ಶಿಯಾ ಇಸ್ಮಾಲಿ ಮುಸ್ಲಿಂ ಸಮುದಾಯದ 50ನೇ ಇಮಾಮ್ ಪ್ರಿನ್ಸ್ ರಹೀಮ್ ಅಗಾ ಖಾನ್ ಭಾರತಕ್ಕೆ ಭೇಟಿ ನೀಡಿದ್ದಾರೆ. ತಮ್ಮ 'ಅಗಾ ಖಾನ್ ಅಭಿವೃದ್ಧಿ ಜಾಲ' (AKDN) ಮೂಲಕ ಜಗತ್ತಿನಾದ್ಯಂತ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಇವರು, ಭಾರತದಲ್ಲಿನ ತಮ್ಮ ಯೋಜನೆಗಳನ್ನು ಪರಿಶೀಲಿಸಲು ಮತ್ತು ಪ್ರಮುಖ ನಾಯಕರೊಂದಿಗೆ ಚರ್ಚಿಸಲು ಆಗಮಿಸಿದ್ದಾರೆ.

ಪ್ರಸ್ತುತ ನವದೆಹಲಿಯಲ್ಲಿ ಬ್ರಿಕ್ಸ್ ಶೃಂಗಸಭೆಯ ಕಾವು ಜೋರಾಗಿದೆ. ರಷ್ಯಾ, ಚೀನಾ, ಇರಾನ್, ಬ್ರೆಜಿಲ್ ಸೇರಿದಂತೆ ವಿಶ್ವದ ಪ್ರಮುಖ ದೇಶಗಳ ನಾಯಕರು ಭಾರತದಲ್ಲಿದ್ದಾರೆ. ಈ ಜಾಗತಿಕ ರಾಜತಾಂತ್ರಿಕ ಸಂಚಲನದ ನಡುವೆಯೇ ಮತ್ತೊಬ್ಬ ಪ್ರಭಾವಿ ವ್ಯಕ್ತಿತ್ವ ಭಾರತಕ್ಕೆ ಆಗಮಿಸಿದ್ದು, ತೀವ್ರ ಕುತೂಹಲ ಮೂಡಿಸಿದೆ. ಅವರೇ ಶಿಯಾ ಇಸ್ಮಾಲಿ ಮುಸ್ಲಿಂ ಸಮುದಾಯದ 50ನೇ ಇಮಾಮ್, ಪ್ರಿನ್ಸ್ ರಹೀಮ್ ಅಗಾ ಖಾನ್. ಆರು ದಿನಗಳ ಭಾರತ ಪ್ರವಾಸದಲ್ಲಿರುವ ಪ್ರಿನ್ಸ್ ರಹೀಮ್ ಅಗಾ ಖಾನ್, ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಗೃಹ ಸಚಿವ ಅಮಿತ್ ಶಾ ಹಾಗೂ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ. ಯಾವುದೇ ಸಾಮ್ರಾಜ್ಯ ಅಥವಾ ಸ್ವಂತ ಸೈನ್ಯವಿಲ್ಲದಿದ್ದರೂ, ಇಡೀ ವಿಶ್ವವೇ ಇವರನ್ನು ರಾಜಕುಮಾರ ಎಂದು ಕರೆಯುತ್ತದೆ.

ಯಾರೀ ಪ್ರಿನ್ಸ್ ರಹೀಮ್ ಆಗಾ ಖಾನ್?

ಪ್ರಿನ್ಸ್ ರಹೀಮ್ ಅಗಾ ಖಾನ್ (ನಿಜವಾದ ಹೆಸರು ಶಾ ರಹೀಮ್ ಅಲ್-ಹುಸೇನಿ) ಶಿಯಾ ಮುಸ್ಲಿಂ ಪಂಥದ ಎರಡನೇ ಅತಿ ದೊಡ್ಡ ವಿಭಾಗವಾದ 'ಇಸ್ಮಾಲಿ' ಸಮುದಾಯದ 50ನೇ ಆನುವಂಶಿಕ ಇಮಾಮ್. ಇಸ್ಮಾಲಿ ನಂಬಿಕೆಯ ಪ್ರಕಾರ, ಇವರು ಪ್ರವಾದಿ ಮಹಮ್ಮದ್ ಹಾಗೂ ಅವರ ಅಳಿಯ ಹಜರತ್ ಅಲಿ ಅವರ ನೇರ ವಂಶಸ್ಥರು. ಜಗತ್ತಿನಾದ್ಯಂತ ಹಂಚಿಹೋಗಿರುವ ಸುಮಾರು 1.5 ಕೋಟಿ (15 ಮಿಲಿಯನ್) ಇಸ್ಮಾಲಿ ಮುಸ್ಲಿಮರು ಇವರನ್ನು ತಮ್ಮ ಅತ್ಯುನ್ನತ ಆಧ್ಯಾತ್ಮಿಕ ಮಾರ್ಗದರ್ಶಿ ಎಂದು ಸ್ವೀಕರಿಸಿದ್ದಾರೆ. ಇವರ ರಾಜಮನೆತನದ ವಂಶಾವಳಿ ಮತ್ತು ಪಾರಂಪರಿಕ ಶ್ರೇಷ್ಠತೆಯಿಂದಾಗಿ ಇವರಿಗೆ 'ಪ್ರಿನ್ಸ್' ಎಂಬ ಬಿರುದಿದೆ.

ಜನರು ಇವರನ್ನು 'ಗುಣಪಡಿಸುವವನು' (Doctor) ಎಂದು ಕರೆಯುವುದೇಕೆ?

ಇಸ್ಮಾಲಿ ಸಮುದಾಯದ ಅನುಯಾಯಿಗಳು ಪ್ರಿನ್ಸ್ ರಹೀಮ್ ಅವರನ್ನು ಕೇವಲ ಧಾರ್ಮಿಕ ನಾಯಕನಾಗಿ ಮಾತ್ರವಲ್ಲ, ಜನರ ಕಷ್ಟ-ದುಃಖಗಳನ್ನು ನಿವಾರಿಸುವ ದೈವಿಕ ವ್ಯಕ್ತಿಯಾಗಿ ಕಾಣುತ್ತಾರೆ.

ಆಧ್ಯಾತ್ಮಿಕ ನಂಬಿಕೆ; ಇಮಾಮ್ ನೀಡುವ ಆಶೀರ್ವಾದ ಜೀವನದ ಕಷ್ಟಗಳನ್ನು ದೂರ ಮಾಡುತ್ತದೆ ಎಂಬುದು ಅನುಯಾಯಿಗಳ ನಂಬಿಕೆ.

ಸಾಮಾಜಿಕ ಕ್ರಾಂತಿ: 'ಆಗಾ ಖಾನ್ ಅಭಿವೃದ್ಧಿ ಜಾಲ' (AKDN) ಸಂಸ್ಥೆಯ ಮೂಲಕ ಇವರು ಜಗತ್ತಿನಾದ್ಯಂತ ಬಿಲಿಯನ್ ಡಾಲರ್ ವೆಚ್ಚದಲ್ಲಿ ಉಚಿತ ಆಸ್ಪತ್ರೆಗಳು, ಶಾಲೆಗಳು, ವಿಪತ್ತು ಪರಿಹಾರ ಕೇಂದ್ರಗಳನ್ನು ನಡೆಸುತ್ತಿದ್ದಾರೆ. ಯುದ್ಧಪೀಡಿತ ಮತ್ತು ಬಡ ಪ್ರದೇಶಗಳಲ್ಲಿ ಉಚಿತ ಆರೋಗ್ಯ ಸೇವೆ ಒದಗಿಸಿ ಲಕ್ಷಾಂತರ ಜನರ ಜೀವ ಉಳಿಸುತ್ತಿರುವುದರಿಂದ ಇವರನ್ನು ಗುಣಪಡಿಸುವ 'ಡಾಕ್ಟರ್' ಅಥವಾ ಆಶಾಕಿರಣ ಎಂದು ಕರೆಯಲಾಗುತ್ತದೆ.

ಅಮೆರಿಕನ್ ಮಾಡೆಲ್ ವಿವಾಹ ಮತ್ತು ರಾಯಲ್ ಜೀವನ!

ಅಗಾ ಖಾನ್ ಕುಟುಂಬದ ವೈಯಕ್ತಿಕ ಜೀವನವು ಸದಾ ಗ್ಲಾಮರಸ್ ಹಾಗೂ ಆಧುನಿಕ ಶೈಲಿಗೆ ಹೆಸರಾಗಿದೆ. ಪ್ರಿನ್ಸ್ ರಹೀಮ್ ಅಗಾ ಖಾನ್ 2013 ರಲ್ಲಿ ಅಮೆರಿಕದ ಪ್ರಸಿದ್ಧ ಫ್ಯಾಷನ್ ಮಾಡೆಲ್ ಕೇಂದ್ರ ಸ್ಪಿಯರ್ಸ್ ಅವರನ್ನು ವಿವಾಹವಾಗಿದ್ದರು. ಚಾನೆಲ್, ಪ್ರಾಡಾ ಹಾಗೂ ಲೂಯಿ ವಿಟಾನ್‌ನಂತಹ ಜಾಗತಿಕ ಬ್ರ್ಯಾಂಡ್‌ಗಳಿಗೆ ರನ್‌ವೇಯಲ್ಲಿ ಹೆಜ್ಜೆ ಹಾಕಿದ್ದ ಕೇಂದ್ರ ಸ್ಪಿಯರ್ಸ್, ಮದುವೆಯ ನಂತರ ಇಸ್ಲಾಂಗೆ ಮತಾಂತರಗೊಂಡು 'ರಾಜಕುಮಾರಿ ಸಲ್ವಾ ಅಗಾ ಖಾನ್' ಎಂದು ಹೆಸರು ಬದಲಾಯಿಸಿಕೊಂಡರು. ಆದರೆ ಕೆಲ ವರ್ಷಗಳ ನಂತರ ಈ ದಂಪತಿ ವಿಚ್ಛೇದನ ಪಡೆದರು.

ಭಾರತ ಭೇಟಿಯ ಮುಖ್ಯ ಉದ್ದೇಶವೇನು?

ಅಗಾ ಖಾನ್ ಕುಟುಂಬಕ್ಕೆ ಭಾರತದೊಂದಿಗೆ ತಲೆಮಾರುಗಳ ಆಳವಾದ ಸಂಬಂಧವಿದೆ. ತಮ್ಮ ಟ್ರಸ್ಟ್ (AKDN) ಮೂಲಕ ಭಾರತದಲ್ಲಿ ನಡೆಯುತ್ತಿರುವ ನೂರಾರು ಸಾಮಾಜಿಕ ಮತ್ತು ಮೂಲಸೌಕರ್ಯ ಯೋಜನೆಗಳನ್ನು ಪರಿಶೀಲಿಸಲು ಇವರು ಆಗಮಿಸಿದ್ದಾರೆ. ದೆಹಲಿಯ ಐತಿಹಾಸಿಕ ಹುಮಾಯೂನ್ ಸಮಾಧಿ, ಸುಂದರ್ ನರ್ಸರಿ ಹಾಗೂ ರಾಜಸ್ಥಾನದ ಅಹಚತ್‌ಗಢ ಕೋಟೆಯಂತಹ ಪರಂಪರೆಯ ತಾಣಗಳನ್ನು ಜೀರ್ಣೋದ್ಧಾರ ಮಾಡುವಲ್ಲಿ ಇವರ ಟ್ರಸ್ಟ್ ಹೆಗ್ಗುರುತಿನ ಕೆಲಸ ಮಾಡಿದೆ.