ಪಾಕಿಸ್ತಾನದಲ್ಲಿ ಲಾಕ್‌ಡೌನ್ ರೀತಿಯ ನೀತಿಗಳು ಜಾರಿಯಾಗಿದೆ. ಹೊಸ ಕಾರು ಖರೀದಿ ಬ್ಯಾನ್ ಮಾಡಲಾಗಿದೆ. ಮದುವೆಯಲ್ಲಿ 10, 20 ಬಗೆಯ ಅಡುಗೆ ಮಾಡುವಂತಿಲ್ಲ, ಕೇವಲ ಒಂದೇ ಅಡುಗೆ ಮಾತ್ರ. ಧಿಡೀರ್ ಪಾಕ್ ಪರಿಸ್ಥಿತಿ ಹೀಗಾಗಿದ್ದೇಕೆ?

ಕರಾಚಿ (ಸೆ.18) ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿಯನ್ನು ಬಿಡಿಸಿ ಹೇಳಬೇಕಾಗಿಲ್ಲ. ಉಗ್ರರ ಪೋಷಕರಣೆ, ಶಸ್ತ್ರಾಸ್ತ್ರ ಖರೀದಿಗೆ ಹೆಚ್ಚಿನ ಹಣ ಮೀಸಲಿಟ್ಟಿದೆ. ಇದೀಗ ಪಾಕಿಸ್ತಾನದಲ್ಲಿ ಲಾಕ್‌ಡೌನ್ ರೀತಿಯ ಪರಿಸ್ಥಿತಿ ತಲೆದೋರಿದೆ. ಶೆಬಬಾಜ್ ಷರೀಫ್ ಸರ್ಕಾರ ಪರಿಸ್ಥಿತಿ ನಿಯಂತ್ರಿಸಲು ಹಲವು ನಿಯಮ ಜಾರಿಗೊಳಿಸಿದೆ. ಮದುವೆ ಸಮಾರಂಭದಲ್ಲಿ ಹಲವು ರೀತಿಯ ತಿನಿಸು, ಭಕ್ಷ್ಯಗಳನ್ನು ಮಾಡುವಂತಿಲ್ಲ.ಮೆನು ಲಿಸ್ಟ್‌ಗೆ ನಿರ್ಬಂಧ ಹೇರಲಾಗಿದೆ. ಇನ್ನು ಹೊಸ ಕಾರು ಖರೀದಿಗೆ ಅವಕಾಶವಿಲ್ಲ. ಇದಕ್ಕೆ ಕಾರಣ ತೈಲ ಬಿಕ್ಕಟ್ಟು.

ತೈಲ ಬಿಕ್ಕಟ್ಟಿನಲ್ಲಿ ಪರದಾಡುತ್ತಿದೆ ಪಾಕಿಸ್ತಾನ

ಮಧ್ಯಪ್ರಾಚ್ಯ ದೇಶಗಳ ಯುದ್ಧ ಸಂಘರ್ಷ ಹೆಚ್ಚಾಗುತ್ತಿದೆ. ಹೊರ್ಮುಜ್ ಜಲಸಂಧಿ ಮೂಲಕ ಪಾಕಿಸ್ತಾನದ ಹಡುಗಗಳು ಸಾಗುತ್ತಿಲ್ಲ. ಬಾಬ್ ಇಲ್ ಮಂದೇಬ್ ಜಲಸಂಧಿ ಸೇರಿದಂತೆ ಪ್ರಮುಖ ಜಲ ಸಾರಿಗೆಯಲ್ಲಿ ಹೌಥಿಸ್ ಉಗ್ರರು ದಾಳಿ ಮಾಡಿ ಕೈವಶ ಮಾಡಿದ್ದಾರೆ. ಹೀಗಾಗಿ ಸರಕು ಹಡಗುಗಳು ಸಾಗುತ್ತಿಲ್ಲ. ಇತ್ತ ಪಾಕಿಸ್ತಾನದಲ್ಲಿನ ಸಂಗ್ರಹ ಕೂಡ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅಲ್ಲೊಂದು ಇಲ್ಲೊಂದು ಸರಕು ಹಡಗುಗಳು ಪಾಕಿಸ್ತಾನ ತಲುಪಿದರೂ ಬೇಡಿಕೆ ಪೂರೈಕೆಯಾಗುತ್ತಿಲ್ಲ. ಇದರ ಪರಿಣಾಮ ಪಾಕಿಸ್ತಾನದಲ್ಲಿ ಇಂಧನ ಬಿಕ್ಕಟ್ಟು ತಲೆದೋರಿದೆ. ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನದಲ್ಲಿ ಇದೀಗ ತೈಲವಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ.

ಸರ್ಕಾರಿ ವಾಹನಗಳ ಇಂಧನ ಶೇ.50ರಷ್ಟು ಕಡಿತ

ಇಂಧನ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಪಾಕಿಸ್ತಾನ, ಸರ್ಕಾರಿ ಇಲಾಖೆಗಳು, ಕಚೇರಿಗಳು ಯಾವುದೇ ಹೊಸ ವಾಹನ ಖರೀದಿ ಮಾಡದಂತೆ ಆದೇಶ ಹೊರಡಿಸಿದೆ. ಸರ್ಕಾರಿ ಇಲಾಖೆಗಳಿಗೆ ಹೊಸ ವಾಹನ ಖರೀದಿ ಸಂಪೂರ್ಣ ಬ್ಯಾನ್ ಮಾಡಲಾಗಿದೆ. ಸಾರ್ವಜನಿಕರಿಗೆ ಯಾವುದೇ ನಿರ್ಬಂಧ ಹೇರಿಲ್ಲ. ಆದರೆ ಪೆಟ್ರೋಲ್ ಬೆಲೆ ಗಗನಕ್ಕೇರಿರುವ ಹಿನ್ನಲೆಯಲ್ಲಿ ಕಾರು ಸೇರಿದಂತೆ ವಾಹನ ಇದ್ದವರೇ ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಸರ್ಕಾರಿ ವಾಹನಗಳಿಗೆ ಪ್ರತಿ ತಿಂಗಳು ನೀಡುತ್ತಿದ್ದ ತೈಲವನ್ನು ಶೇಕಡಾ 50ರಷ್ಟು ಇಳಿಕೆ ಮಾಡಲಾಗಿದೆ. ಸಾರ್ವಜನಿಕ ಸಾರಿಗೆಯಲ್ಲಿ ತೆರಳಲು ಅಧಿಕಾರಿಗಳಿಗೆ ಸೂಚನ ನೀಡಲಾಗಿದೆ.

ವಿದೇಶಿ ಪ್ರವಾಸಕ್ಕೆ ಕಡಿವಾಣ, ಮದುವೆ ಊಟಕ್ಕೂ ನಿರ್ಬಂಧ

ಮುಂದಿನ ಮೂರು ತಿಂಗಳು ವಿದೇಶಿ ಪ್ರವಾಸ, ಪ್ರಯಾಣಕ್ಕೆ ಕಡಿವಾಣ ಹಾಕಲು ಸೂಚಿಸಲಾಗಿದೆ. ಅನಿವಾರ್ಯ ಪ್ರಯಾಣ ಹೊರತುಪಡಿಸಿ ಪ್ರವಾಸ, ಸೇರಿದಂತೆ ಇತರ ಪ್ರವಾಸ ಮುಂದೂಡುವಂತೆ ಸೂಚಿಸಲಾಗಿದೆ. ಇಂಧನ ಕೊರತೆಯಿಂದ ಮದುವೆ ಸೇರಿದಂತೆ ಸಮಾರಂಭಗಳಲ್ಲಿ ಹತ್ತು ಹಲವು ತಿನಿಸುಗಳ ಮೆನುಗೆ ನಿರ್ಬಂಧ ಹಾಕಲಾಗಿದೆ. ಕನಿಷ್ಠ ಭಕ್ಷ್ಯಗಳಲ್ಲಿ ಸಮಾರಂಭ ಮುಗಿಸಲು ಸೂಚನೆ ನೀಡಲಾಗಿದೆ.

ರಾತ್ರಿ 9 ಗಂಟಗೆ ಮಾಲ್, ಅಂಗಡಿಗಳು ಕ್ಲೋಸ್

ಶಾಪಿಂಗ್ ಮಾಲ್, ದಿನಸಿ ಅಂಗಡಿ , ಸೂಪರ್ ಮಾರ್ಕೆಟ್ ಸೇರಿದಂತೆ ಹಲವು ಅಂಗಡಿಗಳನ್ನು ರಾತ್ರಿ 9 ಗಂಟೆಗೆ ಮುಚ್ಚಲು ಸೂಚಿಸಲಾಗಿದೆ. ಮದುವೆ ಹಾಲ್, ಇತರ ವಾಣಿಜ್ಯ ಸಮಾರಂಭಗಳ ಹಾಲ್, ಸಭಾಂಗಣಕ್ಕೆ ರಾತ್ರಿ 10 ಗಂಟೆವರೆಗೆ ನಡೆಸಲು ಮಾತ್ರ ಅವಕಾಶ ನೀಡಲಾಗಿದೆ. ಇನ್ನು ರೆಸ್ಟೋರೆಂಟ್, ಹೊಟೆಲ್, ತಿಂಡಿಗಳ ಅಂಗಡಿಗಳನ್ನು ರಾತ್ರಿ 11ಗಂಟೆ ವರೆಗೆ ನಡೆಸಲು ಮಾತ್ರ ಅವಕಾಶ ನೀಡಲಾಗಿದೆ.