ಬೆಂಗಳೂರಿನ ಬಾಗಲಕುಂಟೆಯಲ್ಲಿ, ಒಂಟಿಯಾಗಿ ವಾಸಿಸುತ್ತಿದ್ದ 57 ವರ್ಷದ ಮಹಿಳೆಯ ಅಸ್ಥಿಪಂಜರ ಅವರ ಮನೆಯಲ್ಲಿ ಪತ್ತೆಯಾಗಿದೆ. ಸುಮಾರು ಒಂದು ವರ್ಷದ ಹಿಂದೆ ಅವರು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನ ಬಾಗಲಕುಂಟೆಯ ಮನೆಯೊಂದರಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿದ್ದು, ಒಂದು ವರ್ಷದ ಹಿಂದೆಯೇ ಆಕೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೃತಮಹಿಳೆಯನ್ನು 57 ವರ್ಷದ ದಾಕ್ಷಾಯಿಣಿ ಎಂದು ಗುರುತಿಸಲಾಗಿದ್ದು, ಪೊಲೀಸರು ನೀಡಿರುವ ಮಾಹಿತಿಯ ಅನ್ವಯ ಮೃತರು ಒಂಟಿಯಾಗಿ ಡುಪ್ಲೆಕ್ಸ್ ಮನೆಯಲ್ಲಿ ವಾಸ ಮಾಡುತ್ತಿದ್ದರಂತೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಪೊಲೀಸರು ನೀಡಿರುವ ಮಾಹಿತಿಯ ಅನ್ವಯ, ಸ್ಥಳೀಯರು ಘಟನೆಯ ಬಗ್ಗೆ ಶುಕ್ರವಾರ ಸಂಜೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಳೆದ ಕೆಲವು ತಿಂಗಳುಗಳಿಂದ ಮನೆಯಲ್ಲಿ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ ಎಂಬ ಕಾರಣಕ್ಕೆ ಅನುಮಾನಗೊಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು, ಮನೆಯ ಒಳಹೋಗಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸಂಪೂರ್ಣವಾಗಿ ಕೊಳೆತು ಹೋಗಿದ್ದ ಅಸ್ಥಿಪಂಜರ ಕಂಡು ಬಂದಿತ್ತು.
ಮನೆಯೂ ಹಲವು ವರ್ಷಗಳಿಂದ ಕ್ಲೋಸ್ ಆಗಿತ್ತು. ಸ್ಥಳೀಯರು, ಮನೆ ಬ್ರೋಕರ್‌ಗಳು ಮನೆ ಬಾಡಿಗೆಗೆ ಸಿಗುತ್ತಾ ಎಂದು ಪರಿಶೀಲನೆ ನಡೆಸಲು ಮನೆಯ ಬಳಿ ಹೋಗಿದ್ದರು. ಆದರೆ ಮನೆಯಲ್ಲಿ ಹಲವು ದಿನಗಳಿಂದ ಯಾವುದೇ ಚಟುವಟಿಕೆಗಳು ನಡೆದಂತೆ ಕಂಡಬಾರದ ಕಾರಣ ಅನುಮಾನಗೊಂಡು ಮಾಹಿತಿ ನೀಡಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬಾಗಲಕುಂಟೆ ಪೊಲೀಸರ ತಂಡದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ದಾಕ್ಷಾಯಣಿ ಅವರ ಅಸ್ಥಿಪಂಜರ ಪತ್ತೆಯಾಗಿದೆ. ಪ್ರಾಥಮಿಕ ತನಿಖೆ ಸಂದರ್ಭದಲ್ಲಿ ಮಹಿಳೆ ಒಂದು ವರ್ಷದ ಹಿಂದೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
2005ರಲ್ಲಿ ಪುತ್ರ ಸಾವು
ಮಹಿಳೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಕೆಲವು ವರ್ಷಗಳಿಂದ ಮನೆಯಲ್ಲಿ ಒಬ್ಬರೇ ವಾಸ ಮಾಡುತ್ತಿದ್ದರು. ಮೃತರ ಪುತ್ರ 2005ರಲ್ಲಿ ಕ್ಯಾನ್ಸರ್ನಿಂದ ಮೃತಪಟ್ಟಿದ್ದ. ಆ ಬಳಿಕ ತೀವ್ರವಾಗಿ ನೊಂದಿದ್ದ ಮಹಿಳೆ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಆ ಬಳಿಕ ಅವರ ಕುಟುಂಸ್ಥರು ಅವರಿಗೆ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ದರು. ಆದರೆ 2017ರಲ್ಲಿ ಅವರ ಪತಿ ಉಮೇಶ್ ಕೂಡ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇದರೊಂದಿಗೆ ಹವನೂರ್ ಲೇಔಟ್ ನಲ್ಲಿರುವ ಮನೆಯಲ್ಲಿ ಮಹಿಳೆ ಒಬ್ಬರೇ ವಾಸ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತನಿಖೆ ಮುಂದುವರಿಸಿದ ಪೊಲೀಸರು
ಮೃತಮಹಿಳೆಯ ಸಹೋದರ 50 ವರ್ಷದ ಮಹೇಶ್ ಅವರು ನೀಡಿರುವ ಮಾಹಿತಿಯ ಅನ್ವಯ, ಕಳೆದ ಎರಡು ವರ್ಷಗಳಿಂದ ಅವರಿಗೆ ಸಹೋದರಿಯೊಂದಿಗೆ ಸಂಪರ್ಕ ಇರಲಿಲ್ಲವಂತೆ. ಸದ್ಯ ಕುಟುಂಬಸ್ಥರು ಅವರ ಸಾವಿನ ಬಗ್ಗೆ ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ. ಇದರೊಂದಿಗೆ ಪೊಲೀಸರು, ಅನುಮಾನಸ್ಪದ ಸಾವಿನ ಅಡಿ ಪ್ರಕರಣ ದಾಖಲು ಮಾಡಿಕೊಂಡು ಹೆಚ್ಚಿನ ತನಿಖೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿ, ನಾವು ಪ್ರಕರಣದಲ್ಲಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದು, ಇದು ಮಹಿಳೆ ಯಾವ ಸಮಯದಲ್ಲಿ ಸಾವನ್ನಪ್ಪಿದ್ದರು ಅಂತ ಖಚಿತಪಡಿಸಲು ಮುಂದಾಗಿದ್ದೇವೆ. ಪ್ರಕರಣದ ಬಗ್ಗೆ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.


