ನಟಿ ಐಶ್ವರ್ಯ ಲಕ್ಷ್ಮಿ ತಮ್ಮ ಡ್ರೆಸ್ಸಿಂಗ್ ಸ್ಟೈಲ್ ಕುರಿತು ಎದುರಿಸಿದ ಟ್ರೋಲಿಂಗ್ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ. ಕೆಲವು ಸಂದರ್ಭಗಳಲ್ಲಿ ಡ್ರೆಸ್ ಆಯ್ಕೆಯಲ್ಲಿ ತಮ್ಮ ತಪ್ಪೂ ಇದೆ ಎಂದು ಒಪ್ಪಿಕೊಂಡಿದ್ದಾರೆ.

ಮಾಲಿವುಡ್‌ನ ಖ್ಯಾತ ನಟಿ ಐಶ್ವರ್ಯ ಲಕ್ಷ್ಮಿ ಸಿನಿಮಾಗಳಷ್ಟೇ ಅಲ್ಲದೆ ತಮ್ಮ ಫ್ಯಾಷನ್ ಹಾಗೂ ಡ್ರೆಸ್ಸಿಂಗ್ ಸ್ಟೈಲ್‌ನಿಂದಲೂ ಆಗಾಗ್ಗೆ ಸುದ್ದಿಯಾಗುತ್ತಾರೆ. ಆದರೆ ಕೆಲವೊಮ್ಮೆ ಅವರು ಧರಿಸುವ ಉಡುಪುಗಳ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲಿಂಗ್ ಕೂಡ ಎದುರಿಸಿದ್ದಾರೆ. ವಿಶೇಷವಾಗಿ ಅವರ ಡ್ರೆಸ್ಸಿಂಗ್ ಆಯ್ಕೆಯ ಬಗ್ಗೆ ನೆಟ್ಟಿಗರು ಮಾಡಿರುವ ಕಾಮೆಂಟ್‌ಗಳು ಸಾಕಷ್ಟು ಚರ್ಚೆಗೆ ಕಾರಣವಾಗಿವೆ. ಇದೀಗ ಸಂದರ್ಶನವೊಂದರಲ್ಲಿ ಐಶ್ವರ್ಯ ಲಕ್ಷ್ಮಿ ಈ ಟ್ರೋಲಿಂಗ್ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ತಮ್ಮ ಡ್ರೆಸ್ಸಿಂಗ್ ವಿಚಾರದಲ್ಲಿ ನಡೆದ ಕೆಲವು ಘಟನೆಗಳಲ್ಲಿ ತಪ್ಪು ತಮ್ಮದೂ ಇದೆ ಎಂದು ಐಶ್ವರ್ಯ ಲಕ್ಷ್ಮಿ ಒಪ್ಪಿಕೊಂಡಿದ್ದಾರೆ. ಆದರೆ ಅದು ಬಹುತೇಕ ತಮ್ಮ ಫ್ಯಾಷನ್ ಸೆನ್ಸ್‌ಗೆ ಸಂಬಂಧಿಸಿದ ವಿಚಾರ ಎಂದು ಅವರು ಹೇಳಿದ್ದಾರೆ. ತಾವು ಧರಿಸುವ ಉಡುಪುಗಳು ತಮಗೆ ಇಷ್ಟವಾಗಿರುತ್ತವೆ. ಯಾರಿಗೂ ತೊಂದರೆ ನೀಡಬೇಕು ಎಂಬ ಉದ್ದೇಶದಿಂದ ಅವುಗಳನ್ನು ಆಯ್ಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಒಮ್ಮೆ ತಾವು ಧರಿಸಿದ್ದ ಡ್ರೆಸ್ ಕುರಿತು ನಡೆದ ಟ್ರೋಲಿಂಗ್ ಬಗ್ಗೆ ಮಾತನಾಡಿದ ಐಶ್ವರ್ಯ ಲಕ್ಷ್ಮಿ, ಸತತ ಏಳು-ಎಂಟು ದಿನಗಳ ಕಾಲ ನೈಟ್ ಶೂಟಿಂಗ್‌ನಲ್ಲಿ ಭಾಗವಹಿಸಿದ ಬಳಿಕ ಆ ಉಡುಪನ್ನು ಧರಿಸಿದ್ದಾಗಿ ಹೇಳಿದ್ದಾರೆ.

ಏನಾದರೂ ಆಗಬಹುದೇನೋ ಎಂಬ ನಿರೀಕ್ಷೆಯಲ್ಲಿ ಆ ಡ್ರೆಸ್ ಹಾಕಿಕೊಂಡೆ. ನಾನು ಸ್ನಾನ ಮಾಡುತ್ತಿದ್ದಾಗ ಮಧ್ಯದಲ್ಲೇ ಬಂದು ಡ್ರೆಸ್ ಹಾಕಿಕೊಂಡೇನಾ ಎಂದು ಹಲವರು ಕೇಳಿದರು. ನಿಜವಾಗಿಯೂ ಅದೇ ಆಗಿತ್ತು ಎಂದು ಐಶ್ವರ್ಯ ನಗುತ್ತಾ ಹೇಳಿದ್ದಾರೆ. ಆದರೆ ಆ ಡ್ರೆಸ್ ಆಯ್ಕೆ ಮಾಡುವಾಗ ತಮ್ಮ ಸುತ್ತ ಸ್ಟೈಲಿಸ್ಟ್, ಸ್ನೇಹಿತರು ಹಾಗೂ ಮ್ಯಾನೇಜರ್‌ಗಳು ಎಲ್ಲರೂ ಇದ್ದರು ಎಂದು ಅವರು ತಿಳಿಸಿದ್ದಾರೆ. ಮತ್ತೊಂದು ಚೋಕರ್ ಧರಿಸುವಂತೆ ಹಾಗೂ ಕೂದಲನ್ನು ಬಿಟ್ಟುಕೊಳ್ಳುವಂತೆ ತಮ್ಮ ಸ್ಟೈಲಿಸ್ಟ್ ಸಲಹೆ ನೀಡಿದ್ದರು. ಸ್ನೇಹಿತರು ಮತ್ತು ಮ್ಯಾನೇಜರ್‌ಗಳು ಕೂಡ ಡ್ರೆಸ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವಂತೆ ಸೂಚಿಸಿದ್ದರು.

ಆದರೆ ಕೊನೆಗೆ ಆ ಉಡುಪನ್ನು ಆಯ್ಕೆ ಮಾಡಿದ್ದು ಮಾತ್ರ ತಾವೇ ಎಂದು ಐಶ್ವರ್ಯ ಸ್ಪಷ್ಟಪಡಿಸಿದ್ದಾರೆ. ನನಗೆ ಬೇರೆ ದಾರಿ ಇರಲಿಲ್ಲ ಅಂತಲ್ಲ. ಯಾರೂ ನನ್ನನ್ನು ಒತ್ತಾಯಿಸಿರಲಿಲ್ಲ. ನಾನೇ ಸ್ವತಃ ಆ ಡ್ರೆಸ್ ಆಯ್ಕೆ ಮಾಡಿದ್ದೆ. ಇದೇ ಫ್ಯಾಷನ್, ಇದರ ಬಗ್ಗೆ ನನಗೆ ನಂಬಿಕೆ ಇದೆ ಎಂದು ಅಂದುಕೊಂಡಿದ್ದೆ ಎಂದು ಅವರು ಹೇಳಿದ್ದಾರೆ. ಆದರೆ ಆ ಡ್ರೆಸ್ ವಿಚಾರದಲ್ಲಿ ತಾವು ಮಾಡಿದ ತಪ್ಪು ತಮಗೇ ಮೊದಲೇ ಅರ್ಥವಾಗಿತ್ತು ಎಂದು ಐಶ್ವರ್ಯ ತಿಳಿಸಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಅದು ತಿಳಿದಿತ್ತು. ಆದರೂ ಆ ಡ್ರೆಸ್ ತಮ್ಮನ್ನು ಬಹಳ ಆಕರ್ಷಿಸಿತ್ತು ಎಂದು ಅವರು ನಗುತ್ತಾ ಹೇಳಿದ್ದಾರೆ.

ಮತ್ತೊಂದು ಡ್ರೆಸ್‌ಗೂ ಬಂದಿತ್ತು ಟ್ರೋಲಿಂಗ್

ಇನ್ನೊಂದು ಸಂದರ್ಭದಲ್ಲಿ ತಾವು ಧರಿಸಿದ್ದ ಉಡುಪಿನ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಿಂಗ್ ನಡೆದಿತ್ತು ಎಂದು ಐಶ್ವರ್ಯ ಲಕ್ಷ್ಮಿ ನೆನಪಿಸಿಕೊಂಡಿದ್ದಾರೆ. ಆ ಡ್ರೆಸ್‌ನಲ್ಲಿ ಕ್ಲೀವೇಜ್ ಕಾಣಿಸುವ ರೀತಿಯ ದೊಡ್ಡ ಕೀಹೋಲ್ ವಿನ್ಯಾಸವಿತ್ತು. ಆದರೆ ಅದು ಅಷ್ಟು ದೊಡ್ಡದಾಗಿರುತ್ತದೆ ಎಂದು ತಾವು ಊಹಿಸಿರಲಿಲ್ಲ ಎಂದು ಹೇಳಿದ್ದಾರೆ. ಆ ಡ್ರೆಸ್ ನನಗೆ ತುಂಬಾ ಇಷ್ಟವಾಗಿತ್ತು. ನನ್ನ ಸ್ನೇಹಿತರಿಗೂ ಅದು ಇಷ್ಟವಾಗಿತ್ತು. ಆದರೆ ಅದರಿಂದ ಇಂತಹ ಟ್ರೋಲಿಂಗ್ ಎದುರಿಸಬೇಕಾಗುತ್ತದೆ ಎಂದು ಮಾತ್ರ ನಾನು ಊಹಿಸಿರಲಿಲ್ಲ ಎಂದು ಐಶ್ವರ್ಯ ಲಕ್ಷ್ಮಿ ಹೇಳಿದ್ದಾರೆ.

ಇನ್ನು ಫ್ಯಾಷನ್ ಆಯ್ಕೆಗಳ ವಿಚಾರದಲ್ಲಿ ತಮ್ಮ ನಿರ್ಧಾರವನ್ನು ತಾವೇ ತೆಗೆದುಕೊಳ್ಳುವುದಾಗಿ ಹೇಳಿರುವ ಐಶ್ವರ್ಯ ಲಕ್ಷ್ಮಿ, ಟ್ರೋಲಿಂಗ್‌ಗಳನ್ನು ಎದುರಿಸುವ ಅನುಭವವನ್ನೂ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಇದೀಗ ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿವೆ.