ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಭಾರತ ಗೆಲುವಿನ ಹಾದಿಯಲ್ಲಿದ್ದರೂ, ಕೊಲಂಬೊದಲ್ಲಿ ಬುಧವಾರ ಭಾರಿ ಮಳೆಯ ಮುನ್ಸೂಚನೆ ಇರುವುದು ಗೆಲುವಿಗೆ ಅಡ್ಡಿಯಾಗಬಹುದು. ಫಾಲೋ-ಆನ್ ತಪ್ಪಿಸಿಕೊಳ್ಳಲು ಲಂಕಾ ಪಡೆಗೆ ಇನ್ನೂ 39 ರನ್‌ಗಳ ಅಗತ್ಯವಿದ್ದು, ಸೋನಲ್ ದಿನುಶಾ ಅವರ ಬ್ಯಾಟಿಂಗ್ ಪಂದ್ಯವನ್ನು ಡ್ರಾ ಮಾಡುವತ್ತ ಕೊಂಡೊಯ್ಯುವ ಸಾಧ್ಯತೆಯಿದೆ.
ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ (SSC) ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಬಲಿಷ್ಠ ಹಿಡಿತ ಸಾಧಿಸಿದೆ. ಆದರೆ ಗೆಲುವಿನ ಹೊಸ್ತಿಲಲ್ಲಿರುವ ಭಾರತಕ್ಕೆ ವರುಣನ ಆತಂಕ ಎದುರಾಗಿದೆ. ನಾಲ್ಕನೇ ದಿನವಾದ ಬುಧವಾರ ಕೊಲಂಬೊದಲ್ಲಿ ಭಾರೀ ಮಳೆಯ ಮುನ್ಸೂಚನೆ ಇರುವುದು ಟೀಮ್ ಇಂಡಿಯಾದ ಗೆಲುವಿನ ಆಸೆಗೆ ತಣ್ಣೀರು ಎರಚುವ ಸಾಧ್ಯತೆಯಿದೆ.
ಭಾರತದ ಭರ್ಜರಿ ಪ್ರದರ್ಶನ
ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ದೇವದತ್ ಪಡಿಕ್ಕಲ್ ಮತ್ತು ಧ್ರುವ್ ಜುರೆಲ್ ಅವರ ಅಮೋಘ ಶತಕಗಳ ನೆರವಿನಿಂದ 503/9 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಶ್ರೀಲಂಕಾ ಮೂರನೇ ದಿನದ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 265 ರನ್ ಗಳಿಸಿದೆ. ಆತಿಥೇಯ ತಂಡ ಫಾಲೋ-ಆನ್ ತಪ್ಪಿಸಿಕೊಳ್ಳಲು ಇನ್ನೂ 39 ರನ್‌ಗಳ ಅಗತ್ಯವಿದೆ (ಒಟ್ಟು 304 ರನ್). ಒಂದು ವೇಳೆ ಶ್ರೀಲಂಕಾ ಫಾಲೋ-ಆನ್ ತಪ್ಪಿಸಿಕೊಂಡರೂ, ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ವೇಗವಾಗಿ ರನ್ ಗಳಿಸಿ ಲಂಕಾ ಪಡೆಗೆ ಸವಾಲಿನ ಗುರಿ ನೀಡುವ ಯೋಜನೆಯಲ್ಲಿದೆ.
ಬುಧವಾರದ ಹವಾಮಾನ ಹೇಗಿದೆ?
ನಾಲ್ಕನೇ ದಿನವಾದ ಬುಧವಾರ ಕೊಲಂಬೊದಲ್ಲಿ ಹವಾಮಾನ ವರದಿ ಆಶಾದಾಯಕವಾಗಿಲ್ಲ. ಮೊದಲ ಮತ್ತು ಎರಡನೇ ಸೆಷನ್ ಸಮಯದಲ್ಲಿ ಮಳೆಯಾಗುವ ಸಾಧ್ಯತೆ ಶೇ. 50 ಕ್ಕಿಂತ ಹೆಚ್ಚಿದೆ. ಸಂಜೆಯ ವೇಳೆಗೆ ಮಳೆಯ ಸಾಧ್ಯತೆ ಶೇ. 20 ರಷ್ಟಿದೆ. ಅಂದರೆ ಬುಧವಾರದ ಪಂದ್ಯದ ಬಹುಪಾಲು ಸಮಯ ಮಳೆಗೆ ಬಲಿಯಾಗುವ ಸಾಧ್ಯತೆಯಿದೆ. ಪಂದ್ಯದ ಅರ್ಧದಷ್ಟು ಸಮಯ ಮಳೆಯಿಂದ ವ್ಯರ್ಥವಾದರೆ ಪಂದ್ಯವನ್ನು ಗೆಲ್ಲುವುದು ಭಾರತಕ್ಕೆ ಕಷ್ಟವಾಗಬಹುದು. ಇದು ಸೋಲಿನ ಸುಳಿಯಲ್ಲಿರುವ ಶ್ರೀಲಂಕಾಕ್ಕೆ ವರದಾನವಾಗುವ ಸಾಧ್ಯತೆಯಿದೆ.
ಒಂದು ಹಂತದಲ್ಲಿ 173 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ಶ್ರೀಲಂಕಾ ಮೂರನೇ ದಿನವೇ ಆಲೌಟ್ ಆಗುವ ಭೀತಿಯಲ್ಲಿತ್ತು. ಕಳೆದ ಪಂದ್ಯದ ಶತಕವೀರ ಸೋನಲ್ ದಿನುಶಾ (85* ರನ್) ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡವನ್ನು ಪಾರು ಮಾಡುತ್ತಿದ್ದಾರೆ. ಅವರಿಗೆ ಕೆಶರ ನುವಂತ (18) ಉತ್ತಮ ಸಾಥ್ ನೀಡಿದರು. ದಿನುಶಾ ಬುಧವಾರ ತಮ್ಮ ಎರಡನೇ ಟೆಸ್ಟ್ ಶತಕ ಪೂರೈಸುವ ಗುರಿ ಹೊಂದಿದ್ದಾರೆ. ಭಾರತಕ್ಕೆ ಈ ಪಂದ್ಯ ಗೆಲ್ಲಲು ಶ್ರೀಲಂಕಾದ ಉಳಿದ 2 ವಿಕೆಟ್‌ಗಳನ್ನು ಬೇಗನೆ ಕಿತ್ತು, ಎರಡನೇ ಇನ್ನಿಂಗ್ಸ್‌ನಲ್ಲಿ ಮಳೆ ಬರುವ ಮುನ್ನ ಪಂದ್ಯವನ್ನು ಮುಗಿಸುವ ಸವಾಲು ಎದುರಾಗಿದೆ.


