ಕೆನಡಾದಲ್ಲಿ 12 ವರ್ಷಗಳ ಹಿಂದೆ ತೋಟದಲ್ಲಿ ಕಳೆದುಹೋಗಿದ್ದ ವಜ್ರದ ಉಂಗುರವೊಂದು, ಮನೆಯಲ್ಲಿ ಬೆಳೆದ ಕ್ಯಾರೆಟ್‌ನಲ್ಲಿ ಸಿಕ್ಕಿದೆ. ಸೊಸೆಗೆ ಸಿಕ್ಕ ಈ ಉಂಗುರವನ್ನು ನೋಡಿ ಅತ್ತೆ ಭಾವುಕರಾಗಿದ್ದು, ಈ ರೋಚಕ ಘಟನೆ ಎಲ್ಲರ ಗಮನ ಸೆಳೆದಿದೆ.
ಕೆಲವೊಮ್ಮೆ ಅದೃಷ್ಟ ಎನ್ನುವುದು ಹೇಗೋ ಬಂದುಬಿಡುತ್ತದೆ. ಯಾವುದೋ ಒಂದು ವಸ್ತುವನ್ನು ಅನುಭವಿಸುವ ಹಕ್ಕು ಅವರಿಗೆ ಇಲ್ಲದಾಗ, ಅದು ಏನು ಮಾಡಿದರೂ ಅವರಿಗೆ ದಕ್ಕುವುದೇ ಇಲ್ಲ, ಆ ವಸ್ತುವಿನ ಮೇಲೆ ಯಾರ ಹೆಸರು ಬರೆದಿರುತ್ತದೆಯೋ ಅದು ಅವರಿಗೇ ಸಿಗುತ್ತದೆ ಎನ್ನುವ ಮಾತಿದೆ. ಅದಕ್ಕೆ ಸಾಕ್ಷಿಯಾಗಿ ನಿಂತಿದೆ ಇಲ್ಲೊಂದು ರೋಚಕ ಘಟನೆ. ಮನೆಯಲ್ಲಿ ಬೆಳೆದ ಕ್ಯಾರೆಟ್‌ನಲ್ಲಿ ವಜ್ರದ ಉಂಗುರ ಸಿಕ್ಕಿರುವ ಘಟನೆ ಇದಾಗಿದ್ದು, ಇದು ಸಿನಿಮಾದ ಸ್ಟೋರಿಯನ್ನು ಮೀರಿಸುವಂತೆ ಇದೆ.
ಈ ಘಟನೆ ನಡೆದಿರುವುದು 2014ರಲ್ಲಿ. ಕೆನಡಾದಲ್ಲಿ ನಡೆದಿರುವ ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಮತ್ತೆ ವೈರಲ್ ಆಗುತ್ತಲೇ ಇರುತ್ತದೆ. ಇದಕ್ಕೆ ಕಾರಣ, 2014ರಲ್ಲಿ ಕಳೆದುಹೋಗಿದ್ದ ವಜ್ರದ ಉಂಗುರವೊಂದು ಕ್ಯಾರೆಟ್‌ನಲ್ಲಿ 12 ವರ್ಷಗಳ ನಂತರ ಪತ್ತೆಯಾಗಿರೋ ಸ್ಟೋರಿ ಇದು. ಆಲ್ಬರ್ಟಾದಲ್ಲಿನ ನಡೆದ ಈ ಘಟನೆ ಈಗ ವಿಶ್ವದ ಗಮನ ಸೆಳೆದಿದೆ.
ಏನಿದು ಘಟನೆ?
84 ವರ್ಷದ ಮೇರಿ ಗ್ರಾಂಸ್ 2014ರಲ್ಲಿ, ತೋಟದ ಕೆಲಸ ಮಾಡುವ ಸಂದರ್ಭದಲ್ಲಿ ಕಳೆ ಕೀಳುವಾಗ ವಜ್ರದ ಉಂಗುರವನ್ನು ಕಳೆದುಕೊಂಡಿದ್ದರು. ಆ ಸಮಯದಲ್ಲಿ ಅವರಿಗೆ ಅದರ ಅರಿವು ಬಂದಿರಲೇ ಇಲ್ಲ. ಆ ಬಳಿಕ ಎಲ್ಲಿ ಹುಡುಕಿದರೂ ಉಂಗುರ ಸಿಗಲೇ ಇಲ್ಲ. ಈ ವಿಷಯವನ್ನು ಅವರು ತಮ್ಮ ಮಗನ ಬಳಿ ಹೇಳಿದ್ರು ಬಿಟ್ಟರೆ, ಬೇರೆ ಯಾರ ಬಳಿಯೂ ಹೇಳುವ ಧೈರ್ಯ ಮಾಡಿರಲಿಲ್ಲ. ಆದರೆ ಮದುವೆಯ ಉಂಗುರ, ಅಷ್ಟು ಸುದೀರ್ಘ ಅವಧಿಯವರೆಗೆ ಪತಿಯ ನೆನಪಾಗಿ ಇಟ್ಟುಕೊಂಡಿದ್ದ ಉಂಗುರ ಕಾಣೆಯಾಗಿರುವ ಬಗ್ಗೆ ದುಃಖಿಸುತ್ತಲೇ ಇದ್ದಳು. ಆಗ ಅವಳ ಗಂಡ ಕೂಡ ಬದುಕಿದ್ದ. ಆದರೆ ಅವನಿಗೂ ವಿಷಯವನ್ನು ಆಕೆ ತಿಳಿಸದೇ ಗೋಪ್ಯವಾಗಿ ಇಟ್ಟುಕೊಂಡಿದ್ದಳು. ಯಾರಿಗೂ ತಿಳಿಯದಂತೆ ಅದೇ ರೀತಿಯ ಉಂಗುರ ಒಂದನ್ನು ಮಾರ್ಕೆಟ್ನಿಂದ ಖರೀದಿಸಿ ಎಲ್ಲರಿಗೂ ಟೋಪಿ ಹಾಕಿದ್ದಳು.
ಸೊಸೆಗೆ ಸಿಕ್ಕಿತು ಉಂಗುರ
ಅದಾಗಿ 12 ವರ್ಷಗಳ ಬಳಿಕ, ಅವರ ಸೊಸೆ, ಅರ್ಥಾತ್ ಯಾರಿಗೆ ಮೇರಿ ಗ್ರಾಂಸ್ ಉಂಗುರದ ರಹಸ್ಯ ಹೇಳಿದ್ದಳೋ ಅವನ ಪತ್ನಿ ಕಾಲೀನ್ ಡೇಲಿ ತೋಟದಲ್ಲಿ ಕ್ಯಾರೆಟ್ ಹೊರತೆಗೆದಾಗ, ಆ ಉಂಗುರ ಸಿಕ್ಕಿತು. ಉಂಗುರದ ಒಳಗೇ ಕ್ಯಾರೆಟ್ ಹುಟ್ಟಿಕೊಂಡಿತ್ತು! ಕ್ಯಾರೆಟ್ ಉಂಗುರದ ಮೂಲಕ ನೇರವಾಗಿ ಬೆಳೆದಿತ್ತು, ಇದರಿಂದಾಗಿ ಹಲವು ವರ್ಷಗಳ ಕಾಲ ಮಣ್ಣಿನಲ್ಲಿ ಅಡಗಿಕೊಂಡಿದ್ದ ನಂತರ ಅದನ್ನು ಕಿತ್ತು ತೆಗೆಯಲು ಸಾಧ್ಯವಾಯಿತು. ಕೂಡಲೇ ಅವಳು ಅದನ್ನು ಗಂಡನಿಗೆ ತೋರಿಸಿದಳು. ಗಂಡನಿಗೆ ಇದು ತನ್ನ ಅಮ್ಮನ ಉಂಗುರವೇ ಎಂದು ತಿಳಿಯಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಅದೃಷ್ಟಕ್ಕೆ ಅಮ್ಮ ಬದುಕಿದ್ದಳು. ಮಗ ಅದನ್ನು ತೆಗೆದುಕೊಂಡು ಅಮ್ಮನಿಗೆ ಕೊಟ್ಟಾಗ ಆಕೆ ಕಣ್ಣೀರಾದಳು. ಆದರೆ ಪತಿಗೆ ವಿಷಯ ತಿಳಿಸಲು ಆತ ಐದು ವರ್ಷದ ಹಿಂದೆಯೇ ನಿಧನರಾಗಿಬಿಟ್ಟರು ಎಂದು ದುಃಖಿಸಿದಳು.
ಕ್ಯಾರೆಟ್‌ನಲ್ಲಿ ಯಾರಾದರೂ ವಜ್ರದ ಉಂಗುರವನ್ನು ಕಂಡುಕೊಂಡಿದ್ದು ಇದೇ ಮೊದಲಲ್ಲ. 2011 ರಲ್ಲಿ, ಸ್ವೀಡಿಷ್ ಮಹಿಳೆಯೊಬ್ಬರು ತಮ್ಮ ಮದುವೆಯ ಉಂಗುರವನ್ನು ಕಳೆದುಕೊಂಡ 16 ವರ್ಷಗಳ ನಂತರ ಅದನ್ನು ಕಂಡುಕೊಂಡಿದ್ದರು ಎಂದು ವರದಿಯಾಗಿದೆ!


