ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಬಾಮೈದನಿಗೆ ಸಂಬಂಧಿಸಿದ 15ಕ್ಕೂ ಹೆಚ್ಚು ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅನಧಿಕೃತ ಅಬಕಾರಿ ಲೈಸೆನ್ಸ್ ಹಂಚಿಕೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು, ಬೆಳಗಾವಿ ಸೇರಿದಂತೆ ಹಲವೆಡೆ ಈ ಶೋಧ ಕಾರ್ಯ ನಡೆಯುತ್ತಿದೆ.
ಬೆಂಗಳೂರು (ಸೆ.09): ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರಿಗೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಅನಧಿಕೃತ ಅಬಕಾರಿ ಲೈಸೆನ್ಸ್ ಹಂಚಿಕೆ ಮತ್ತು ಅಕ್ರಮ ಹಣ ವರ್ಗಾವಣೆ (Money Laundering) ಪ್ರಕರಣಕ್ಕೆ ಸಂಬಂಧಿಸಿದಂತೆ ಸತೀಶ್ ಜಾರಕಿಹೊಳಿ ಹಾಗೂ ಅವರ ಬಾಮೈದ ಮಂಜುನಾಥ್‌ಗೆ ಸೇರಿದ 15ಕ್ಕೂ ಹೆಚ್ಚು ಕಡೆ ಮಂಗಳವಾರ ಮುಂಜಾನೆಯಿಂದಲೇ ಇಡಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು ನಗರದ 5 ಪ್ರಮುಖ ಸ್ಥಳಗಳು, ಬೆಳಗಾವಿ ಹಾಗೂ ಮಹಾರಾಷ್ಟ್ರ ಸೇರಿದಂತೆ ಒಟ್ಟು 15ಕ್ಕೂ ಅಧಿಕ ಕಡೆಗಳಲ್ಲಿ ಈ ಶೋಧ ಕಾರ್ಯ ತೀವ್ರಗೊಂಡಿದೆ. ಸಿಆರ್‌ಪಿಎಫ್ (CRPF) ಯೋಧರ ಭದ್ರತೆಯೊಂದಿಗೆ ಕಚೇರಿ ಹಾಗೂ ನಿವಾಸಗಳಿಗೆ ನುಗ್ಗಿರುವ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಏನಿದು ಅಬಕಾರಿ ಲೈಸೆನ್ಸ್ ಅಕ್ರಮದ ಆರೋಪ?
ಈ ದಾಳಿಯು ಮೂಲತಃ ಸತೀಶ್ ಜಾರಕಿಹೊಳಿ ಅವರ ಬಾಮೈದ ಮಂಜುನಾಥ್ ಅವರಿಗೆ ಸಂಬಂಧಿಸಿದ್ದು ಎನ್ನಲಾಗಿದೆ. ಮಂಜುನಾಥ್ ವಿರುದ್ಧ ಈ ಹಿಂದೆಯೂ ಅಬಕಾರಿ ಅಕ್ರಮಗಳಿಗೆ ಸಂಬಂಧಿಸಿದಂತೆ ಇಡಿ ಶೋಧ ನಡೆಸಿತ್ತು. ಸತೀಶ್ ಜಾರಕಿಹೊಳಿ ಅವರು ಸಚಿವರಾಗಿದ್ದ ಪ್ರಭಾವ ಬಳಸಿ ನಿಯಮಬಾಹಿರವಾಗಿ ಬರೋಬ್ಬರಿ 18 ಬಾರ್‌ಗಳಿಗೆ ಅನಧಿಕೃತ ಲೈಸೆನ್ಸ್ ಕೊಡಿಸಲು ಸಹಾಯ ಮಾಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಅಲ್ಲದೆ, ಈ ಬಾರ್‌ಗಳ ಮೂಲಕ ಬಂದ ಹಣವನ್ನು ಅಕ್ರಮವಾಗಿ ವಿದೇಶಗಳಲ್ಲಿ ಹೂಡಿಕೆ ಮಾಡಲು ಸಚಿವರು ನೆರವಾಗಿದ್ದಾರೆ ಎನ್ನಲಾಗಿದ್ದು, ಈ ಹಿಂದೆ ನಡೆಸಿದ ತನಿಖೆಯಲ್ಲಿ ಸುಮಾರು 3 ಕೋಟಿ ರೂಪಾಯಿಗೂ ಅಧಿಕ ಅಕ್ರಮ ವಿದೇಶಿ ಹಣದ ವಹಿವಾಟು ಪತ್ತೆಯಾಗಿತ್ತು. ಇದೀಗ ಈ ಹಣ ವರ್ಗಾವಣೆಯ ಮೂಲ ಹಾಗೂ ಅಕ್ರಮ ಸಂಪಾದನೆಯ ಕೊಂಡಿಗಳನ್ನು ಬೆನ್ನತ್ತಿರುವ ಇಡಿ ಅಧಿಕಾರಿಗಳು ದಾಖಲೆಗಳನ್ನು ಜಾಲಾಡುತ್ತಿದ್ದಾರೆ.


