ಆ್ಯಕ್ಷನ್ ಸಿನಿಮಾಗಳಿಗಾಗಿ ಶೂಟಿಂಗ್ ವೇಳೆ ಹಲವು ಬಾರಿ ಗಾಯಗೊಂಡಿರುವ ಪ್ರಭಾಸ್, ‘ಬಾಹುಬಲಿ’, ‘ಸಾಹೋ’ ಹಾಗೂ ‘ಸಲಾರ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಠಿಣ ಆ್ಯಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳಲ್ಲಿ ಮತ್ತೆ ಆತಂಕ ಮೂಡಿದೆ. ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯ ಆರ್ಥೋಪಿಡಿಕ್ ಸರ್ಜನ್ ಡಾ. ಕೆ.ಜೆ. ರೆಡ್ಡಿ ಅವರು ಪ್ರಭಾಸ್ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದಕ್ಕೆ ಬರೆದಿರುವ ಮಾತುಗಳು ಇದೀಗ ಭಾರೀ ಚರ್ಚೆಗೆ ಕಾರಣವಾಗಿವೆ.
ಆ್ಯಕ್ಷನ್ ಸಿನಿಮಾಗಳಿಗಾಗಿ ಶೂಟಿಂಗ್ ವೇಳೆ ಹಲವು ಬಾರಿ ಗಾಯಗೊಂಡಿರುವ ಪ್ರಭಾಸ್, ‘ಬಾಹುಬಲಿ’, ‘ಸಾಹೋ’ ಹಾಗೂ ‘ಸಲಾರ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಠಿಣ ಆ್ಯಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಗಾಯಗಳಾಗಿರುವ ಸುದ್ದಿಯೂ ಈ ಹಿಂದೆ ವರದಿಯಾಗಿತ್ತು. ಇದೀಗ ವೈದ್ಯರೊಂದಿಗಿನ ಹೊಸ ಫೋಟೋ ವೈರಲ್ ಆಗಿರುವುದು ಅಭಿಮಾನಿಗಳ ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿದೆ.
ವೈದ್ಯರ ಪೋಸ್ಟ್‌ನಲ್ಲಿ ಏನಿತ್ತು?
35ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿರುವ ಡಾ. ಕೆ.ಜೆ. ರೆಡ್ಡಿ ಅವರು ಮಂಡಿ, ಸೊಂಟ ಹಾಗೂ ಸ್ಪೋರ್ಟ್ಸ್ ಇಂಜುರಿ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿದ್ದಾರೆ. ಪ್ರಭಾಸ್ ಜೊತೆಗಿನ ಫೋಟೋ ಹಂಚಿಕೊಂಡ ಅವರು, ನಟನ ಸರಳತೆ, ವಿನಯತೆ ಹಾಗೂ ಸಕಾರಾತ್ಮಕ ಮನೋಭಾವವನ್ನು ಮೆಚ್ಚಿ ಬರೆದುಕೊಂಡಿದ್ದಾರೆ. ಜೊತೆಗೆ, ಯಶಸ್ಸಿನ ಹಿಂದೆ ವ್ಯಕ್ತಿಯೊಬ್ಬರು ಮಾಡುವ ವೈಯಕ್ತಿಕ ತ್ಯಾಗಗಳು ಹೊರಗಿನ ಜಗತ್ತಿಗೆ ಕಾಣಿಸುವುದಿಲ್ಲ ಎಂಬ ಅರ್ಥದ ಮಾತುಗಳನ್ನೂ ವೈದ್ಯರು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದೇ ಸಾಲು ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.
‘ಪ್ರಭಾಸ್ ಅಣ್ಣನಿಗೆ ಏನಾಗಿದೆ?’
ವೈದ್ಯರ ಪೋಸ್ಟ್ ನೋಡಿದ ಬಳಿಕ ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ಪ್ರಭಾಸ್ ಅವರ ಆರೋಗ್ಯದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ‘ಪ್ರಭಾಸ್ ಅಣ್ಣನಿಗೆ ಏನಾಗಿದೆ?’ ಎಂದು ಕೆಲವರು ಆತಂಕ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ನಟನ ಆರೋಗ್ಯದ ಬಗ್ಗೆ ಅಧಿಕೃತ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ, ವೈದ್ಯರ ಪೋಸ್ಟ್‌ನಲ್ಲಿ ಪ್ರಭಾಸ್ ಅವರಿಗೆ ನಿರ್ದಿಷ್ಟವಾಗಿ ಯಾವ ಆರೋಗ್ಯ ಸಮಸ್ಯೆ ಇದೆ ಅಥವಾ ಯಾವುದೇ ಹೊಸ ಶಸ್ತ್ರಚಿಕಿತ್ಸೆ ನಡೆದಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಲಾಗಿಲ್ಲ. ಹೀಗಾಗಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಊಹಾಪೋಹಗಳಿಗೆ ಅಧಿಕೃತ ದೃಢೀಕರಣ ಸಿಕ್ಕಿಲ್ಲ.
ಈಗ ಯಾವ ಸಿನಿಮಾಗಳಲ್ಲಿ ಬ್ಯುಸಿ?
ಪ್ರಭಾಸ್ ಸದ್ಯ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’, ಹನು ರಾಘವಪುಡಿ ನಿರ್ದೇಶನದ ‘ಫೌಜಿ’ ಹಾಗೂ ‘ಕಲ್ಕಿ 2898 ಎಡಿ’ಯ ಮುಂದುವರಿದ ಭಾಗ ಸೇರಿದಂತೆ ಹಲವು ಮಹತ್ವದ ಪ್ರಾಜೆಕ್ಟ್‌ಗಳು ಅವರ ಕೈಯಲ್ಲಿವೆ. ಪ್ರಭಾಸ್ ಅವರಿಗೆ ಈ ಹಿಂದೆ ಮಂಡಿ ನೋವಿನ ಸಮಸ್ಯೆ ಹಾಗೂ ಶೂಟಿಂಗ್ ವೇಳೆ ಉಂಟಾದ ಗಾಯಗಳ ಬಗ್ಗೆ ವರದಿಗಳು ಬಂದಿದ್ದರೂ, ಪ್ರಸ್ತುತ ವೈರಲ್ ಆಗಿರುವ ವೈದ್ಯರ ಫೋಟೋ ಅವರ ಆರೋಗ್ಯದ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ. ಇನ್ನು ಪ್ರಭಾಸ್ ಅವರ ಆರೋಗ್ಯದ ಬಗ್ಗೆ ಅಧಿಕೃತ ಸ್ಪಷ್ಟನೆ ಯಾವಾಗ ಸಿಗಲಿದೆ ಎಂಬುದನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


