ವಿಪ್ರೋ-ಕವಾಸಕಿ ಪ್ರಿಸಿಷನ್ ಮಷಿನರಿ ಸಂಸ್ಥೆಯು ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಒಂದು ಸಾವಿರ ಕೋಟಿ ರು. ಹೂಡಿಕೆಯೊಂದಿಗೆ ಹೊಸ ಹೈಡ್ರಾಲಿಕ್ ಪಂಪ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ. ಈ ಯೋಜನೆಯಿಂದಾಗಿ ಸುಮಾರು 1200 ಹೊಸ ಉದ್ಯೋಗಗಳು ಸೃಷ್ಟಿಯಾಗಲಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಹಾರೋಹಳ್ಳಿ ಐದನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ಹೈಡ್ರಾಲಿಕ್ ಪಂಪ್ ಉತ್ಪಾದನಾ ಘಟಕ ಸ್ಥಾಪನೆಗೆ ವಿಪ್ರೋ-ಕವಾಸಕಿ ಪ್ರಿಸಿಷನ್ ಮಷಿನರಿ ಸಂಸ್ಥೆಯು ಒಂದು ಸಾವಿರ ಕೋಟಿ ರು. ಹೂಡಿಕೆ ಮಾಡಲಿದ್ದು, ಅದರಿಂದ 1200 ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಖನಿಜ ಭವನದಲ್ಲಿ ಗುರುವಾರ ತಮ್ಮನ್ನು ಭೇಟಿಯಾದ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಮಿನೋರು ಹತ್ಸುದ ನೇತೃತ್ವದ ಉನ್ನತ ಮಟ್ಟದ ನಿಯೋಗದೊಂದಿಗೆ ಸಚಿವರು ಸಭೆ ನಡೆಸಿದರು.
ನಂತರ ಮಾತನಾಡಿದ ಪಾಟೀಲ್, ಜಪಾನ್ ಮೂಲದ ಕವಾಸಕಿ ಕಂಪೆನಿ, ವಿಪ್ರೋ ಜತೆ ಹೈಡ್ರಾಲಿಕ್ ಪಂಪ್ ಉತ್ಪಾದನಾ ಘಟಕ ಸ್ಥಾಪನೆ ಸಂಬಂಧ ಹಾರೋಹಳ್ಳಿ 5ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ 30 ಎಕರೆ ಭೂಮಿ ನೀಡುವಂತೆ ಕೋರಿದೆ. ಅದನ್ನು ತ್ವರಿತವಾಗಿ ಒದಗಿಸಲಾಗುವುದು. ಮುಂದಿನ ಒಂದು ವರ್ಷದಲ್ಲಿ ನೂತನ ಘಟಕ ಕಾರ್ಯಾರಂಭ ಮಾಡಲಿದೆ. ಕುಂಬಳಗೋಡಿನಲ್ಲಿ ಬಾಡಿಗೆ ಆಧಾರದಲ್ಲಿ ತಯಾರಿಕಾ ಘಟಕವಿದ್ದು, ಅಲ್ಲಿ ವರ್ಷಕ್ಕೆ 80 ಸಾವಿರ ಹೈಡ್ರಾಲಿಕ್ ಪಂಪ್ ತಯಾರಿಸಲಾಗುತ್ತಿದೆ. ಇದೀಗ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಘಟಕ ಸ್ಥಾಪನೆ ಮೂಲಕ ತಯಾರಿಕಾ ಚಟುವಟಿಕೆ ವಿಸ್ತರಿಸಲಾಗುತ್ತದೆ. ಇಲ್ಲಿ ವರ್ಷಕ್ಕೆ 2 ಲಕ್ಷಕ್ಕೂ ಹೆಚ್ಚಿನ ಹೈಡ್ರಾಲಿಕ್ ಪಂಪ್‌ಗಳನ್ನು ಉತ್ಪಾದಿಸಲಾಗುತ್ತಿದೆ. ಈ ಹೈಡ್ರಾಲಿಕ್ಸ್ ಪಂಪ್‌ಗಳನ್ನು ಜೆಸಿಬಿ ಸೇರಿದಂತೆ ಇತರ ಭೂಸಂಬಂಧಿ ಕಾಮಗಾರಿಗಳನ್ನು ನಡೆಸುವ ಯಂತ್ರಗಳಲ್ಲಿ ಬಳಸಲಾಗುತ್ತದೆ ಎಂದರು.
ಕಂಪೆನಿಯ ಹಿರಿಯ ಪ್ರಧಾನ ವ್ಯವಸ್ಥಾಪಕ ಆರ್. ರಾಜೇಶ್, ಸಿಎಫ್‌ಒ ಉದಯ ರಾಘವನ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಇತರರಿದ್ದರು.


