ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಹಲವಾರು ಮನೆಗಳು ಕುಸಿದರೂ, ಒಂದು ಹಸಿರು ಮನೆ ಮಾತ್ರ ಗಟ್ಟಿಯಾಗಿ ನಿಂತಿತ್ತು. ತಜ್ಞರ ಪ್ರಕಾರ, ಇದು ಕೇವಲ ಪವಾಡವಲ್ಲ, ಬದಲಿಗೆ ಅದರ ಬಲವಾದ ಆರ್‌ಸಿಸಿ ನಿರ್ಮಾಣ, ಮನೆಯ ಸ್ಥಳ ಮತ್ತು ನೀರಿನ ಹರಿವಿನ ದಿಕ್ಕು ಇದರ ಉಳಿವಿಗೆ ಪ್ರಮುಖ ಕಾರಣಗಳಾಗಿವೆ.

ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ, ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ನೀರಿನ ರಭಸಕ್ಕೆ ಮನೆಗಳು ಏಕಾಏಕಿ ಕುಸಿಯುತ್ತಿದ್ದ ದೃಶ್ಯಗಳ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡ್ತಿವೆ. ಇದ್ರಲ್ಲಿ ಒಂದು ವಿಡಿಯೋ ಎಲ್ಲರ ಗಮನ ಸೆಳೆದಿದೆ. ಎಷ್ಟೇ ಪ್ರವಾಹ ಬಂದ್ರೂ, ಕಲ್ಲು, ಮರ, ಮಣ್ಣುಗಳು ಬಡಿದ್ರು ನೀರಿನ ಮಧ್ಯೆ ಮನೆಯೊಂದು ಅಲುಗಾಡದೆ ನಿಂತಿತ್ತು. ಹಸಿರು ಬಣ್ಣದ ಎರಡು ಅಂತಸ್ತಿನ ಮನೆ ಗಟ್ಟಿಯಾಗಿ ನಿಂತಿದ್ದನ್ನು ನೋಡಿ ನೆಟ್ಟಿಗರು ದಂಗಾಗಿದ್ದಾರೆ.

ಗಮನ ಸೆಳೆದ ಹಸಿರು ಮನೆ

ಸಾಮಾಜಿಕ ಜಾಲತಾಣಗಳಲ್ಲಿ ಈ ಮನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ, ಕೆಲವರು ಇದನ್ನು ಪವಾಡ ಎಂದಿದ್ದಾರೆ. ಮತ್ತೆ ಕೆಲವರು ಇದನ್ನು ಹೇಗೆ ಕಟ್ಟಲಾಗಿದೆ, ಇಂಜಿನಿಯರ್‌ ಯಾರು ಎನ್ನುವ ಪ್ರಶ್ನೆಗಳನ್ನು ಕೇಳಿದ್ದಾರೆ. ಈಗ ಅಷ್ಟೊಂದು ಪ್ರವಾಹ ಬಂದ್ರೂ ಗಟ್ಟಿಯಾಗಿ ಮನೆ ನಿಲ್ಲಲ್ಲು ಕಾರಣ ಏನು ಎಂಬುದನ್ನು ತಜ್ಞರು ಚರ್ಚಿಸುತ್ತಿದ್ದಾರೆ.

ಸುತ್ತಮುತ್ತಲಿನ ಮನೆ ಕುಸಿಯಲು ಕಾರಣ ಏನು?

ಫ್ಲ್ಯಾಶ್ ಫ್ಲಡ್ನಲ್ಲಿ ಕೇವಲ ನೀರು ಮಾತ್ರ ಹರಿದು ಬಂದಿಲ್ಲ. ನೀರಿನ ಜೊತೆಗೆ ಮಣ್ಣು, ದೊಡ್ಡ ಕಲ್ಲುಗಳು, ಮರಗಳು ಮತ್ತು ಕಟ್ಟಡಗಳ ಅವಶೇಷಗಳು ಕೂಡ ವೇಗವಾಗಿ ಬಂದಿವೆ. ಇವು ಮನೆಗಳ ಗೋಡೆಗಳಿಗೆ ಬಲವಾಗಿ ಡಿಕ್ಕಿ ಹೊಡೆದಾಗ, ಗೋಡೆಗಳು ದುರ್ಬಲಗೊಂಡು ಕುಸಿದಿವೆ. ವರದಿಗಳ ಪ್ರಕಾರ, ಪ್ರವಾಹದ ಮಧ್ಯೆ ಗಟ್ಟಿಯಾಗಿ ನಿಂತಿದ್ದ ಈ ಮನೆ ಆರ್‌ ಸಿಸಿ (RCC) ಅಂದರೆ ಬಲವರ್ಧಿತ ಕಾಂಕ್ರೀಟ್ ಫ್ರೇಮ್ ( Reinforced Cement Concrete) ರಚನೆಯ ಮೇಲೆ ನಿರ್ಮಾಣವಾಗಿರಬಹುದು. ಅಂದರೆ ಮನೆಯೊಳಗೆ ಕಬ್ಬಿಣದ ಸರಳುಗಳಿಂದ ಬಲಪಡಿಸಿದ ಕಾಂಕ್ರೀಟ್ನ ಕಾಲಮ್ಗಳು ಮತ್ತು ಬೀಮ್ಗಳ ಗಟ್ಟಿಯಾದ ಚೌಕಟ್ಟು ಇರಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಪ್ರವಾಹದ ಒತ್ತಡ ಬಂದಾಗ ಅದರ ಸಂಪೂರ್ಣ ಹೊಡೆತ ಕೇವಲ ಗೋಡೆಗಳ ಮೇಲೆ ಬೀಳುವುದಿಲ್ಲ. ಮನೆಯ ಮುಖ್ಯ ರಚನೆ ಆ ಒತ್ತಡವನ್ನು ಹೆಚ್ಚು ಪರಿಣಾಮಕಾರಿಯಾಗಿ ತಡೆದುಕೊಳ್ಳಲು ಸಾಧ್ಯವಾಗುತ್ತದೆ.

ಮನೆ ಸ್ಥಳ

ಪ್ರವಾಹದಲ್ಲಿ ಮನೆ ಕುಸಿಯದಿರಲು ಮನೆಯ ಸ್ಥಳವೂ ಮುಖ್ಯವಾಗಿರಬಹುದು ಎನ್ನಲಾಗ್ತಿದೆ. ಪ್ರವಾಹದ ಅತ್ಯಂತ ವೇಗದ ನೀರು ಮತ್ತು ಮಣ್ಣು ನೇರವಾಗಿ ಮನೆಯ ಮಧ್ಯಭಾಗಕ್ಕೆ ಅಪ್ಪಳಿಸದೆ, ಅದರ ಎರಡೂ ಬದಿಗಳಿಂದ ಹರಿದು ಹೋಗಿರುವ ಸಾಧ್ಯತೆ ಇದೆ. ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, ಮನೆಯ ಸುತ್ತ ಸೇರಿಕೊಂಡ ಮಣ್ಣು ಮತ್ತು ಅವಶೇಷಗಳು ನಂತರ ನೀರಿನ ವೇಗವನ್ನು ಸ್ವಲ್ಪ ಕಡಿಮೆ ಮಾಡುವ ತಡೆಗೋಡೆಯಂತೆ ಕೆಲಸ ಮಾಡಿರಬಹುದು ಎನ್ನಲಾಗ್ತಿದೆ.

ಹೀಗಾಗಿ ಈ ಮನೆ ಉಳಿದಿರುವುದನ್ನು ಕೇವಲ ಪವಾಡ ಎಂದು ಹೇಳಲು ಸಾಧ್ಯವಿಲ್ಲ. ಮನೆಯ ಬಲವಾದ ನಿರ್ಮಾಣ, ಅದರ ಸ್ಥಳ, ನೀರಿನ ಹರಿವಿನ ದಿಕ್ಕು ಮತ್ತು ಸುತ್ತಲಿನ ಪರಿಸ್ಥಿತಿಗಳು ಒಟ್ಟಾಗಿ ಮನೆ ಉಳಿಯಲು ಕಾರಣವಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ.

ಪ್ರವಾಹದ ಸಂದರ್ಭದಲ್ಲಿ ಯಾವ ಮನೆ ಉಳಿಯುತ್ತದೆ, ಯಾವುದು ಕುಸಿಯುತ್ತದೆ ಎಂಬುದನ್ನು ಒಂದೇ ಕಾರಣದಿಂದ ನಿರ್ಧರಿಸಲು ಸಾಧ್ಯವಿಲ್ಲ. ನೀರಿನ ವೇಗ, ಮಣ್ಣಿನ ಕೊಚ್ಚುವಿಕೆ, ಮನೆಯ ಅಡಿಪಾಯ, ನಿರ್ಮಾಣದ ಗುಣಮಟ್ಟ ಮತ್ತು ಪ್ರವಾಹದ ದಿಕ್ಕು ಎಲ್ಲವೂ ಪರಿಣಾಮ ಬೀರುತ್ತವೆ.