ಸೂರ್ಯಕುಮಾರ್ ಯಾದವ್ ಅವರು ಆಕಾಶ್ ಚೋಪ್ರಾ ಅವರ ಟಾಕ್ ಶೋನಲ್ಲಿ ಪಾಕಿಸ್ತಾನ ಪಂದ್ಯದ ಒತ್ತಡ ಮತ್ತು ಬುಮ್ರಾ ಅವರ ಬೌಲಿಂಗ್ ಸಾಮರ್ಥ್ಯವನ್ನು ಶ್ಲಾಘಿಸಿದರು. ಇನ್ನೂ ಏನು ಹೇಳಿದ್ದಾರೆ ಸೂರ್ಯಕುಮಾರ್ ಯಾದವ್? ಈ ಸ್ಟೋರಿಯಲ್ಲಿದೆ ಮಾಹಿತಿ
ಭಾರತೀಯ ಟಿ20 ತಂಡದ ನಾಯಕ, ಮೈದಾನದ ನಾನಾ ದಿಕ್ಕುಗಳಲ್ಲಿ ಚೆಂಡನ್ನು ಅಟ್ಟುವ ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ಇತ್ತೀಚೆಗೆ ಖ್ಯಾತ ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ ಅವರ ಬೈಟ್ ಅಂಡ್ ಬೋಲ್ಡ್ (Bite and Bold) ಟಾಕ್ ಶೋನಲ್ಲಿ ಭಾಗವಹಿಸಿ ಅನೇಕ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತಂಡದ ನಾಯಕತ್ವ ಹಾಗೂ ಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ಒತ್ತಡ ಮತ್ತು ಆಟಗಾರರ ಆಯ್ಕೆಯ ಬಗ್ಗೆ ಮಾತನಾಡಿದ್ದಾರೆ.
ಅಹಮದಾಬಾದ್ ನೆನಪು ಮತ್ತು ಗೆಲುವಿನ ವಿಶ್ವಾಸ
2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಅಹಮದಾಬಾದ್‌ನಲ್ಲಿ ಅನುಭವಿಸಿದ ಸೋಲು ತಂಡದ ಮೇಲೆ ನಕಾರಾತ್ಮಕ ಪ್ರಭಾವ ಬೀರಿತ್ತು. ಆ ಸೋಲಿನ ನಂತರ ಮೈದಾನದ ಬಗ್ಗೆ ಕೇಳಿಬಂದ ಸುದ್ದಿಗಳು ನೋವು ತಂದಿದ್ದವು. ಆದರೆ ಟಿ-20 ವಿಶ್ವಕಪ್ ಗೆಲ್ಲುವ ಮೂಲಕ ನಾವು ವಿಶೇಷವಾದದ್ದನ್ನು ಸಾಧಿಸಲಿದ್ದೇವೆ ಎಂಬ ನಂಬಿಕೆ ಇತ್ತು ಎಂದಿದ್ದಾರೆ.
ಸಂಜು ಬಗ್ಗೆ ಕಠಿಣ ನಿರ್ಧಾರ
ತಂಡದ ಆಯ್ಕೆಯ ಸಮಯದಲ್ಲಿ ತಮಗೆ ಎದುರಾದ ಅತ್ಯಂತ ಕಠಿಣ ಸವಾಲು ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು ತಕ್ಷಣ 'ಸಂಜು ಸ್ಯಾಮ್ಸನ್' ಅವರ ಹೆಸರು ಪ್ರಸ್ತಾಪಿಸಿದರು. ಸಂಜು ಅಂತಹ ಪ್ರತಿಭಾವಂತ ಆಟಗಾರನನ್ನು ಪ್ಲೇಯಿಂಗ್ XI ನಿಂದ ಹೊರಗಿಡುವುದು ನಿಜಕ್ಕೂ ನೋವಿನ ಸಂಗತಿ. ತಂಡದ ಸಂಯೋಜನೆಯ ದೃಷ್ಟಿಯಿಂದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕಾಗುತ್ತದೆ. ಸಂಜು ಅವರ ಸ್ಥಿರತೆ ಮತ್ತು ಅವರು ಪಂದ್ಯಾವಳಿಯ ಉದ್ದಕ್ಕೂ ತೋರಿದ ಪರಿಶ್ರಮ ಶ್ಲಾಘನೀಯ ಎಂದು ಸಂಜು ಬೆನ್ನಿಗೆ ನಿಂತರು.
ಭಾರತ ಮತ್ತು ಪಾಕಿಸ್ತಾನ ಪಂದ್ಯವೆಂದರೆ ಅಲ್ಲಿ ಒತ್ತಡ ಇರುವುದು ಸಹಜ. ಆದರೆ ಆ ಪಂದ್ಯದ 13ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ವಿಕೆಟ್ ಬಿದ್ದಾಗ ಇಡೀ ವಾತಾವರಣವೇ ಬದಲಾಯಿತು ಎಂದು ಸೂರ್ಯ ವಿವರಿಸಿದರು. ಅಲ್ಲಿಯವರೆಗೆ ಶಾಂತವಾಗಿದ್ದ ನಮಗೆ ಆ ವಿಕೆಟ್ ಬಿದ್ದಾಗ ಉದ್ವಿಗ್ನತೆ ಶುರುವಾಯಿತು. ಆ ಕ್ಷಣದ ಒತ್ತಡಕ್ಕೆ ಬೆವರು ಸುರಿಯಲಾರಂಭಿಸಿತು, ಪಂದ್ಯದ ಫಲಿತಾಂಶ ಏನಾಗುತ್ತದೋ ಎಂಬ ಆತಂಕ ಮನೆಮಾಡಿತ್ತು ಎಂದು ಆ ರೋಚಕ ಕ್ಷಣಗಳನ್ನು ಹಂಚಿಕೊಂಡರು.
ಬುಮ್ರಾ ಎಸೆಯುವ 24 ಎಸೆತಗಳು 'ಚಿನ್ನದಂತಿವೆ'
ಜಸ್ಪ್ರೀತ್ ಬುಮ್ರಾ ಬಗ್ಗೆ ಮಾತನಾಡುವಾಗ ಸೂರ್ಯಕುಮಾರ್ ಮುಖದಲ್ಲಿ ಹೆಮ್ಮೆ ಎದ್ದು ಕಾಣುತ್ತಿತ್ತು. ಬುಮ್ರಾ ಎಸೆಯುವ 24 ಎಸೆತಗಳು ನಮಗೆ ಚಿನ್ನವಿದ್ದಂತೆ. ಅವುಗಳನ್ನು ನಾವು ಅತ್ಯಂತ ಎಚ್ಚರಿಕೆಯಿಂದ ಮತ್ತು ಸರಿಯಾದ ಸಮಯದಲ್ಲಿ ಬಳಸಿಕೊಳ್ಳಬೇಕು. ಕಷ್ಟದ ಸಮಯದಲ್ಲಿ ಬುಮ್ರಾ ಸ್ವತಃ ಮುಂದೆ ಬಂದು 'ನಾನು ನಿಮ್ಮ ಕೆಲಸ ಮುಗಿಸಿಕೊಡುತ್ತೇನೆ, ನಿಮ್ಮನ್ನು ನೋಡಿಕೊಳ್ಳುತ್ತೇನೆ' ಎಂದು ಭರವಸೆ ನೀಡುತ್ತಿದ್ದರು. ಅಂತಹ ಬೌಲರ್ ತಂಡದಲ್ಲಿರುವುದು ನಾಯಕನಿಗೆ ದೊಡ್ಡ ಶಕ್ತಿ ಎಂದು ಕೊಂಡಾಡಿದರು. ಸೂರ್ಯಕುಮಾರ್ ಯಾದವ್ ಅವರ ಈ ಮಾತುಗಳು ತಂಡದ ಆಟಗಾರರ ನಡುವಿನ ಬಾಂಧವ್ಯ ಮತ್ತು ಮೈದಾನದ ಒಳಗಿನ ನಿಜವಾದ ಒತ್ತಡವನ್ನು ಅಭಿಮಾನಿಗಳಿಗೆ ಪರಿಚಯಿಸಿವೆ.


