ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ಆಝಾದ್ ಇಂಜಿನಿಯರಿಂಗ್ ಕಂಪನಿಯಲ್ಲಿ 5 ಕೋಟಿ ರೂಪಾಯಿ ಹೂಡಿಕೆ ಮಾಡಿ ಭಾರಿ ಲಾಭ ಗಳಿಸಿದ್ದಾರೆ. ಡಿಸೆಂಬರ್ 2023ರಲ್ಲಿ ಮಾರುಕಟ್ಟೆಗೆ ಬಂದ ಈ ಕಂಪನಿಯ ಷೇರುಗಳ ಮೌಲ್ಯ ಗಣನೀಯವಾಗಿ ಏರಿಕೆಯಾಗಿದ್ದು, ಸಚಿನ್ ಜೊತೆಗೆ ಸೈನಾ ನೆಹ್ವಾಲ್, ಪಿ.ವಿ. ಸಿಂಧು ಅವರಂತಹ ಕ್ರೀಡಾಪಟುಗಳು ಕೂಡ ಹೂಡಿಕೆ ಮಾಡಿದ್ದಾರೆ.

ಬೆಂಗಳೂರು: ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಮೈದಾನದಲ್ಲಿದ್ದಾಗ ಬೌಂಡರಿ ಸಿಕ್ಸರ್‌ ಮೂಲಕ ಏಕಾಂಗಿಯಾಗಿ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಕ್ರಿಕೆಟ್‌ನಲ್ಲಿ ಮಾತ್ರವಲ್ಲದೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಬಿಸಿನೆಸ್‌ನಲ್ಲೂ ಬಂಪರ್ ಆದಾಯ ಗಳಿಸುತ್ತಿರುವುದು ಬಹುತೇಕ ಮಂದಿಗೆ ಗೊತ್ತಿಲ್ಲ. ಆಝಾದ್ ಇಂಜಿನಿಯರಿಂಗ್ ಷೇರುಗಳು ಗುರುವಾರ 8% ಏರಿಕೆ ಕಂಡಿದ್ದು, ಪ್ರತಿ ಷೇರಿನ ಮುಖಬೆಲೆ 2687 ರುಪಾಯಿಗೆ ತಲುಪಿದೆ. ಈ ಮೂಲಕ ಈ ಷೇರು ಹೊಂದಿರುವವರು ಭರ್ಜರಿ ಲಾಭ ಗಳಿಸಿದ್ದಾರೆ.

ಷೇರುಗಳ ಮೌಲ್ಯದಲ್ಲಿನ ಏರಿಕೆಯು ಸಚಿನ್ ತೆಂಡೂಲ್ಕರ್ ಅವರಂತಹ ಆರಂಭಿಕ ಹೂಡಿಕೆದಾರರತ್ತ ಮತ್ತೆ ಗಮನ ಸೆಳೆಯುವಂತೆ ಮಾಡಿದೆ. ಭಾರತದ ಕ್ರಿಕೆಟ್ ದಂತಕಥೆಯಾದ ಇವರು, ಹೈದರಾಬಾದ್ ಮೂಲದ ಈ ಕಂಪನಿಯು ಷೇರು ಮಾರುಕಟ್ಟೆಗೆ ಪ್ರವೇಶಿಸುವ ಮುನ್ನವೇ ಅದರಲ್ಲಿ 5 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದರು.

ಹೊಸ ಎತ್ತರಕ್ಕೆ ಜಿಗಿದ ಆಝಾದ್ ಇಂಜಿನಿಯರಿಂಗ್ ಷೇರು:

ಡಿಸೆಂಬರ್ 2023ರಲ್ಲಿ ಮಾರುಕಟ್ಟೆಗೆ ಪ್ರವೇಶಿಸಿದಾಗಿನಿಂದ ಆಜಾದ್ ಇಂಜಿನಿಯರಿಂಗ್ (Azad Engineering) ಉತ್ತಮ ಸಾಧನೆ ತೋರಿದೆ. ಇದರ ಷೇರುಗಳು 524 ರೂಪಾಯಿಗಳ ಐಪಿಒ (IPO) ಬೆಲೆಗೆ ವಿರುದ್ಧವಾಗಿ, ಎನ್‌ಎಸ್‌ಇ (NSE)ಯಲ್ಲಿ 720 ರೂಪಾಯಿಗಳಿಗೆ ಲಿಸ್ಟ್ ಆಗಿತ್ತು. ಗುರುವಾರ 2,687 ರೂಪಾಯಿಗೆ ಏರಿಕೆ ಕಂಡಿರುವುದು, ಷೇರು ಪಟ್ಟಿಯಲ್ಲಿ ದಾಖಲಾದ ಆರಂಭಿಕ ಬೆಲೆಗೆ ಹೋಲಿಸಿದರೆ ಗಮನಾರ್ಹ ಏರಿಕೆಯಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಕಂಪನಿಯ ಷೇರುಗಳು ಉತ್ತಮ ಗಳಿಕೆಯನ್ನು ಕಂಡಿವೆ.

ಐಪಿಒಗೆ ಬರುವ ಮೊದಲೇ ಆಝಾದ್ ಇಂಜಿನಿಯರಿಂಗ್ ಮೇಲೆ 5 ಕೋಟಿ ರುಪಾಯಿ ಹೂಡಿಕೆ ಮಾಡಿದ್ದ ಸಚಿನ್:

ಸಚಿನ್ ತೆಂಡೂಲ್ಕರ್ ಅವರು 2023ರ ಮಾರ್ಚ್ 6ರಂದು 'ಆಜಾದ್ ಇಂಜಿನಿಯರಿಂಗ್'ನಲ್ಲಿ 5 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದರು. ಸ್ಟಾಕ್ ಸ್ಪ್ಲಿಟ್ (ಷೇರು ವಿಭಜನೆ) ಮತ್ತು ಬೋನಸ್ ಇಶ್ಯೂಗೆ ಸಂಬಂಧಿಸಿದ ಹೊಂದಾಣಿಕೆಗಳ ನಂತರ, ಅವರ ಒಡೆತನದಲ್ಲಿದ್ದ ಷೇರುಗಳ ಸಂಖ್ಯೆ 4,38,210 ಆಗಿತ್ತು ಎಂದು ಕಂಪನಿಯ ದಾಖಲೆಗಳು ತಿಳಿಸುತ್ತವೆ. ಪ್ರತಿ ಷೇರಿಗೆ ಅವರ ಪರಿಣಾಮಕಾರಿ ಸ್ವಾಧೀನ ವೆಚ್ಚವು 114.10 ರೂಪಾಯಿಗಳಷ್ಟಿತ್ತು.

ಲಿಸ್ಟಿಂಗ್ ಸಮಯದಲ್ಲಿ ಹೂಡಿಕೆಯ ಮೌಲ್ಯವು 31.55 ಕೋಟಿ ರೂ.ಗೆ ಏರಿಕೆ

ಎನ್‌ಎಸ್‌ಇ (NSE)ಯಲ್ಲಿ 'ಆಜಾದ್ ಇಂಜಿನಿಯರಿಂಗ್' 720 ರೂ.ಗೆ ಲಿಸ್ಟಿಂಗ್ ಆದ ಪರಿಣಾಮ, ತೆಂಡೂಲ್ಕರ್ ಅವರ 4,38,210 ಷೇರುಗಳ ಮೌಲ್ಯವು ಸುಮಾರು 31.55 ಕೋಟಿ ರೂ.ಗೆ ಏರಿಕೆಯಾಯಿತು. ಇದು ಅವರ ಆರಂಭಿಕ 5 ಕೋಟಿ ರೂಪಾಯಿಗಳ ಹೂಡಿಕೆಯಲ್ಲಿನ ಗಣನೀಯ ಹೆಚ್ಚಳವನ್ನು ಸೂಚಿಸುತ್ತದೆ. ಲಭ್ಯವಿರುವ ಮಾಹಿತಿಯಲ್ಲಿ ಪ್ರಸ್ತುತ ಮಾಲೀಕತ್ವದ ಸ್ಥಿತಿಯ ಬಗ್ಗೆ ಸಾರ್ವಜನಿಕವಾಗಿ ಖಚಿತ ಮಾಹಿತಿ ಇಲ್ಲದಿರುವುದರಿಂದ, ಅವರು ಇನ್ನೂ ಸಂಪೂರ್ಣ ಷೇರುಗಳನ್ನು ಹೊಂದಿದ್ದಾರೆ ಎನ್ನುವುದರ ಬಗ್ಗೆ ಇನ್ನು ಯಾವುದೇ ಸ್ಪಷ್ಟತೆಯಿಲ್ಲ.

ಸೈನಾ, ಸಿಂಧು, ಲಕ್ಷ್ಮಣ್ ಕೂಡಾ ಹೂಡಿಕೆ:

ಇನ್ನು ಆಝಾದ್ ಇಂಜಿನಿಯರಿಂಗ್ ಷೇರಿನ ಮೇಲೆ ಸಚಿನ್ ತೆಂಡೂಲ್ಕರ್ ಮಾತ್ರವೇ ಹೂಡಿಕೆ ಮಾಡಿಲ್ಲ. ಭಾರತದ ಪ್ರಮುಖ ಕ್ರೀಡಾ ತಾರೆಯರಾದ ಸೈನಾ ನೆಹ್ವಾಲ್, ಪಿ.ವಿ. ಸಿಂಧು, ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಕೂಡಾ ಈ ಕಂಪನಿ ಮೇಲೆ ಹೂಡಿಕೆ ಮಾಡಿದ್ಧಾರೆ. ಈ ಮೂವರು ಕ್ರೀಡಾ ತಾರೆಯರು ಆಝಾದ್ ಇಂಜಿನಿಯರಿಂಗ್ ಕಂಪನಿ ಮೇಲೆ ಪ್ರತಿ ಷೇರಿಗೆ 228.17 ಕೋಟಿ ರುಪಾಯಿಯಂತೆ ತಲಾ ಒಂದು ಕೋಟಿ ರುಪಾಯಿ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ.