ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಇಶಾನ್ ಕಿಶನ್ ನೇತೃತ್ವದ ಪೂರ್ವ ವಲಯ ತಂಡವು 708 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಇದಕ್ಕೆ ಉತ್ತರವಾಗಿ, ತಿಲಕ್ ವರ್ಮಾ ನಾಯಕತ್ವದ ದಕ್ಷಿಣ ವಲಯವು 242 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಈ ಮೂಲಕ ಪೂರ್ವ ವಲಯ 14 ವರ್ಷಗಳ ನಂತರ ಪ್ರಶಸ್ತಿ ಗೆಲ್ಲುವ ಸನಿಹದಲ್ಲಿದೆ.

ಚೆನ್ನೈ: ಈ ಬಾರಿ ದುಲೀಪ್‌ ಟ್ರೋಫಿ ಫೈನಲ್‌ನಲ್ಲಿ ದಕ್ಷಿಣ ವಲಯ ತಂಡದ ವಿರುದ್ಧ ಪೂರ್ವ ವಲಯ ಭರ್ಜರಿ ಗೆಲುವಿನ ಸನಿಹದಲ್ಲಿದೆ. ಈ ಮೂಲಕ ಬರೋಬ್ಬರಿ 14 ವರ್ಷಗಳ ಬಳಿಕ ಚಾಂಪಿಯನ್‌ ಆಗುವತ್ತ ಹೆಜ್ಜೆ ಇಟ್ಟಿದೆ.

ಇಶಾನ್‌ ಕಿಶನ್‌ ನಾಯಕತ್ವದ ಪೂರ್ವ ತಂಡ ಮೊದಲೆರಡು ದಿನ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿ 708 ರನ್ ಕಲೆಹಾಕಿತ್ತು. ಇದಕ್ಕೆ ಉತ್ತರವಾಗಿ ಮಂಗಳವಾರ ಇನ್ನಿಂಗ್ಸ್‌ ಆರಂಭಿಸಿದ ತಿಲಕ್‌ ವರ್ಮಾ ನಾಯಕತ್ವದ ದಕ್ಷಿಣ ತಂಡ 6 ವಿಕೆಟ್‌ ನಷ್ಟದಲ್ಲಿ 242 ರನ್‌ ಗಳಿಸಿದ್ದು, ಇನ್ನಿಂಗ್ಸ್‌ ಹಿನ್ನಡೆ ತಪ್ಪಿಸಲು ಇನ್ನೂ 466 ರನ್‌ ಅಗತ್ಯವಿದೆ. ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ ಆಧಾರದ ಮೇಲೆ ಗೆಲುವು ನಿರ್ಧಾರವಾಗುವುದು ಬಹುತೇಕ ಖಚಿತವಾಗಿದ್ದರಿಂದ ದಕ್ಷಿಣ ವಲಯ ತಂಡ ಅಸಾಧಾರಣ ಹೋರಾಟ ಪ್ರದರ್ಶಿಸಿ ಮುನ್ನಡೆ ಪಡೆಯಬೇಕಿದೆ.

ದಕ್ಷಿಣ ವಲಯಕ್ಕೆ ಆರಂಭಿಕ ಆಘಾತ

ಆರಂಭಿಕ ಆಟಗಾರ ರಿಕ್ಕಿ ಭುಯಿ ಕೇವಲ 1 ರನ್‌ಗೆ ಔಟಾದರೆ, ಎನ್‌.ಜಗದೀಶನ್‌ 32, ಶೇಖ್‌ ರಶೀದ್‌ 27 ರನ್‌ ಗಳಿಸಲಷ್ಟೇ ಶಕ್ತರಾದರು. ಈ ಮೂವರಿಂದಲೂ ತಂಡಕ್ಕೆ ಅಗತ್ಯವಿಲ್ಲ ದೊಡ್ಡ ಇನ್ನಿಂಗ್ಸ್‌ ನೆರವು ಸಿಗಲಿಲ್ಲ. ಕರ್ನಾಟಕದ ಆರ್‌.ಸ್ಮರಣ್‌(23), ಶ್ರೇಯಸ್‌ ಗೋಪಾಲ್‌(26) ಕೂಡಾ ಆಪತ್ಕಾಲದಲ್ಲಿ ತಂಡಕ್ಕೆ ಆಸರೆಯಾಗಲಿಲ್ಲ. ಈ ವೇಳೆ ತಂಡಕ್ಕೆ ಅಲ್ಪ ನೆರವಾಗಿದ್ದು ದೇವದತ್‌ ಪಡಿಕ್ಕಲ್‌ ಹಾಗೂ ತಿಲಕ್‌ ವರ್ಮಾ. ದೇವದತ್‌ ಆಟ 62 ರನ್‌ಗೆ ಕೊನೆಗೊಂಡರೆ, ತಿಲಕ್‌ ಔಟಾಗದೆ 56 ರನ್‌ ಸಿಡಿಸಿ 4ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ತಂಡ ಬುಧವಾರ ಬೇಗನೇ ಆಲೌಟ್‌ ಆದರೆ, ಪೂರ್ವ ವಲಯ ಫಾಲೋಆನ್‌ ಹೇರಿ ಮತ್ತೆ ದಕ್ಷಿಣ ವಲಯವನ್ನು ಬ್ಯಾಟಿಂಗ್‌ಗೆ ಆಹ್ವಾನಿಸುವ ಸಾಧ್ಯತೆ ಹೆಚ್ಚು. ಬಳಿಕ ಸುಲಭದಲ್ಲಿ ಪಂದ್ಯ ಗೆಲ್ಲುವುದು ಪೂರ್ವ ವಲಯದ ಯೋಜನೆ. ತಂಡದ ಪರ ಮೊಹಮ್ಮದ್‌ ಶಮಿ 2, ಮುಕೇಶ್‌ ಕುಮಾರ್‌ 2 ವಿಕೆಟ್‌ ಪಡೆದಿದ್ದಾರೆ.

ಸ್ಕೋರ್‌: ಪೂರ್ವ ವಲಯ ಮೊದಲ ಇನ್ನಿಂಗ್ಸ್‌ 708/10, ದಕ್ಷಿಣ ವಲಯ ಮೊದಲ ಇನ್ನಿಂಗ್ಸ್‌ 242/6 (3ನೇ ದಿನದಂತ್ಯಕ್ಕೆ) ( ದೇವದತ್‌ 62, ತಿಲಕ್‌ ಔಟಾಗದೆ 56, ಶಮಿ 2-17, ಮುಕೇಶ್‌ 2-36).

ಭಾರತೀಯ ಕ್ರಿಕೆಟ್‌ ತಂಡಕ್ಕೆ ಚಾಟ್‌ಜಿಪಿಟಿ, ಕ್ಯಾಂಪಾ, ಎಸ್‌ಬಿಐ ಹೊಸ ಪಾಲುದಾರರು

ನವದೆಹಲಿ: ಇನ್ನು ಮುಂದೆ ಭಾರತ ಕ್ರಿಕೆಟ್‌ ತಂಡ ತವರಿನಲ್ಲಿ ಆಡುವ ಎಲ್ಲಾ ಪಂದ್ಯಗಳಿಗೆ ಕ್ಯಾಂಪಾ, ಎಸ್‌ಬಿಐ ಲೈಫ್‌ ಮತ್ತು ಚಾಟ್‌ ಜಿಪಿಟಿ ಸಹ ಪಾಲುದಾರರಾಗಿರಲಿದ್ದಾರೆ ಎಂದು ಬಿಸಿಸಿಐ ಘೋಷಿಸಿದೆ. ಎರಡು ವರ್ಷಗಳ ಅವಧಿಗೆ ಈ ಒಪ್ಪಂದ ನಡೆದಿದೆ.

ಮೂರು ಕಂಪನಿಗಳ ಪಾಲುದಾರಿಕೆ ಮೌಲ್ಯ 130 ಕೋಟಿ ರು. ಆಗಿದ್ದು, ಇದು ಹಿಂದಿನ ವರ್ಷಕ್ಕಿಂತ ಶೇ.44ರಷ್ಟು ಹೆಚ್ಚು. ಈ ಒಪ್ಪಂದವು ಮುಂಬರುವ ವೆಸ್ಟ್‌ ಇಂಡೀಸ್‌ ಸರಣಿಯಿಂದ ಆರಂಭವಾಗಲಿದ್ದು, 2028ರ ಮಾರ್ಚ್‌ ತನಕ ಇರಲಿದೆ. ಈ ಅವಧಿಯಲ್ಲಿ 35 ಪಂದ್ಯಗಳು ನಡೆಯಲಿವೆ. ಪ್ರತಿ ಪಂದ್ಯಕ್ಕೆ ಕ್ಯಾಂಪಾ ಕೋಲಾ ತಲಾ ₹1.31 ಕೋಟಿ, ಎಸ್‌ಬಿಐ ಲೈಫ್‌ ₹1.2 ಕೋಟಿ, ಚಾಟ್‌ ಜಿಪಿಟಿ ₹1.2 ಕೋಟಿ ಪಾವತಿಸಲಿದೆ. ಇದು ಭಾರತದಲ್ಲಿ ನಡೆಯುವ ಎಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳಿಗೆ ಅನ್ವಯವಾಗಲಿದೆ.