ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಸ್ಪರ್ಧಿಗಳಿಗೆ ಕಾದಿದೆ ದೊಡ್ಡ ಶಾಕ್! 5 ದಿನಕಳೆದರೂ ಬಿಗ್ ಬಾಸ್ ಮನೆಯೊಳಗೆ ಕಾಲಿಡದೆ ವಿಮಾನದಲ್ಲೇ ವಾಸ ಮಾಡುತ್ತಿರುವ 6 ಸ್ಪರ್ಧಿಗಳು, ಮೊದಲ ವಾರದಲ್ಲಿ ಅಲ್ಲಿಂದಲೇ ಎಲಿಮಿನೇಷನ್ ಆಗಲಿದ್ದಾರೆ. ಈ ವಿಚಿತ್ರ ನಿಯಮದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಕ್ಲಿಕ್ ಮಾಡಿ.
ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 13ರ ಮೊದಲ ವಾರವೇ ವೀಕ್ಷಕರಿಗೆ ಮತ್ತು ಸ್ಪರ್ಧಿಗಳಿಗೆ ದೊಡ್ಡ ಶಾಕ್ ನೀಡಿದೆ. ಬಿಗ್ ಬಾಸ್ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಕಠಿಣ ಹಾಗೂ ವಿಚಿತ್ರ ನಿಯಮವೊಂದನ್ನು ಜಾರಿಗೆ ತರಲಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಕಾರ್ಯಕ್ರಮ ಆರಂಭವಾಗಿ 4 ದಿನಗಳು ಕಳೆದರೂ, ಮನೆಗೆ ಬಂದಿರುವ 16 ಸ್ಪರ್ಧಿಗಳ ಪೈಕಿ 6 ಮಂದಿ ಇನ್ನೂ ಮುಖ್ಯವಾದ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟೇ ಇಲ್ಲ! ಬದಲಾಗಿ ಅವರು ವಿಮಾನದ (Flight Set) ಒಳಗೆಯೇ ಕಾಲ ಕಳೆಯುತ್ತಿದ್ದಾರೆ. ಎಲ್ಲಕ್ಕಿಂತ ಆಘಾತಕಾರಿ ವಿಷಯವೆಂದರೆ, ಮೊದಲ ವಾರದಲ್ಲಿ ಎಲಿಮಿನೇಟ್ ಆಗುವ ಸ್ಪರ್ಧಿ ಮನೆಯ ಒಳಹೋಗದೆಯೇ ವಿಮಾನದಿಂದಲೇ ನೇರವಾಗಿ ತಮ್ಮ ಮನೆಗೆ ವಾಪಸ್ ಹೋಗಬೇಕಾಗುತ್ತದೆ!
ಏನಿದು ವಿಮಾನದ ಚಟುವಟಿಕೆ?
ಆರಂಭದ ದಿನವೇ ವಿಮಾನದಲ್ಲಿ ಕುಳಿತಿದ್ದ ಎಲ್ಲಾ 16 ಸದಸ್ಯರಿಗೆ ಒಂದು ಟಾಸ್ಕ್ ನೀಡಲಾಗಿತ್ತು. ಒಬ್ಬರನ್ನು ಹಾರ ಹಾಕಿ ಸ್ವಾಗತಿಸುವುದು ಹಾಗೂ ಇನ್ನೊಬ್ಬರ ಫೋಟೋವನ್ನು ಸೂಟ್‌ಕೇಸ್‌ಗೆ ಅಂಟಿಸಿ ವಿಮಾನದಿಂದ ಹೊರಗೆ ಹಾಕುವುದು ಈ ಚಟುವಟಿಕೆಯಾಗಿತ್ತು. ಇದರಲ್ಲಿ ಹಾರ ಪಡೆದವರು ಹಾಗೂ ಸೂಟ್‌ಕೇಸ್ ಹೊರಹಾಕಿಸಿಕೊಳ್ಳದ 7 ಜನರು ಮತ್ತು ಯಾವುದೇ ಹಾರ ಪಡೆಯದಿದ್ದರೂ ವಿರೋಧ ಎದುರಿಸದ ಯಶಸ್ ಕೃಷ್ಣ ಸೇರಿದಂತೆ ಒಟ್ಟು 8 ಮಂದಿ ಅದೃಷ್ಟವಶಾತ್ ಮನೆಯೊಳಗೆ ಪ್ರವೇಶ ಪಡೆದರು. ಆದರೆ, ಜನಸಾಮಾನ್ಯರ ಕೋಟಾದಿಂದ ಬಂದ ನಾಲ್ವರು ಹಾಗೂ ನಾಲ್ವರು ಸೆಲೆಬ್ರಿಟಿಗಳು ಸೇರಿದಂತೆ ಉಳಿದ 8 ಮಂದಿ ವಿಮಾನದಲ್ಲೇ ಉಳಿದುಕೊಂಡರು. ನಿಯಮದ ಪ್ರಕಾರ, ಈ ಎಂಟೂ ಜನರು ನೇರವಾಗಿ ಮೊದಲ ವಾರದ ಎಲಿಮಿನೇಷನ್‌ಗೆ ನಾಮಿನೇಟ್ ಆಗಿದ್ದರು.
ವಿಮಾನಕ್ಕೆ ಬಂದ, ಓಂ ಪ್ರಕಾಶ್, ಆಸಿಯಾ ಫಿರ್ದೋಸ್!
ಮನೆಯೊಳಗೆ ಹೋದ 8 ಸ್ಪರ್ಧಿಗಳಿಗೆ ನಡೆಸಲಾದ 'ಡೈಮಂಡ್ ಚಟುವಟಿಕೆ'ಯಲ್ಲಿ ತಪ್ಪು ನಿರ್ಧಾರಕ್ಕೆ ಬಲಿಯಾದ ಸ್ಪರ್ಧಿ ಆಸಿಯಾ ಫಿರ್ದೋಸ್, ಮನೆಯಿಂದ ಮತ್ತೆ ವಾಪಸ್ ವಿಮಾನಕ್ಕೆ ಕಳುಹಿಸಲ್ಪಟ್ಟಿದ್ದಾರೆ. ಇದಾದ ನಂತರ ಆಹಾರಗಳನ್ನು ತಿನ್ನುವ ಟಾಸ್ಕ್‌ನಲ್ಲಿ ಪ್ರಯಾಣಿಕರ ತಂಡದಲ್ಲಿ ಗೆಲುವು ದಾಧಿಸಿದ್ದಕ್ಕೆ ಮಾಡ್ರನ್ ಮಹಾಕವಿ ಮಂಜು ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಪಡೆಯುತ್ತಾರೆ. ಈ ವೇಳೆ ಸೋತ ತಂಡದಿಂದ ಓಂ ಪ್ರಕಾಶ್ ರಾವ್ ಅವರು ಪುನಃ ವಿಮಾನದೊಳಗೆ ಪ್ರಯಾಣಿಕ ತಂಡಕ್ಕೆ ವಾಪಸ್ ಬರುತ್ತಾರೆ.
ನಂತರ ನಡೆಸಲಾದ ರಸಪ್ರಶ್ನೆ ಟಾಸ್ಕ್‌ನಲ್ಲಿ ಮನೆಯೊಳಗಿನ ತಂಡವು ಮೈನಸ್ 2 ಅಂಕದೊಂದಿಗೆ ಗೆಲುವು ಸಾಧಿಸಿ ಜಗ ಮಮ್ಮಿಗೆ ಇಮ್ಯೂನಿಟಿ ಕೊಡಲಾಗುತ್ತದೆ. ಜೊತೆಗೆ, ಪ್ರಯಾಣಿಕ ತಂಡದಲ್ಲಿ ಧನುಷ್‌ಗೆ ಮನೆಯೊಳಗೆ ಬರದಂತೆ ನೇರವಾಗಿ ನಾಮಿನೇಟ್ ಮಾಡಲಾಗುತ್ತದೆ. ಜೊತೆಗೆ ನಾಲ್ಕನೇ ದಿನ ನಡೆಸಲಾದ ಸ್ವಮ್ಮಿಂಗ್ ಪೂಲ್‌ನಲ್ಲಿರುವವರಿಗೆ ಟ್ಯೂಬ್ ರಿಂಗ್ ಹಾಕುವ ಸ್ಪರ್ಧೆಯಲ್ಲಿ ವಿಮಾನ ಪ್ರಯಾಣಿಕರ ತಂಡವು ಗೆಲ್ಲುತ್ತದೆ. ಇದರಿಂದ ಪ್ರಯಾಣಿಕ ತಂಡದಿಂದ ಲಿಖಿತ್ ಗೋಂಡಿ ಅವರು ಬಿಗ್ ಬಾಸ್ ಮನೆಯೊಳಗೆ ಬರುತ್ತಾರೆ. ಆದರೆ, ಇನ್ನೂ 6 ಜನರು ಬಿಗ್ ಬಾಸ್ ಮನೆಯೊಳಗೇ ಹೋಗಿಲ್ಲ. ಹೀಗಿರುವಾಗ ಇವರಲ್ಲಿ ಒಬ್ಬರು ವಾರಾಂತ್ಯದಲ್ಲಿ ರಿಯಾಲಿಟಿ ಶೋ ಸ್ಪರ್ಧೆಯಿಂದಲೇ ಹೊರಗೆ ಬರಲಿದ್ದಾರೆ.
ಆಕ್ಟಿವಿಟಿ ರೂಮ್ ಶೌಚಾಲಯ, ನಿದ್ದೆಯಿಲ್ಲದ ರಾತ್ರಿಗಳು:
ವಿಮಾನದಲ್ಲಿರುವ ಸ್ಪರ್ಧಿಗಳ ಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ಅವರು ಅಧಿಕೃತವಾಗಿ ಬಿಗ್ ಬಾಸ್ ಮನೆಯನ್ನು ಕಣ್ತುಂಬಿಕೊಳ್ಳುವಂತಿಲ್ಲ. ಟಾಸ್ಕ್‌ಗಳನ್ನು ಆಡುವಾಗ ಬಿಗ್ ಬಾಸ್ ಮನೆಯ ಹೊರಗಿನ ಆವರಣಕ್ಕೆ ಬರುತ್ತಾರೆ, ಮನೆಯೊಳಗೆ ಕಾಲಿಡದೇ ವಾಪಸ್ ವಿಮಾನದೊಳಗೆ ಹೋಗುತ್ತಾರೆ. ನೈಸರ್ಗಿಕ ಕರೆಗಳನ್ನು ಪೂರೈಸಲು ಕೇವಲ ಆಕ್ಟಿವಿಟಿ ಏರಿಯಾದಲ್ಲಿರುವ ವಾಶ್‌ರೂಮ್ ಬಳಸಬೇಕು ಮತ್ತು ತಕ್ಷಣ ವಾಪಸ್ ವಿಮಾನಕ್ಕೆ ಬಂದು ಕುಳಿತುಕೊಳ್ಳಬೇಕು. ವಿಮಾನದ ಕಿರಿದಾದ ಸೀಟುಗಳಲ್ಲೇ ಮಲಗಿ ನಿದ್ದೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ವೀಕ್ಷಕರ ಅಸಮಾಧಾನ: ಈ ನಿರ್ಧಾರ ನ್ಯಾಯವೇ?
ಬಿಗ್ ಬಾಸ್ ಶೋಗೆ ಆಯ್ಕೆಯಾಗುವುದು ಪ್ರತಿಯೊಬ್ಬ ಸ್ಪರ್ಧಿಯ ದೊಡ್ಡ ಕನಸು. ತಿಂಗಳುಗಟ್ಟಲೆ ಸಿದ್ಧತೆ ನಡೆಸಿ, ಹತ್ತಾರು ಕನಸುಗಳನ್ನು ಹೊತ್ತು ಬರುವ ಸ್ಪರ್ಧಿಯೊಬ್ಬರು ಮುಖ್ಯ ಮನೆಯ ಸೌಂದರ್ಯವನ್ನು ಆಸ್ವಾದಿಸದೆ, ಮನೆಯೊಳಗೆ ಹೆಜ್ಜೆಯನ್ನೇ ಇಡದೆ ಕೇವಲ 7 ದಿನಗಳಲ್ಲಿ ಹೊರಹೋಗುವುದು ಎಷ್ಟು ಸರಿ? ಇದು ಆ ಸ್ಪರ್ಧಿಗೆ ಎಷ್ಟು ದೊಡ್ಡ ಮಾನಸಿಕ ಆಘಾತ ಮತ್ತು ಕಹಿ ಅನುಭವ ನೀಡಬಹುದು? ಇಂತಹ ಅಮಾನವೀಯ ಟ್ವಿಸ್ಟ್‌ಗಳ ಅಗತ್ಯವಿತ್ತೇ ಎಂದು ಬಿಗ್ ಬಾಸ್ ಪ್ರೇಕ್ಷಕರು ಪ್ರಶ್ನಿಸುತ್ತಿದ್ದಾರೆ.


