ನೇಪಾಳ ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ 955ಕ್ಕೆ ಏರಿಕೆಯಾಗಿದ್ದು, 4000ಕ್ಕೂ ಅಧಿಕ ಜನರು ಕಾಣೆಯಾಗಿದ್ದಾರೆ. ಹೆಣಗಳನ್ನು ಹುಡುಕಲು ಹೋದ ಪೊಲೀಸರಿಗೆ ಬರೋಬ್ಬರಿ 1.5 ಕೋಟಿ ನಗದು ಮತ್ತು 50 ಕೋಟಿ ರೂಪಾಯಿ ಚಿನ್ನ ಸಿಕ್ಕಿದೆ. ಇನ್ನು ಹೆಣಗಳನ್ನು ಸಾಮೂಹಿಕವಾಗಿ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ.

ಕಠ್ಮಂಡು (ಸೆ.01): ನೆರೆಯ ನೇಪಾಳದಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ತತ್ತರಿಸಿರುವ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಪ್ರವಾಹಕ್ಕೆ ಸಾವಿನ ಸಂಖ್ಯೆ 955ಕ್ಕೆ ಏರಿಕೆಯಾಗಿದ್ದು, 4,247ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ (Disaster Management Authority) ತಿಳಿಸಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಪೊಲೀಸರು ಸಾಹಸ ಮೆರೆದು ಬ್ಯಾಂಕ್ ಲಾಕರ್‌ನಲ್ಲಿದ್ದ ಕೋಟ್ಯಂತರ ಮೌಲ್ಯದ ಚಿನ್ನ ಹಾಗೂ ಹಣವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

ಬ್ಯಾಂಕ್ ಲಾಕರ್‌ನಿಂದ ಕೋಟ್ಯಂತರ ನಗದು, ಚಿನ್ನ ರಕ್ಷಣೆ:

ನುವಾಕೋಟ್ ಜಿಲ್ಲೆಯ ತ್ರಿಶೂಲಿ ಡುಂಗೆ ಶಾಖೆಯ 'ಅಗ್ರಿಕಲ್ಚರ್ ಡೆವಲಪ್‌ಮೆಂಟ್ ಬ್ಯಾಂಕ್' ಪ್ರವಾಹದಿಂದ ತೀವ್ರವಾಗಿ ಹಾನಿಗೊಳಗಾಗಿತ್ತು. ಪ್ರವಾಹದ ನೀರು ನುಗ್ಗಿದರೂ ಹೆದರದೆ ಸ್ಥಳಕ್ಕಿಳಿದ ನೇಪಾಳ ಪೊಲೀಸರು, ಸುಮಾರು ಎಂಟು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದಾರೆ. ಬ್ಯಾಂಕ್ ಲಾಕರ್‌ಗಳಲ್ಲಿದ್ದ ಅಂದಾಜು ರೂ. 1.5 ಕೋಟಿ ನಗದು ಹಾಗೂ ರೂ. 50 ಕೋಟಿ ಮೌಲ್ಯದ ಚಿನ್ನವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಇದರೊಂದಿಗೆ ಬ್ಯಾಂಕ್‌ನ ಅತ್ಯಮೂಲ್ಯ ಹಾಗೂ ಗೌಪ್ಯ ದಾಖಲೆಗಳನ್ನು ಸಹ ಪೊಲೀಸರು ಯಶಸ್ವಿಯಾಗಿ ರಕ್ಷಿಸಿದ್ದಾರೆ. ಪೊಲೀಸ್ ಪಡೆಯ ಈ ಸಾಹಸದ ಕಾರ್ಯಾಚರಣೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

955ಕ್ಕೆ ಏರಿದ ಸಾವಿನ ಸಂಖ್ಯೆ, ಸಾಮೂಹಿಕ ಅಂತ್ಯಸಂಸ್ಕಾರ:

ನೇಪಾಳದಲ್ಲಿ ಪ್ರವಾಹ ಮತ್ತು ಭೂಕುಸಿತ ದುರಂತ ಸಂಭವಿಸಿ 6 ದಿನಗಳು ಕಳೆದರೂ ಶೋಧ ಕಾರ್ಯ ಮುಂದುವರಿದಿದೆ. ಈವರೆಗೆ ಪತ್ತೆಯಾದ ಮೃತದೇಹಗಳ ಸಂಖ್ಯೆ 955ಕ್ಕಿಂತ ಹೆಚ್ಚಾಗಿದೆ. ಇನ್ನು ನಾಪತ್ತೆಯಾಗಿರುವವರ ಪೈಕಿ ಅಮೆರಿಕದ ಸುಮಾರು 85 ಪ್ರಜೆಗಳೂ ಸೇರಿದಂತೆ 4,000ಕ್ಕಿಂತ ಹೆಚ್ಚಾಗಿದೆ ಎಂದು ನೇಪಾಳ ಸರ್ಕಾರ ತಿಳಿಸಿದೆ. ಮೃತರ ದೇಹಗಳು ನೀರಿನಲ್ಲಿ ಕೊಳೆತು ಹೋಗಿದ್ದು, ಗುರುತು ಸಿಗದ ಸ್ಥಿತಿಯಲ್ಲಿವೆ. ಕೊಳೆತ ಶವಗಳಿಂದ ಸಾರ್ವಜನಿಕ ಆರೋಗ್ಯಕ್ಕೆ ತೀವ್ರ ಅಪಾಯ ಉಂಟಾಗುವ ಸಾಧ್ಯತೆಯಿರುವುದರಿಂದ, ಅಧಿಕಾರಿಗಳು ಸಾಮೂಹಿಕ ಅಂತ್ಯಸಂಸ್ಕಾರ (Mass Burial) ಮಾಡಲು ನಿರ್ಧರಿಸಿದ್ದಾರೆ.

ಅತಿ ಹೆಚ್ಚು ಬಾಧಿತವಾದ ರುಸುವಾ ಪ್ರದೇಶದಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಚಿತ್ವಾನ್ ಜಿಲ್ಲೆಯ ದೇವ್‌ಘಾಟ್ ಅರಣ್ಯ ಪ್ರದೇಶದಲ್ಲಿ ತಾತ್ಕಾಲಿಕ ಸ್ಮಶಾನಗಳನ್ನು ಸಿದ್ಧಪಡಿಸಲಾಗಿದೆ. ಹಿಂದೆ ಜನರು ಬೆಳಗಿನ ವಾಕಿಂಗ್‌ ಮಾಡುತ್ತಿದ್ದ ಅರಣ್ಯದ ಹಾದಿಗಳನ್ನೇ ಈಗ ಸಾಮೂಹಿಕ ಅಂತ್ಯಸಂಸ್ಕಾರಕ್ಕಾಗಿ ತಾತ್ಕಾಲಿಕ ದಹನ/ಹೂಳುವ ಭೂಮಿಯನ್ನಾಗಿ ಬದಲಾಯಿಸಲಾಗಿದೆ.

Scroll to load tweet…