ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ, ವಾರ್ಡನ್ ಮಂಜುನಾಥ್ ಹವೇಲಿ ಅವರ ಮೇಲೆ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಐವರು ವಿಚಾರಣಾಧೀನ ಖೈದಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನಿಷೇಧಿತ ವಸ್ತುಗಳನ್ನು ಜೈಲಿಗೆ ತರಿಸಿಕೊಳ್ಳುವುದನ್ನು ತಡೆದಿದ್ದಕ್ಕೆ ಪ್ರತೀಕಾರವಾಗಿ ಈ ಕೃತ್ಯ ಎಸಗಲಾಗಿದ್ದು, ಘಟನೆಯು ಜೈಲಿನ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು ಇತ್ತೀಚಿನ ದಿನಗಳಲ್ಲಿ ಸದಾ ಒಂದಲ್ಲಾ ಒಂದು ವಿವಾದಗಳಿಂದ ಸುದ್ದಿಯಾಗುತ್ತಿದೆ. ಇದೀಗ ಜೈಲಿನ ಭದ್ರತೆಯನ್ನು ಕಾಯುವ ವಾರ್ಡನ್ ಮೇಲೆಯೇ ವಿಚಾರಣಾದೀನ ಖೈದಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ.

ಘಟನೆಯ ವಿವರ

ಪರಪ್ಪನ ಅಗ್ರಹಾರ ಜೈಲಿನಲ್ಲಿ ವಾರ್ಡನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುನಾಥ್ ಹವೇಲಿ ಎಂಬುವವರ ಮೇಲೆ ಈ ಹಲ್ಲೆ ನಡೆದಿದೆ. ಸೆಪ್ಟೆಂಬರ್ 02 ರಂದು ಬೆಳಿಗ್ಗೆ ಅನೆಕ್ಸ್-1ರಲ್ಲಿ ಮಂಜುನಾಥ್ ಅವರು ಕರ್ತವ್ಯದಲ್ಲಿದ್ದಾಗ ಐವರು ಆರೋಪಿಗಳು ಅವರನ್ನು ಬಲವಂತವಾಗಿ ನಾಲ್ಕನೇ ಕೊಠಡಿಗೆ ಎಳೆದೊಯ್ದು ಮನಬಂದಂತೆ ಥಳಿಸಿದ್ದಾರೆ.

ಹಲ್ಲೆಗೆ ಕಾರಣವೇನು?

ಆಗಸ್ಟ್ 22 ರಂದು ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಈ ಆರೋಪಿಗಳು ಜೈಲಿನೊಳಗೆ ಕೆಲವು ನಿಷೇಧಿತ ವಸ್ತುಗಳನ್ನು ತರಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಜಾಗರೂಕರಾಗಿದ್ದ ವಾರ್ಡನ್ ಮಂಜುನಾಥ್ ಹವೇಲಿ ಆ ವಸ್ತುಗಳನ್ನು ತಡೆಹಿಡಿದಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಆರೋಪಿಗಳು ಅಂದೇ ಮಂಜುನಾಥ್ ಅವರಿಗೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಇತ್ತೀಚೆಗೆ ಜೈಲಿನ ನಿಯಮಗಳನ್ನು ಬಿಗಿಗೊಳಿಸಿರುವುದು ಸಹ ಈ ಖೈದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕತ್ತು ಹಿಸುಕಿ ಕೊಲ್ಲಲು ಯತ್ನ

ದೂರಿನ ಅನ್ವಯ, ಆರೋಪಿಗಳು ಮಂಜುನಾಥ್ ಅವರ ಮುಖ ಮತ್ತು ಮೂಗಿಗೆ ಮುಷ್ಠಿಯಿಂದ ಬಲವಾಗಿ ಗುದ್ದಿದ್ದಾರೆ. ಅಷ್ಟೇ ಅಲ್ಲದೆ, ಜೈಲಿನಲ್ಲೇ ಅವರ ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಇತರ ಸಿಬ್ಬಂದಿ ಧಾವಿಸಿ ವಾರ್ಡನ್ ಅವರನ್ನು ರಕ್ಷಿಸಿದ್ದಾರೆ.

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ವಿಚಾರಣಾದೀನ ಖೈದಿಗಳಾಗಿರುವ ಮೊಹಮದ್ ಮುಶಾಮೀರ್, ಅಬ್ದುಲ್ ಶಪ್ಗನ್, ಮೊಹ್ಮದ್ ರಿಜ್ವಾನ್, ನಿಯಾಜ್, ಕಲಂದರ್ ವಿರುದ್ಧ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ತಮ್ಮ ಮೇಲೆ ನಡೆದ ಮಾರಣಾಂತಿಕ ಹಲ್ಲೆಯ ಕುರಿತು ಮಂಜುನಾಥ್ ಹವೇಲಿ ಅವರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಜೈಲಿನೊಳಗೆ ರಕ್ಷಣೆ ನೀಡಬೇಕಾದ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆದಿರುವುದು ಕಾರಾಗೃಹದ ಭದ್ರತೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಎಬ್ಬಿಸಿದೆ.