿರುವ ಕಳಾಯಿಯಲ್ಲಿ ಬನ್‌ ಇರುವ ಇಡ್ಲಿ ತಟ್ಟೆಯನ್ನು ಜಾಗರೂಕತೆಯಿಂದ ಇಡಿ. ಬನ್‌ ಮೇಲೆ ಚೆನ್ನಾಗಿ ಬಣ್ಣ ಬರಲು ಸ್ವಲ್ಪ ಹಸಿ ಹಾಲು ಅಥವಾ ಕುದಿಸಿ ತಣ್ಣಗಾದ ಹಾಲನ್ನು ಬ್ರಷ್‌ನಿಂದ ಸವರಿ. ನಂತರ ಕಳಾಯಿಗೆ ಮುಚ್ಚಳ ಹಾಕಿ ಕಡಿಮೆ ಉರಿಯಲ್ಲಿ ಸುಮಾರು 25 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.

ಗಮನಿಸಿ: ಕಳಾಯಿಯಲ್ಲಿ ಸ್ವಲ್ಪ ನೀರು ಇರಬೇಕು. ನೀರು ಸಂಪೂರ್ಣವಾಗಿ ಒಣಗಿದರೆ ಬನ್‌ ಕೆಳಭಾಗದಲ್ಲಿ ಸುಡುವ ಸಾಧ್ಯತೆ ಇದೆ.

7. ಕೊನೆಯಲ್ಲಿ ಬೆಣ್ಣೆ ಅಥವಾ ತುಪ್ಪ ಸವರಿ

ಸುಮಾರು 25 ನಿಮಿಷಗಳ ಬಳಿಕ ಬನ್‌ ಚೆನ್ನಾಗಿ ಬೇಯಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬಂದಿರುತ್ತವೆ. ಆಗ ಅವುಗಳನ್ನು ಕಳಾಯಿಯಿಂದ ಹೊರತೆಗೆದು, ಬಿಸಿಯಾಗಿರುವಾಗಲೇ ಮೇಲ್ಭಾಗಕ್ಕೆ ಸ್ವಲ್ಪ ಬೆಣ್ಣೆ ಅಥವಾ ತುಪ್ಪ ಸವರಿ. ಇದರಿಂದ ಬನ್‌‌ಗೆ ಉತ್ತಮ ರುಚಿ ಮಾತ್ರವಲ್ಲದೆ ಸುಂದರವಾದ ಹೊಳಪು ಕೂಡ ಬರುತ್ತದೆ. ತುಪ್ಪ ಅಥವಾ ಬೆಣ್ಣೆ ಸವರಿದ ಬಳಿಕ ಮತ್ತೆ 5 ನಿಮಿಷಗಳ ಕಾಲ ಮುಚ್ಚಿಟ್ಟು ಬಿಡಿ.

ಇನ್ನು ಓವನ್ ಬಳಸದೇ ಮನೆಯಲ್ಲೇ ತಯಾರಿಸಿದ ಮೃದುವಾದ, ದೂದಿಯಂತಿರುವ ಬನ್‌ ಸಿದ್ಧ! ಬನ್‌ ಪ್ಲೇಟ್‌ಗೆ ಅಂಟಿಕೊಳ್ಳದೆ ಸುಲಭವಾಗಿ ಬರುತ್ತವೆ. ಬಿಸಿ ಬಿಸಿ ಟೀ ಅಥವಾ ಕಾಫಿ ಜೊತೆ ಈ ಫ್ರೆಶ್ ಹೋಮ್‌ಮೇಡ್ ಬನ್‌ ಸವಿದರೆ ಸಂಜೆ ಟೀ ಟೈಂ ಇನ್ನಷ್ಟು ಸ್ಪೆಷಲ್ ಆಗುತ್ತದೆ.