ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಎರಡನೇ ದಿನವೂ ಬಾಕ್ಸ್ ಆಫೀಸ್‌ನಲ್ಲಿ ತನ್ನ ಓಟ ಮುಂದುವರಿಸಿದೆ. ಭಾರತದಲ್ಲಿ ಕಲೆಕ್ಷನ್ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದರೂ, ವಿದೇಶಿ ಮಾರುಕಟ್ಟೆಯಲ್ಲಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಬೆಂಗಳೂರಿನಲ್ಲಿ ಹೌಸ್‌ಫುಲ್ ಶೋಗಳು ಮುಂದುವರಿದಿದೆ.
ಯಶ್ ಅವರ ‘ಟಾಕ್ಸಿಕ್’ ಸಿನಿಮಾ ಎರಡನೇ ದಿನ 200 ಕೋಟಿ ಕ್ಲಬ್ ಸೇರುವತ್ತ ಹೆಜ್ಜೆ ಹಾಕುತ್ತಿದೆ. ಬೆಂಗಳೂರಿನ ಹಲವೆಡೆ ಎರಡನೇ ದಿನವೂ ಹೌಸ್‌ಫುಲ್ ಶೋಗಳು ಕಂಡುಬಂದವು. ಎರಡನೇ ದಿನ ಭಾರತದಲ್ಲಿ ‘ಟಾಕ್ಸಿಕ್’ ಸಿನಿಮಾದ ಗಳಿಕೆ 170 ಕೋಟಿ ರು. ಸಮೀಪಿಸಿದೆ. ವಿದೇಶದಲ್ಲಿ ಒಟ್ಟಾರೆ ಸುಮಾರು 25 ಕೋಟಿ ರು.ಗಳಷ್ಟು ಗಳಿಕೆ ಕಂಡು ಬಂದಿದೆ. ಎರಡನೇ ದಿನದಲ್ಲಿ ವಿಶ್ವಾದ್ಯಂತ ಸಿನಿಮಾದ ಒಟ್ಟು ಗಳಿಕೆ 190 ರಿಂದ 195 ಕೋಟಿ ಎಂದು ಅಂದಾಜಿಸಲಾಗಿದೆ.
ಆದರೆ ಎರಡನೇ ದಿನ ಸಿನಿಮಾ ಕಲೆಕ್ಷನ್‌ನಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಮೊದಲ ದಿನ ಸುಮಾರು 45 ಕೋಟಿ ರು.ಗಳಷ್ಟು ಕಲೆಕ್ಷನ್ ಮಾಡಿದ್ದ ಹಿಂದಿ ವರ್ಶನ್ ಎರಡನೇ ದಿನ 10 ಕೋಟಿ ರು.ಗಳನ್ನಷ್ಟೇ ದಾಖಲಿಸುವಲ್ಲಿ ಸಫಲವಾಯಿತು. ಸುಮಾರು 20 ಕೋಟಿ ರು.ಗಳಷ್ಟು ಗಳಿಕೆ ಮಾಡಿದ್ದ ಕನ್ನಡ ವರ್ಶನ್ 2ನೇ ದಿನ 3 ಕೋಟಿಗೆ ತೃಪ್ತಿ ಪಡಬೇಕಾಯ್ತು. ಇತರ ಭಾರತೀಯ ಭಾಷೆಗಳಲ್ಲೂ ಸಿನಿಮಾ ಗಳಿಕೆಯ ಪ್ರಮಾಣದಲ್ಲಿ ಇಳಿತ ಕಂಡುಬಂದಿದೆ.
ವಿದೇಶದಲ್ಲಿ ಉತ್ತಮ ಪ್ರತಿಕ್ರಿಯೆ
ಇನ್ನೊಂದೆಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜರ್ಮನಿ ಸೇರಿದಂತೆ ವಿದೇಶಗಳಲ್ಲಿ ಹಲವೆಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಆಸ್ಟ್ರೇಲಿಯಾ, ದುಬೈಗಳಲ್ಲಿ ಮೆಚ್ಚುಗೆ ಬಂದಿದೆ.
ಅಮೆರಿಕನ್ ಪ್ರೇಕ್ಷಕರ ಮೆಚ್ಚುಗೆ
ಅಮೆರಿಕಾದ ನಟ ಕೈಲ್ ಪೌಲ್, ‘ಇದೊಂದು ಎಮೋಶನಲ್ ಪ್ಲೇ. ಕಿಯಾರಾ ನಟನೆಗೆ ಸೋತುಹೋದೆ. ಸಿನಿಮಾದಲ್ಲಿ ಕನ್ನಡದ ಛಾಪು ಕಾಣಿಸಿತು. ಬೆಸ್ಟ್ ಎಕ್ಸ್‌ಪೀರಿಯನ್ಸ್ ನೀಡಿದ ಚಿತ್ರವಿದು’ ಎಂದಿದ್ದಾರೆ. ಪ್ರೇಕ್ಷಕಿಯೊಬ್ಬರು, ‘ಇದು ಸಾರ್ವಕಾಲಿಕ ಸಿನಿಮಾ. ಕಿಯಾರಾ ನನ್ನನ್ನು ಅಳಿಸಿದರು. ಅವರ ನಟನೆ ಬಹಳ ಇಷ್ಟ ಆಯ್ತು. ನಾನು ಧುರಂಧರ್ ಸಿನಿಮಾ ಫ್ಯಾನ್. ಆದರೆ ಟಾಕ್ಸಿಕ್ ವೈಯಕ್ತಿಕ ನೆಲೆಯಲ್ಲಿ ಕನೆಕ್ಟ್ ಆಯ್ತು’ ಎಂದಿದ್ದಾರೆ.
ಅಮೆರಿಕಾದ ಸ್ಟಫ್‌ವಿತ್‌ಅಸ್ ಯೂಟ್ಯೂಬ್‌ನಲ್ಲಿ ಸಿನಿಮಾ ಬಗ್ಗೆ ಮೆಚ್ಚುಗೆಭರಿತ ವಿಮರ್ಶೆ ಬಂದಿದೆ. ‘ಸಿನಿಮಾದ ವಿಷುವಲ್, ಯಶ್ ಸ್ಟೈಲ್, ಭಾವನಾತ್ಮಕತೆ ಬಹಳ ಇಷ್ಟ ಆಯ್ತು, ಮಗಳ ಜೊತೆಗೆ ಇನ್ನೊಮ್ಮೆ ಈ ಸಿನಿಮಾ ನೋಡಬೇಕಿದೆ’ ಎಂದು ಯೂಟ್ಯೂಬರ್ ಹೇಳಿದ್ದಾರೆ. ವಿದೇಶದ ಕೆಲವು ಪ್ರೇಕ್ಷಕರು ಮಿಶ್ರ ಅಭಿಪ್ರಾಯವನ್ನೂ ನೀಡಿದ್ದಾರೆ. ‘ನಟನೆ ಚೆನ್ನಾಗಿದೆ, ಆದರೆ ಸ್ಟೋರಿ ಇಲ್ಲ’ ಎಂದು ಕೆಲವರು ಬೇಸರ ತೋಡಿಕೊಂಡಿದ್ದಾರೆ.


