ನಗರದ ಸಂಚಾರ ದಟ್ಟಣೆ ಮತ್ತು ಸುರಕ್ಷತೆ ದೃಷ್ಟಿಯಿಂದ, ಬೆಂಗಳೂರಿನ ಪ್ರಮುಖ ಮೇಲ್ಸೇತುವೆಗಳ ಮೇಲೆ ಸರಕು ಸಾಗಾಣಿಕೆ ವಾಹನ, ಆಟೋ ಮತ್ತು ಬೈಕ್‌ಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಪ್ರಾಯೋಗಿಕ ನಿಯಮಕ್ಕೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು (ಸೆ.5): ನಗರದ ಮೂರು ಪ್ರಮುಖ ಮೇಲ್ಸೇತುವೆಗಳಲ್ಲಿ ಸರಕು ಸಾಗಾಣಿಕೆ ಸೇರಿದಂತೆ ಕೆಲ ವಾಹನಗಳ ಸಂಚಾರ ನಿರ್ಬಂಧ ನಿಯಮ ಕಾರ್ಯರೂಪಕ್ಕಿದ ಶುಕ್ರವಾರ ಸಾರ್ವಜನಿಕರಲ್ಲಿ ಗೊಂದಲ ಮೂಡಿದೆ. ವಾಹನ ದಟ್ಟಣೆ ನಿವಾರಣೆ ಹಾಗೂ ಜನರ ಸುರಕ್ಷತೆ ಹಿನ್ನೆಲೆಯಲ್ಲಿ ಮೇಲ್ಸೇತುವೆಗಳಲ್ಲಿ ಸರಕು ಸಾಗಾಣಿಕೆ, ಪ್ರಯಾಣಿಕರ ಆಟೋ ಹಾಗೂ ಬೈಕ್‌ಗಳಿಗೆ ಸಂಚಾರ ವಿಭಾಗದಿಂದ ಬ್ರೇಕ್ ಹಾಕಿದ್ದಾರೆ. ಆ ನಿಯಮಕ್ಕೆ ಅನುಷ್ಠಾನಗೊಂಡ ಪ್ರಥಮ ದಿನ ಕೆಲವು ಕಡೆ ನಾಗರಿಕರ ಆಕ್ಷೇಪ ವ್ಯಕ್ತಪಡಿಸಿದರೆ, ಇನ್ನು ಕೆಲವೆಡೆ ಸಾರ್ವಜನಿಕರು ಕಾನೂನು ಪಾಲಿಸಿ ಬೆಂಬಲಿಸಿದ್ದಾರೆ.

ಈ ಸಂಬಂಧ ‘ಕನ್ನಡಪ್ರಭ’ ಜತೆ ಮಾತನಾಡಿದ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಕಾರ್ತಿಕ್‌ ರೆಡ್ಡಿ ಅವರು, ಜನರ ಸುರಕ್ಷತೆ ಸಲುವಾಗಿಯೇ ಮೇಲ್ಸೇತುವೆಗಳ ಸಂಚಾರ ವ್ಯವಸ್ಥೆಯನ್ನು ಪರಿಷ್ಕರಿಸಲಾಗಿದೆ ಎಂದರು.

ದೆಹಲಿ ಹಾಗೂ ಹೈದರಾಬಾದ್‌ ನಗರಗಳಲ್ಲಿ ಮೇಲ್ಸೇತುವೆಗಳಲ್ಲಿ ದ್ವಿಚಕ್ರ ವಾಹನಗಳ ಓಡಾಟಕ್ಕೆ ಸಂಪೂರ್ಣ ನಿಷೇಧವಿದೆ. ಆ ನಿಯಮವನ್ನು ನಾವು ಈಗ ಅನುಸರಿಸುತ್ತಿದ್ದೇವೆ. ನಾಗರಿಕರ ಸುರಕ್ಷತೆ ಹಾಗೂ ಸಂಚಾರ ದಟ್ಟಣೆ ನಿವಾರಣೆಗೆ ಮೇಲ್ಸೇತುವೆಗಳಲ್ಲಿ ಸರಕು ಸಾಗಾಣಿಕೆ ಸೇರಿ ಕೆಲ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಲಾಗಿದೆ ಎಂದು ಹೇಳಿದರು.

ಮೈಸೂರು ರಸ್ತೆಯ ಬಿಜಿಎಸ್‌ ಮೇಲ್ಸೇತುವೆಯಲ್ಲಿ ಭಾರಿ ಸರಕು ಸಾಗಾಣಿಕೆ ವಾಹನಗಳ ಸಂಪೂರ್ಣ ನಿರ್ಬಂಧಕ್ಕೆ ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲ. ಆ ರಸ್ತೆಯಲ್ಲಿ ಬೆಳಗ್ಗೆ 7 ಗಂಟೆ ನಂತರ ಸರಕು ಸಾಗಾಣಿಕೆ ವಾಹನಗಳ ಓಡಾಟವು ವಿರಳವಾಗಿರುತ್ತದೆ. ಅದೇ ರೀತಿ ಪೀಣ್ಯ ಮೇಲ್ಸೇತುವೆಯಲ್ಲಿ ಕೂಡ ಬೈಕ್‌ ಹಾಗೂ ಆಟೋಗಳ ನಿರ್ಬಂಧದಿಂದ ಸಂಚಾರ ವ್ಯವಸ್ಥೆ ಮೇಲೆ ಹೆಚ್ಚಿನ ಪರಿಣಾಮ ಉಂಟಾಗಿ ನಾಗರಿಕರಿಗೆ ತೊಂದರೆಯಾಗಿಲ್ಲ. ಆದರೆ ವಿಮಾನ ನಿಲ್ದಾಣದ ರಸ್ತೆಯಲ್ಲಿ ಬೈಕ್‌ಗಳ ಓಡಾಟ ನಿರ್ಬಂಧಿಸಿದ ವಿಚಾರ ಜನರಿಗೆ ಮಾಹಿತಿ ಕೊರೆತೆಯಿಂದ ಸಮಸ್ಯೆಯಾಗಿತ್ತು ಎಂದು ಹೇಳಿದರು.

ಹೀಗಾಗಿ ಮೇಲ್ಸೇತುವೆಗಳ ವಾಹನ ನಿಷೇಧ ಕುರಿತು ಹೆಚ್ಚು ಪ್ರಚಾರ ನಡೆಸಲಾಗುತ್ತದೆ. ಆ ಮೇಲ್ಸೇತುವೆಗಳಿಗೆ 200 ಮೀಟರ್ ಅಂತರಲ್ಲಿ ಪರ್ಯಾಯ ಮಾರ್ಗ ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತದೆ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಸಮಯಬೇಕಾಗುತ್ತದೆ ಎಂದು ತಿಳಿಸಿದರು.

ಸರಕು ಸಾಗಾಣಿಕೆ ಸೇರಿ ಕೆಲ ವಾಹನಗಳ ನಿರ್ಬಂಧಿಸಿದ ಬಳಿಕ ಮೇಲ್ಸೇತುವೆಗಳ ವ್ಯಾಪ್ತಿ ಸಂಚಾರ ವ್ಯವಸ್ಥೆ ಮೇಲಿನ ಪರಿಣಾಮ ಕುರಿತು ಅವಲೋಕಿಸಲಾಗುತ್ತದೆ. ಮೂರು ದಿನಗಳು ಈ ಪ್ರಾಯೋಗಿಕ ಅಧ್ಯಯನ ನಡೆಯಲಿದ್ದು, ನಂತರ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.

ಸೆ.11ರ ಬಳಿಕ ಎಲೆಕ್ಟ್ರಾನಿಕ್ ಸಿಟೀಲಿ ಬೈಕ್‌ಗೆ ನಿರ್ಬಂಧ

ಎಲೆಕ್ಟ್ರಾನಿಕ್ ಮೇಲ್ಸೇತುವೆಯಲ್ಲಿ ಸರಕು ಸಾಗಾಣಿಕೆ ಹಾಗೂ ಬೈಕ್‌ಗಳಿಗೆ ನಿರ್ಬಂಧವು ಸೆ.11 ರಿಂದ ಜಾರಿಯಾಗಲಿದೆ. ತಾಂತ್ರಿಕ ಸಮಸ್ಯೆ ಹಿನ್ನಲೆಯಲ್ಲಿ ಆ ಮೇಲ್ಸೇತುವೆಯಲ್ಲಿ ದಿನಾಂಕ ಮುಂದೂಡಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.