ರವಿ ಮೋಹನ್ (ಜಯಂ ರವಿ) ವೈಯಕ್ತಿಕ ಜೀವನ ಹಾಗೂ ವಿಚ್ಛೇದನ ವಿವಾದದ ಬಗ್ಗೆ ನಟಿ ಅಮೇಯಾ ನಾಯರ್ ಪ್ರತಿಕ್ರಿಯೆ ನೀಡಿದ್ದು, ಅವರು ಮಾನಸಿಕ ಒತ್ತಡದಲ್ಲಿರುವಂತೆ ಕಾಣುತ್ತಾರೆ ಎಂದಿದ್ದಾರೆ.

ನಟ ರವಿ ಮೋಹನ್ (ಜಯಂ ರವಿ) ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾಡಿದ ಆರೋಪಗಳು ಮತ್ತು ಅದಕ್ಕೆ ಬಂದ ಪ್ರತಿಕ್ರಿಯೆಗಳು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿವೆ. ಇತ್ತೀಚೆಗೆ ರವಿ ಮೋಹನ್ ಒಂದು ಪತ್ರಿಕಾಗೋಷ್ಠಿ ನಡೆಸಿದ್ದರು. ಅಲ್ಲಿ ತಮ್ಮಿಂದ ದೂರವಾಗಿರುವ ಪತ್ನಿ ಆರತಿ ರವಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಮಾಧ್ಯಮಗಳ ಮುಂದೆ ಕಣ್ಣೀರಿಡುತ್ತಾ ಮಾತನಾಡಿದ ರವಿ ಮೋಹನ್ ಅವರ ವಿಡಿಯೋ ಇಂಟರ್‌ನೆಟ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈಗ ಈ ವಿಷಯದ ಬಗ್ಗೆ ಕಿರುತೆರೆ ನಟಿ ಅಮೇಯಾ ನಾಯರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಮೇಯಾ ನಾಯರ್ ಹೇಳಿದ್ದಿಷ್ಟು

"ರವಿ ಮೋಹನ್ ಅವರ ವಿಡಿಯೋ ನೋಡಿದ್ರೆ ಸಾಕು, ಅವರು ತೀವ್ರ ಖಿನ್ನತೆಯಲ್ಲಿದ್ದಾರೆ ಅಂತ ಗೊತ್ತಾಗುತ್ತೆ. ಅವರ ಮುಖದಲ್ಲೇ ಅದು ಕಾಣಿಸುತ್ತೆ. ಇವತ್ತಿನ ಕಾಲದಲ್ಲಿ ಗಂಡಸರು ಕೂಡ ಕೌಟುಂಬಿಕ ದೌರ್ಜನ್ಯವನ್ನು ಅನುಭವಿಸುತ್ತಿದ್ದಾರೆ. ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಸಂಸಾರದಲ್ಲಿ ಗಂಡಸರು ಕೂಡ ಕಷ್ಟಪಡುತ್ತಿದ್ದಾರೆ. ಖಂಡಿತವಾಗಿಯೂ ಅವರು ಇದಕ್ಕೆಲ್ಲಾ ಸಾಕ್ಷಿ ಕೊಟ್ಟರೆ, ಅವರಿಗೆ ಸುಲಭವಾಗಿ ವಿಚ್ಛೇದನ ಸಿಗಬಹುದು."

"ನಾನು ಡೈವೋರ್ಸ್ ಆದಾಗ, ನಾನೊಬ್ಬಳು ಸೆಲೆಬ್ರಿಟಿ ಆಗಿರಲಿಲ್ಲ. ಹಾಗಾಗಿ ನನ್ನ ಕಷ್ಟಗಳು ಯಾರಿಗೂ ಕಾಣಿಸಲಿಲ್ಲ. ನಾನೂ ಕೂಡ ತುಂಬಾ ಕಷ್ಟಪಟ್ಟು ಮಕ್ಕಳನ್ನು ಬೆಳೆಸಿದವಳು. ಇನ್ನೊಬ್ಬರ ಜೀವನದಲ್ಲಿ ಹೋಗಿ, ಒಬ್ಬ ತಾಯಿ ಮತ್ತು ಮಗುವಿನ ಜೀವನವನ್ನು ಹಾಳು ಮಾಡುವ ಅವಶ್ಯಕತೆ ನನಗಿಲ್ಲ. ಸಪರೇಟ್ ಆಗಿ, ಹಾಳಾಗಿ ನಿಂತಿದ್ದ ಒಬ್ಬ ವ್ಯಕ್ತಿಗೆ ನಾನು ನನ್ನ ಜೀವನ ಕೊಟ್ಟಿದ್ದೇನೆ ಅನ್ನೋ ಅರಿವು ನನಗಿದೆ. ಹಾಗಾಗಿ ನನ್ನ ವಿರುದ್ಧ ಬರುವ ಟೀಕೆಗಳನ್ನು ನಾನು ತಲೆಗೆ ಹಾಕಿಕೊಳ್ಳುವುದಿಲ್ಲ. ಆದರೆ, ಎಲ್ಲರೂ ಹಾಗೆಯೇ ಇರಬೇಕು ಅಂತೇನಿಲ್ಲ. ಅದಕ್ಕಾಗಿಯೇ ಜಯಂ ರವಿ ಮಾಧ್ಯಮಗಳ ಮುಂದೆ ಬಂದು ಮಕ್ಕಳ ಬಗ್ಗೆ ಹೇಳಿ ಅಳಬೇಕಾಗಿ ಬಂತು."

"ಇದೇ ಸ್ಥಿತಿಯಲ್ಲಿ ನಾನು ನನ್ನ ಪಾರ್ಟ್‌ನರ್‌ನನ್ನೂ ನೋಡಿದ್ದೇನೆ. ಬಿಗ್ ಬಾಸ್‌ನಂತಹ ದೊಡ್ಡ ಶೋನಲ್ಲಿ, ಮಗುವಿನ ವಿಚಾರ ಇಟ್ಟುಕೊಂಡು ಎದುರಾಳಿ ಸ್ಪರ್ಧಿಯೊಬ್ಬರು ಅವರನ್ನು ಬೈಯಲು ಪ್ರಯತ್ನಿಸಿದ್ದರು. ಆಗ ಅವರು ಇದೇ ರೀತಿ ಸಿಡಿದುದ್ದನ್ನು ನಾನು ನೋಡಿದ್ದೇನೆ. ಪ್ರತಿಯೊಬ್ಬರೂ ತಮ್ಮ ತಮ್ಮ ನೋವು, ಸಮಸ್ಯೆಗಳನ್ನು ಮನಸ್ಸಿನಲ್ಲೇ ಅಡಗಿಸಿಕೊಂಡು ಬದುಕುತ್ತಿರುತ್ತಾರೆ," ಎಂದು ಅಮೇಯಾ ಹೇಳಿದ್ದಾರೆ.