ತಮಿಳು ನಟ ಜಯಂ ರವಿ ಹಾಗೂ ಗಾಯಕಿ ಕೆನಿಶಾ ಮತ್ತೆ ಸುದ್ದಿಯಾಗಿದ್ದಾರೆ. ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಜಯಂ ರವಿ ಸಿಗರೇಟ್ ಸೇದಿ ಬಳಿಕ ಕೆನಿಶಾಗೆ ನೀಡಿದಂತೆ ಕಾಣಿಸುವ ದೃಶ್ಯವಿದೆ.
ತಮಿಳು ನಟ-ನಿರ್ಮಾಪಕ ರವಿ ಮೋಹನ್ ಅಲಿಯಾಸ್ ಜಯಂ ರವಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನಟನಿಗೆ ಸಂಬಂಧಿಸಿದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಇದನ್ನು ಕಂಡ ನೆಟ್ಟಿಗರು ಜಯಂ ರವಿ ವಿರುದ್ಧ ಟೀಕೆ ವ್ಯಕ್ತಪಡಿಸುತ್ತಿದ್ದಾರೆ.
ಸ್ಟಾರ್ ಹೀರೋ ಆಗಿ ಕಾಲಿವುಡ್‌ನಲ್ಲಿ ಗುರುತಿಸಿಕೊಂಡಿರುವ ಜಯಂ ರವಿ, ಕಳೆದ ಕೆಲ ಸಮಯದಿಂದ ಸಿನಿಮಾಗಳಿಗಿಂತ ವೈಯಕ್ತಿಕ ವಿಚಾರಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ವಿಶೇಷವಾಗಿ ಪತ್ನಿ ಆರ್ತಿ ಅವರೊಂದಿಗಿನ ವಿಚ್ಛೇದನ ವಿವಾದದ ಬಳಿಕ ಜಯಂ ರವಿ ಹೆಸರು ಪದೇಪದೇ ಚರ್ಚೆಗೆ ಬರುತ್ತಿದೆ. ಪ್ರೀತಿಸಿ ಮದುವೆಯಾಗಿ, ಇಬ್ಬರು ಗಂಡು ಮಕ್ಕಳಿರುವ ಜಯಂ ರವಿ-ಆರ್ತಿ ದಂಪತಿ ವಿಚ್ಛೇದನದ ವಿಚಾರ ಇದೀಗ ಕೋರ್ಟ್ ಮೆಟ್ಟಿಲೇರಿದೆ.
ಈ ನಡುವೆ ಖ್ಯಾತ ಗಾಯಕಿ ಕೆನಿಶಾ ಅವರೊಂದಿಗೆ ಜಯಂ ರವಿ ಆತ್ಮೀಯವಾಗಿ ಕಾಣಿಸಿಕೊಳ್ಳುತ್ತಿರುವುದು ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇಬ್ಬರ ಸಂಬಂಧದ ಬಗ್ಗೆ ಹಲವು ರೀತಿಯ ಸುದ್ದಿಗಳು ಹರಿದಾಡಿದ್ದವು. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಯಂ ರವಿ, ವಿಚ್ಛೇದನ ಪ್ರಕರಣ ಇತ್ಯರ್ಥವಾಗುವವರೆಗೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿಕೊಂಡಿದ್ದರು. ಅದೇ ಸಮಯದಲ್ಲಿ ಕೆನಿಶಾ ಕೂಡ ಜಯಂ ರವಿ ಅವರೊಂದಿಗಿನ ತಮ್ಮ ಸಂಬಂಧಕ್ಕೆ ಬ್ರೇಕ್ ಹಾಕುತ್ತಿರುವುದಾಗಿ ಹೇಳಿದ್ದರು.
ಆದರೆ ಆ ಹೇಳಿಕೆಗಳ ಬೆನ್ನಲ್ಲೇ ಇಬ್ಬರೂ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ತಿರುಮಲಕ್ಕೆ ತೆರಳಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದ ಜಯಂ ರವಿ ಹಾಗೂ ಕೆನಿಶಾ ಅವರ ಫೋಟೋಗಳು ಕೂಡ ಗಮನ ಸೆಳೆದಿದ್ದವು. ಇದೀಗ ಈ ಜೋಡಿಯ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಒಂದೇ ಸಿಗರೇಟ್ ಇಬ್ಬರೂ ಹಂಚಿಕೊಂಡ್ರಾ?
ವೈರಲ್ ಆಗಿರುವ ವಿಡಿಯೋದಲ್ಲಿ ಜಯಂ ರವಿ ಮತ್ತು ಕೆನಿಶಾ ಇಬ್ಬರೂ ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ಇನ್ನೂ ಕೆಲವರು ಇದ್ದು, ಯಾವುದೋ ಗ್ರೂಪ್ ಮೀಟಿಂಗ್‌ನಲ್ಲಿ ಗಂಭೀರವಾಗಿ ಚರ್ಚೆ ನಡೆಸುತ್ತಿರುವಂತೆ ವಿಡಿಯೋದಲ್ಲಿ ಕಾಣಿಸುತ್ತದೆ.
ಈ ವೇಳೆ ಜಯಂ ರವಿ ಸಿಗರೇಟ್ ಸೇದುತ್ತಿರುವುದು, ಬಳಿಕ ಅದನ್ನು ಕೆನಿಶಾಗೆ ನೀಡುವುದು ಹಾಗೂ ಅವರು ಕೂಡ ಅದೇ ಸಿಗರೇಟ್ ಸೇದುತ್ತಿರುವ ದೃಶ್ಯ ಕಂಡುಬಂದಿದೆ ಎಂದು ವರದಿಯಾಗಿದೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೇಗವಾಗಿ ಹರಿದಾಡುತ್ತಿದ್ದು, ಇಬ್ಬರನ್ನೂ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಜಯಂ ರವಿ ಮೇಲಿದ್ದ ಗೌರವವೇ ಕಳೆದುಹೋಯಿತು
ವಿಡಿಯೋಗೆ ಪ್ರತಿಕ್ರಿಯಿಸಿರುವ ಕೆಲ ನೆಟ್ಟಿಗರು ಜಯಂ ರವಿ ಅವರ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಚ್ಛೇದನದ ಸುದ್ದಿ ಹೊರಬಂದಾಗ ಜಯಂ ರವಿ ಅವರ ಹೇಳಿಕೆಯನ್ನು ನಂಬಿ ತಾವು ಅವರಿಗೆ ಬೆಂಬಲ ನೀಡಿದ್ದಾಗಿ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಆದರೆ ಇದೀಗ ವೈರಲ್ ಆಗುತ್ತಿರುವ ವಿಡಿಯೋಗಳನ್ನು ನೋಡಿದ ಬಳಿಕ ತಮ್ಮ ಅಭಿಪ್ರಾಯ ಬದಲಾಗಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ವಿಚ್ಛೇದನದ ಸುದ್ದಿ ಹೊರಬಂದಾಗ ನಾವು ಜಯಂ ರವಿಗೆ ಬೆಂಬಲವಾಗಿ ನಿಂತಿದ್ದೆವು. ಅವರ ವಾದವನ್ನು ಮನಸಾರೆ ನಂಬಿದ್ದೆವು. ಆದರೆ ಈಗ ಅವರ ವಿಡಿಯೋಗಳನ್ನು ನೋಡಿದ ಬಳಿಕ ವಾಸ್ತವ ಪರಿಸ್ಥಿತಿ ಅರ್ಥವಾಗುತ್ತಿದೆ. ಇಂತಹ ಘಟನೆಗಳಿಂದ ಜಯಂ ರವಿ ಅವರ ಮೇಲಿದ್ದ ಗೌರವವೂ ಕಳೆದುಹೋಗಿದೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ಪತ್ನಿ ಆರ್ತಿ ಅವರೊಂದಿಗಿನ ವಿಚ್ಛೇದನ ಪ್ರಕರಣ ಇನ್ನೂ ಕೋರ್ಟ್‌ನಲ್ಲಿ ನಡೆಯುತ್ತಿರುವ ಸಂದರ್ಭದಲ್ಲೇ ಜಯಂ ರವಿ ಮತ್ತು ಕೆನಿಶಾ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಇಬ್ಬರೂ ಒಂದೇ ಸಿಗರೇಟ್ ಹಂಚಿಕೊಂಡಿರುವಂತೆ ಕಾಣುವ ವಿಡಿಯೋ ವೈರಲ್ ಆಗಿರುವುದು ನೆಟ್ಟಿಗರ ಗಮನ ಸೆಳೆದಿದೆ. ಇನ್ನು ಈ ವಿಡಿಯೋ ಕುರಿತು ಜಯಂ ರವಿ ಅಥವಾ ಕೆನಿಶಾ ಯಾವುದೇ ಪ್ರತಿಕ್ರಿಯೆ ನೀಡುತ್ತಾರಾ ಎಂಬುದು ಸದ್ಯ ಕುತೂಹಲ ಮೂಡಿಸಿದೆ.


