Chakli recipe Kannada: ಗಣೇಶ ಚತುರ್ಥಿ ಸಡಗರಕ್ಕೆ ಅತಿ ಕಡಿಮೆ ಸಮಯದಲ್ಲಿ ಮತ್ತು ಕನಿಷ್ಠ ಪದಾರ್ಥಗಳನ್ನು ಬಳಸಿ ಗರಿಗರಿಯಾದ ಚಕ್ಕುಲಿ ಮಾಡುವ ಸುಲಭ ವಿಧಾನ ಇಲ್ಲಿದೆ. ಉತ್ತರ ಕರ್ನಾಟಕ ಶೈಲಿಯ ಈ ಚಕ್ಕುಲಿ ಬಾಯಲ್ಲಿಟ್ಟರೆ ಕರಗುವಂತಿರುತ್ತವೆ ಮತ್ತು ಸಾಯಂಕಾಲದ ಟೀ ಜೊತೆ ಸವಿಯಲು ಕೂಡ ಅತ್ಯುತ್ತಮ ಸ್ನ್ಯಾಕ್ಸ್ ಆಗಿದೆ.
ಇನ್ನೇನು ಗಣೇಶ ಚತುರ್ಥಿ ಬರಲಿದೆ. ಹಬ್ಬ ಅಂದಮೇಲೆ ತರಹೇವಾರಿ ತಿಂಡಿಗಳು ಇರಲೇಬೇಕು. ಅದರಲ್ಲೂ ಉತ್ತರ ಕರ್ನಾಟಕದ ಕಡೆ ಚಕ್ಕುಲಿ ಇಲ್ಲದೆ ಹಬ್ಬ ಪೂರ್ಣವಾಗುವುದಿಲ್ಲ. ಹಾಗಾಗಿ ಹೋಟೆಲ್‌ನಲ್ಲಿ ಸಿಗುವಂತೆ ಅತಿ ರುಚಿಯಾಗಿ, ಅಷ್ಟೇ ಗರಿಗರಿಯಾಗಿ ಮನೆಯಲ್ಲೇ ಚಕ್ಕುಲಿ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಕೇವಲ ಅಕ್ಕಿ ಹಿಟ್ಟು ಮತ್ತು ಪುಟಾಣಿ (ಹುರಿಗಡಲೆ) ಬಳಸಿ, ಬೆಣ್ಣೆ-ತುಪ್ಪ ಯಾವುದೂ ಇಲ್ಲದಿದ್ದರೂ ಅತಿ ಸುಲಭವಾಗಿ ಚಕ್ಕುಲಿ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಪದಾರ್ಥಗಳು
ಅಕ್ಕಿ ಹಿಟ್ಟು - 2 ಕಪ್
ಪುಟಾಣಿ ಹಿಟ್ಟು (ಹುರಿಗಡಲೆ ಹಿಟ್ಟು) - 1 ಕಪ್
ಜೀರಿಗೆ - ಸ್ವಲ್ಪ
ಅಜ್ವೈನ್ (ಓಂ ಕಾಳು) - ಸ್ವಲ್ಪ
ಬಿಳಿ ಎಳ್ಳು - ಸ್ವಲ್ಪ
ಅಚ್ಚಖಾರದ ಪುಡಿ - ರುಚಿಗೆ ತಕ್ಕಷ್ಟು
ಉಪ್ಪು - ರುಚಿಗೆ ತಕ್ಕಷ್ಟು"
ಎಣ್ಣೆ - ಹಿಟ್ಟು ಕಲಸಲು 2 ಚಮಚ ಮತ್ತು ಕರಿಯಲು ಬೇಕಾದಷ್ಟು
ಉಗುರು ಬೆಚ್ಚಗಿನ ನೀರು - ಹಿಟ್ಟು ಕಲಸಲು
ತಯಾರಿಸುವ ವಿಧಾನ
ಹಿಟ್ಟಿನ ಮಿಶ್ರಣ
ಒಂದು ಅಗಲವಾದ ಪಾತ್ರೆಯಲ್ಲಿ 2 ಕಪ್ ಅಕ್ಕಿ ಹಿಟ್ಟು ಮತ್ತು 1 ಕಪ್ ಪುಟಾಣಿ ಹಿಟ್ಟನ್ನು ಹಾಕಿಕೊಳ್ಳಿ. ಇದಕ್ಕೆ ಉಪ್ಪು, ಜೀರಿಗೆ, ಓಂ ಕಾಳು, ಎಳ್ಳು ಮತ್ತು ಖಾರದ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಬಿಸಿ ಎಣ್ಣೆಯ ಮ್ಯಾಜಿಕ್
ಎರಡು ಚಮಚ ಎಣ್ಣೆಯನ್ನು ಚೆನ್ನಾಗಿ ಕಾಯಿಸಿ, ಹಿಟ್ಟಿನ ಮೇಲೆ ಹಾಕಿ. ಎಣ್ಣೆ ಹಾಕಿದಾಗ ಹಿಟ್ಟು ನೊರೆ ಬರಬೇಕು, ಆಗಲೇ ಚಕ್ಕುಲಿ ಗರಿಗರಿಯಾಗಿ ಬರುವುದು. ಎಣ್ಣೆ ಬಿಸಿ ಇರುವುದರಿಂದ ಸ್ವಲ್ಪ ಹೊತ್ತು ಬಿಟ್ಟು ಕೈಯಿಂದ ಹಿಟ್ಟನ್ನು ಚೆನ್ನಾಗಿ ನಾದಿ.
ಹಿಟ್ಟು ಕಲಸುವುದು
ಉಗುರು ಬೆಚ್ಚಗಿನ ನೀರನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಹಿಟ್ಟನ್ನು ಕಲಸಿ. ಹಿಟ್ಟು ಚಪಾತಿ ಹಿಟ್ಟಿನ ಹದಕ್ಕೆ ಇರಲಿ. ತೀರಾ ಮೆತ್ತಗಾದರೆ ಎಣ್ಣೆ ಕುಡಿಯುತ್ತದೆ, ತೀರಾ ಗಟ್ಟಿಯಾದರೆ ಚಕ್ಕುಲಿ ಕಟ್ ಆಗುತ್ತದೆ.
ಆಕಾರ ನೀಡುವುದು
ಚಕ್ಕುಲಿ ಒರಳಿಗೆ (ಹೊರಳು) ಹಿಟ್ಟು ತುಂಬಿಸಿ. ಒಂದು ತಟ್ಟೆ ಅಥವಾ ಪೇಪರ್ ಮೇಲೆ ನಿಮಗೆ ಬೇಕಾದ ಗಾತ್ರದಲ್ಲಿ ಚಕ್ಕುಲಿ ಒತ್ತಿಕೊಳ್ಳಿ. ಚಕ್ಕುಲಿ ತುದಿಗಳನ್ನು ಲೈಟಾಗಿ ಪ್ರೆಸ್ ಮಾಡಿ, ಇದರಿಂದ ಎಣ್ಣೆಯಲ್ಲಿ ಹಾಕಿದಾಗ ಅವು ಬಿಟ್ಟುಕೊಳ್ಳುವುದಿಲ್ಲ.
ಕರಿಯುವುದು
ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಉರಿಯನ್ನು ಮಧ್ಯಮ ಹಂತದಲ್ಲಿಡಿ (Medium Flame). ಚಕ್ಕುಲಿ ಎಣ್ಣೆಗೆ ಬಿಟ್ಟು ಎರಡು ಕಡೆ ಹೊಂಬಣ್ಣ ಬರುವವರೆಗೆ ಕರಿಯಿರಿ. ಎಣ್ಣೆಯ ನೊರೆ ಸಂಪೂರ್ಣ ಕಡಿಮೆಯಾದಾಗ ಚಕ್ಕುಲಿ ಬೆಂದಿದೆ ಎಂದರ್ಥ.
ಈಗ ನಿಮ್ಮ ಮುಂದೆ ಬಿಸಿಬಿಸಿ, ಕರುಂ ಕುರುಂ ಎನ್ನುವ ಚಕ್ಕುಲಿ ಸಿದ್ಧ..
ಇದು ಗಮನದಲ್ಲಿರಲಿ..
ಹಿಟ್ಟನ್ನು ಜರಡಿ ಹಿಡಿಯಿರಿ (Sifting)
ಅಕ್ಕಿ ಹಿಟ್ಟು ಮತ್ತು ಪುಟಾಣಿ ಹಿಟ್ಟನ್ನು ಬಳಸುವ ಮೊದಲು ಕಡ್ಡಾಯವಾಗಿ ಜರಡಿ ಹಿಡಿಯಿರಿ. ಹಿಟ್ಟಿನಲ್ಲಿ ಸಣ್ಣ ನುಚ್ಚು ಅಥವಾ ಕಣಗಳಿದ್ದರೆ, ಚಕ್ಕುಲಿ ಒರಳಿನ (ಮೋಲ್ಡ್) ರಂಧ್ರಗಳಲ್ಲಿ ಸಿಲುಕಿಕೊಂಡು ಚಕ್ಕುಲಿ ಕಟ್ ಆಗುವ ಸಾಧ್ಯತೆ ಇರುತ್ತದೆ. ಜರಡಿ ಹಿಡಿದರೆ ಹಿಟ್ಟು ಸಾಫ್ಟ್ ಆಗಿ ಬರುತ್ತದೆ.
ಒದ್ದೆ ಬಟ್ಟೆ ಮುಚ್ಚಿಡಿ
ನಾವು ಒಮ್ಮೆಲೇ ಎಲ್ಲಾ ಹಿಟ್ಟನ್ನು ಒರಳಿನಲ್ಲಿ ಹಾಕಲು ಸಾಧ್ಯವಿಲ್ಲ. ಉಳಿದ ಹಿಟ್ಟು ಗಾಳಿಗೆ ಆರಿದರೆ ಗಟ್ಟಿಯಾಗಿ ಚಕ್ಕುಲಿ ಒತ್ತಲು ಕಷ್ಟವಾಗುತ್ತದೆ. ಆದ್ದರಿಂದ ಕಲಸಿದ ಹಿಟ್ಟಿನ ಮೇಲೆ ಯಾವಾಗಲೂ ಒಂದು ಒದ್ದೆ ಬಟ್ಟೆಯನ್ನು ಮುಚ್ಚಿಡಿ. ಇದರಿಂದ ಹಿಟ್ಟು ಕೊನೆಯವರೆಗೂ ತಾಜಾವಾಗಿರುತ್ತದೆ.
ಒಡೆಯುತ್ತಿದ್ದರೆ ಏನು ಮಾಡಬೇಕು?
ಒಂದು ವೇಳೆ ಚಕ್ಕುಲಿ ಒತ್ತಲು ಹೋದಾಗ ಕಟ್ ಆಗುತ್ತಿದ್ದರೆ, ಹಿಟ್ಟಿಗೆ ಸ್ವಲ್ಪ ನೀರು ಚಿಮುಕಿಸಿ ಮತ್ತೆ ನಾದಿಕೊಳ್ಳಿ. ಒಂದು ವೇಳೆ ಚಕ್ಕುಲಿ ಎಣ್ಣೆಯಲ್ಲಿ ಬಿಟ್ಟುಕೊಳ್ಳುತ್ತಿದ್ದರೆ (ಕರಗುತ್ತಿದ್ದರೆ) ಹಿಟ್ಟಿಗೆ ಸ್ವಲ್ಪ ಒಣ ಅಕ್ಕಿ ಹಿಟ್ಟು ಸೇರಿಸಿ ಸರಿಪಡಿಸಿಕೊಳ್ಳಿ.

