1905ರಲ್ಲಿ ಶಿವನಸಮುದ್ರದಿಂದ ಪಡೆದ ಜಲವಿದ್ಯುತ್‌ನಿಂದ ಬೆಂಗಳೂರು ಭಾರತದಲ್ಲೇ ಮೊದಲ ಬಾರಿಗೆ ಬೀದಿ ದೀಪಗಳನ್ನು ಕಂಡಿತು. ಆರಂಭದಲ್ಲಿ ತಿಂಗಳಿಗೆ 1 ರೂಪಾಯಿ ಶುಲ್ಕದಲ್ಲಿ ಮನೆಗಳಿಗೆ ನೀಡಲಾದ ಈ ವಿದ್ಯುತ್, ನಗರದ ಬೆಳವಣಿಗೆಗೆ ಕಾರಣವಾಗಿ ಇಂದಿನ ತಂತ್ರಜ್ಞಾನ ರಾಜಧಾನಿಯಾಗಿ ರೂಪುಗೊಳ್ಳಲು ಅಡಿಪಾಯ ಹಾಕಿತು.

ಇಂದು ಸ್ವಿಚ್ ಬೋರ್ಡ್‌ ಮೇಲೆ ಬೆರಳಿಟ್ಟರೆ ಸಾಕು, ಕ್ಷಣಾರ್ಧದಲ್ಲಿ ಪ್ರಕಾಶಮಾನ ಬೆಳಕು, ತಿರುಗುವ ಫ್ಯಾನ್‌ಗಳು, ಟಿವಿ, ಮತ್ತು ನಮ್ಮ ಕೈಯಲ್ಲಿರುವ ಗ್ಯಾಜೆಟ್‌ಗಳು ಜೀವ ಪಡೆದುಕೊಳ್ಳುತ್ತವೆ. ನಮಗೆ ವಿದ್ಯುತ್ ಎಂಬುದು ಪ್ರಕೃತಿಯ ಉಸಿರಿನಷ್ಟೇ ತೀರಾ ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಆದರೆ, ಸಮಯದ ಚಕ್ರವನ್ನು ಒಂದು ಶತಮಾನಕ್ಕೂ ಹಿಂದೆ ತಿರುಗಿಸಿ ನೋಡಿ, ಅಂದು ಬೆಂಗಳೂರು ಈಗಿನಂತೆ ಜನಜಂಗುಳಿಯಿಂದ ತುಂಬಿದ ಗಿಜಿಗುಡುವ ಸಿಲಿಕಾನ್ ಸಿಟಿಯಾಗಿರಲಿಲ್ಲ. ಸೂರ್ಯ ಮುಳುಗಿದರೆ ಇಡೀ ನಗರವನ್ನು ಕತ್ತಲೆಯ ಹೊದಿಕೆ ಆವರಿಸಿಕೊಳ್ಳುತ್ತಿತ್ತು, ಸೀಮೆಎಣ್ಣೆ, ಲ್ಯಾಂಟನ್ ದೀಪಗಳ ಹಳದಿ ಬೆಳಕಿನಲ್ಲಿ ದಿನ ಕಳೆಯುತ್ತಿದ್ದ ಕಾಲವದು!

ಅಂತಹ ದಿನಗಳಲ್ಲಿ, 1905 ರ ಆಗಸ್ಟ್ ತಿಂಗಳ ಒಂದು ಸಂಜೆ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯ ಬಳಿಯ ‘ಸಿದ್ದಿಕಟ್ಟೆ’ ಪ್ರದೇಶದಲ್ಲಿ ಕೌತುಕದ ವಾತಾವರಣವಿತ್ತು. ಹತ್ತಾರು ಜನರು ಕುತೂಹಲದಿಂದ ನೆರೆದಿದ್ದರು. ಇದ್ದಕ್ಕಿದ್ದಂತೆ ಕಂಬದ ಮೇಲಿದ್ದ ಗಾಜಿನ ಗೋಲದೊಳಗೆ ಬೆಳಕು ಚಿಮ್ಮಿ, ಇಡೀ ರಸ್ತೆ ಜಗಮಗಿಸಿತು! ಭಾರತದಲ್ಲೇ ಪ್ರಥಮ ಬಾರಿಗೆ ಜಲವಿದ್ಯುತ್‌ನಿಂದ ನಗರವೊಂದರ ಬೀದಿ ದೀಪಗಳು ಬೆಳಗಿದ ಆ ಕ್ಷಣ, ಬೆಂಗಳೂರಿನ ಭವಿಷ್ಯವನ್ನೇ ಬದಲಾಯಿಸಿಬಿಟ್ಟಿತ್ತು.

ಕೆಜಿಎಫ್ ಚಿನ್ನದ ಗಣಿಗಾಗಿ ಹುಟ್ಟಿದ ವಿದ್ಯುತ್

ಬೆಂಗಳೂರಿಗೆ ವಿದ್ಯುತ್ ಬಂದ ಈ ರೋಚಕ ಪಯಣದ ಹಿಂದೆ ಒಂದು ಅಪೂರ್ವ ಕಥೆಯಿದೆ. ನಗರದಿಂದ ನೂರಾರು ಕಿಲೋಮೀಟರ್ ದೂರದಲ್ಲಿದ್ದ ಕೋಲಾರದ ಚಿನ್ನದ ಗಣಿಗಳಲ್ಲಿ ಭೂಮಿಯ ಒಳಗೆ ಕೆಲಸ, ಕಾರ್ಯಾಚರಣೆ ನಡೆಸಲು ಬ್ರಿಟಿಷರಿಗೆ ಭಾರಿ ಪ್ರಮಾಣದ ವಿದ್ಯುತ್ ಅಗತ್ಯವಿತ್ತು. ಅದಕ್ಕಾಗಿ ಕಾವೇರಿ ನದಿಯ ಶಿವನಸಮುದ್ರದಲ್ಲಿ ಏಷ್ಯಾದ ಮೊದಲ ಪ್ರಮುಖ ಜಲವಿದ್ಯುತ್ ಸ್ಥಾವರವನ್ನು ಸ್ಥಾಪಿಸಲಾಯಿತು. ಕೆಜಿಎಫ್‌ಗೆ ಹರಿಯುತ್ತಿದ್ದ ಅದೇ ವಿದ್ಯುತ್ ಮಾರ್ಗದಿಂದ, ಕಾಲಕ್ರಮೇಣ ಬೆಂಗಳೂರಿಗೂ ಸಂಪರ್ಕ ಕಲ್ಪಿಸಲಾಯಿತು.

ಒಂದೇ ಒಂದು ಬಲ್ಬ್‌ಗೆ ತಿಂಗಳಿಗೆ 1 ರೂಪಾಯಿ!

ಬೀದಿ ದೀಪಗಳ ಯಶಸ್ಸಿನ ನಂತರ, ವಿದ್ಯುತ್ ಕೇವಲ ರಸ್ತೆಗಳಿಗೆ ಸೀಮಿತವಾಗಿ ಉಳಿಯಲಿಲ್ಲ. ನಿಧಾನವಾಗಿ ಶ್ರೀಮಂತರು ಹಾಗೂ ಉತ್ಸಾಹಿ ನಿವಾಸಿಗಳು ಗೃಹ ಸಂಪರ್ಕ ಪಡೆಯಲು ಮುಂದೆ ಬಂದರು. ಅಂದಿನ ಕಾಲದಲ್ಲಿ ಮನೆಯಲ್ಲಿ ಒಂದೇ ಒಂದು ವಿದ್ಯುತ್ ಬಲ್ಬ್ ಬಳಸಲು ಮಾಸಿಕ 1 ರೂಪಾಯಿ ನಿಗದಿತ ಶುಲ್ಕ ಪಾವತಿಸಬೇಕಿತ್ತು!

1900 ರ ದಶಕದ ಆರಂಭದಲ್ಲಿ 1 ರೂಪಾಯಿ ಎಂಬುದು ಸಣ್ಣ ಮೊತ್ತವಾಗಿರಲಿಲ್ಲ. ಹಾಗಾಗಿ ವಿದ್ಯುತ್ ಸಂಪರ್ಕವು ಪ್ರತಿಯೊಬ್ಬರಿಗೂ ಸಿಗುವ ಸಾಮಾನ್ಯ ಸೇವೆಯಾಗಿರದೆ, ಒಂದು ಅತ್ಯುನ್ನತ ಐಷಾರಾಮಿ ಸಂಕೇತವಾಗಿತ್ತು. ಅಂದಿನ 1 ರೂ ಅಂದರೆ ಈಗಿನ ಮೌಲ್ಯ ಸರಿಸುಮಾರು 3,000 ರೂ. ಆದಾಗ್ಯೂ, ತಂತ್ರಜ್ಞಾನದ ಈ ಅದ್ಭುತವನ್ನು ಕಂಡ ಬೆಂಗಳೂರಿಗರು ಅತ್ಯಂತ ವೇಗವಾಗಿ ಇದನ್ನು ಅಳವಡಿಸಿಕೊಂಡರು. ಪರಿಣಾಮವಾಗಿ, ಕೇವಲ ಒಂದೇ ವರ್ಷದಲ್ಲಿ ಅಂದರೆ ಜೂನ್ 1906 ರ ವೇಳೆಗೆ ಬೆಂಗಳೂರಿನಲ್ಲಿ 1639 ಮನೆಗಳು ವಿದ್ಯುತ್ ಸಂಪರ್ಕಗಕ್ಕೆ ಬೇಡಿಕೆ ಇಟ್ಟು ಪಡೆದುಕೊಂಡವು!

ಬೆಳೆಯುತ್ತಿರುವ ನಗರಕ್ಕೆ ಹೊಚ್ಚ ಹೊಸ ಭರವಸೆ:

ಅಂದಿನ ಕಾಲದಲ್ಲಿ ಬ್ರಿಟಿಷ್ ಕಂಟೋನ್ಮೆಂಟ್ ಮತ್ತು ಹಳೆಯ ಪೇಟೆ ಪ್ರದೇಶಗಳು ಹೊಸ ರಸ್ತೆ ಹಾಗೂ ಸಂಸ್ಥೆಗಳೊಂದಿಗೆ ವಿಸ್ತರಿಸುತ್ತಿದ್ದವು. ಈ ಬೆಳವಣಿಗೆಗೆ ವಿದ್ಯುತ್ ಎಂಬುದು ಹೊಸ ಇಂಧನವಾಗಿ ಸಿಕ್ಕಿತು. ಸೀಮೆಎಣ್ಣೆ ದೀಪಗಳ ಹೊಗೆಯಿಂದ ಮುಕ್ತಿ ಪಡೆದ ನಗರ, ತಾಂತ್ರಿಕ ಉನ್ನತಿಗೆ ಅಡಿಪಾಯ ಹಾಕಿತು.

ಒಂದು ಶತಮಾನಕ್ಕೂ ಹೆಚ್ಚು ಕಾಲದ ನಂತರ, ಇಡೀ ಜಗತ್ತಿಗೆ ತಂತ್ರಜ್ಞಾನದ ಸೇವೆ ನೀಡುವ ಜಾಗತಿಕ ಹಬ್ ಆಗಿ ಬೆಂಗಳೂರು ಬೆಳೆದು ನಿಂತಿದೆ. ಕೋಟಿ ಕೋಟಿ ಜನರು, ಲಕ್ಷಾಂತರ ಕೈಗಾರಿಕೆಗಳು ಇಂದು ನಿರಂತರ ವಿದ್ಯುತ್ ಸರಬರಾಜನ್ನು ನೆಚ್ಚಿಕೊಂಡಿವೆ. ಆದರೆ, ಈ ಬೃಹತ್ ‘ಬೆಳಕಿನ ಸಾಮ್ರಾಜ್ಯ’ದ ಆರಂಭ ಮಾತ್ರ ಶಿವನಸಮುದ್ರದ ಕಾವೇರಿ ನೀರಿನಲ್ಲಿ ಹುಟ್ಟಿ, ತಿಂಗಳಿಗೆ 1 ರೂಪಾಯಿ ವೆಚ್ಚದ ಆ ಒಂದೇ ಒಂದು ವಿದ್ಯುತ್ ಬಲ್ಬ್‌ನಿಂದ ಶುರುವಾಗಿತ್ತು ಎಂಬುದು ನಿಜಕ್ಕೂ ರೋಮಾಂಚಕಾರಿ ಇತಿಹಾಸ!