ಹಾರ್ವರ್ಡ್‌ನಲ್ಲಿ ಓದಿ ಅಮೆರಿಕದಲ್ಲಿ ನೆಲೆಸುವ ಅವಕಾಶವನ್ನು ತೊರೆದು ಭಾರತಕ್ಕೆ ಮರಳಿದ ಉದ್ಯಮಿ ನಯ್ಯ ಸಗ್ಗಿ ಅವರ ನಿರ್ಧಾರಕ್ಕೆ ಅವರ ಅಜ್ಜ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಇಂದು ಅವರು 'ಬೇಬಿಚಕ್ರ' ಮತ್ತು 'ದಿ ಗುಡ್ ಗ್ಲಾಮ್ ಗ್ರೂಪ್' ನಂತಹ ಯಶಸ್ವಿ ಕಂಪನಿಗಳನ್ನು ಕಟ್ಟಿ, $1 ಬಿಲಿಯನ್‌ಗೂ ಅಧಿಕ ಮೌಲ್ಯದ ಸಾಮ್ರಾಜ್ಯವನ್ನು ನಿರ್ಮಿಸಿದ್ದಾರೆ.

ಅಮೆರಿಕದಲ್ಲಿ ನೆಲೆಸುವ ಸುವರ್ಣ ಅವಕಾಶವನ್ನು ಬದಿಗೊತ್ತಿ, ಹಾರ್ವರ್ಡ್‌ನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಭಾರತಕ್ಕೆ ಮರಳಿದ್ದಕ್ಕೆ ತಮ್ಮ ಅಜ್ಜ ತೀವ್ರ ಅಸಮಾಧಾನಗೊಂಡಿದ್ದರು ಎಂದು ಪ್ರಸಿದ್ಧ ಉದ್ಯಮಿ ನಯ್ಯ ಸಗ್ಗಿ ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಕಂಟೆಂಟ್ ಕ್ರಿಯೇಟರ್ ವಿರಾಜ್ ಅಲಾ ಅವರ 'ವೋಕ್ಸ್ ಪಾಪ್' (Vox Pop) ಸಂದರ್ಶನದಲ್ಲಿ ಮಾತನಾಡಿದ ಅವರು, ತಾವು ಭಾರತಕ್ಕೆ ಹಿಂತಿರುಗಿದಾಗ ಅಜ್ಜ ಮೂರು ತಿಂಗಳ ಕಾಲ ತಮ್ಮೊಂದಿಗೆ ಮಾತನಾಡಲೇ ಇಲ್ಲ ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ.

ನಯ್ಯ ಸಗ್ಗಿ ಅವರು ‘ಬೇಬಿ ಚಕ್ರ’ (BabyChakra) ಸಂಸ್ಥೆಯ ಸಂಸ್ಥಾಪಕಿಯಾಗಿದ್ದು, 'ದಿ ಗುಡ್ ಗ್ಲಾಮ್ ಗ್ರೂಪ್'ನ (The Good Glamm Group) ಸಹ-ಸಂಸ್ಥಾಪಕಿಯಾಗಿಯೂ ಆಗಿದ್ದಾರೆ. ಅವರು ಪ್ರಸ್ತುತ 'EDT' ಎಂಬ ಹೊಸ ಕನ್ಸ್ಯೂಮರ್-ಟೆಕ್ ಕಂಪನಿಯನ್ನು ಹುಟ್ಟುಹಾಕಿದ್ದಾರೆ.

ಹಾರ್ವರ್ಡ್‌ಗೆ ಪೂರ್ಣ ಉಚಿತ ಪ್ರವೇಶ

ಸಂದರ್ಶನದಲ್ಲಿ ವಿರಾಜ್ ಅಲಾ ಅವರು ಕಾಲೇಜು ಶಿಕ್ಷಣದ ಬಗ್ಗೆ ಕೇಳಿದಾಗ, ತಮಗೆ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಸಂಪೂರ್ಣ ಉಚಿತ ವ್ಯಾಸಂಗದ ಅವಕಾಶ ಸಿಕ್ಕಿದ್ದಾಗಿ ನಯ್ಯ ತಿಳಿಸಿದರು.

ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಿಂದ (NLSIU) ಬಿಎ ಎಲ್‌ಎಲ್‌ಬಿ (ಆನರ್ಸ್) ಪದವಿ ಪಡೆದಿದ್ದಾರೆ. ತದನಂತರ 'ಫುಲ್‌ಬ್ರೈಟ್' ಹಾಗೂ 'ಜೆ.ಎನ್. ಟಾಟಾ' ಸ್ಕಾಲರ್‌ಶಿಪ್ ಪಡೆದು, ವಿಶ್ವಪ್ರಸಿದ್ಧ ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನಿಂದ ಎಂಬಿಎ (MBA) ಪೂರ್ಣಗೊಳಿಸಿದರು.

ಈ ಐವಿ ಲೀಗ್ (Ivy League) ಸಂಸ್ಥೆಯಲ್ಲಿ ಎಂಬಿಎ ಮುಗಿಸಿದ ನಂತರ, ಅವರು 'ದಿ ಬ್ರಿಡ್ಜ್‌ಸ್ಪಾನ್ ಗ್ರೂಪ್'ನಲ್ಲಿ ಸಲಹೆಗಾರರಾಗಿ ಒಂದು ವರ್ಷ ಸೇವೆ ಸಲ್ಲಿಸಿದರು. ಬಳಿಕ, ಜಗತ್ತನ್ನು ಬದಲಾಯಿಸುವ ಉದ್ದೇಶದಿಂದ 2015ರಲ್ಲಿ ಭಾರತಕ್ಕೆ ಮರಳಿದೆ ಎಂದು ಹೇಳಿಕೊಂಡಿದ್ದಾರೆ.

ಜಗತ್ತನ್ನು ಬದಲಾಯಿಸಲು ಭಾರತಕ್ಕೆ ಬಂದೆ

"ನಾನು ಜಗತ್ತನ್ನು ಬದಲಾಯಿಸುವ ಉದ್ದೇಶದಿಂದ 2015ರಲ್ಲಿ ಭಾರತಕ್ಕೆ ಹಿಂತಿರುಗಿದೆ. ಇಲ್ಲಿಯೇ ನನ್ನ ಮೊದಲ ಕಂಪನಿಯನ್ನು ಕಟ್ಟಿ ಬೆಳೆಸಿದೆ, ಈಗ ನನ್ನ ಮೂರನೇ ಕಂಪನಿಯನ್ನು ನಿರ್ಮಿಸುತ್ತಿದ್ದೇನೆ," ಎಂದು ಅವರು ವಿರಾಜ್ ಜೊತೆಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ತಮ್ಮ ಸಹೋದರಿ ಗರ್ಭಾವಸ್ಥೆಯಲ್ಲಿದ್ದಾಗ ವಿಶ್ವಾಸಾರ್ಹ ಮಾಹಿತಿ ಸಿಗದೆ ಪಟ್ಟ ಕಷ್ಟವನ್ನು ಗಮನಿಸಿದ ನಯ್ಯ, 2015ರಲ್ಲಿ 'ಬೇಬಿಚಕ್ರ' ಸಂಸ್ಥೆಯನ್ನು ಪ್ರಾರಂಭಿಸಿದರು. 2021ರಲ್ಲಿ ಬೇಬಿಚಕ್ರ ಸಂಸ್ಥೆಯು 'ಮೈಗ್ಲಾಮ್' (MyGlamm) ಜೊತೆ ವಿಲೀನಗೊಂಡಿತು. ತದನಂತರ ಅವರು ಪ್ರಿಯಾಂಕಾ ಗಿಲ್ ಮತ್ತು ದರ್ಪಣ್ ಸಾಂಘ್ವಿ ಅವರೊಂದಿಗೆ ಸೇರಿ 'ದಿ ಗುಡ್ ಗ್ಲಾಮ್ ಗ್ರೂಪ್' ಅನ್ನು ಸ್ಥಾಪಿಸಿದರು.

ಜನ ಸಾಮಾನ್ಯರು ಯೋಚನೆ ಮಾಡುವಂತೆ , ತಾವು ತಲತಲಾಂತರದ ಶ್ರೀಮಂತಿಕೆಯಿಂದ (Generational Wealth) ಬಂದವರಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದರು. "ನನ್ನ ಪೋಷಕರು ಸರ್ಕಾರಿ ನೌಕರರಾಗಿದ್ದರು. ಹಾಗಾಗಿ ನಾನು ಅನುವಂಶಿಕ ಆಸ್ತಿ ಅಥವಾ ಹಣದ ಹಿನ್ನೆಲೆಯಿಂದ ಬಂದವಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ

ಕುಟುಂಬದ ಅಸಮಾಧಾನ ಮತ್ತು ಅಜ್ಜನ ಕೋಪ

ಭಾರತಕ್ಕೆ ಮರಳುವ ತಮ್ಮ ನಿರ್ಧಾರದಿಂದ ಕುಟುಂಬದವರು ಅಷ್ಟಾಗಿ ಇಷ್ಟಪಟ್ಟಿರಲಿಲ್ಲ. ಮುಖ್ಯವಾಗಿ ಅವರ ಅಜ್ಜ, ಇದನ್ನು ಸಿಕ್ಕ ದೊಡ್ದ ಅವಕಾಶವನ್ನು ವ್ಯರ್ಥ ಮಾಡಿಕೊಂಡಂತೆ ಭಾವಿಸಿದ್ದರು.

"ನಾನು 2015ರಲ್ಲಿ ಭಾರತಕ್ಕೆ ಮರಳಿದಾಗ, ನಮ್ಮ ಅಜ್ಜ ನನ್ನೊಂದಿಗೆ 3 ತಿಂಗಳು ಮಾತನಾಡಲೇ ಇಲ್ಲ. 'ನಿನಗೆ ಅಮೆರಿಕದಲ್ಲಿ ಇಡೀ ಜೀವನ ನೆಲೆಸುವ ಅವಕಾಶ, ಉದ್ಯೋಗಾವಕಾಶ ಹಾಗೂ ಪೂರ್ಣ ವಿದ್ಯಾರ್ಥಿವೇತನ ಸಿಕ್ಕಿತ್ತು. ಹಾಗಿರುವಾಗ ಎಲ್ಲವನ್ನೂ ಬಿಟ್ಟು ಭಾರತಕ್ಕೆ ಬಂದು ಬ್ಯುಸಿನೆಸ್ ಕಟ್ಟುವ ಅಗತ್ಯವೇನಿತ್ತು?' ಎಂದು ಅವರು ಬೈಯುತ್ತಿದ್ದರು ಎಂದು ನಯ್ಯ ನೆನಪಿಸಿಕೊಂಡರು.

$1 ಬಿಲಿಯನ್‌ಗೂ ಮೀರಿದ ಸಾಮ್ರಾಜ್ಯ

ಇಂದು ನಯ್ಯ ಸಗ್ಗಿ ನಿರ್ಮಿಸಿದ ಮೂರೂ ಕಂಪನಿಗಳ ಒಟ್ಟು ಮೌಲ್ಯ $1 ಬಿಲಿಯನ್‌ಗೂ (ಅಂದಾಜು 8,300 ಕೋಟಿ ರೂಪಾಯಿ) ಹೆಚ್ಚಾಗಿದೆ. ಸಂದರ್ಶನದ ಕೊನೆಯಲ್ಲಿ ಉದಯೋನ್ಮುಖ ಭಾರತೀಯ ಉದ್ಯಮಿಗಳಿಗೆ ಸ್ಫೂರ್ತಿದಾಯಕ ಸಂದೇಶ ನೀಡಿದ ಅವರು, "ಭಾರತೀಯ ಸಂಸ್ಥಾಪಕರು ಮತ್ತು ಭಾರತೀಯ ತಂಡಗಳು ಭಾರತದಲ್ಲೇ ಇದ್ದುಕೊಂಡು, ಇಡೀ ಜಗತ್ತೇ ಮೆಚ್ಚುವಂತಹ ಜಾಗತಿಕ ಮಟ್ಟದ ಕಂಪನಿಗಳನ್ನು ನಿರ್ಮಿಸಲು ಸಾಧ್ಯವಿದೆ," ಎಂದು ಹೆಮ್ಮೆಯಿಂದ ಹೇಳಿದರು.