ಬೆಂಗಳೂರಿನಲ್ಲಿ ಇಡ್ಲಿ ಮಾರಾಟ ಮಾಡುವ ಟಿ.ಎಸ್. ನಿಂಗಮ್ಮ ಅವರು 'ಪಿಎಂ ಸ್ವನಿಧಿ' ಯೋಜನೆಯಡಿ ಸಾಲ ಪಡೆದು ತಮ್ಮ ಸಣ್ಣ ಉದ್ಯಮವನ್ನು ಯಶಸ್ವಿಯಾಗಿ ಬೆಳೆಸಿಕೊಂಡಿದ್ದಾರೆ. ಅವರ ಈ ಸ್ವಾವಲಂಬನೆಯ ಕಥೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 'ಮನ್‌ ಕಿ ಬಾತ್' ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿ, ಅವರ ಸಾಧನೆಯನ್ನು ಶ್ಲಾಘಿಸಿದ್ದಾರೆ.

ನವದೆಹಲಿ: ಖಾತರಿ ರಹಿತ ಸಾಲ ಬಳಸಿಕೊಂಡು ಉದ್ಯಮ ಕಟ್ಟಿಕೊಂಡ ಹಲವು ಸಣ್ಣ ವ್ಯಾಪಾರಿಗಳ ಕುರಿತು ಬೆಳಕು ಚೆಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಇಂಥದ್ದೇ ಸಾಧನೆ ಮಾಡಿದ ಬೆಂಗಳೂರಿನ ನಿಂಗಮ್ಮ ಮತ್ತು ಅವರ ಪತಿಯ ಕಥೆಯನ್ನು ದೇಶದ ಜನರ ಮುಂದೆ ಹರವಿದ್ದಾರೆ.

ಪಿಎಂ ಸ್ವನಿಧಿ ಲಾಭ ಪಡೆದು ಸ್ವಾವಲಂಬನೆಯ ಕಥೆ

ಭಾನುವಾರ ಪ್ರಸಾರವಾದ ತಮ್ಮ ಮಾಸಿಕ ‘ಮನ್‌ ಕಿ ಬಾತ್‌’ನಲ್ಲಿ ಪ್ರಧಾನಿ ಮೋದಿ ಅವರು ಬೆಂಗಳೂರಿನಲ್ಲಿ ಇಡ್ಲಿ ಮಾರುವ ಟಿ.ಎಸ್‌. ನಿಂಗಮ್ಮ ಹೆಸರು ಉಲ್ಲೇಖಿಸಿದ್ದಾರೆ. ‘ಬೆಂಗಳೂರಿನ ಟಿ.ಎಸ್. ನಿಂಗಮ್ಮ ಮತ್ತು ಅವರ ಪತಿ ಇಡ್ಲಿ, ದೋಸೆ ಮತ್ತು ಸಾಂಬಾರ್ ಮಾರಾಟ ಮಾಡುವ ಸಣ್ಣ ಉದ್ಯಮವೊಂದನ್ನು ಪ್ರಾರಂಭಿಸಿದರು. ಈ ವ್ಯವಹಾರವು ಉತ್ತಮವಾಗಿ ನಡೆಯತೊಡಗಿತಾದರೂ, ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬಂಡವಾಳದ ಅಗತ್ಯವಿತ್ತು. ಈ ವೇಳೆ ಅವರಿಗೆ ನಗರ ಪ್ರದೇಶದ ಬೀದಿಬದಿ ವ್ಯಾಪಾರಿಗಳಿಗೆ ಮೇಲಾಧಾರ ರಹಿತ ಸಾಲ ನೀಡುವ ‘ಪಿಎಂ ಸ್ವನಿಧಿ’ಯ (ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ) ಬೆಂಬಲ ದೊರೆಯಿತು.

ಮನ್‌ ಕೀ ಬಾತಲ್ಲಿ ರಸ್ತೆ ಬದಿ ಹೋಟೆಲ್‌ ಬಗ್ಗೆ ಪ್ರಸ್ತಾಪ

ಈ ಸಾಲ ಸೌಲಭ್ಯ ಬಳಸಿಕೊಂಡು ನಿಂಗಮ್ಮ ತಳ್ಳುಗಾಡಿಯನ್ನು ಉನ್ನತೀಕರಿಸಿದರು, ಸರಕುಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಪ್ರಾರಂಭಿಸಿದರು ಮತ್ತು ಹೊಸ ತಿನಿಸುಗಳ ಮಾರಾಟ ಆರಂಭಿಸಿದರು. ಪರಿಣಾಮ ಗ್ರಾಹಕರು ಮತ್ತು ಆದಾಯ ಹೆಚ್ಚಾದಂತೆ, ಕುಟುಂಬದ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಯಿತು.

ಇಂದು ಅವರು ತಮ್ಮ 3 ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಒದಗಿಸಲು ಸಮರ್ಥರಾಗಿದ್ದಾರೆ’ ಎಂದು ಮೋದಿ ಹೇಳಿದರು. ಈ ಮೂಲಕ, ಮಹಿಳೆಯೊಬ್ಬರ ವ್ಯವಹಾರ ವೃದ್ಧಿಯಾದಾಗ ಅವರ ಕುಟುಂಬದ ಭವಿಷ್ಯವೂ ಉನ್ನತಗತಿಯತ್ತ ಸಾಗುತ್ತದೆ ಎಂದು ಪ್ರಧಾನಿ ಪ್ರತಿಪಾದಿಸಿದರು.