ಟೀಮ್ ಇಂಡಿಯಾ ಮಾಜಿ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ ಅವರ ಕೋಚ್ ಹುದ್ದೆ ನಿರ್ಗಮನದ ಕುರಿತು ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ವಿರಾಟ್ ಕೊಹ್ಲಿಗೆ ಕುಂಬ್ಳೆ ಅವರ ಕೋಚಿಂಗ್ ಶೈಲಿ ಇಷ್ಟವಿರಲಿಲ್ಲ ಮತ್ತು ಪರಿಸ್ಥಿತಿಗಳೇ ಕುಂಬ್ಳೆ ರಾಜೀನಾಮೆಗೆ ಕಾರಣವಾದವು ಎಂದು ಲಕ್ಷ್ಮಣ್ ವಿವರಿಸಿದ್ದಾರೆ.
ಬೆಂಗಳೂರು (ಆ.25): ಭಾರತೀಯ ಕ್ರಿಕೆಟ್‌ನ ಅತ್ಯಂತ ಕಹಿ ಅಧ್ಯಾಯಗಳಲ್ಲಿ ಒಂದಾದ ಅನಿಲ್ ಕುಂಬ್ಳೆ ಅವರ ಮುಖ್ಯ ಕೋಚ್ ಹುದ್ದೆಯ ನಿರ್ಗಮನ ಮತ್ತು ವಿರಾಟ್ ಕೊಹ್ಲಿ ಜೊತೆಗಿನ ಭಿನ್ನಾಭಿಪ್ರಾಯದ ಕುರಿತು ಅಂದು ಕ್ರಿಕೆಟ್ ಸಲಹಾ ಸಮಿತಿ (CAC) ಭಾಗವಾಗಿದ್ದ ಟೀಮ್ ಇಂಡಿಯಾ ಮಾಜಿ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಹಲವು ಕುತೂಹಲಕಾರಿ ವಿಚಾರವನ್ನು ಅನಾವರಣ ಮಾಡಿದ್ದಾರೆ. ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಲಕ್ಷ್ಮಣ್, 'ಅನಿಲ್ ಕುಂಬ್ಳೆ ಅವರನ್ನು ಬಿಸಿಸಿಐ (BCCI) ಅಥವಾ ಸಿಎಸಿ ವಜಾಗೊಳಿಸಲಿಲ್ಲ. ಆದರೆ, ಪರಿಸ್ಥಿತಿಗಳು ಅವರನ್ನು ರಾಜೀನಾಮೆ ನೀಡುವಂತೆ ಮಾಡಿದವು' ಎಂಬ ಮಹತ್ವದ ವಿವರಗಳು ಹೊರಬಿದ್ದಿವೆ.
ಕೊಹ್ಲಿಗೆ ಕುಂಬ್ಳೆ ಕೋಚಿಂಗ್ ಸ್ಟೈಲ್ ಕಂಫರ್ಟ್ ಇರಲಿಲ್ಲ!
ಅಂದು ಕ್ರಿಕೆಟ್ ಸಲಹಾ ಸಮಿತಿಯ (CAC) ಭಾಗವಾಗಿದ್ದ ವಿವಿಎಸ್ ಲಕ್ಷ್ಮಣ್ 2019ರ ಏಕದಿನ ವಿಶ್ವಕಪ್‌ಗೂ ಮುನ್ನ ಅನಿಲ್ ಕುಂಬ್ಳೆ ಕೋಚ್ ಹುದ್ದೆ ತೊರೆದದ್ದು ನಂತರ ರವಿಶಾಸ್ತ್ರಿ ಈ ಸ್ಥಾನಕ್ಕೆ ನೇಮಕವಾದ ವಿವಾದದ ಬಗ್ಗೆ ಮಾತನಾಡಿದರು. ಅನಿಲ್ ಕುಂಬ್ಳೆ ಅವರ ಕೋಚಿಂಗ್ ಶೈಲಿಯ ಬಗ್ಗೆ ವಿರಾಟ್ ಕೊಹ್ಲಿಗೆ ಸಮಾಧಾನವಿರಲಿಲ್ಲ ಮತ್ತು ಅವರು ಕುಂಬ್ಳೆ ಜೊತೆ ಕೆಲಸ ಮಾಡಲು ಕಂಫರ್ಟಬಲ್ ಆಗಿರಲಿಲ್ಲ. ಇನ್ನು ಅನಿಲ್ ಕುಂಬ್ಳೆ ಅವರಿಗೆ ವಿರಾಟ್ ಜೊತೆ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯ ಇರಲಿಲ್ಲ. ಅವರ ಕೋಚಿಂಗ್ ಅವಧಿಯಲ್ಲಿ ಭಾರತೀಯ ಕ್ರಿಕೆಟ್ ಅದ್ಭುತವಾಗಿ ಬೆಳೆದಿತ್ತು ಮತ್ತು ಪಂದ್ಯದ ಫಲಿತಾಂಶಗಳೇ ಅವರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದ್ದವು ಎಂದು ಲಕ್ಷ್ಮಣ್ ಹೇಳಿದ್ದಾರೆ.
ಒಪ್ಪಂದದ ಅವಧಿ ಸಿಎಸಿ ಕೈಯಲ್ಲಿರಲಿಲ್ಲ!
ಕುಂಬ್ಳೆ ಅವರಿಗೆ ಆರಂಭದಲ್ಲಿ 1 ವರ್ಷದ ಒಪ್ಪಂದ ಮಾತ್ರ ನೀಡಿದ್ದರ ಕುರಿತು ಕೂಡ ವಿವಿಎಸ್ ಸ್ಪಷ್ಟನೆ ನೀಡಿದ್ದಾರೆ. ಕೋಚ್‌ಗೆ 1 ವರ್ಷದ ಒಪ್ಪಂದ ನೀಡಬೇಕೇ ಅಥವಾ 3 ವರ್ಷದ್ದೇ ಎಂಬುದು ಬಿಸಿಸಿಐ ಮತ್ತು ಕುಂಬ್ಳೆ ನಡುವಿನ ವಿಷಯವಾಗಿತ್ತು. ಅದರಲ್ಲಿ ಸಿಎಸಿಗೆ ಯಾವುದೇ ಪಾತ್ರವಿರಲಿಲ್ಲ. ಸಿಎಸಿಯ ಮುಖ್ಯ ಕೆಲಸವೆಂದರೆ ಭಾರತೀಯ ಕ್ರಿಕೆಟ್‌ಗೆ ಅತ್ಯುತ್ತಮ ಕೋಚ್ ಆಯ್ಕೆ ಮಾಡುವುದು. ಆ ಸಮಯದಲ್ಲಿ ಅನಿಲ್ ಕುಂಬ್ಳೆ ಅವರೇ ಭಾರತೀಯ ಕ್ರಿಕೆಟ್ ಅನ್ನು ಮುಂದೆ ಒಯ್ಯಲು ಸೂಕ್ತ ಅಭ್ಯರ್ಥಿ ಎಂದು ಸಿಎಸಿ ಆಯ್ಕೆ ಮಾಡಿತ್ತು ಎಂದಿದ್ದಾರೆ.
2019ರ ವಿಶ್ವಕಪ್‌ವರೆಗೂ ಕುಂಬ್ಳೆ ಇರಬೇಕೆಂದು ಬಯಸಿದ್ದ ಸಿಎಸಿ!
ಅನಿಲ್ ಕುಂಬ್ಳೆ ಅವರ 1 ವರ್ಷದ ಒಪ್ಪಂದ ಮುಗಿದಾಗ, ಬಿಸಿಸಿಐ ಮರು-ಆಯ್ಕೆ ಪ್ರಕ್ರಿಯೆ ನಡೆಸಲು ಸಿಎಸಿಗೆ ಸೂಚಿಸಿತು. ಅರ್ಜಿ ಸಲ್ಲಿಸಿದ್ದ ಇತರ ಅಭ್ಯರ್ಥಿಗಳ ಜೊತೆ ಕುಂಬ್ಳೆ ಅವರ ಕೆಲಸವನ್ನು ಹೋಲಿಸಿ ನೋಡಿದ ಸಿಎಸಿ, ಕುಂಬ್ಳೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂಬ ತೀರ್ಮಾನಕ್ಕೆ ಬಂದಿತ್ತು. 2019ರ ಏಕದಿನ ವಿಶ್ವಕಪ್‌ವರೆಗೂ ಅನಿಲ್ ಕುಂಬ್ಳೆ ಅವರೇ ಭಾರತೀಯ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯಬೇಕು ಎಂದು ಸಿಎಸಿ ಬಿಸಿಸಿಐಗೆ ಶಿಫಾರಸು ಮಾಡಿತ್ತು ಎಂದಿದ್ದಾರೆ.
ರಾಜೀನಾಮೆ ನೀಡಿದ್ದು ಏಕೆ?
ಸಿಎಸಿಯ ಬೆಂಬಲವಿದ್ದರೂ, ವಿರಾಟ್ ಕೊಹ್ಲಿ ಅವರೊಂದಿಗಿನ ಭಿನ್ನಾಭಿಪ್ರಾಯ ಮತ್ತು ತಂಡದಲ್ಲಿನ ವಾತಾವರಣವು ಸಂಕೀರ್ಣಗೊಂಡ ಕಾರಣ ಕುಂಬ್ಳೆ ಸ್ವತಃ ರಾಜೀನಾಮೆ ನೀಡಿದರು. 'ನಾನೇನಾದರೂ ಆ ಸಮಯದಲ್ಲಿ ಅನಿಲ್ ಕುಂಬ್ಳೆ ಅವರ ಜಾಗದಲ್ಲಿದ್ದಿದ್ದರೆ, ಪರಿಸ್ಥಿತಿಗಳನ್ನು ನೋಡಿ ಬಹುಶಃ ನಾನು ಸಹ ಅದೇ ರೀತಿಯ ರಾಜೀನಾಮೆ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದೆ' ಎಂದು ಲಕ್ಷ್ಮಣ್ ಹೇಳಿದ್ದಾರೆ.


