ಟೀಂ ಇಂಡಿಯಾ ಆಯ್ಕೆ ಬಗ್ಗೆ ಅಸಮಾಧಾನ ಭುಗಿಲೇಳೋದು ಹೊಸದೇನೂ ಅಲ್ಲ. ಅಫ್ಘಾನ್ ವಿರುದ್ಧದ ಟಿ20 ಸರಣಿಗೆ ತಂಡ ಪ್ರಕಟ ಬೆನ್ನಲ್ಲೇ ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟಿಗ ಎಸ್‌.ಬದರಿನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಆಕ್ರೋಶಕ್ಕೆ ಕಾರಣ ಏನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ಸೆಪ್ಟೆಂಬರ್ 13 ರಿಂದ ದೆಹಲಿಯಲ್ಲಿ ಆರಂಭವಾಗಲಿರುವ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದ ಆಯ್ಕೆಯು ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಟೀಮ್ ಇಂಡಿಯಾದ ಮಾಜಿ ಆಟಗಾರ ಎಸ್. ಬದರಿನಾಥ್, ಹೆಡ್ ಕೋಚ್ ಗೌತಮ್ ಗಂಭೀರ್ ಅವರ ವಿರುದ್ಧ ಕಿಡಿಕಾರಿದ್ದು ಕೋಚ್‌ಗೆ ಇಷ್ಟವಾದವರಿಗಷ್ಟೇ ತಂಡದಲ್ಲಿ ಮಣೆ ಹಾಕಲಾಗುತ್ತಿದೆ ಎಂದು ನೇರವಾಗಿ ಆರೋಪಿಸಿದ್ದಾರೆ.

ಕೋಚ್ ಫೇವರಿಟ್ಸ್ ಆರ್ ಬ್ಯಾಕ್

ತಂಡದ ಆಯ್ಕೆಯ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಬದರಿನಾಥ್, ವಾಷಿಂಗ್ಟನ್ ಸುಂದರ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರ ಆಯ್ಕೆಯನ್ನು ಪ್ರಶ್ನಿಸಿದ್ದಾರೆ. ಮೇಲ್ನೋಟಕ್ಕೆ ನೋಡಿದರೆ, ಕೋಚ್‌ಗೆ ಬೇಕಾದ ಆಟಗಾರರು ತಂಡಕ್ಕೆ ಮರಳಿದ್ದಾರೆ ಎಂದು ಅನಿಸುತ್ತದೆ. ವಾಷಿಂಗ್ಟನ್ ಸುಂದರ್ ಅವರಿಗೆ ಭಾರತೀಯ ಕ್ರಿಕೆಟ್‌ನಲ್ಲಿ ಅತಿಯಾದ ಬೆಂಬಲ ಸಿಗುತ್ತಿದೆ. ಇಷ್ಟು ಅವಕಾಶಗಳನ್ನು ಅವರು ಈ ಬಾರಿಯಾದರೂ ಸರಿಯಾಗಿ ಬಳಸಿಕೊಳ್ಳಬೇಕಿದೆ ಎಂದು ಟೀಕಿಸಿದ್ದಾರೆ.

ಯುವ ಆಟಗಾರ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಆಲ್‌ರೌಂಡರ್ ಕೋಟಾದಲ್ಲಿ ಆಯ್ಕೆ ಮಾಡಿರುವುದಕ್ಕೆ ಬದರಿನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ ಅವರನ್ನು ನಾನು ಒಬ್ಬ ಬೌಲರ್ ಆಗಿ ಅಷ್ಟಾಗಿ ಮೆಚ್ಚುವುದಿಲ್ಲ. ಅವರು ಒಬ್ಬ ಬ್ಯಾಟರ್ ಮಾತ್ರ. ಅವರ ಬೌಲಿಂಗ್ ಮೇಲೆ ನನಗೆ ನಂಬಿಕೆಯಿಲ್ಲ. ಒಬ್ಬ ಬೌಲಿಂಗ್ ಆಲ್‌ರೌಂಡರ್ ಆಗಿ ಅವರನ್ನು ಹೇಗೆ ಪರಿಗಣಿಸಿದ್ದಾರೋ ತಿಳಿಯುತ್ತಿಲ್ಲ ಎಂದು ಗಂಭೀರ ಪ್ರಶ್ನೆ ಎತ್ತಿದ್ದಾರೆ.

ಬೂಮ್ರಾ ವಾಪಸಾತಿ ಬಗ್ಗೆ ಮೆಚ್ಚುಗೆ

ಒಂದೆಡೆ ಆಯ್ಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರೂ, ಸ್ಟಾರ್ ವೇಗಿ ಜಸ್ಪ್ರೀತ್ ಬೂಮ್ರಾ ತಂಡಕ್ಕೆ ಮರಳಿರುವುದನ್ನು ಬದರಿನಾಥ್ ಸ್ವಾಗತಿಸಿದ್ದಾರೆ. ಬೂಮ್ರಾ ವಾಪಸಾತಿ ತಂಡಕ್ಕೆ ದೊಡ್ಡ ಬಲ. ಬಹುಶಃ ಬೂಮ್ರಾ ಅವರೇ ಮ್ಯಾನೇಜ್‌ಮೆಂಟ್ ಹತ್ತಿರ ಈ ಸರಣಿಯಲ್ಲಿ ಆಡಲು ಬಯಸುವುದಾಗಿ ಹೇಳಿರಬಹುದು. ಗಂಭೀರ್ ಅಥವಾ ಆಯ್ಕೆ ಸಮಿತಿಯೊಂದಿಗೆ ಮಾತನಾಡಿ, ತಾನು ಬಹಳ ದಿನಗಳಿಂದ ಕ್ರಿಕೆಟ್‌ನಿಂದ ದೂರ ಇರುವುದರಿಂದ ಈ ಪಂದ್ಯಗಳನ್ನು ಆಡುತ್ತೇನೆ ಎಂದು ಬೂಮ್ರಾ ಕೇಳಿಕೊಂಡಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಬೂಮ್ರಾ, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ ಮತ್ತು ಹರ್ಷಿತ್ ರಾಣಾ ತಂಡದಲ್ಲಿ ಸ್ಥಾನ ಪಡೆದಿದ್ದರೂ, ಅವರು ಅಂತಿಮವಾಗಿ ಆಡುವುದು ಬಿಸಿಸಿಐನ 'ಸೆಂಟರ್ ಆಫ್ ಎಕ್ಸಲೆನ್ಸ್' ನೀಡುವ ಫಿಟ್ನೆಸ್ ಕ್ಲಿಯರೆನ್ಸ್ ಮೇಲೆ ಅವಲಂಬಿತವಾಗಿದೆ. ಕಳೆದ ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸದ ನಂತರ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದ ಬೂಮ್ರಾ ಅವರಿಗೆ ಈ ಸರಣಿ ಬಹಳ ಮುಖ್ಯವಾಗಿದೆ.

ಒಟ್ಟಾರೆಯಾಗಿ ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಮೊದಲ ಕೆಲವು ಸರಣಿಗಳಲ್ಲೇ 'ಪಕ್ಷಪಾತ'ದ ಆರೋಪ ಕೇಳಿಬರುತ್ತಿರುವುದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸೆಪ್ಟೆಂಬರ್ 13 ರಂದು ದೆಹಲಿಯಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಈ ಆಟಗಾರರು ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬುದು ಕಾದು ನೋಡಬೇಕಿದೆ.