ರಸ್ತೆಯಲ್ಲಿ ವಾಹನ ತಪಾಸಣೆ ಮಾಡುವಾಗ ಸಂಚಾರ ಪೊಲೀಸ್ ಮತ್ತು ಆರ್‌ಟಿಒ ಅಧಿಕಾರಿಗಳ ಅಧಿಕಾರಗಳಲ್ಲಿ ವ್ಯತ್ಯಾಸವಿದೆ. ಸಂಚಾರ ಪೊಲೀಸರು ನಿಯಮ ಉಲ್ಲಂಘನೆ ಪರಿಶೀಲಿಸಿದರೆ, ಆರ್‌ಟಿಒ ಅಧಿಕಾರಿಗಳು ವಾಹನದ ತಾಂತ್ರಿಕ ಮತ್ತು ಕಾನೂನುಬದ್ಧ ದಾಖಲೆಗಳನ್ನು ತನಿಖೆ ಮಾಡುತ್ತಾರೆ. ಈ ವೇಳೆ, ಚಾಲಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದಿರುವುದು ಮುಖ್ಯ.

ರಸ್ತೆಯಲ್ಲಿ ಪ್ರಯಾಣಿಸುವಾಗ ಬಿಳಿ ಅಥವಾ ಖಾಕಿ ಸಮವಸ್ತ್ರ ಧರಿಸಿದ ಅಧಿಕಾರಿಗಳು ವಾಹನ ನಿಲ್ಲಿಸಲು ಸನ್ನೆ ಮಾಡಿದಾಗ ಎಷ್ಟೋ ಜನರಿಗೆ ಸಣ್ಣದೊಂದು ಭಯ ಕಾಡುವುದು ಸಹಜ. ವಾಹನದ ಎಲ್ಲಾ ದಾಖಲೆಗಳು ಸರಿಯಿದ್ದರೂ, ನಮ್ಮನ್ನು ತಡೆದು ನಿಲ್ಲಿಸಿದವರು ಟ್ರಾಫಿಕ್ ಪೊಲೀಸರೇ ಅಥವಾ ಆರ್‌ಟಿಒ (RTO) ಅಧಿಕಾರಿಗಳೇ? ಯಾರಿಗೆ ಏನು ಅಧಿಕಾರವಿದೆ? ಎಂಬ ಗೊಂದಲ ಪ್ರತಿಯೊಬ್ಬ ವಾಹನ ಸವಾರರಲ್ಲೂ ಇರುತ್ತದೆ. ಈ ಇಬ್ಬರೂ ಅಧಿಕಾರಿಗಳ ಕರ್ತವ್ಯಗಳು ಮತ್ತು ಅಧಿಕಾರಗಳು ಸಂಪೂರ್ಣವಾಗಿ ಭಿನ್ನವಾಗಿವೆ.

ಸಂಚಾರ ಪೊಲೀಸ್ ಮತ್ತು ಆರ್‌ಟಿಒ (RTO) ನಡುವಿನ ವ್ಯತ್ಯಾಸ!

ಸಂಚಾರ ಪೊಲೀಸರು; ರಸ್ತೆಗಳಲ್ಲಿ ಸಂಚಾರವನ್ನು ಸುಗಮವಾಗಿ ನಿರ್ವಹಿಸುವುದು ಮತ್ತು ಸಂಚಾರ ನಿಯಮಗಳ ಪಾಲನೆಯನ್ನು ನೋಡಿಕೊಳ್ಳುವುದು ಇವರ ಮುಖ್ಯ ಕೆಲಸ. ಹೆಲ್ಮೆಟ್, ಸೀಟ್‌ಬೆಲ್ಟ್ ಧರಿಸದಿರುವುದು, ಸಿಗ್ನಲ್ ಜಂಪ್, ಅತಿ ವೇಗ ಹಾಗೂ ತಪ್ಪು ದಿಕ್ಕಿನಲ್ಲಿ ಚಾಲನೆ ಮಾಡುವಂತಹ ನಿಯಮ ಉಲ್ಲಂಘನೆಗಳಿಗೆ ಇವರು ದಂಡ ವಿಧಿಸಬಹುದು.

ಆರ್‌ಟಿಒ (ಸಾರಿಗೆ ಇಲಾಖೆ) ಅಧಿಕಾರಿಗಳು; ಇವರು ವಾಹನದ ತಾಂತ್ರಿಕ ಹಾಗೂ ಕಾನೂನುಬದ್ಧ ನಿಯಮಗಳನ್ನು ಪರಿಶೀಲಿಸುತ್ತಾರೆ. ವಾಹನ ನೋಂದಣಿ (RC), ಚಾಲನಾ ಪರವಾನಗಿ (DL), ವಾಹನದ ಫಿಟ್‌ನೆಸ್, ವಾಣಿಜ್ಯ ವಾಹನಗಳ ಪರ್ಮಿಟ್ ಮತ್ತು ತೆರಿಗೆ ಪಾವತಿಯನ್ನು ತನಿಖೆ ಮಾಡುವ ಅಧಿಕಾರ ಇವರಿಗಿರುತ್ತದೆ.

ನಿಮ್ಮ ವಾಹನವನ್ನು ತಡೆದು ಏನೆಲ್ಲಾ ಪರಿಶೀಲಿಸಬಹುದು?

ಮೋಟಾರು ವಾಹನ ಕಾಯ್ದೆಯಡಿ, ಅಧಿಕಾರಿಗಳು ನಿಯಮಗಳ ಜಾರಿಗೆ ವಾಹನಗಳನ್ನು ತಡೆಯಬಹುದು.

ಟ್ರಾಫಿಕ್ ಪೊಲೀಸರು ಪರಿಶೀಲಿಸುವ ವಿಷಯಗಳು; ಮಾನ್ಯ ಚಾಲನಾ ಪರವಾನಗಿ (DL), ಆರ್‌ಸಿ (RC), ವಾಹನ ವಿಮೆ (Insurance) ಮತ್ತು ಪಿಯುಸಿ (PUC - ಮಾಲಿನ್ಯ ಪ್ರಮಾಣಪತ್ರ). ಜೊತೆಗೆ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಅಥವಾ ಸಂಚಾರ ನಿಯಮ ಉಲ್ಲಂಘನೆಯಾಗಿದೆಯೇ ಎಂದು ಪರಿಶೀಲಿಸುತ್ತಾರೆ.

RTO ಅಧಿಕಾರಿಗಳು ಪರಿಶೀಲಿಸುವ ವಿಷಯಗಳು; ವಾಹನವು ಮೋಟಾರು ವಾಹನ ಕಾಯ್ದೆಗೆ ಬದ್ಧವಾಗಿದೆಯೇ, ವಿಶೇಷವಾಗಿ ವಾಣಿಜ್ಯ ವಾಹನಗಳ ಫಿಟ್‌ನೆಸ್, ಪರ್ಮಿಟ್ ಮತ್ತು ತೆರಿಗೆ ಸರಿಯಾಗಿದೆಯೇ ಎಂದು ತಾಂತ್ರಿಕವಾಗಿ ತನಿಖೆ ಮಾಡುತ್ತಾರೆ. ಗಂಭೀರ ನಿಯಮ ಉಲ್ಲಂಘನೆ ಕಂಡುಬಂದರೆ ವಾಹನವನ್ನು ವಶಕ್ಕೆ ಪಡೆಯುವ ಅಧಿಕಾರವೂ RTO ಗೆ ಇರುತ್ತದೆ.

ಪ್ರತಿಯೊಬ್ಬ ಅಧಿಕಾರಿಯೂ ಚಲನ್ ನೀಡಬಹುದೇ?

ಖಂಡಿತ ಇಲ್ಲ! ಮೋಟಾರು ವಾಹನ ಕಾಯ್ದೆಯ ಪ್ರಕಾರ, ಎಎಸ್ಐ (ASI) ಅಥವಾ ಅದಕ್ಕಿಂತ ಹೆಚ್ಚಿನ ಶ್ರೇಣಿಯ ಅಧಿಕಾರಿಗ ಮಾತ್ರ ಸ್ಥಳದಲ್ಲೇ ಚಲನ್ ನೀಡುವ ಅಧಿಕಾರವಿದೆ. ಕಾನ್‌ಸ್ಟೆಬಲ್‌ಗಳು ಅಥವಾ ಗೃಹರಕ್ಷಕರು (Home Guards) ವಾಹನವನ್ನು ನಿಲ್ಲಿಸಲು ಸಹಾಯ ಮಾಡಬಹುದೇ ಹೊರತು, ನೇರವಾಗಿ ಚಲನ್ ನೀಡಲು ಅಥವಾ ವಾಹನದ ಕೀಲಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವರಿಗೆ ಕಾನೂನಿನಲ್ಲಿ ಅವಕಾಶವಿಲ್ಲ.

ತಪಾಸಣೆ ವೇಳೆ ವಾಹನ ಸವಾರರಿಗಿರುವ 4 ಪ್ರಮುಖ ಹಕ್ಕುಗಳು!

1. ಕೀಲಿ ತೆಗೆಯುವಂತಿಲ್ಲ; ಯಾವುದೇ ಪೊಲೀಸ್ ಅಧಿಕಾರಿಯಾಗಲಿ ನಿಮ್ಮ ಬೈಕ್ ಅಥವಾ ಕಾರಿನ ಕೀಲಿಯನ್ನು ಬಲವಂತವಾಗಿ ಕಸಿಯುವುದು ಕಾನೂನುಬಾಹಿರ.

2. ಡಿಜಿಟಲ್ ದಾಖಲೆಗಳು ಮಾನ್ಯ; ಸರ್ಕಾರಿ ನಿಯಮಾವಳಿಗಳ ಪ್ರಕಾರ DigiLocker ಅಥವಾ mParivahan ಆ್ಯಪ್ ಮೂಲಕ ನಿಮ್ಮ DL, RC ಅಥವಾ ವಿಮೆ ತೋರಿಸಿದರೆ ಅಧಿಕಾರಿಗಳು ಅದನ್ನು ಸ್ವೀಕರಿಸಲೇಬೇಕು. ಭೌತಿಕ ಪ್ರತಿಯನ್ನೇ ನೀಡಬೇಕೆಂದು ಒತ್ತಾಯಿಸುವಂತಿಲ್ಲ.

3. ಐಡಿ ಕಾರ್ಡ್ ಕೇಳುವ ಹಕ್ಕು; ಅಧಿಕಾರಿಯ ಬಗ್ಗೆ ಅನುಮಾನ ಬಂದಲ್ಲಿ ಅವರ ಹೆಸರು ಮತ್ತು ಗುರುತಿನ ಚೀಟಿಯನ್ನು (ID Card) ತೋರಿಸಲು ಕೇಳುವ ಸಂಪೂರ್ಣ ಹಕ್ಕು ನಿಮಗಿದೆ.

4. ರಶೀದಿ ಕಡ್ಡಾಯ; ದಂಡ ಪಾವತಿಸಿದ ತಕ್ಷಣ ಅಧಿಕೃತ ಇ-ಚಲನ್ ಅಥವಾ ಸರ್ಕಾರಿ ರಶೀದಿಯನ್ನು ಪಡೆಯಿರಿ. ರಶೀದಿ ಇಲ್ಲದೆ ಯಾವುದೇ ನಗದು ನೀಡಬೇಡಿ.

ರಸ್ತೆಯಲ್ಲಿ ತಪಾಸಣೆ ಎದುರಾದಾಗ ಅನಗತ್ಯವಾಗಿ ವಾದಿಸದೆ, ನಿಯಮಗಳಿಗೆ ಸಹಕರಿಸುವುದು ಹಾಗೂ ನಿಮ್ಮ ಹಕ್ಕುಗಳ ಬಗ್ಗೆ ಅರಿವಿಟ್ಟುಕೊಳ್ಳುವುದು ಸುರಕ್ಷಿತ ಚಾಲನೆಗೆ ಅತ್ಯಗತ್ಯ.