ಪತಿಯ ಕಂಪನಿಯು ಬೆಂಗಳೂರಿಗೆ ಸ್ಥಳಾಂತರಗೊಂಡಾಗ, 'ದಿ ಲೀಲಾ ಪ್ಯಾಲೇಸ್' ಹೋಟೆಲ್‌ನಲ್ಲಿ 21 ದಿನಗಳ ಐಷಾರಾಮಿ ವಾಸ್ತವ್ಯವನ್ನು ಒದಗಿಸಿತು. ಇನ್‌ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ ಆದ ಅವರ ಪತ್ನಿ ಶಿವಾಂಗಿ, ತಮಗೆ ದೊರೆತ ರಾಜೋಪಚಾರ ಮತ್ತು 'ಟವರ್ ಸೂಟ್'ನ ಅದ್ಭುತ ಸೌಲಭ್ಯಗಳ ಅನುಭವವನ್ನು ಹಂಚಿಕೊಂಡಿದ್ದಾರೆ.
ಐಟಿ ಹಾಗೂ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡುವ ನೌಕರರು ಬೇರೆ ನಗರಗಳಿಗೆ ಸ್ಥಳಾಂತರಗೊಂಡಾಗ , ಆರಂಭಿಕ ದಿನಗಳಲ್ಲಿ ಸೂಕ್ತ ಮನೆ ಹುಡುಕುವುದು ಸವಾಲಿನ ಕೆಲಸ. ಈ ಸಮಸ್ಯೆಯನ್ನು ಪರಿಹರಿಸಲು ಹಲವು ಪ್ರಮುಖ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಐಷಾರಾಮಿ ಹೋಟೆಲ್‌ಗಳಲ್ಲಿ ಉಚಿತ ವಾಸ್ತವ್ಯದ ಸೌಲಭ್ಯ ಒದಗಿಸುತ್ತವೆ. ಇತ್ತೀಚೆಗೆ ಶಿವಾಂಗಿ ಎಂಬ ಇನ್‌ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್, ತಮ್ಮ ಪತಿಯ ಕಂಪನಿಯು ಬೆಂಗಳೂರಿನ ಪ್ರತಿಷ್ಠಿತ 'ದಿ ಲೀಲಾ ಪ್ಯಾಲೇಸ್' (The Leela Palace) ಹೋಟೆಲ್‌ನಲ್ಲಿ ಒದಗಿಸಿದ 21 ದಿನಗಳ ಐಷಾರಾಮಿ ವಾಸ್ತವ್ಯದ ಅನುಭವವನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಲೀಲಾ ಪ್ಯಾಲೇಸ್‌ನಲ್ಲಿ 21 ದಿನಗಳ ರಾಯಲ್ ವಾಸ್ತವ್ಯ
ತಮ್ಮ ಪತಿಯ ಕಚೇರಿ ಕೆಲಸದ ನಿಮಿತ್ತ ಬೆಂಗಳೂರಿಗೆ ಸ್ಥಳಾಂತರಗೊಂಡ ಶಿವಾಂಗಿ ಮತ್ತು ಮನುಜ್ ದಂಪತಿ (Instagram: @theforeverjourney), ಲೀಲಾ ಪ್ಯಾಲೇಸ್‌ನ ಅತ್ಯಂತ ಐಷಾರಾಮಿ 'ಟವರ್ ಸೂಟ್'ನಲ್ಲಿ 21 ದಿನಗಳನ್ನು ಕಳೆದಿದ್ದಾರೆ. ಹೋಟೆಲ್‌ನಲ್ಲಿ ತಮಗೆ ದೊರೆತ ರಾಜೋಪಚಾರ ಹಾಗೂ ಅದ್ಭುತ ಸೌಲಭ್ಯಗಳ ರೀಲ್ಸ್ ಮಾಡಿ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಟವರ್ ಸೂಟ್‌ನಲ್ಲಿ ಏನೆಲ್ಲಾ ಸೌಕರ್ಯಗಳಿವೆ?
ವಿಶಾಲವಾದ ಲಿವಿಂಗ್ ರೂಮ್, ಅತ್ಯುತ್ತಮ ಮರದ ನೆಲಹಾಸು , ಆಕರ್ಷಕ ಸೋಫಾಗಳು, ವುಡನ್ ಟೇಬಲ್, ಕಾರ್ಪೆಟ್ ಹಾಗೂ ಕಣ್ಣಿಗೆ ತಂಪು ನೀಡುವ ಲೈಟಿಂಗ್ ವ್ಯವಸ್ಥೆ ಇಲ್ಲಿದೆ. ಸಂಪೂರ್ಣ ಸುಸಜ್ಜಿತ ಅಡುಗೆಮನೆ, ಅಡುಗೆ ಮಾಡಲು ಮೈಕ್ರೋವೇವ್, ರೆಫ್ರಿಜರೇಟರ್ ಹಾಗೂ ಬಟ್ಟೆ ಒಗೆಯಲು ವಾಷಿಂಗ್ ಮೆಷಿನ್ ಒಳಗೊಂಡ ಮಾಡರ್ನ್ ಕಿಚನ್ ನೀಡಲಾಗಿದೆ. ಸಾಂಪ್ರದಾಯಿಕ ಶೈಲಿಯ 'ಫೋರ್-ಪೋಸ್ಟರ್ ಬೆಡ್', ಕಚೇರಿ ಕೆಲಸ ನಿರ್ವಹಿಸಲು ಪ್ರತ್ಯೇಕ 'ವರ್ಕ್ ಸ್ಟೇಷನ್' ಹಾಗೂ ಖಾಸಗಿ ಬಾಲ್ಕನಿ ಸೌಲಭ್ಯವಿದೆ. ಉಚಿತ ಉಪಾಹಾರ ಬಫೆ , ಈವನಿಂಗ್ ಕಾಕ್ಟೈಲ್ ಅವರ್ಸ್ ಮತ್ತು ಹೈ ಟೀ ಸೇವೆಗಳನ್ನು ದಂಪತಿಗಳು ಪಡೆದುಕೊಂಡಿದ್ದಾರೆ.
ಸಿಬ್ಬಂದಿಯ ಆತಿಥ್ಯವನ್ನು ಶ್ಲಾಘಿಸಿದ ಶಿವಾಂಗಿ, ನಾವು ಹೊರಗೆ ಹೋಗಿ ಬಂದಾಗಲೆಲ್ಲಾ ಹೋಟೆಲ್ ಸಿಬ್ಬಂದಿ ರೂಮ್ ಸ್ವಚ್ಛಗೊಳಿಸಿ, ಸಣ್ಣ ಅಚ್ಚರಿಗಳು ಮತ್ತು ಸಿಹಿ ತಿನಿಸುಗಳನ್ನು ಇಡುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಒಂದು ರಾತ್ರಿಯ ಬಾಡಿಗೆ ಎಷ್ಟು ಗೊತ್ತಾ?
ದಿ ಲೀಲಾ ಪ್ಯಾಲೇಸ್ ವೆಬ್‌ಸೈಟ್‌ನ ಮಾಹಿತಿಯಂತೆ, ಈ ‘ಟವರ್ ಸೂಟ್’ನಲ್ಲಿ ಒಂದು ರಾತ್ರಿ ತಂಗಲು ತೆರಿಗೆಗಳನ್ನು ಹೊರತುಪಡಿಸಿ ₹ 76,868 ರಿಂದ ₹ 92,850 ವರೆಗೆ ವೆಚ್ಚವಾಗುತ್ತದೆ. ಈ ಲೆಕ್ಕಾಚಾರದಲ್ಲಿ 21 ದಿನಗಳ ವಾಸ್ತವ್ಯಕ್ಕೆ ಕಂಪನಿಯು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದೆ.


