1995ರ ನಂತರದ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಬಿಡುಗಡೆಗೆ ಆಗ್ರಹಿಸಿ ಶಿಕಾರಿಪುರದ ಶಿಕ್ಷಕ ಪ್ರಶಾಂತ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಬೇಡಿಕೆ ಈಡೇರದಿದ್ದರೆ, ನವೆಂಬರ್ 1 ರಂದು ಇತರ ಶಿಕ್ಷಕರೂ ರಕ್ತದಲ್ಲಿ ಪತ್ರ ಬರೆಯುವುದಾಗಿ ಎಚ್ಚರಿಸಿದ್ದಾರೆ.
ಶಿವಮೊಗ್ಗ (ಸೆ.9): 1995ರ ನಂತರದ ಸರ್ಕಾರಿ ಹಾಗೂ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಶಿಕಾರಿಪುರದ ಶಿಕ್ಷಕರೊಬ್ಬರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.
ಕನ್ನಡ ಶಾಲೆಗಳಿಗೆ ಅನುದಾನ ಇಲ್ಲ, ರಕ್ತದಲ್ಲಿ ಪತ್ರ ಬರೆದು ಶಿಕ್ಷಕ ಮನವಿ!
ಶಿಕಾರಿಪುರದ ಕನ್ನಡ ಮಾಧ್ಯಮ ಶಾಲೆ ಶಿಕ್ಷಕ ಪ್ರಶಾಂತ್ ಅವರು ಸಿರೆಂಜ್ ಮೂಲಕ ತಮ್ಮ ರಕ್ತವನ್ನು ಹೊರತೆಗೆದು ಪತ್ರ ಬರೆದಿದ್ದಾರೆ. ಕನ್ನಡ ಶಾಲೆಗಳಿಗೆ ಅನುದಾನ ನೀಡುವಂತೆ ಶಿಕ್ಷಣ ಇಲಾಖೆ ಮತ್ತು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕರಿಂದ ಬೆಂಗಳೂರಿನಲ್ಲಿ ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ. ಆ ಸಂದರ್ಭ ಕನ್ನಡ ಶಾಲೆಗಳಿಗೆ ಅನುದಾನ ಕಲ್ಪಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೆ ಕ್ರಮ ಕೈಗೊಂಡಿಲ್ಲ ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.
ಶಿಕ್ಷಕರು ಎಚ್ಚರಿಕೆ
ಮೊದಲು ತಾನು ಸ್ವತಃ ತನ್ನ ರಕ್ತದಿಂದ ಪತ್ರ ಬರೆಯುತ್ತಿರುವುದಾಗಿ ತಿಳಿಸಿರುವ ಶಿಕ್ಷಕ ಪ್ರಶಾಂತ್, ಬೇಡಿಕೆ ಈಡೇರದಿದ್ದರೆ ನವೆಂಬರ್ 1ರಂದು ಕನ್ನಡ ಶಾಲೆಗಳ ಉಳಿದ ಶಿಕ್ಷಕರು ಸಹ ತಮ್ಮ ರಕ್ತದಿಂದಲೇ ಪತ್ರ ಬರೆಯಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ನನ್ನ ರಕ್ತದಲ್ಲೇ ಕನ್ನಡವಿದೆ ಎಂದು ಸಚಿವ ಮಧು ಬಂಗಾರಪ್ಪ ಈ ಹಿಂದೆ ಹೇಳಿದ್ದರು. ಇದೇ ಕಾರಣಕ್ಕೆ ಅವರಿಗೆ ರಕ್ತದಲ್ಲಿ ಪತ್ರ ಬರೆಯುತ್ತಿದ್ದೇನೆ. ಸದ್ಯದ ಸ್ಥಿತಿಯಲ್ಲಿ ಅನುದಾನವಿಲ್ಲದೆ ಕನ್ನಡ ಶಾಲೆಗಳಿಗೆ ರಕ್ತವೆ ಇಲ್ಲದಂತಾಗಿದೆ.
-ಪ್ರಶಾಂತ್, ಕನ್ನಡ ಮಾಧ್ಯಮ ಶಾಲೆ ಶಿಕ್ಷಕ, ಶಿಕಾರಿಪುರ.


