ತಮಿಳುನಾಡು ಸಿಎಂ ವಿಜಯ್ ಅವರು ವಿಧಾನಸಭೆಯಲ್ಲಿ ಮಾಡಿದ ದವಡೆಯ ಸನ್ನೆಯು, ಮಾಜಿ ಸಿಎಂ ಸ್ಟಾಲಿನ್ ಅವರ ಹಳೆಯ ಗಾಯವನ್ನು ಅಣಕಿಸಿದೆ ಎಂದು ಡಿಎಂಕೆ ಆರೋಪಿಸಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ತಮಿಳುನಾಡು ಮುಖ್ಯಮಂತ್ರಿ ಹಾಗೂ 'ತಮಿಳಗ ವೆಟ್ರಿ ಕಳಗಂ' (TVK) ಮುಖ್ಯಸ್ಥ ಸಿ. ಜೋಸೆಫ್ ವಿಜಯ್ ಅವರು ಇತ್ತೀಚೆಗೆ ಶಾಸನಸಭೆಯಲ್ಲಿ ಗಂಭೀರ ಭಾಷಣ ಮಾಡುವಾಗ ತಮ್ಮ ದವಡೆಗೆ (Jaw) ಕೈಯಿಟ್ಟು ಮಾಡಿದ ಸಣ್ಣ ಸನ್ನೆ/ಹಾವಭಾವವು ಭಾರಿ ರಾಜಕೀಯ ಕಾಳಗಕ್ಕೆ ಕಾರಣವಾಗಿದೆ. ವಿಧಾನಸಭೆಯಲ್ಲಿ ಪ್ರತಿಪಕ್ಷ ಡಿಎಂಕೆ (DMK) ವಿರುದ್ಧ ವಾಗ್ದಾಳಿ ನಡೆಸುವ ವೇಳೆ ವಿಜಯ್ ಈ ರೀತಿ ಹಾವಭಾವ ಪ್ರದರ್ಶಿಸಿದ್ದರು. ಇದು ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಅವರ ದೈಹಿಕ ಸ್ಥಿತಿ ಮತ್ತು 50 ವರ್ಷಗಳ ಹಿಂದೆ ಅವರಿಗೆ ಜೈಲಿನಲ್ಲಿ ಆಗಿದ್ದ ಗಾಯವನ್ನು ಅಣಕಿಸಲು ಮಾಡಿದ 'ಬಾಡಿ ಶೇಮಿಂಗ್' (Body Shaming) ಸನ್ನೆ ಎಂದು ವಿಪಕ್ಷ ನಾಯಕರು ಗಂಭೀರ ಆರೋಪ ಮಾಡಿದ್ದಾರೆ.
ಆ ಅವಧಿಯಲ್ಲಿ ಸ್ಟಾಲಿನ್‌ಗೆ ಏನಾಗಿತ್ತು?
ಜೂನ್ 25, 1975 ರಂದು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಜನವರಿ 1976 ರಲ್ಲಿ ಕರುಣಾನಿಧಿ ನೇತೃತ್ವದ ಡಿಎಂಕೆ ಸರ್ಕಾರವನ್ನು ವಜಾಗೊಳಿಸಿದ ನಂತರ 'ಮಿಸಾ' (MISA - Maintenance of Internal Security Act) ಕಾಯ್ದೆಯಡಿ ಹಲವು ನಾಯಕರನ್ನು ಬಂಧಿಸಲಾಯಿತು. ಆ ವೇಳೆ ಯುವ ನಾಯಕನಾಗಿದ್ದ ಎಂ.ಕೆ. ಸ್ಟಾಲಿನ್ ಅವರನ್ನು ಬಂಧಿಸಿ ಮದ್ರಾಸ್ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿತ್ತು. ಜೈಲಿನಲ್ಲಿ ನಡೆದ ಭೀಕರ ಪೊಲೀಸ್ ಹಲ್ಲೆಯಿಂದಾಗಿ ಸ್ಟಾಲಿನ್ ಅವರ ದವಡೆಯ ಮೂಳೆ ಮುರಿದಿತ್ತು (Jaw Fracture). ಡಿಎಂಕೆ ನಾಯಕರು ಇದನ್ನು ಪ್ರಜಾಪ್ರಭುತ್ವದ ರಕ್ಷಣೆಗೆ ಸ್ಟಾಲಿನ್ ಅನುಭವಿಸಿದ ‘ತ್ಯಾಗದ ಗುರುತು’ ಎಂದು ಪರಿಗಣಿಸುತ್ತಾರೆ.
ಟಿವಿಕೆ ನಾಯಕರ ವಾದ ಮತ್ತು ಮಿಸಾ ಬಂಧನದ ಪ್ರಶ್ನೆ!
ವಿಪಕ್ಷಗಳ ದಾಳಿಗೆ ಪ್ರತ್ಯುತ್ತರ ನೀಡಿದ ಟಿವಿಕೆ ನಾಯಕರು ಹಾಗೂ ಸಚಿವ ಎನ್‌ಟಿಆರ್ ನಿರ್ಮಲ್ ಕುಮಾರ್, "ಮಿಸಾ ಅವಧಿಯಲ್ಲಿ ಬಂಧನಕ್ಕೊಳಗಾದ ಪ್ರತಿಯೊಂದು ಪ್ರಕರಣಕ್ಕೂ ರಾಜಕೀಯ ತತ್ವಗಳೇ ಕಾರಣವಾಗಿರಲಿಲ್ಲ" ಎಂದು ಸಭೆಯಲ್ಲಿ ಹೇಳಿದ್ದಾರೆ. ಅಂದಿನ ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ನೀಡಿದ ಹೇಳಿಕೆಗಳಿಗಾಗಿ ಸ್ಟಾಲಿನ್ ಬಂಧನವಾಗಿರಬಹುದು ಮತ್ತು ಮಿಸಾ ಕಾಯ್ದೆಯಡಿ ಬಂಧನವಾದ ಬಗ್ಗೆ ನಿಖರ ದಾಖಲೆಗಳಿವೆಯೇ ಎಂಬುದನ್ನು ಇಸ್ಮಾಯಿಲ್ ಆಯೋಗದ ವರದಿಗಳ ಹಿನ್ನೆಲೆಯಲ್ಲಿ ಮರುಪರಿಶೀಲಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ಡಿಎಂಕೆ ಮತ್ತು ಕಮ್ಯುನಿಸ್ಟ್ ಪಕ್ಷಗಳ ತೀವ್ರ ಆಕ್ರೋಶ!
ಈ ಘಟನೆಯನ್ನು ಡಿಎಂಕೆ ಕಟುವಾಗಿ ಖಂಡಿಸಿದೆ. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಮ್ ಸೇರಿದಂತೆ ಎಡಪಕ್ಷಗಳ ನಾಯಕರು, "ರಾಜಕೀಯ ವಿರೋಧಕ್ಕೆ ಸೈದ್ಧಾಂತಿಕವಾಗಿ ಉತ್ತರಿಸಬೇಕೇ ಹೊರತು, ಪ್ರಜಾಪ್ರಭುತ್ವಕ್ಕಾಗಿ ಹೋರಾಡಿ ಜೈಲು ಹಿಂಸೆ ಅನುಭವಿಸಿದ ನಾಯಕನ ದೈಹಿಕ ನ್ಯೂನತೆ ಅಥವಾ ಗಾಯವನ್ನು ಅಣಕಿಸುವುದು ಹಿರಿಯ ಹುದ್ದೆಯಲ್ಲಿರುವವರಿಗೆ ಶೋಭೆಯಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಜಯ್ ನೀಡಿದ ಸ್ಪಷ್ಟನೆ ಏನು?
ವಿವಾದ ಭುಗಿಲೆದ್ದ ಬೆನ್ನಲ್ಲೇ 'ಎಕ್ಸ್' (X) ಖಾತೆಯಲ್ಲಿ ಸ್ಪಷ್ಟನೆ ನೀಡಿದ ಸಿಎಂ ವಿಜಯ್, "ನನ್ನ ಭಾಷಣದ ಮಧ್ಯೆ ವ್ಯಕ್ತವಾದ ಆ ಹಾವಭಾವವು ತೀರಾ ಸಹಜವಾಗಿ ಬಂದದ್ದೇ ಹೊರತು ಯಾವುದೇ ದುರುದ್ದೇಶ ಅಥವಾ ಯಾರನ್ನೂ ವೈಯಕ್ತಿಕವಾಗಿ ನೋಯಿಸುವ ಉದ್ದೇಶ ನನಗಿರಲಿಲ್ಲ. ದಯವಿಟ್ಟು ಇದನ್ನು ಯಾರ ಭಾವನೆಗಳಿಗೂ ಧಕ್ಕೆ ತರುವ ಕೃತ್ಯವೆಂದು ವ್ಯಾಖ್ಯಾನಿಸಬೇಡಿ" ಎಂದು ಮನವಿ ಮಾಡಿ ವಿವಾದಕ್ಕೆ ತೆರೆ ಎಳೆಯಲು ಯತ್ನಿಸಿದ್ದಾರೆ.


