ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ

ಸೋಷಿಯಲ್ ಮೀಡಿಯಾ ಪ್ರೇಮದ ಬಲೆಗೆ ಬಿದ್ದು ಬೆಳಗಾವಿ ಯುವತಿಯೊಬ್ಬಳು ಸರ್ವಸ್ವವನ್ನೂ ಕಳೆದುಕೊಂಡರೆ, ಮತ್ತೊಂದೆಡೆ ವೃದ್ಧರೊಬ್ಬರ ಸಾವಿನ ಅರಿವಿಲ್ಲದೆ ಅವರ ಪತ್ನಿ ಶವದೊಂದಿಗೆ 10 ದಿನ ಕಳೆದಿದ್ದಾರೆ. ಈ ಎರಡು ಘಟನೆಗಳು ಆಧುನಿಕ ಜಗತ್ತಿನಲ್ಲಿ ಪ್ರೀತಿ ಮತ್ತು ರಕ್ತಸಂಬಂಧಗಳ ಕರಾಳ ವಾಸ್ತವ ತೆರೆದಿಡುತ್ತವೆ.

Share this Video
  • FB
  • Linkdin
  • Whatsapp

ನಮ್ಮ ಸುತ್ತಮುತ್ತ ನಡೆಯುವ ಘಟನೆಗಳು ಕೆಲವು ಬಾರಿ ನಂಬಲಸಾಧ್ಯವಾಗಿರುತ್ತವೆ. ಪ್ರೀತಿಯ ಹೆಸರಿನಲ್ಲಿ ನಡೆಯುವ ವಂಚನೆ ಒಂದೆಡೆಯಾದರೆ, ರಕ್ತಸಂಬಂಧಗಳ ನಡುವಿನ ಅಂತರ ಸೃಷ್ಟಿಸುವ ಮೌನ ಮತ್ತೊಂದೆಡೆ. ಇಂದು ನಾವು ಬೆಳಗಾವಿ ಮತ್ತು ವೃದ್ಧ ದಂಪತಿಗಳ ಜೀವನದಲ್ಲಿ ನಡೆದ ಎರಡು ಅತ್ಯಂತ ದುಃಖಕರ ಹಾಗೂ ರೋಚಕ ಘಟನೆಗಳ ಬಗ್ಗೆ ವಿವರಿಸಲಿದ್ದೇವೆ.

ಸೋಷಿಯಲ್ ಮೀಡಿಯಾ ಪ್ರೇಮದ ಬಲೆ; ಬೀದಿಗೆ ಬಿದ್ದ ಬೆಳಗಾವಿ ಬೆಡಗಿ!

ಸಾಮಾಜಿಕ ಜಾಲತಾಣಗಳು ಇಂದಿನ ದಿನಗಳಲ್ಲಿ ಪ್ರೀತಿಯ ಸೇತುವೆಯಾಗುವುದಕ್ಕಿಂತ ಹೆಚ್ಚಾಗಿ ವಂಚನೆಯ ಬಲೆಯಾಗುತ್ತಿವೆ. ಬೆಳಗಾವಿಯ 25 ವರ್ಷದ ಯುವತಿಯೊಬ್ಬಳು ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಪಂಜಾಬಿ ಮೂಲದ ಹುಡುಗನ ಪ್ರೇಮಪಾಶಕ್ಕೆ ಬಿದ್ದಿದ್ದಳು. ಸುಂದರ ಮಾತುಗಳಿಂದ ಆಕೆಯನ್ನು ನಂಬಿಸಿದ ಆತ, ಆಕೆಯ ಜೀವನದ ಸರ್ವಸ್ವವನ್ನೂ ದೋಚಿದ್ದಾನೆ.

ಮದುವೆಯಾಗಲು 3 ಕೋಟಿ ರೂಪಾಯಿ ಕೊಡಬೇಕು ಎಂದು ಬೇಡಿಕೆಯಿಟ್ಟಿದ್ದ ಆ ಕಿರಾತಕ, ಆಕೆಯ ಬಳಿಯಿದ್ದ ಹಣ ಮಾತ್ರವಲ್ಲದೆ, ತಾಯಿಯ ಮಾಂಗಲ್ಯ ಸರವನ್ನೂ ಬಿಡದೆ ದೋಚಿದ್ದಾನೆ. ‘ಉಂಡು ಹೋದ, ಕೊಂಡು ಹೋದ’ ಎನ್ನುವಂತೆ ಆಕೆಯ ಬದುಕನ್ನು ಹಸನಾಗಿ ಇರಿಸುವ ಭರವಸೆ ನೀಡಿ ಕೊನೆಗೆ ಆಕೆಯನ್ನೇ ಬೀದಿಗೆ ತಳ್ಳಿದ್ದಾನೆ. ಇಷ್ಟೆಲ್ಲಾ ವಂಚನೆ ನಡೆದರೂ ಪೊಲೀಸರು ಸೆಟಲ್ಮೆಂಟ್ ಮಾಡಿಕೊಳ್ಳಲು ಹೇಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಆಕೆ ಈಗ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾಳೆ.

ಕರುಳು ಕಿವುಚುವ ಘಟನೆ: ಪತಿಯ ಶವದೊಂದಿಗೆ 10 ದಿನ ಕಳೆದ ಅಸ್ವಸ್ಥ ಪತ್ನಿ!

ಇದು ಆಧುನಿಕ ಜಗತ್ತಿನ ರಕ್ತಸಂಬಂಧಗಳ ಕ್ರೂರ ಮುಖವನ್ನು ಅನಾವರಣಗೊಳಿಸುವ ಕಥೆ. ವೃದ್ಧ ದಂಪತಿಗಳಿಬ್ಬರು ಮನೆಯಲ್ಲಿದ್ದರು, ಅವರ ಮಕ್ಕಳು ಬೆಂಗಳೂರು ಮತ್ತು ದುಬೈ ಅಂತಹ ನಗರಗಳಲ್ಲಿ ಕೈತುಂಬಾ ಸಂಬಳ ಪಡೆಯುತ್ತಾ ಸೆಟಲ್ ಆಗಿದ್ದರು. ಬೆಂಗಳೂರಿನಲ್ಲಿದ್ದ ಮಗ ಪ್ರತಿನಿತ್ಯ ಫೋನ್ ಮಾಡಿ ಅಪ್ಪ-ಅಮ್ಮನ ಆರೋಗ್ಯ ವಿಚಾರಿಸುತ್ತಿದ್ದ. ಆದರೆ ಕಳೆದ 10 ದಿನಗಳಿಂದ ತಂದೆ ಫೋನ್‌ನಲ್ಲಿ ಸಿಕ್ಕಿರಲಿಲ್ಲ. ತಾಯಿಯನ್ನು ವಿಚಾರಿಸಿದರೆ, 'ಅಪ್ಪ ಆರಾಮಾಗಿದ್ದಾರೆ' ಎಂಬ ಉತ್ತರ ಬರುತ್ತಿತ್ತು.

ಸತತ ಹತ್ತು ದಿನಗಳ ನಂತರ ಮನೆಯಿಂದ ಅಸಹನೀಯ ದುರ್ವಾಸನೆ ಬರಲಾರಂಭಿಸಿದಾಗ ನೆರೆಹೊರೆಯವರು ಬಂದು ನೋಡಿದರೆ ಅಲ್ಲಿ ಘೋರ ದೃಶ್ಯವೊಂದು ಎದುರಾಗಿತ್ತು. ಆ ವೃದ್ಧ ಸತ್ತು ಹತ್ತು ದಿನಗಳೇ ಕಳೆದಿದ್ದವು. ಆದರೆ ಅಸ್ವಸ್ಥರಾಗಿದ್ದ ಆತನ ಪತ್ನಿ, ಪತಿಯ ಶವದ ಜೊತೆಗೇ ಹತ್ತು ದಿನಗಳನ್ನು ಕಳೆದಿದ್ದರು! ಮಕ್ಕಳು ದೂರದೂರಿನಲ್ಲಿ ಬ್ಯುಸಿಯಾಗಿದ್ದರೆ, ಅತ್ತ ತಂದೆಯ ಶವ ಹತ್ತು ದಿನಗಳ ಕಾಲ ಕೊಳೆತ ಸ್ಥಿತಿಯಲ್ಲಿ ಬಿದ್ದಿತ್ತು. ಮಗ ಹಣ ಕಳಿಸುತ್ತಿದ್ದನಾದರೂ, ತಂದೆಯ ಸಾವಿನ ಸುದ್ಧಿ ತಿಳಿಯಲು ಹತ್ತು ದಿನಗಳೇ ಬೇಕಾಯಿತು.

Related Video