ವಾಲ್ಮೀಕಿ ಅಭಿವೃದ್ಧಿ ನಿಗಮದ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರಗೆ ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತೊಂದು ನೋಟಿಸ್ ನೀಡಿದೆ. ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿರುವ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಕೆಜಿಟಿಟಿಐ ವಂಚನೆ ಪ್ರಕರಣಗಳ ಸಂಬಂಧ ವಿಚಾರಣೆಗೆ ಹಾಜರಾಗಲು ಸೂಚನೆ.

ಬೆಂಗಳೂರು (ಸೆ.9): ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಮತ್ತೊಂದು ಶಾಕ್‌ ನೀಡಿದ್ದಾರೆ.

ಪ್ರಕರಣ ಸಂಬಂಧ ಸಿಬಿಐ ಸಲ್ಲಿಸಿರುವ ಜಾರ್ಜ್‌ಶೀಟ್‌ನಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ಜರ್ಮನ್‌ ತಾಂತ್ರಿಕ ತರಬೇತಿ ಸಂಸ್ಥೆಯಲ್ಲಿ ನಡೆದ ವಂಚನೆ ಬಗ್ಗೆಯೂ ಉಲ್ಲೇಖಿಸಲಾಗಿದೆ. ಈ ಎರಡೂ ವಂಚನೆ ಪ್ರಕರಣಗಳಲ್ಲಿಯೂ ಅಂದು ಸಚಿವರಾಗಿದ್ದ ನಾಗೇಂದ್ರ ಅವರು ಭಾಗಿಯಾಗಿರುವ ಕುರಿತು ಚಾರ್ಜ್‌ಶೀಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಈ ವಿಚಾರವಾಗಿ ಸೂಕ್ತ ದಾಖಲೆಗಳೊಂದಿಗೆ ವಾರದೊಳಗೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಅಧಿಕಾರಿಗಳು ನಾಗೇಂದ್ರ ಅವರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಎರಡು ವಂಚನೆ ಪ್ರಕರಣಗಳ ಸಂಬಂಧ ಹೈಕೋರ್ಟ್‌ ಸೂಚನೆ ಮೇರೆಗೆ ತನಿಖೆ ನಡೆಸಿ ಸಿಬಿಐ ಪ್ರತ್ಯೇಕ ದೋಷಾರೋಪಪಟ್ಟಿ ಸಲ್ಲಿಸಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಜೊತೆಗೆ ಈ ಎರಡೂ ಪ್ರಕರಣಗಳ ಉರುಳು ನಾಗೇಂದ್ರಗೆ ಸುತ್ತಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ವಾಲ್ಮೀಕಿ ನಿಗಮದ ಹಗರಣ ಸಂಬಂಧ ಸೋಮವಾರವಷ್ಟೇ ಇ.ಡಿ. ಅಧಿಕಾರಿಗಳು ನಾಗೇಂದ್ರ ಅವರನ್ನು ಐದು ತಾಸು ವಿಚಾರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಈ ಎರಡು ವಂಚನೆ ಪ್ರಕರಣಗಳ ಕುರಿತು ಸಿಬಿಐ ಸಲ್ಲಿಸಿರುವ ಚಾರ್ಜ್‌ಶೀಟ್‌ ಬಗ್ಗೆ ಪ್ರಸ್ತಾಪಿಸಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ನಾಗೇಂದ್ರಗೆ ಟೆಂಡರ್‌ನಲ್ಲಿ 1.20 ಕೋಟಿ ರು.:

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ 2023-24ನೇ ಸಾಲಿನಲ್ಲಿ 13.95 ಕೋಟಿ ರು. ವೆಚ್ಚದಲ್ಲಿ ಸ್ಮಾರ್ಟ್ ಕಂಪ್ಯೂಟರ್ ಲ್ಯಾಬ್‌ಗಳು ಮತ್ತು ರೊಟ್ಟಿ ತಯಾರಿಸುವ ಯಂತ್ರಗಳನ್ನು ಪೂರೈಸಲು ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್ ಅನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ ವಂಚನೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನೆಕ್ಕುಂಟಿ ನಾಗರಾಜು ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ ಕೆ.ಶ್ರೀನಿವಾಸ ರೆಡ್ಡಿ ಮಾಲೀಕತ್ವದ ಬೆಂಗಳೂರಿನ ಎಸ್‌ಕೆಆರ್ ಇನ್ಫ್ರಾಸ್ಟ್ರಕ್ಚರ್‌ಗೆ ನೀಡಲಾಗಿತ್ತು.

ಈ ವೇಳೆ ಈ ನೆಕ್ಕುಂಟಿ ನಾಗರಾಜ್ ಮುಖಾಂತರ ಸಚಿವ ನಾಗೇಂದ್ರ ಅವರು ತಮ್ಮ ಸಹೋದರಿ, ಭಾವ, ಬಳ್ಳಾರಿ ಫಾರ್ಮ್‌ಹೌಸ್‌ ಮಾಲೀಕರ ಖಾತೆಗಳಿಗೆ 1.20 ಕೋಟಿ ರು. ವರ್ಗಾಯಿಸಿಕೊಂಡಿದ್ದಾರೆ. ಸ್ವತಃ ನೆಕ್ಕುಂಟಿ ನಾಗರಾಜ್ ಈ ಎಸ್‌ಕೆಆರ್‌ ಇನ್‌ಫ್ರಾಸ್ಟ್ರಕ್ಚರ್ ಕಂಪನಿ ಮತ್ತು ಅದರ ಸೋದರ ಕಂಪನಿಗಳಿಂದ 5.72 ಕೋಟಿ ರು. ಪಡೆದುಕೊಂಡಿದ್ದಾರೆ ಎಂದು ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

ನಾಗೇಂದ್ರ ಸೂಚನೆ ಮೇರೆಗೆ ಕೆಜಿಟಿಟಿಐಗೆ ಕೆಲಸ:

ಎಸ್ಸಿ-ಎಸ್ಟಿ ಅಲೆಮಾರಿ ಬುಡಕಟ್ಟು ಅಭಿವೃದ್ಧಿ ನಿಗಮವು ಸಚಿವ ನಾಗೇಂದ್ರ ಸೂಚನೆ ಮೇರೆಗೆ 4.90 ಕೋಟಿ ರು. ಮೌಲ್ಯದ ಕೌಶಲ್ಯ ಅಭಿವೃದ್ಧಿ ತರಬೇತಿ ಕೆಲಸವನ್ನು ಬೆಂಗಳೂರಿನ ಕರ್ನಾಟಕ ಜರ್ಮನ್‌ ತಾಂತ್ರಿಕ ತರಬೇತಿ ಸಂಸ್ಥೆಗೆ (ಕೆಜಿಟಿಟಿಐ) ನೀಡಿತ್ತು. ಈ ಕೆಜಿಟಿಟಿಐ ಯಾವುದೇ ಟೆಂಡರ್ ಪ್ರಕ್ರಿಯೆ ಇಲ್ಲದೆ ಸದ್ಗುರು ಶಿಕ್ಷಣ ಟ್ರಸ್ಟ್ ಮತ್ತು ಸದ್ಗುರು ಸೆಲ್ಯೂಷನ್ಸ್‌ಗೆ ಉಪ ಗುತ್ತಿಗೆ ನೀಡಿತ್ತು. ಇದರಿಂದ ನಾಗರಾಜ್ ಕುಟುಂಬಕ್ಕೆ 64 ಲಕ್ಷ ರು. ಮತ್ತು ಎಸ್ಟಿ ಕಲ್ಯಾಣ ಸಚಿವಾಲಯದ ಅಧಿಕಾರಿ ಎನ್.ಪ್ರಕಾಶ್‌ಗೆ 15.50 ಲಕ್ಷ ರು. ಲಂಚ ಸಂದಾಯವಾಗಿರುವುದು ಸಿಬಿಐ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.