ಆಂಥ್ರೊಪಿಕ್ ಸಿಇಒ ಡೇರಿಯೊ ಅಮೋಡೆ ಅವರ ಪತ್ನಿ ಕ್ಯಾಮಿ ಕ್ಲಾರ್ಕ್, ವಿವಾದಾತ್ಮಕ ಆರಂಭದಿಂದ ಸಿಲಿಕಾನ್ ವ್ಯಾಲಿಯ ಪ್ರಭಾವಿ ವ್ಯಕ್ತಿಯಾಗಿ ಬೆಳೆದಿದ್ದಾರೆ. ಜೇಫ್ರಿ ಎಪ್ಸ್ಟೀನ್ ಜೊತೆಗಿನ ಸಂಪರ್ಕದಿಂದ ಹಿಡಿದು, ಇಂದು ಜಾಗತಿಕ AI ತಂತ್ರಜ್ಞಾನ ಮತ್ತು ರಾಜಕೀಯದ ಮೇಲೆ ತೆರೆಮರೆಯಲ್ಲಿ ಪ್ರಭಾವ ಬೀರುವವರೆಗಿನ ಅವರ ಅಸಾಮಾನ್ಯ ಪಯಣವನ್ನು ಈ ಲೇಖನ ವಿವರಿಸುತ್ತದೆ.

ಕೃತಕ ಬುದ್ಧಿಮತ್ತೆ (AI) ಕ್ಷೇತ್ರದ ಮುಂಚೂಣಿ ಸಂಸ್ಥೆ 'ಆಂಥ್ರೊಪಿಕ್'ನ (Anthropic) ಸಿಇಒ ಡೇರಿಯೊ ಅಮೋಡೆ ಅವರ ಪತ್ನಿ ಕ್ಯಾಮಿ ಕ್ಲಾರ್ಕ್, ಇಂದು ಸಿಲಿಕಾನ್ ವ್ಯಾಲಿಯ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಆದರೆ, ಈ ಹಂತವನ್ನು ತಲುಪುವ ಹಲವು ವರ್ಷಗಳ ಮೊದಲೇ ಅವರ ಜೀವನ ಚರಿತ್ರೆಯು ಕುಖ್ಯಾತ ಜೇಫ್ರಿ ಎಪ್ಸ್ಟೀನ್ ಜೊತೆ ಸಂಪರ್ಕಕ್ಕೆ ಬಂದಿತ್ತು.

'ಐಷಾರಾಮಿ ಪೋರ್ನ್' ಮತ್ತು ಎಪ್ಸ್ಟೀನ್ ಸಂಪರ್ಕ

'ವಾಲ್ ಸ್ಟ್ರೀಟ್ ಜರ್ನಲ್' ವರದಿಯ ಪ್ರಕಾರ, 2011 ರಲ್ಲಿ ಕ್ಯಾಮಿ ಕ್ಲಾರ್ಕ್ ಮತ್ತು ಅವರ ಉದ್ಯಮ ಪಾಲುದಾರ ಮಿಚೆಲ್ ಕ್ಯಾಪೊಸೆಫಾಲೊ 'ಎಡ್ಡಿಸ್' (Eddis) ಎಂಬ ಸ್ಟಾರ್ಟ್‌ಅಪ್‌ಗಾಗಿ ಹೂಡಿಕೆದಾರರನ್ನು ಹುಡುಕುತ್ತಿದ್ದರು. ಅದನ್ನು ಅವರು ಕ್ರಾಂತಿಕಾರಿ ಹಾಗೂ ಮಹಿಳಾ-ಕೇಂದ್ರಿತ ಪೋರ್ನ್ ಕಂಪನಿ ಎಂದು ಕರೆದುಕೊಂಡಿದ್ದರು. ಸಾಹಿತ್ಯಿಕ ಏಜೆಂಟ್ ಜಾನ್ ಬ್ರಾಕ್‌ಮನ್, ಆಗಲೇ ಲೈಂಗಿಕ ಅಪರಾಧಿಯಾಗಿ ನೋಂದಾಯಿತನಾಗಿದ್ದ ಜೇಫ್ರಿ ಎಪ್ಸ್ಟೀನ್‌ಗೆ ಈ ಇಬ್ಬರು ಮಹಿಳೆಯರನ್ನು ಪರಿಚಯಿಸಿದರು.

ಬ್ರಾಕ್‌ಮನ್ ಎಪ್ಸ್ಟೀನ್‌ಗೆ ಬರೆದ ಪತ್ರದಲ್ಲಿ, ಕ್ಯಾಮಿ ಮತ್ತು ಮಿಚೆಲ್ ಲಾಸ್ ಏಂಜಲೀಸ್‌ನಲ್ಲಿ ಮಹಿಳಾ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಉಚಿತ ಐಷಾರಾಮಿ ಪೋರ್ನ್ ಚಿತ್ರ ನಿರ್ಮಿಸಲು ಹಣ ಸಂಗ್ರಹಿಸುತ್ತಿದ್ದಾರೆ. ನೀವು ಅವರೊಂದಿಗೆ ಭೋಜನಕ್ಕೆ ಸಂಪರ್ಕ ಸಾಧಿಸಬೇಕು ಎಂದು ತಿಳಿಸಿದ್ದರು.

ಕ್ಲಾರ್ಕ್ ಈ ಕಂಪನಿಯಲ್ಲಿ ಹೂಡಿಕೆ ಮಾಡುವಂತೆ ಎಪ್ಸ್ಟೀನ್‌ಗೆ ಸಲಹೆ ನೀಡಿದರೂ, ಆತ ಅದನ್ನು ನಿರಾಕರಿಸಿದನು. ತರುವಾಯ, ಕ್ಲಾರ್ಕ್ ಫಿಟ್‌ನೆಸ್ ಟ್ರ್ಯಾಕರ್, ಪೋಷಣೆ, ಮುಟ್ಟಿನ ಚಕ್ರ ಹಾಗೂ ಮಾನಸಿಕ ಸ್ಥಿತಿಯ ಡೇಟಾವನ್ನು ಸಂಯೋಜಿಸುವ ಮಹಿಳಾ ಕೇಂದ್ರಿತ ಸಾಮಾಜಿಕ ಆಹಾರ ಪದ್ಧತಿ ಅಪ್ಲಿಕೇಶನ್ ಉದ್ಯಮದತ್ತ ಗಮನ ಹರಿಸಿದರು. ಸರ್ಕಾರ ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ, ಕ್ಲಾರ್ಕ್ ಮತ್ತು ಎಪ್ಸ್ಟೀನ್ ನಡುವಿನ ಸಂವಹನವು ಸುಮಾರು ಎರಡು ವರ್ಷಗಳ ಕಾಲ ಮುಂದುವರಿಯಿತು. ಅವರು ಎಪ್ಸ್ಟೀನ್‌ನನ್ನು ಗೃಹಪ್ರವೇಶ ಪಾರ್ಟಿಗೆ ಆಹ್ವಾನಿಸಿದ್ದರು ಮತ್ತು ಲಿಂಕ್ಡ್‌ಇನ್‌ನಲ್ಲೂ ಸಂಪರ್ಕದಲ್ಲಿದ್ದರು.

ವೈಯಕ್ತಿಕ ಜೀವನ ಮತ್ತು ಸಿಲಿಕಾನ್ ವ್ಯಾಲಿ ಪ್ರವೇಶ

1979 ರಲ್ಲಿ ನೆವಾಡಾದ ರೆನೋದಲ್ಲಿ ಜನಿಸಿದ ಕ್ಲಾರ್ಕ್, ಕಾಲೇಜು ಪದವಿ ಪೂರೈಸಲಿಲ್ಲ. 20 ನೇ ವಯಸ್ಸಿನಲ್ಲಿ 64 ವರ್ಷದ ವಾಸ್ತುಶಿಲ್ಪಿ ವಾಲ್ಡೆಮರ್ ಎಕ್ಲೋಫ್ III ಅವರನ್ನು ವಿವಾಹವಾದ ಅವರು, ಮೂರು ವರ್ಷಗಳ ನಂತರ ವಿಚ್ಛೇದನ ಪಡೆದರು. ಆ ಬಳಿಕ ಸಾಲದ ಸುಳಿಗೆ ಸಿಲುಕಿ ದಿವಾಳಿತನಕ್ಕೂ ಅರ್ಜಿ ಸಲ್ಲಿಸಿದ್ದರು.

2010 ರ ಸುಮಾರಿಗೆ 'ಎಡೈಸ್' ಮೂಲಕ ಸಾಂಪ್ರದಾಯಿಕ ಅಶ್ಲೀಲ ಉದ್ಯಮಕ್ಕೆ ಪರ್ಯಾಯವಾಗಿ "ಬೌದ್ಧಿಕವಾಗಿ ಅಶ್ಲೀಲ" ಎಂಬ ಟ್ಯಾಗ್‌ಲೈನ್‌ನೊಂದಿಗೆ ಕಾರ್ಯನಿರ್ವಹಿಸಲು ಯತ್ನಿಸಿದರು. ಆದರೆ, ಶೀಘ್ರದಲ್ಲೇ ಅವರ ಗಮನ ಸಿಲಿಕಾನ್ ವ್ಯಾಲಿಯ ಉನ್ನತ ನೆಟ್‌ವರ್ಕ್‌ಗಳತ್ತ ತಿರುಗಿತು. 2011 ರಿಂದ ಮೂರು ವರ್ಷಗಳ ಕಾಲ ಅವರು ಗೂಗಲ್‌ನ ಮಾಜಿ ಸಿಇಒ ಎರಿಕ್ ಸ್ಮಿತ್ ಅವರೊಂದಿಗೆ ಸಂಬಂಧ ಹೊಂದಿದ್ದರು. ಸ್ಮಿತ್ ಮುಂದೆ ಕ್ಲಾರ್ಕ್ ಅವರ ಮಹಿಳಾ-ಆರೋಗ್ಯ ಉದ್ಯಮದಲ್ಲೂ ಹೂಡಿಕೆ ಮಾಡಿದ್ದರು.

2014 ರಲ್ಲಿ ಕ್ಲಾರ್ಕ್, ಸ್ಟ್ಯಾನ್‌ಫೋರ್ಡ್‌ನಲ್ಲಿ ಪೋಸ್ಟ್‌ಡಾಕ್ಟರಲ್ ಸಂಶೋಧಕರಾಗಿದ್ದ ಡೇರಿಯೊ ಅಮೋಡೆ ಅವರೊಂದಿಗೆ ಡೇಟಿಂಗ್ ಪ್ರಾರಂಭಿಸಿದರು. ಪ್ರಿನ್ಸ್‌ಟನ್‌ನಿಂದ ಕಂಪ್ಯೂಟೇಶನಲ್ ನ್ಯೂರೋಸೈನ್ಸ್‌ನಲ್ಲಿ ಪಿಎಚ್‌ಡಿ ಪಡೆದಿದ್ದ ಅಮೋಡೆ, ನಂತರ ಬೈದು (Baidu), ಗೂಗಲ್ ಮತ್ತು ಓಪನ್‌ಎಐ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ AI ಜಗತ್ತಿನಲ್ಲಿ ಎತ್ತರಕ್ಕೆ ಬೆಳೆದರು.

ಈ ಅವಧಿಯಲ್ಲಿ ಕ್ಲಾರ್ಕ್ ಅವರ ವೃತ್ತಿಪರ ನೆಟ್‌ವರ್ಕ್ ಕೂಡ ವಿಸ್ತರಿಸಿತು. ತಮ್ಮ ಆಪ್ತ ಸ್ನೇಹಿತೆ ಮೀರಾ ಮುರಾಟಿಯವರನ್ನು ಓಪನ್‌ಎಐ ಸಹ-ಸಂಸ್ಥಾಪಕ ಗ್ರೆಗ್ ಬ್ರಾಕ್‌ಮನ್‌ಗೆ ಪರಿಚಯಿಸಿದ್ದೇ ಕ್ಲಾರ್ಕ್. ಮುರಾಟಿ ನಂತರ ಓಪನ್‌ಎಐನ ಮುಖ್ಯ ತಂತ್ರಜ್ಞಾನ ಅಧಿಕಾರಿಯಾದರು (CTO). ಇದಲ್ಲದೆ, 2018 ರಲ್ಲಿ ಅಮೋಡೆ ಮತ್ತು ಎರಿಕ್ ಸ್ಮಿತ್ ಅವರ ಭೇಟಿಗೂ ಕ್ಲಾರ್ಕ್ ಸೇತುವೆಯಾಗಿದ್ದರು.

ಆಂಥ್ರೊಪಿಕ್ ಸ್ಥಾಪನೆ ಮತ್ತು ಹಿನ್ನೆಲೆ ಪ್ರಭಾವ

ಡಿಸೆಂಬರ್ 2020 ರಲ್ಲಿ, ಡೇರಿಯೊ ಅಮೋಡೆ, ಅವರ ಸಹೋದರಿ ಡೇನಿಯಲಾ ಮತ್ತು ಇತರ ಸಹೋದ್ಯೋಗಿಗಳು ಓಪನ್‌ಎಐನಿಂದ ಹೊರಬಂದು 'ಆಂಥ್ರೊಪಿಕ್' ಸಂಸ್ಥೆಯನ್ನು ಸ್ಥಾಪಿಸಿದರು. ಮೇ 2021 ರಲ್ಲಿ ಆಂಥ್ರೊಪಿಕ್ $124 ಮಿಲಿಯನ್ ನಿಧಿ ಸಂಗ್ರಹಿಸಿದಾಗ, ಎರಿಕ್ ಸ್ಮಿತ್ ಪ್ರಮುಖ ಹೂಡಿಕೆದಾರರಲ್ಲಿ ಒಬ್ಬರಾಗಿದ್ದರು.

ಫೆಬ್ರವರಿ 2021 ರಲ್ಲಿ ಕ್ಲಾರ್ಕ್, ಎಜಿಐ ನಿಧಿಯ ತಾಯಿ (Mother of AGI Fund) ಎಂಬ 40 ಪುಟಗಳ ಪ್ರಸ್ತಾವನೆಯನ್ನು ಸ್ಮಿತ್‌ಗೆ ಸಲ್ಲಿಸಿ ಆಂಥ್ರೊಪಿಕ್‌ನಲ್ಲಿ ಔಪಚಾರಿಕ ಹೂಡಿಕೆ ನಿರ್ವಹಣಾ ಪಾತ್ರವನ್ನು ಬಯಸಿದ್ದರು. ಆದರೆ, ಕಂಪನಿಯ ಇತರರಿಂದ ಬೆಂಬಲ ಸಿಗದ ಕಾರಣ ಈ ಯೋಜನೆ ಮುಂದುವರಿಯಲಿಲ್ಲ. ತರುವಾಯ ಅಮೋಡೆ ಮತ್ತು ಕ್ಲಾರ್ಕ್ ಇಟಲಿಯಲ್ಲಿ ವಿವಾಹವಾದರು.

ಆಂಥ್ರೊಪಿಕ್‌ನಲ್ಲಿ ಕ್ಲಾರ್ಕ್ ಯಾವುದೇ ಅಧಿಕೃತ ಹುದ್ದೆಯನ್ನು ಹೊಂದಿಲ್ಲದಿದ್ದರೂ, ಅವರು ಅಮೋಡೆಗೆ ಪ್ರಮುಖ ಕಾರ್ಯತಂತ್ರದ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಾವೋಸ್, ಸನ್ ವ್ಯಾಲಿ ಕಾನ್ಫರೆನ್ಸ್ ಹಾಗೂ ನವದೆಹಲಿಯಲ್ಲಿ ನಡೆದ ಪ್ರಮುಖ AI ಶೃಂಗಸಭೆಗಳಲ್ಲಿ ಅವರು ಅಮೋಡೆ ಅವರೊಂದಿಗೆ ಭಾಗವಹಿಸಿದ್ದಾರೆ.

ವಿಶೇಷವೆಂದರೆ, ಕ್ಲಾರ್ಕ್ ಅವರ ಕುರಿತಾದ ಮಾಹಿತಿಯು ಆನ್‌ಲೈನ್‌ನಲ್ಲಿ ಅತ್ಯಂತ ವಿರಳವಾಗಿದೆ. ವಾಲ್ ಸ್ಟ್ರೀಟ್ ಜರ್ನಲ್ ಪ್ರಕಾರ, ಅಂತರ್ಜಾಲದಿಂದ ಅವರ ವಿವರಗಳನ್ನು ತೆಗೆದುಹಾಕಲು ಯತ್ನಿಸಲಾಗಿದೆ. ಅಮೋಡೆ ಅವರ ವಿಕಿಪೀಡಿಯಾ ಪುಟದಲ್ಲೂ ಇತ್ತೀಚಿನವರೆಗೂ ಅವರ ವಿವಾಹದ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಿರಲಿಲ್ಲ.

ರಾಜಕೀಯ ಮತ್ತು ಪ್ರಸ್ತುತ ಸ್ಥಿತಿ

ಆಂಥ್ರೊಪಿಕ್ ಸಂಸ್ಥೆಯು ಅಮೆರಿಕದ ರಾಜಕೀಯ ಮತ್ತು ಸರ್ಕಾರದ ಮಟ್ಟದಲ್ಲಿ ಪ್ರಮುಖ ಸಾಲಿನಲ್ಲಿ ನಿಂತಂತೆ, ಕ್ಲಾರ್ಕ್ ಅವರ ಪಾತ್ರವೂ ಗಮನಾರ್ಹವಾಗಿದೆ. ಪೆಂಟಗನ್‌ಗೆ 'ಕ್ಲೌಡ್' (Claude AI) ಬಳಕೆಯ ಮೇಲಿನ ನಿರ್ಬಂಧ ಸಡಿಲಿಸಲು ಅಮೋಡೆ ನಿರಾಕರಿಸಿದಾಗ ಟ್ರಂಪ್ ಆಡಳಿತದೊಂದಿಗೆ ಸಂಘರ್ಷವೇರ್ಪಟ್ಟಿತ್ತು. ಆ ಸಂದರ್ಭದಲ್ಲಿ ಕ್ಲಾರ್ಕ್, ಆಂಥ್ರೊಪಿಕ್ ಸಂಸ್ಥೆಯು ಅಮೆರಿಕವನ್ನು ರಕ್ಷಿಸುವ ಧ್ಯೇಯವನ್ನು ಹೊಂದಿದೆ ಎಂದು ಪ್ರಭಾವಿ ರಾಜಕೀಯ ವರ್ತುಲಗಳಲ್ಲಿ ಸಮರ್ಥಿಸಿಕೊಂಡಿದ್ದರು.

ಜುಲೈನಲ್ಲಿ ನಡೆದ ಸನ್ ವ್ಯಾಲಿ ಸಮ್ಮೇಳನದಲ್ಲೂ ಅವರು ಇವಾಂಕಾ ಟ್ರಂಪ್ ಮತ್ತು ಜೇರೆಡ್ ಕುಶ್ನರ್ ಅವರಂತಹ ಪ್ರಭಾವಿ ವ್ಯಕ್ತಿಗಳೊಂದಿಗೆ ಚರ್ಚೆ ನಡೆಸುತ್ತಿರುವುದು ಕಂಡುಬಂದಿತ್ತು. ಆರಂಭದಲ್ಲಿ ವಯಸ್ಕರ ಮನರಂಜನಾ ಉದ್ಯಮದಿಂದ ಪ್ರಾರಂಭವಾದ ಕ್ಯಾಮಿ ಕ್ಲಾರ್ಕ್ ಅವರ ಪಯಣ, ಇಂದು ಜಾಗತಿಕ AI ತಂತ್ರಜ್ಞಾನ ಮತ್ತು ರಾಜಕೀಯದ ಅತ್ಯುನ್ನತ ಮಟ್ಟದ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ಹಂತಕ್ಕೆ ಬಂದು ತಲುಪಿದೆ.