ಬೆಂಗಳೂರಿನ ಪಿಂಕ್ ಲೈನ್ ಮೆಟ್ರೋ ಮಾರ್ಗದ 'ತಾವರೆಕೆರೆ ಮೆಟ್ರೋ ನಿಲ್ದಾಣ'ಕ್ಕೆ 'ಬಿಸ್ಮಿಲ್ಲಾ ನಗರ' ಎಂದು ಮರುನಾಮಕರಣ ಮಾಡುವಂತೆ ಸ್ಥಳೀಯರು ಬಿಎಂಆರ್‌ಸಿಎಲ್‌ಗೆ ಮನವಿ ಸಲ್ಲಿಸಿದ್ದಾರೆ. ನಿಲ್ದಾಣದ ಸುತ್ತಮುತ್ತ ಬಿಸ್ಮಿಲ್ಲಾ ನಗರವೇ ಪ್ರಮುಖ ಪ್ರದೇಶವಾಗಿದ್ದು, ಸ್ಥಳೀಯ ಗುರುತಿಗಾಗಿ ಈ ಬದಲಾವಣೆ ಅಗತ್ಯವೆಂದು ಅವರು ವಾದಿಸಿದ್ದಾರೆ.

ಪಿಂಕ್ ಲೈನ್ ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ಬಸ್ಮಿಲ್ಲಾ ನಗರ ಹೆಸರಿಡಿ; ಬಿಎಂಆರ್‌ಸಿಎಲ್‌ಗೆ ಸ್ಥಳೀಯರ ಮನವಿ!

ಬೆಂಗಳೂರು (ಸೆ.14): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಹುನಿರೀಕ್ಷಿತ ನಮ್ಮ ಮೆಟ್ರೋ ಗುಲಾಬಿ ಮಾರ್ಗ (Pink Line) ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲು ಸಜ್ಜಾಗುತ್ತಿರುವ ಬೆನ್ನಲ್ಲೇ, ನಿಲ್ದಾಣದ ಹೆಸರಿನ ವಿಚಾರವಾಗಿ ಹೊಸ ಚರ್ಚೆಯೊಂದು ಶುರುವಾಗಿದೆ. ಕಾಳೇನ ಅಗ್ರಹಾರದಿಂದ ಸಂಪರ್ಕ ಕಲ್ಪಿಸುವ ಈ ಮಾರ್ಗದ 'ತಾವರೆಕೆರೆ ಮೆಟ್ರೋ ನಿಲ್ದಾಣ'ಕ್ಕೆ ‘ಬಿಸ್ಮಿಲ್ಲಾ ನಗರ ಮೆಟ್ರೋ ನಿಲ್ದಾಣ’ ಅಥವಾ 'ಬಿಸ್ಮಿಲ್ಲಾ ನಗರ-ತಾವರೆಕೆರೆ' ಎಂದು ಮರುನಾಮಕರಣ ಮಾಡಬೇಕೆಂಬ ಕೂಗು ಕೇಳಿಬಂದಿದೆ.

BMRCL ಎಂಡಿಗೆ ಸ್ಥಳೀಯರಿಂದ ಮನವಿ:

ಬಿಸ್ಮಿಲ್ಲಾ ನಗರದ ಸ್ಥಳೀಯ ಮುಸ್ಲಿಂ ನಿವಾಸಿಗಳು ಹಾಗೂ ಪ್ರಮುಖ ಮುಖಂಡರು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ವ್ಯವಸ್ಥಾಪಕ ನಿರ್ದೇಶಕರಾದ ಪಿ.ಸಿ. ಜಾಫರ್ ಅವರನ್ನು ಖುದ್ದು ಭೇಟಿಯಾಗಿ ಈ ಸಂಬಂಧ ಔಪಚಾರಿಕ ಮನವಿ ಪತ್ರ ಸಲ್ಲಿಸಿದ್ದಾರೆ.

ಬೇಡಿಕೆಗೆ ಕಾರಣವೇನು?

ಮನವಿ ಸಲ್ಲಿಸಿದ ನಿಯೋಗವು, 'ತಾವರೆಕೆರೆ ಮೆಟ್ರೋ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಸ್ಮಿಲ್ಲಾ ನಗರವೇ ಪ್ರಮುಖವಾಗಿದ್ದು, ಇಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಹೆಚ್ಚಾಗಿದೆ. ಪ್ರತಿದಿನ ಸಾವಿರಾರು ಸ್ಥಳೀಯ ನಿವಾಸಿಗಳು ಈ ನಿಲ್ದಾಣವನ್ನೇ ಅವಲಂಬಿಸಲಿದ್ದಾರೆ. ಆದ್ದರಿಂದ ಸ್ಥಳೀಯರ ಗುರುತಿಗಾಗಿ ಮತ್ತು ಸುಲಭ ಗುರುತಿಸುವಿಕೆಗಾಗಿ ಈ ನಿಲ್ದಾಣಕ್ಕೆ 'ಬಿಸ್ಮಿಲ್ಲಾ ನಗರ' ಎಂದು ಮರುನಾಮಕರಣ ಮಾಡಬೇಕು ಅಥವಾ 'ಬಿಸ್ಮಿಲ್ಲಾ ನಗರ-ತಾವರೆಕೆರೆ' ಎಂದು ಜಂಟಿ ಹೆಸರನ್ನಿಡಬೇಕು' ಎಂದು ತಮ್ಮ ಬೇಡಿಕೆಯನ್ನು ಮುಂದಿಟ್ಟಿದೆ.

ಶೀಘ್ರದಲ್ಲೇ ಗುಲಾಬಿ ಮಾರ್ಗ ಲೋಕಾರ್ಪಣೆ:

ಕಾಳೇನ ಅಗ್ರಹಾರದಿಂದ ತಾವರೆಕೆರೆ ಮೂಲಕ ಹಾದುಹೋಗುವ ಈ ಮಾರ್ಗದ ಕಾಮಗಾರಿಗಳು ಅಂತಿಮ ಹಂತ ತಲುಪಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ರೈಲು ಸಂಚಾರ ಆರಂಭವಾಗುವ ನಿರೀಕ್ಷೆಯಿದೆ. ಆದರೆ, ಉದ್ಘಾಟನೆಯ ಹೊಸ್ತಿಲಲ್ಲೇ ನಿಲ್ದಾಣದ ಮರುನಾಮಕರಣದ ಈ ಬೇಡಿಕೆ ಮುನ್ನೆಲೆಗೆ ಬಂದಿರುವುದು ಸಾರ್ವಜನಿಕ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳಿಗೆ ದಾರಿಮಾಡಿಕೊಟ್ಟಿದೆ. ಈ ಮನವಿಗೆ ಬಿಎಂಆರ್‌ಸಿಎಲ್ ಆಡಳಿತ ಮಂಡಳಿ ಯಾವ ರೀತಿ ಸ್ಪಂದಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.