ಕೇಂದ್ರದ 'ಪಿಎಂ ಇ-ಡ್ರೈವ್' ಯೋಜನೆಯಡಿ ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರೊಂದಿಗೆ, ಉದ್ಯಾನವನ ತಿದ್ದುಪಡಿ ವಿಧೇಯಕವನ್ನು ವಾಪಸ್ ಪಡೆದು, ಬರ ಹಾಗೂ ಕಸ್ತೂರಿರಂಗನ್ ವರದಿ ಚರ್ಚೆಗೆ ವಿಶೇಷ ಅಧಿವೇಶನ ಕರೆಯಲು ನಿರ್ಧರಿಸಲಾಗಿದೆ.

ಬೆಂಗಳೂರು (ಸೆ.3): ಕೇಂದ್ರ ಸರ್ಕಾರದ 'ಪಿಎಂ ಇ-ಡ್ರೈವ್' (PM E-DRIVE) ಯೋಜನೆಯಡಿ ಬೆಂಗಳೂರು ನಗರಕ್ಕಾಗಿ 4,500 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಕುರಿತು ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, "ಟೆಂಡರ್‌ಗಳನ್ನು ಕರೆಯಲಾಗಿದ್ದು, ಒಟ್ಟು ಆರು ಕಂಪನಿಗಳಿಗೆ ನೀಡಲಾಗಿದೆ. ಪ್ರತಿ ಬಸ್‌ನ ವೆಚ್ಚ ₹1.2 ಕೋಟಿಯಿಂದ ₹1.5 ಕೋಟಿ ಇರಲಿದೆ," ಎಂದು ತಿಳಿಸಿದ್ದಾರೆ.

ಈ ಅನುಮೋದನೆಯಲ್ಲಿ ಉಂಟಾಗಿದ್ದ ಸುದೀರ್ಘ ವಿಳಂಬದಿಂದಾಗಿ ಸುಮಾರು ₹1,505 ಕೋಟಿ ಮೊತ್ತದ ಕೇಂದ್ರ ಸರ್ಕಾರದ ಸಬ್ಸಿಡಿಯೇ ಕೈತಪ್ಪುವ ಭೀತಿ ಎದುರಾಗಿತ್ತು. ಕೇಂದ್ರ ಸರ್ಕಾರವು 2025ರ ಡಿಸೆಂಬರ್‌ ನಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ್ದರೂ, ರಾಜ್ಯ ಸರ್ಕಾರ 'ಅಕ್ಸೆಪ್ಟೆನ್ಸ್ ಲೆಟರ್' (LoA) ನೀಡದೆ ವಿಳಂಬ ಮಾಡಿತ್ತು. ಈ ಬಗ್ಗೆ ಕೇಂದ್ರ ಭಾರಿ ಕೈಗಾರಿಕಾ ಸಚಿವಾಲಯವೂ ರಾಜ್ಯಕ್ಕೆ ಪತ್ರ ಬರೆದು ಶೀಘ್ರ ಒಪ್ಪಂದಕ್ಕೆ ಸಹಿ ಹಾಕುವಂತೆ ಒತ್ತಾಯಿಸಿತ್ತು. ಕೊನೆಗೂ ಈ ವಿಳಂಬಕ್ಕೆ ತೆರೆ ಬಿದ್ದಿದೆ.

ಹೊಸ ಇ-ಬಸ್‌ಗಳ ವರ್ಗೀಕರಣ ಮತ್ತು ಬಿಎಂಟಿಸಿ ವಿಸ್ತರಣೆ

ಮಂಜೂರಾಗಿರುವ ಒಟ್ಟು 4,500 ಇ-ಬಸ್‌ಗಳ ಪೈಕಿ 3,500 ಎಸಿ-ರಹಿತ (Non-AC) 12-ಮೀಟರ್ ಬಸ್‌ಗಳು, 300 ಎಸಿ (AC) 12-ಮೀಟರ್ ಬಸ್‌ಗಳು, 600 ಎಸಿ-ರಹಿತ (Non-AC) 9-ಮೀಟರ್ ಬಸ್‌ಗಳು ಹಾಗೂ 100 ಎಸಿ (AC) 9-ಮೀಟರ್ ಬಸ್‌ಗಳು ಸೇರಿವೆ. ಎಸಿ ಬಸ್‌ಗಳ ವಿಭಾಗದಲ್ಲಿ 'ಗ್ರೀನ್‌ಸೆಲ್ ಮೊಬಿಲಿಟಿ' (Greencell Mobility) ಸಂಸ್ಥೆಯು ಅತ್ಯಂತ ಕಡಿಮೆ ಬಿಡ್‌ದಾರರಾಗಿ ಹೊರಹೊಮ್ಮಿದ್ದರೆ, ಎಸಿ-ರಹಿತ ವಿಭಾಗದಲ್ಲಿ 'ಚಾರ್ಟರ್ಡ್ ಸ್ಪೀಡ್' ಮತ್ತು 'ಪಿಎಂಐ ಎಲೆಕ್ಟ್ರೋ ಮೊಬಿಲಿಟಿ' ಸಂಸ್ಥೆಗಳು ಕಡಿಮೆ ಬಿಡ್ ಸಲ್ಲಿಸಿ ಟೆಂಡರ್ ಪಡೆದುಕೊಂಡಿವೆ.

ಪ್ರಸ್ತುತ ಬಿಎಂಆರ್‌ಟಿಸಿ 1,771 ಇ-ಬಸ್‌ಗಳು ಸೇರಿದಂತೆ ಒಟ್ಟು 6,937 ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಹಳೆಯ ಸುಮಾರು 1,000 ಬಸ್‌ಗಳನ್ನು ಗುಜರಿಗೆ (Scrap) ಹಾಕುವ ಸಾಧ್ಯತೆಯಿದೆ. ಹೊಸ 4,500 ಇ-ಬಸ್‌ಗಳು ಸೇರ್ಪಡೆಯಾಗುವುದರೊಂದಿಗೆ ಬಿಎಂಆರ್‌ಟಿಸಿ ಬಸ್‌ಗಳ ಒಟ್ಟು ಸಂಖ್ಯೆ 10,000ರ ಗಡಿ ದಾಟಲಿದೆ.

ಉದ್ಯಾನವನ ತಿದ್ದುಪಡಿ ವಿಧೇಯಕ ವಾಪಸ್!

ಉದ್ಯಾನವನದ ಶೇ. 5ರಷ್ಟು ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಿಕೊಳ್ಳಲು ಅವಕಾಶ ಕಲ್ಪಿಸುವ 'ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) (ತಿದ್ದುಪಡಿ) ವಿಧೇಯಕ, 2026' ಅನ್ನು ವಾಪಸ್ ಪಡೆಯಲು ಸಂಪುಟ ನಿರ್ಧರಿಸಿದೆ. ಸಾರ್ವಜನಿಕರು ಹಾಗೂ ಶಾಸಕರ ಮಟ್ಟದಲ್ಲಿ ವ್ಯಾಪಕ ಚರ್ಚೆ ನಡೆಸಿದ ನಂತರ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಇದನ್ನು ಮರುಮಂಡನೆ ಮಾಡಲಾಗುವುದು. ಲಾಲ್‌ಬಾಗ್‌ನಲ್ಲಿ ಪ್ರಸ್ತಾವಿತ ಸುರಂಗ ಮಾರ್ಗ ಸೇರಿದಂತೆ ಮೂಲಸೌಕರ್ಯ ಯೋಜನೆಗಳಿಗೆ ಭೂಸ್ವಾಧೀನ ಸುಲಭಗೊಳಿಸಲು ಈ ತಿದ್ದುಪಡಿ ತರಲಾಗಿತ್ತು.

ಸೆಪ್ಟೆಂಬರ್ 21ರಿಂದ 3 ದಿನಗಳ ವಿಶೇಷ ಅಧಿವೇಶನ

ರಾಜ್ಯದಲ್ಲಿನ ಭೀಕರ ಬರಪರಿಸ್ಥಿತಿ ಹಾಗೂ ಕಸ್ತೂರಿರಂಗನ್ ವರದಿ ಕುರಿತು ಕೇಂದ್ರ ಸರ್ಕಾರದ ಕರಡು ಅಧಿಸೂಚನೆಯ ಬಗ್ಗೆ ಚರ್ಚಿಸಲು ಸೆಪ್ಟೆಂಬರ್ 21 ರಿಂದ 23 ರವರೆಗೆ 3 ದಿನಗಳ ಕಾಲ ರಾಜ್ಯ ಶಾಸನಸಭೆಯ ವಿಶೇಷ ಅಧಿವೇಶನ ಕರೆಯಲು ನಿರ್ಧರಿಸಲಾಗಿದೆ. ಕಸ್ತೂರಿರಂಗನ್ ಕರಡು ಅಧಿಸೂಚನೆಯನ್ನು ವಿರೋಧಿಸಿ ಸರ್ಕಾರ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸುವ ನಿರೀಕ್ಷೆಯಿದೆ.

ಸಚಿವ ಸಂಪುಟದ ಇತರೆ ಪ್ರಮುಖ ನಿರ್ಧಾರಗಳು

ಮಹರ್ಷಿ ವಾಲ್ಮೀಕಿ ಪ್ರತಿಮೆ: ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆ ಸ್ಥಾಪನೆಗೆ ಅನುಮೋದನೆ.

ಸಚಿವರ ಸಮಿತಿ (GoM): ಪ್ರಮುಖ ವಿಚಾರಗಳನ್ನು ಸಂಪುಟದ ಮುಂದೆ ಮಂಡಿಸುವ ಮೊದಲು ಸುದೀರ್ಘ ಪರಿಶೀಲನೆ ನಡೆಸಲು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ 'ಸಚಿವರ ಸಮಿತಿ' ರಚನೆ.

ಇನ್ವೆಸ್ಟ್ ಕರ್ನಾಟಕ 2027: ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು 2027ರ ಏಪ್ರಿಲ್ 20 ರಿಂದ 23 ರವರೆಗೆ 'ಇನ್ವೆಸ್ಟ್ ಕರ್ನಾಟಕ' ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜನೆ.

ನೈಸ್ (NICE) ಸಂತ್ರಸ್ತರಿಗೆ ನಿವೇಶನ: ನೈಸ್ ಯೋಜನೆಗೆ ಭೂಮಿ ಕಳೆದುಕೊಂಡ 1,453 ಸಂತ್ರಸ್ತರಿಗೆ ಸೈಟ್ ನೀಡಲು ನಿರ್ಧಾರ. ಈಗಾಗಲೇ 574 ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಇನ್ನುಳಿದ 879 ಸೈಟ್‌ಗಳನ್ನು ಶೀಘ್ರದಲ್ಲೇ ಅಭಿವೃದ್ಧಿಪಡಿಸಿ 2 ತಿಂಗಳೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ.