ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮಳೆಗಾಲದ ಸಮಸ್ಯೆಗಳಾದ ಮೇಲ್ಛಾವಣಿ ಸೋರಿಕೆ ಮತ್ತು ನೀರು ನಿಲ್ಲುವುದನ್ನು ತಡೆಯಲು ನವೀಕರಣ ಕಾಮಗಾರಿ ನಡೆಯುತ್ತಿದೆ. ಕ್ರೀಡಾಂಗಣದ ಸುತ್ತ ಚರಂಡಿ ವ್ಯವಸ್ಥೆ ಸರಿಪಡಿಸಲಾಗುತ್ತಿದ್ದು, ಇದು ಡಿಸಿಎಂ ಘೋಷಿಸಿದ 5000 ಕೋಟಿ ರೂ. ಯೋಜನೆಯ ಭಾಗವಲ್ಲ.
ನಾಸಿರ್ ಸಜಿಪ, ಕನ್ನಡಪ್ರಭ ವಾರ್ತೆ
ಬೆಂಗಳೂರು: ಮಳೆ ಬಂದರೆ ಕ್ರೀಡಾಂಗಣದ ಟ್ರ್ಯಾಕ್‌ನಲ್ಲಿ ನೀರು ನಿಲ್ಲುವುದು, ಗೇಟ್‌ಗಳ ಬಳಿ ಕೃತಕ ಪ್ರವಾಹ ಸೃಷ್ಟಿಯಾಗುವುದು ಮತ್ತು ಪಂದ್ಯಗಳ ವೇಳೆ ಮೇಲ್ಛಾವಣಿ ಸೋರುವುದು ನಗರದ ಕಂಠೀರವ ಸ್ಟೇಡಿಯಂನಲ್ಲಿ ಪ್ರತಿ ವರ್ಷವೂ ಎದುರಾಗುವ ಸಮಸ್ಯೆ. ಆದರೆ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ರಾಜ್ಯ ಕ್ರೀಡಾ ಇಲಾಖೆ ಮುಂದಾಗಿದ್ದು, ನೀರು ನಿಲ್ಲದಂತೆ ಮತ್ತು ಸೋರದಂತೆ ಕ್ರೀಡಾಂಗಣವನ್ನು ರಿಪೇರಿ ಮಾಡುತ್ತಿದೆ. ಇದಕ್ಕಾಗಿ ಬಹುಕೋಟಿ ಮೊತ್ತವನ್ನೂ ವ್ಯಯಿಸುತ್ತಿದೆ.
ಕಳೆದ ಕೆಲ ದಿನಗಳಿಂದ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನವೀಕರಣ ಕಾಮಗಾರಿ ನಡೆಯುತ್ತಿದೆ. ಹಲವು ವರ್ಷ ಹಳೆಯದಾಗಿರುವ ಮೇಲ್ಛಾವಣಿಗಳನ್ನು ಬದಲಾವಣೆ ಮಾಡಲಾಗುತ್ತಿದೆ. ಈಗಾಗಲೇ ಒಂದು ಭಾಗದ ಮೇಲ್ಛಾವಣಿ ತೆಗೆದು, ಹೊಸ ಶೀಟ್‌ಗಳನ್ನು ಅಳವಡಿಸಲಾಗಿದೆ. ಉಳಿದ ಭಾಗದಲ್ಲೂ ಶೀಘ್ರವೇ ಹೊಸ ಮೇಲ್ಛಾವಣಿ ಅಳವಡಿಸಲಾಗುತ್ತದೆ. ಈ ಹಿಂದೆ ಮಾಧ್ಯಮ ಪ್ರತಿನಿಧಿಗಳು ಕುಳಿತುಕೊಳ್ಳುವ ಸ್ಟ್ಯಾಂಡ್‌ನಲ್ಲೂ ಮಳೆಗಾಲದಲ್ಲಿ ನೀರು ಸೋರಿಕೆಯಾಗಿ ಸಮಸ್ಯೆಯಾಗಿತ್ತು. ಪ್ರೇಕ್ಷಕರಿಗೂ ಮಳೆಗಾಲದಲ್ಲಿ ಸಮಸ್ಯೆಯಾಗುತ್ತಿದ್ದ ಬಗ್ಗೆ ದೂರುಗಳು ಕೇಳಿಬಂದಿದ್ದವು.
ಇನ್ನು, ಭಾರೀ ಮಳೆ ಬಂದರೆ ಕ್ರೀಡಾಂಗಣದ ಅಥ್ಲೆಟಿಕ್ ಟ್ರ್ಯಾಕ್, ಹೊರಾಂಗಣ ಸ್ಟೇಡಿಯಂನ ಪ್ರವೇಶ ದ್ವಾರ ಸೇರಿದಂತೆ ಹಲವು ಕಡೆಗಳಲ್ಲಿ ನೀರು ನಿಂತು ಸಮಸ್ಯೆಯಾಗುತ್ತಿತ್ತು. ಹೀಗಾಗಿ ಕ್ರೀಡಾಂಗಣದ ಸುತ್ತಲೂ ಚರಂಡಿ ವ್ಯವಸ್ಥೆ ಸರಿಪಡಿಸಲಾಗುತ್ತಿದೆ. ಈ ಬಗ್ಗೆ ‘ಕನ್ನಡಪ್ರಭ’ ಪತ್ರಿಕೆಗೆ ಕ್ರೀಡಾಂಗಣದ ಉಸ್ತುವಾರಿ ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ‘ಕ್ರೀಡಾಂಗಣದಲ್ಲಿ ಮಳೆ ನೀರು ನಿಲ್ಲುವ ಸಮಸ್ಯೆ ಇತ್ತು. ಆದರೆ ಇನ್ನು ಮುಂದೆ ಈ ರೀತಿ ಆಗದಂತೆ ಚರಂಡಿ ವ್ಯವಸ್ಥೆ ಸರಿ ಪಡಿಸುತ್ತಿದ್ದೇವೆ. ಕ್ರೀಡಾಂಗಣದ ಸುತ್ತಲೂ ಸೇರುವ ನೀರು ನೇರವಾಗಿ ರಾಜಕಾಲುವೆ ಸೇರುವಂತೆ ಮಾಡಲಾಗುತ್ತಿದೆ’ ಎಂದಿದ್ದಾರೆ. ಅಲ್ಲದೆ, ಕ್ರೀಡಾಂಗಣಕ್ಕೆ ಪೇಂಟಿಂಗ್ ಕೂಡಾ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಕಂಠೀರವದ ಒಳಾಂಗಣ ಕ್ರೀಡಾಂಗಣಕ್ಕೂ ಮಳೆಗಾಲದಲ್ಲಿ ನೀರು ನುಗ್ಗುತ್ತಿತ್ತು. ಆದರೆ ಕಳೆದ ವರ್ಷವೇ ಒಳಾಂಗಣ ಕ್ರೀಡಾಂಗಣದ ಪ್ರವೇಶ ದ್ವಾರದ ಹೊರಭಾಗವನ್ನು ಎತ್ತರಿಸಿ ಕಟ್ಟಲಾಗಿದೆ. ಈಗ ಹೊರಾಂಗಣ ಕ್ರೀಡಾಂಗಣದಲ್ಲೂ ನೀರು ನಿಲ್ಲುವ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.
ಇದು 5000 ರು.ಕೋಟಿ ವೆಚ್ಚದ ಯೋಜನೆಯಲ್ಲ!
ಕಂಠೀರವ ಕ್ರೀಡಾಂಗಣವನ್ನು ಬರೋಬ್ಬರಿ 5000 ಕೋಟಿ ರು. ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗುತ್ತದೆ ಎಂದು ಕ್ರೀಡಾ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಇತ್ತೀಚೆಗೆ ಘೋಷಿಸಿದ್ದರು. ಆದರೆ ಕಂಠೀರವದಲ್ಲಿ ಈಗ ನಡೆಯುತ್ತಿರುವ ಕಾಮಗಾರಿಗೂ, ಪರಮೇಶ್ವರ್ ಘೋಷಿಸಿರುವ ಯೋಜನೆಗೂ ಸಂಬಂಧವಿಲ್ಲ ಎಂದು ಕ್ರೀಡಾಂಗಣ ಉಸ್ತುವಾರಿ ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ. ‘ಡಿಸಿಎಂ ಪರಮೇಶ್ವರ್ ಅವರು 5000 ಕೋಟಿ ರು. ವೆಚ್ಚದಲ್ಲಿ ಕ್ರೀಡಾಂಗಣ ಮೇಲ್ದರ್ಜೆಗೇರಿಸುವ ಬಗ್ಗೆ ಘೋಷಿಸಿದ್ದಾರೆ. ಆದರೆ ಈಗ ನಡೆಯುತ್ತಿರುವ ಕಾಮಗಾರಿ ಬೇರೆ. ಇದಕ್ಕೆ ಕಳೆದ ವರ್ಷವೇ ಟೆಂಡರ್ ಕರೆಯಲಾಗಿತ್ತು. ಈಗ ಕೆಲಸ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.
ಒಳಾಂಗಣ ಸ್ಟೇಡಿಯಂಗೆ ಎಸಿ, ವಾಟರ್‌ಫ್ರೂಫಿಂಗ್
ಬಾಸ್ಕೆಟ್‌ಬಾಲ್ ಸೇರಿದಂತೆ ಪ್ರಮುಖ ಕ್ರೀಡೆಗಳನ್ನು ನಡೆಸುವ ಒಳಾಂಗಣ ಕ್ರೀಡಾಂಗಣದಲ್ಲೂ ದುರಸ್ತಿ ಕಾರ್ಯ ನಡೆಯುತ್ತಿದೆ. ಹಲವು ವರ್ಷಗಳಿಂದ ಕೆಟ್ಟು ಹೋಗಿದ್ದ ಏರ್ ಕಂಡೀಷನ್ ವ್ಯವಸ್ಥೆಯನ್ನು ಬದಲಾಯಿಸಿ, ಹೊಸದಾಗಿ ಎಸಿ ಅಳವಡಿಸಲಾಗಿದೆ. ಸೋರುತ್ತಿದ್ದ ಮೇಲ್ಛಾವಣಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ವಾಟರ್‌ಪ್ರೂಫಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮಂಜುನಾಥ್ ಅವರು ಮಾಹಿತಿ ನೀಡಿದ್ದಾರೆ.


