ಭಾರತದಲ್ಲಿ ಎಷ್ಟು ಮಂದಿ ಹಿಂದೂಗಳು ನಾನ್‌ವೆಜ್ ಸೇವಿಸುತ್ತಾರೆ? ಕರ್ನಾಟಕದ ಸ್ಥಿತಿ ಏನು? ಕೇಂದ್ರ ಸರ್ಕಾರದ ಅಧಿಕೃತ 'ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ' (NFHS-5) ಹಾಗೂ ಪಶುಸಂಗೋಪನಾ ಇಲಾಖೆಯ ವರದಿ ಏನು ಹೇಳುತ್ತದೆ? ಇಲ್ಲಿದೆ ಸಂಪೂರ್ಣ ವಿವರ.
ನವದೆಹಲಿ: ಭಾರತವನ್ನು ಪ್ರಪಂಚದಾದ್ಯಂತ ಹೆಚ್ಚಾಗಿ ಸಸ್ಯಾಹಾರಿಗಳ ದೇಶ ಎಂದೇ ಬಿಂಬಿಸಲಾಗುತ್ತದೆ. ಆದರೆ ವಾಸ್ತವದ ಅಂಕಿ-ಅಂಶಗಳು ತೀರಾ ಭಿನ್ನ. ಇತ್ತೀಚೆಗೆ ಖ್ಯಾತ ಧಾರ್ಮಿಕ ಪ್ರವಚನಕಾರ ಧೀರೇಂದ್ರ ಶಾಸ್ತ್ರಿ ಅವರು ಪಶ್ಚಿಮ ಬಂಗಾಳದಲ್ಲಿ ನವರಾತ್ರಿಯ ವೇಳೆ ಮಾಂಸಾಹಾರ ಸೇವಿಸುವುದರ ವಿರುದ್ಧ ನೀಡಿದ ಹೇಳಿಕೆ.. ದೇಶಾದ್ಯಂತ ಆಹಾರ ಪದ್ಧತಿ ಮತ್ತು ಧರ್ಮದ ಕುರಿತ ಹೊಸ ಚರ್ಚೆ ಹುಟ್ಟುಹಾಕಿದೆ.
ಹಾಗಾದರೆ ಭಾರತದಲ್ಲಿ ಎಷ್ಟು ಮಂದಿ ಹಿಂದೂಗಳು ನಾನ್‌ವೆಜ್ ಸೇವಿಸುತ್ತಾರೆ? ಕರ್ನಾಟಕದ ಸ್ಥಿತಿ ಏನು? ಕೇಂದ್ರ ಸರ್ಕಾರದ ಅಧಿಕೃತ 'ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ' (NFHS-5) ಹಾಗೂ ಪಶುಸಂಗೋಪನಾ ಇಲಾಖೆಯ ವರದಿ ಏನು ಹೇಳುತ್ತದೆ? ಇಲ್ಲಿದೆ ಸಂಪೂರ್ಣ ವಿವರ.
ಕೇಂದ್ರ ಸರ್ಕಾರದ NFHS-5 (ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ) ವರದಿಯ ಪ್ರಕಾರ.. ಭಾರತದಲ್ಲಿ ಶೇಕಡಾ 78% ಹಿಂದೂಗಳು ಯಾವುದಾದರೂ ಒಂದು ರೂಪದಲ್ಲಿ ಮಾಂಸಾಹಾರ (ಚಿಕನ್, ಮಟನ್, ಮೀನು ಅಥವಾ ಮೊಟ್ಟೆ) ಸೇವಿಸುತ್ತಾರೆ. ಜನಸಂಖ್ಯೆಯ ಲೆಕ್ಕಾಚಾರದಲ್ಲಿ ನೋಡುವುದಾದರೆ ಇದು ಬರೋಬ್ಬರಿ 65 ಕೋಟಿಗೂ ಅಧಿಕ ಹಿಂದೂಗಳಾಗಿದ್ದಾರೆ. ಇತರ ಧರ್ಮಗಳಿಗೆ ಹೋಲಿಸಿದರೆ, ಮುಸ್ಲಿಮರಲ್ಲಿ ಸುಮಾರು 98% ಮತ್ತು ಕ್ರಿಶ್ಚಿಯನ್ನರಲ್ಲಿ 98% ಮಂದಿ ಮಾಂಸಾಹಾರಿಗಳಾಗಿದ್ದಾರೆ. ಸಂಪೂರ್ಣ ಸಸ್ಯಾಹಾರಿಗಳೆಂದು ಪರಿಗಣಿಸಲಾಗುವ ಜೈನ ಸಮುದಾಯದಲ್ಲೂ ಸುಮಾರು 15% ಮಂದಿ ಮಾಂಸಾಹಾರ ಸೇವಿಸುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ. ಈ ಅಂಕಿ-ಅಂಶಗಳು ಭಾರತದಲ್ಲಿ ಆಹಾರ ಪದ್ಧತಿಯು ಕೇವಲ ಧರ್ಮದ ಆಧಾರದ ಮೇಲೆ ನಿರ್ಧಾರವಾಗದೆ, ಭೌಗೋಳಿಕ ಪರಿಸರ ಮತ್ತು ಸ್ಥಳೀಯ ಸಂಸ್ಕೃತಿಯ ಮೇಲೆ ನಿಂತಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.
ಕರ್ನಾಟಕದಲ್ಲಿ ಎಷ್ಟು ಮಂದಿ ನಾನ್‌ವೆಜ್ ತಿನ್ನುತ್ತಾರೆ?
ದಕ್ಷಿಣ ಭಾರತದ ಇತರ ರಾಜ್ಯಗಳಂತೆಯೇ ಕರ್ನಾಟಕದಲ್ಲೂ ಮಾಂಸಾಹಾರ ಸೇವಿಸುವವರ ಸಂಖ್ಯೆ ಗಣನೀಯವಾಗಿದೆ. NFHS-5 ಸಮೀಕ್ಷೆಯ ಪ್ರಕಾರ.. ಕರ್ನಾಟಕದಲ್ಲಿ ಸುಮಾರು 78% ರಿಂದ 80% ರಷ್ಟು ಜನಸಂಖ್ಯೆ ಮಾಂಸಾಹಾರ ಸೇವಿಸುತ್ತದೆ. ಇದರಲ್ಲಿ ಪುರುಷರ ಪ್ರಮಾಣ ಸುಮಾರು 82% ಇದ್ದರೆ, ಮಹಿಳೆಯರ ಪ್ರಮಾಣ ಸುಮಾರು 76% ರಷ್ಟಿದೆ. ಕರಾವಳಿ ಭಾಗದಲ್ಲಿ ಸಮುದ್ರಾಹಾರ ದೈನಂದಿನ ಆಹಾರದ ಮುಖ್ಯ ಭಾಗವಾಗಿದ್ದರೆ, ಹಳೆ ಮೈಸೂರು ಹಾಗೂ ಉತ್ತರ ಕರ್ನಾಟಕ ಭಾಗಗಳಲ್ಲಿ ಮಟನ್, ನಾಟಿ ಕೋಳಿ ಮತ್ತು ಚಿಕನ್ ಊಟ ಹೆಚ್ಚು ಜನಪ್ರಿಯ. ಉಳಿದ 20% ರಿಂದ 22% ಮಂದಿ ಮಾತ್ರ ಶುದ್ಧ ಸಸ್ಯಾಹಾರಿಗಳಾಗಿದ್ದಾರೆ.
ರಾಜ್ಯವಾರು ವರದಿ
- ತೆಲಂಗಾಣ: 99% (ದೇಶದಲ್ಲೇ ನಂಬರ್ 1)
- ಪಶ್ಚಿಮ ಬಂಗಾಳ: 98% (ಮೀನು ಮತ್ತು ಮಾಂಸ ಮುಖ್ಯ ಆಹಾರ)
- ಆಂಧ್ರಪ್ರದೇಶ: 96% ಕ್ಕಿಂತ ಹೆಚ್ಚು
- ತಮಿಳುನಾಡು: 97%
- ಕೇರಳ: 97%
- ಒಡಿಶಾ: 98%
- ಈಶಾನ್ಯ ರಾಜ್ಯಗಳು (ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್): 95% ರಿಂದ 98%
ಕಡಿಮೆ ಮಾಂಸಾಹಾರ
- ರಾಜಸ್ಥಾನ: ಕೇವಲ 25% ಮಂದಿ ಮಾತ್ರ ಮಾಂಸಾಹಾರಿಗಳು
- ಹರಿಯಾಣ: ಕೇವಲ 30% ಮಂದಿ ನಾನ್‌ವೆಜ್ ತಿನ್ನುತ್ತಾರೆ
- ಪಂಜಾಬ್: ಸುಮಾರು 35% ಮಂದಿ ಮಾಂಸಾಹಾರಿಗಳು
- ಗುಜರಾತ್: 40% ರಷ್ಟು ಮಾತ್ರ ಮಾಂಸಾಹಾರಿಗಳು
- ಉತ್ತರ ಪ್ರದೇಶ: ಸುಮಾರು 55% ರಿಂದ 65% ಮಂದಿ ಮಾಂಸಾಹಾರಿಗಳು
ಮಾಂಸ ಉತ್ಪಾದನೆಯಲ್ಲಿ ವಿಶ್ವದಲ್ಲೇ ಭಾರತಕ್ಕೆ 4ನೇ ಸ್ಥಾನ!
ಕೇಂದ್ರ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ (2024-25) ಅಂಕಿ-ಅಂಶಗಳ ಪ್ರಕಾರ..ಭಾರತದಲ್ಲಿ ಒಬ್ಬ ವ್ಯಕ್ತಿಗೆ ವರ್ಷಕ್ಕೆ ಸರಾಸರಿ 7.51 ಕೆಜಿ ಮಾಂಸ ಲಭ್ಯವಿದೆ (ದಿನಕ್ಕೆ ತಲಾ 20.6 ಗ್ರಾಂ). ಭಾರತವು ವಿಶ್ವದಲ್ಲೇ ಮಾಂಸ ಉತ್ಪಾದನೆಯಲ್ಲಿ 4ನೇ ಸ್ಥಾನದಲ್ಲಿದೆ.
ದೇಶದ ಒಟ್ಟು ಮಾಂಸ ಉತ್ಪಾದನೆ 2014-15ರಲ್ಲಿ 6.69 ಮಿಲಿಯನ್ ಟನ್‌ಗಳಷ್ಟಿತ್ತು. ಅದು 2024-25ರ ವೇಳೆಗೆ 10.50 ಮಿಲಿಯನ್ ಟನ್‌ಗಳಿಗೆ ಏರಿಕೆಯಾಗಿದೆ. ಒಟ್ಟು ಉತ್ಪಾದನೆಯಲ್ಲಿ ಚಿಕನ್ (ಕೋಳಿ ಮಾಂಸ) ಅಗ್ರಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಕುರಿ, ಮೇಕೆ ಮತ್ತು ಎಮ್ಮೆ ಮಾಂಸಗಳಿವೆ.
ಅತಿ ಹೆಚ್ಚು ಉತ್ಪಾದಿಸುವ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳ (12.46%), ಉತ್ತರ ಪ್ರದೇಶ (12.20%), ಮಹಾರಾಷ್ಟ್ರ (11.57%), ಆಂಧ್ರಪ್ರದೇಶ (10.84%) ಮತ್ತು ತೆಲಂಗಾಣ (10.49%). ಕಳೆದ ಎರಡು ದಶಕಗಳಲ್ಲಿ ಭಾರತೀಯರ ಆಹಾರ ಶೈಲಿ ಗಮನಾರ್ಹವಾಗಿ ಬದಲಾಗಿದೆ. 2006ರಲ್ಲಿ ಶೇ. 80% ರಷ್ಟಿದ್ದ ಪುರುಷ ಮಾಂಸಾಹಾರಿಗಳ ಸಂಖ್ಯೆ 2021ರ ವೇಳೆಗೆ 87% ಗೆ ಏರಿಕೆಯಾಗಿದೆ. 2006ರಲ್ಲಿ ಶೇ. 71% ರಷ್ಟಿದ್ದ ಮಹಿಳಾ ಮಾಂಸಾಹಾರಿಗಳ ಪ್ರಮಾಣ 2021ರ ಹೊತ್ತಿಗೆ 75% ತಲುಪಿದೆ. ಭಾರತ ಕೇವಲ ಸಸ್ಯಾಹಾರಿಗಳ ದೇಶ ಎಂಬ ಕಲ್ಪನೆಗೆ ಅಧಿಕೃತ ಅಂಕಿ-ಅಂಶಗಳು ತದ್ವಿರುದ್ಧವಾಗಿವೆ. ಬಹುಸಂಖ್ಯಾತ ಹಿಂದೂಗಳು ಸೇರಿದಂತೆ ಬಹುತೇಕ ಭಾರತೀಯರಿಗೆ ಮಾಂಸಾಹಾರವು ಜೀವನಶೈಲಿ, ಭೌಗೋಳಿಕತೆ ಮತ್ತು ಸಾಂಸ್ಕೃತಿಕ ಅಸ್ಮಿತೆಯ ಭಾಗವಾಗಿದೆ.


