
ಶುಕ್ರವಾರ ಮೂಕಾಂಬಿಕೆ ಸನ್ನಿಧಿಯಲ್ಲಿ Thalapathy Vijay: ಅಮ್ಮನ ಹರಕೆ.. ದೇವಿ ಪೂರೈಕೆ.. ದಳಪತಿ ದೇಗುಲ ದರ್ಶನ!
Tamil Nadu ಮುಖ್ಯಮಂತ್ರಿ ವಿಜಯ್ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. 1.6 ಕೆಜಿ ಬೆಳ್ಳಿ ಖಡ್ಗ, ರೇಷ್ಮೆ ಸೀರೆ ಹಾಗೂ ಫಲ-ತಾಂಬೂಲ ಸಮರ್ಪಿಸಿ ದೇವಿಯ ಆಶೀರ್ವಾದ ಪಡೆದರು.
ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆ ಸೃಷ್ಟಿಸಿ ಸಿಎಂ ಪಟ್ಟಕ್ಕೇರಿರುವ ಜೋಸೆಫ್ ವಿಜಯ್, ಶುಕ್ರವಾರ ಕರ್ನಾಟಕದ ಸುಪ್ರಸಿದ್ದ ಶಕ್ತಿ ಪೀಠ ಕೊಲ್ಲೂರು ಮೂಕಾಂಬಿಕಾ ಸನ್ನಿಧಾನಕ್ಕೆ ಭೇಟಿ ಕೊಟ್ಟಿದ್ದಾರೆ. ನಿಮಗೆಲ್ಲಾ ಗೊತ್ತಿರೋ ಹಾಗೆ ವಿಜಯ್ ಇಡೀ ದಕ್ಷಿಣ ಭಾರತದಲ್ಲಿ ಜನಪ್ರಿಯ ನಟ. ಜನಪ್ರೀಯತೆಯ ಉತ್ತುಂಗದಲ್ಲಿ ಇದ್ದಾಗಲೇ ಸಿನಿಮಾರಂಗ ಬಿಟ್ಟು ರಾಜಕೀಯಕ್ಕೆ ಬಂದ ವಿಜಯ್, ಎರಡು ವರ್ಷಗಳ ಹಿಂದೆ ಟಿವಿಕೆ ಅನ್ನೋ ಪಕ್ಷ ಕಟ್ಟಿದ್ರು. ಈ ವರ್ಷ ನಡೆದ ವಿಧಾನಸಭಾ ಚುನಾವಣೆ ವಿಜಯ್ ಮತ್ತು ಟಿವಿಕೆ ಪಾಲಿನ ಮೊದಲ ಚುನಾವಣೆ.
ಆದ್ರೆ ಅಚ್ಚರಿ ಅಂದ್ರೆ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿದ ಟಿವಿಕೆ , ಇತರ ಪಕ್ಷಗಳ ಬೆಂಬಲದೊಂದಿಗೆ ತಮಿಳುನಾಡಿನಲ್ಲಿ ಸರ್ಕಾರ ರಚನೆ ಮಾಡಿದೆ. ವಿಜಯ್ ಸಿಎಂ ಪಟ್ಟಕ್ಕೇರಿದ್ದಾರೆ. ಚೆನ್ನೈನಿಂದ ಮಂಗಳೂರಿಗೆ ವಿಮಾನದ ಮೂಲಕ ಬಂದ ವಿಜಯ್ , ಮಂಗಳೂರಿನಿಂದ ಕೊಲ್ಲೂರಿಗೆ ರಸ್ತೆ ಮಾರ್ಗವಾಗೇ ಪಯಣಿಸಿದ್ರು. ಮಂಗಳೂರಿಗೆ ಬಂದಿಳಿದ ವಿಜಯ್ಗೆ, ಕರ್ನಾಟಕದ ಸಚಿವ ಯು.ಟಿ ಖಾದರ್ ಸ್ವಾಗತ ಕೋರಿದ್ರು. ಹೌದು ಕೊಲ್ಲೂರು ದೇಗುಲಕ್ಕೆ ದೇಶದ ನಾನಾ ಕಡೆಯಿಂದ ಜನರು ಬರ್ತಾರೆ.
ಸಿನಿಮಾ ತಾರೆಯರು, ರಾಜಕೀಯ ನಾಯಕರು ತಾಯಿ ಮೂಕಾಂಬಿಕೆಯ ಪರಮ ಭಕ್ತರು. ಆದ್ರೆ ತಮಿಳುನಾಡು ಸಿಎಂ ಕುರ್ಚಿಗೂ ಮೂಕಾಂಬಿಕೆ ಭಕ್ತಿಗೂ ಒಂದು ರಹಸ್ಯ ನಂಟಿದೆ. ಪಕ್ಕದ ರಾಜ್ಯದ ಸಿಎಂ ಭೇಟಿ ಪ್ರಯುಕ್ತ , ಭದ್ರತೆಯ ಕಾರಣಕ್ಕೆ ಕೆಲ ಗಂಟೆಗಳ ಕಾಲ ಇತರ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ಇರಲಿಲ್ಲ. ಭಾರೀ ಭದ್ರತೆಯ ನಡುವೆ ದೇಗುಲಕ್ಕೆ ಬಂದ ವಿಜಯ್ ತಾಯಿಯ ದರ್ಶನ ಪಡೆದುಕೊಂಡಿದ್ದಾರೆ. ಹೌದು ವಿಜಯ್, ಶಕ್ತಿ ದೇವಿಗೆ 1 ಕೆಜಿ 600 ಗ್ರಾಮ್ ತೂಕದ ಬೆಳ್ಳಿ ಖಡ್ಗ, ರೇಷ್ಮೆ ಸೀರೆ, ಫಲ-ತಾಂಬೂಲ ಅರ್ಪಿಸಿದ್ರು.
ಇಷ್ಟನ್ನೂ ಅರ್ಪಿಸಿ ದೇವಿ ದರ್ಶನ ಪಡೆದುಕೊಂಡರು. ಸಂಕಲ್ಪ ಪೂಜೆ ಬಳಿಕ ದೀಪಾರಾಧನೆ ಮಾಡಲಾಯಿತು. ಈ ವೇಳೆ ಸಿಎಂಗೆ ಅರ್ಚಕರು ರಕ್ಷಾ ದಾರ ಕಟ್ಟಿದ್ದಾರೆ. ಪ್ರದಕ್ಷಿಣೆಗೈದು, ಬಳಿಕ ಪ್ರಸಾದ ಸ್ವೀಕರಿಸಿ ಕ್ಷೇತ್ರದಿಂದ ತೆರಳಿದ್ದಾರೆ ವಿಜಯ್. ಹೌದು ಸ್ವಲ್ಪ ಹಿಂದಕ್ಕೆ ಹೋಗೋದಾದ್ರೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕೂಡ ಕೊಲ್ಲೂರು ಮೂಕಾಂಬಿಕೆ ಭಕ್ತನಾಗಿದ್ರು. ಅಷ್ಟೇ ಅಲ್ಲ 1984ರಲ್ಲಿ ಕೊಲ್ಲೂರಿಗೆ ಭೇಟಿ ಕೊಟ್ಟಿದ್ದ ವೇಳೆ ಎಂ.ಜಿ.ಆರ್ ಮೂಕಾಂಬಿಕಾ ದೇವಿಗೆ ಚಿನ್ನದ ಖಡ್ಗವನ್ನ ಅರ್ಪಿಸಿದ್ರು. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.