Crime News: ಮಕ್ಕಳ ಭವಿಷ್ಯಕ್ಕಾಗಿ ಜಮೀನು ಬೇಕು, ಅದನ್ನು ಮಾರುವುದಿಲ್ಲ ಎಂದ ಪತ್ನಿಯ ಮೇಲೆ ಕೋಪಗೊಂದ ಪತಿ ಆಕೆಯ ಗುಪ್ತಾಂಗಕ್ಕೆ ಎಲೆಕ್ಟ್ರಿಕ್ ಶಾಕ್ ಕೊಟ್ಟು, ಹತ್ಯೆ ಮಾಡಿರುವ ಭಯಾನಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸದ್ಯ ಪತಿ ಪೊಲೀಸರ ಅತಿಥಿಯಾಗಿದ್ದಾನೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಜಮೀನು ಮಾರಲ್ಲ ಎಂದ ಪತ್ನಿಗೆ ಎಲೆಕ್ಟ್ರಿಕ್ ಶಾಕ್ ಕೊಟ್ಟು ಕೊಂದ ಪತಿ
ಉತ್ತರ ಪ್ರದೇಶದ ರಾಮ್‌ಪುರದಲ್ಲಿ ಆಸ್ತಿ ವಿಚಾರದ ಜಗಳವೊಂದು ಕೊನೆಗೆ ಕೊಲೆಯೊಂದಿಗೆ ಅಂತ್ಯಗೊಂಡಿದ್ದು, ಒಂದು ಕುಟುಂಬವೇ ಶೋಕ ಸಾಗರದಲ್ಲಿ ಮುಳುಗಿದ ಘಟನೆ ನಡೆದಿದೆ. ಜಮೀನು ವಿವಾದದ ಹಿನ್ನೆಲೆಯಲ್ಲಿ ಪತಿ ತನ್ನ ಪತ್ನಿಯನ್ನು ಅತ್ಯಂತ ಭೀಕರ ರೀತಿಯಲ್ಲಿ ಹತ್ಯೆ ಮಾಡಿದ್ದಾನೆ. ಅದು ಅಂತಿಂಥ ರೀತಿಯಲ್ಲಿ ನಡೆದ ಹತ್ಯೆ ಅಲ್ಲ, ಪತ್ನಿಯ ಖಾಸಗಿ ಅಂಗಗಳಿಗೆ ವಿದ್ಯುತ್ ಶಾಕ್ ನೀಡಿ ಕೊಂದಿದ್ದು, ಪೋಸ್ಟ್‌ಮಾರ್ಟಂ ವರದಿಯಲ್ಲಿ ಸಂತ್ರಸ್ತೆಯ ದೇಹ ಮತ್ತು ಖಾಸಗಿ ಅಂಗಗಳ ಮೇಲೆ ಸುಟ್ಟ ಗಾಯಗಳ ಗುರುತುಗಳು ಪತ್ತೆಯಾಗಿವೆ. ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ.
ಏನಿದು ಸಂಪೂರ್ಣ ಪ್ರಕರಣ?
ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಇಸ್ರಾರ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ತನ್ನ ಪತ್ನಿ ನಸ್ರೀನ್, ಆಕೆಯ ತಂದೆ-ತಾಯಿಯಿಂದ ಬಂದಿದ್ದ ಜಮೀನಿನ ಒಂದು ಭಾಗವನ್ನು ಮಾರಾಟ ಮಾಡಲು ಸ್ಪಷ್ಟವಾಗಿ ನಿರಾಕರಿಸಿದ್ದರಿಂದ ತಾನು ಆಕೆಯ ಮೇಲೆ ಕೋಪಗೊಂಡಿದ್ದೆ ಎಂದು ಆತ ಹೇಳಿದ್ದಾನೆ. ನಸ್ರೀನ್ ಕುಟುಂಬದ ಪ್ರಕಾರ, ಜಮೀನು ಮಾರಾಟ ಮಾಡಿದರೆ ತನ್ನ ಐವರು ಮಕ್ಕಳ ಭವಿಷ್ಯ ಅಪಾಯಕ್ಕೆ ಸಿಲುಕಬಹುದು ಎಂಬ ಭಯ ಆಕೆಗೆ ಇತ್ತು. ಜಮೀನಿನ ವಿಚಾರವಾಗಿ ಇಸ್ರಾರ್ ಪದೇಪದೇ ನಸ್ರೀನ್ ಮೇಲೆ ಹಲ್ಲೆ ನಡೆಸುತ್ತಿದ್ದ ಮತ್ತು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಆಕೆಯ ಕುಟುಂಬ ಆರೋಪಿಸಿದೆ.
ಪ್ರಕರಣದ ತನಿಖೆ ಮುಂದುವರಿದಿದೆ
ನಸ್ರೀನ್ ಅವರ ಸಹೋದರಿ ಹೇಳುವ ಪ್ರಕಾರ, ಇತ್ತೀಚೆಗೆ ಅವರು ಮನೆಗೆ ಬಂದಾಗ ನಸ್ರೀನ್ ಮುಖದ ಮೇಲೆ ಗಾಯದ ಗುರುತುಗಳಿದ್ದವು. ಆದರೆ ಆಕೆ ತನ್ನ ಮೇಲೆ ನಡೆಯುತ್ತಿದ್ದ ಹಲ್ಲೆಯ ಬಗ್ಗೆ ಯಾರಿಗೂ ಹೇಳಿರಲಿಲ್ಲ. ರಾಮ್‌ಪುರದ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ASP) ಅನುರಾಗ್ ಸಿಂಗ್ ಅವರು, ಸಂತ್ರಸ್ತೆಯ ಚಿಕ್ಕಪ್ಪ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ನಸ್ರೀನ್ ಹತ್ಯೆಯಲ್ಲಿ ಆಕೆಯ ಅತ್ತೆ-ಮಾವನ ಮನೆಯವರೂ ಭಾಗಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ASP ಅವರ ಪ್ರಕಾರ, ಪೋಸ್ಟ್‌ಮಾರ್ಟಂ ವರದಿಯಲ್ಲಿ ನಸ್ರೀನ್ ಅವರ ದೇಹದ ಆರು ಕಡೆ ಗಾಯದ ಗುರುತುಗಳು ಪತ್ತೆಯಾಗಿವೆ. ಅವುಗಳಲ್ಲಿ ವಿದ್ಯುತ್ ಶಾಕ್‌ನಿಂದ ಉಂಟಾದ ಸುಟ್ಟ ಗಾಯಗಳೂ ಸೇರಿವೆ. ಆಕೆಯ ಖಾಸಗಿ ಅಂಗಗಳ ಮೇಲೂ ವಿದ್ಯುತ್ ಶಾಕ್‌ನಿಂದ ಉಂಟಾದ ಸುಟ್ಟ ಗಾಯಗಳು ಪತ್ತೆಯಾಗಿವೆ. ಸದ್ಯ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


