ಬಿಸಿಸಿಐ ಮಹತ್ವದ ಸಭೆ ನಡೆಸಿದ್ದು, ಟೀಂ ಇಂಡಿಯಾದ ಸರಣಿ ಸೋಲು ಮತ್ತು 2027ರ ವಿಶ್ವಕಪ್ ಸಿದ್ಧತೆ ಬಗ್ಗೆ ಚರ್ಚಿಸಿದೆ. ಸಭೆಯ ನಂತರ ಶುಭ್‌ಮನ್ ಗಿಲ್ ಮತ್ತು ಲಕ್ಷ್ಮಣ್ ನಗುತ್ತಿದ್ದರೆ, ಕೋಚ್ ಗಂಭೀರ್ ಮತ್ತು ಶ್ರೇಯಸ್ ಅಯ್ಯರ್ ಮುಖದಲ್ಲಿ ಚಿಂತೆ ಕಾಣಿಸಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ.

ಬೆಂಗಳೂರು: ಮುಂಬೈನ ಕೇಂದ್ರ ಕಚೇರಿಯಲ್ಲಿಂದು ಬಿಸಿಸಿಐ ಮಹತ್ವದ ಸಭೆ ಕರೆದಿತ್ತು. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಸಭೆಯ ನೇತೃತ್ವ ವಹಿಸಿದ್ದರು. ಇತ್ತೀಚೆಗಷ್ಟೇ ಮುಕ್ತಾಯವಾದ ಐರ್ಲೆಂಡ್ ಹಾಗೂ ಇಂಗ್ಲೆಂಡ್ ನಡುವಿನ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾರತ ಅನುಭವಿಸಿದ ದಯನೀಯ ಸೋಲು ಹಾಗೂ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದ ಸಿದ್ದತೆ ಕುರಿತಂತೆ ಮತ್ತು ರೋಹಿತ್ ಶರ್ಮಾ ಭವಿಷ್ಯದ ಕುರಿತಂತೆ ಚರ್ಚೆ ನಡೆದಿದೆ ಎಂದು ವರದಿಯಾಗಿದೆ.

ಈ ಸಭೆಯಲ್ಲಿ ಟೀಂ ಇಂಡಿಯಾ ಹೆಡ್‌ ಕೋಚ್ ಗೌತಮ್ ಗಂಭೀರ್, ಬಿಸಿಸಿಐ ಸೆಂಟರ್‌ ಆಫ್‌ ಎಕ್ಸಲೆನ್ಸ್‌ನ ಮುಖ್ಯಸ್ಥ ವಿವಿಎಸ್‌ ಲಕ್ಷ್ಮಣ್‌, ಭಾರತ ಟೆಸ್ಟ್‌ ಹಾಗೂ ಏಕದಿನ ತಂಡದ ನಾಯಕ ಶುಭ್‌ಮನ್‌ ಗಿಲ್‌, ಟಿ20 ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಪಾಲ್ಗೊಂಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಗೈರಾಗಿದ್ದರು. ಇನ್ನು ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಬಿಸಿಸಿಐ ಸಭೆಗೂ ಮುನ್ನ ಹಾಗೂ ಸಭೆಯ ನಂತರ ಗೌತಮ್ ಗಂಭೀರ್, ಶುಭ್‌ಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಅವರ ಮುಖಭಾವನೆಯ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗಿಲ್, ಲಕ್ಷ್ಮಣ್ ಮುಖದಲ್ಲಿ ನಗು, ಬೆಪ್ಪರಂತಾದ ಗಂಭೀರ್, ಶ್ರೇಯಸ್ ಅಯ್ಯರ್!

ಹೌದು, ಬಿಸಿಸಿಐ ಮೀಟಿಂಗ್‌ನಲ್ಲಿ ಪಾಲ್ಗೊಂಡಿದ್ದ ಭಾರತ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕ ನಗುನಗುತ್ತಲೇ ಮೀಟಿಂಗ್‌ನಲ್ಲಿ ಪಾಲ್ಗೊಂಡಿದ್ದರು, ಮೀಟಿಂಗ್ ಮುಗಿದ ಬಳಿಕವೂ ನಗುತ್ತಲೇ ಹೊರಬಂದರು. ಅದೇ ರೀತಿಯ ಎಕ್ಸ್‌ಪ್ರೆಷನ್ ಅನ್ನು ಬಿಸಿಸಿಐ ಸೆಂಟರ್‌ ಆಫ್‌ ಎಕ್ಸಲೆನ್ಸ್‌ನ ಮುಖ್ಯಸ್ಥ ವಿವಿಎಸ್‌ ಲಕ್ಷ್ಮಣ್‌ ಅವರ ಮುಖದಲ್ಲಿಯೂ ಕಂಡು ಬಂದಿತು. ಆದರೆ ಟೀಂ ಇಂಡಿಯಾ ಹೆಡ್‌ ಕೋಚ್ ಗೌತಮ್ ಗಂಭೀರ್ ಹಾಗೂ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್ ಮುಖದಲ್ಲಿ ನಗು ಮಾಯವಾಗಿತ್ತು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೀಗಿದೆ ನೋಡಿ ಆ ವೈರಲ್ ವಿಡಿಯೋ:

Scroll to load tweet…

ಅಷ್ಟಕ್ಕೂ ಯಾಕೆ ಹೀಗಾಗಿರಬಹುದು?

ಅಂದಹಾಗೆ ಕೆಲ ತಿಂಗಳ ಹಿಂದಷ್ಟೇ ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ತಂಡವು ಐರ್ಲೆಂಡ್ ಎದುರು 2 ಪಂದ್ಯಗಳ ಟಿ20 ಸರಣಿ(2-0) ಹಾಗೂ ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟಿ20 ಸರಣಿಯಲ್ಲಿ(4-0) ವೈಟ್‌ವಾಷ್ ಮುಖಭಂಗ ಅನುಭವಿಸಿತ್ತು. ಹೀಗಾಗಿ ಬಿಸಿಸಿಐ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಹೆಡ್‌ಕೋಚ್ ಗೌತಮ್ ಗಂಭೀರ್‌ಗೆ ಕ್ಲಾಸ್ ತೆಗೆದುಕೊಂಡಿರುವ ಸಾಧ್ಯತೆಯಿದೆ. ಇನ್ನೊಂದೆಡೆ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ ಇಂಗ್ಲೆಂಡ್ ಎದುರು ಏಕದಿನ ಸರಣಿ ಸೋತರೂ, ಶ್ರೀಲಂಕಾ ಎದುರು ಟೆಸ್ಟ್ ಸರಣಿ ಗೆದ್ದು ಬೀಗಿತ್ತು. ಇನ್ನು ಲಕ್ಷ್ಮಣ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ, ಜಿಂಬಾಬ್ವೆ ಎದುರಿನ ಸೀಮಿತ ಓವರ್‌ಗಳ ಸರಣಿ ಗೆದ್ದು ಬೀಗಿತ್ತು. ಇದೇ ಕಾರಣಕ್ಕೆ ಲಕ್ಷ್ಮಣ್ ಮುಖದಲ್ಲೂ ನಗು ಕಂಡು ಬಂದಿದ್ದು, ಮುಂಬರುವ ದಿನಗಳಲ್ಲಿ ಲಕ್ಷ್ಮಣ್ ಹೆಗಲಿಗೆ ಮಹತ್ವದ ಜವಬ್ದಾರಿ ಸಿಗುವ ಸಾಧ್ಯತೆಯಿದೆ.