ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ, ಸಿಐಡಿ ಅಧಿಕಾರಿಗಳು ಹಿರಿಯ ಐಎಎಸ್ ಅಧಿಕಾರಿ ಮತ್ತು ಮಾಜಿ ಪರೀಕ್ಷಾ ನಿಯಂತ್ರಕ ಗ್ಯಾನೇಂದ್ರ ಅವರನ್ನು ಬಂಧಿಸಿದ್ದಾರೆ. ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಗಂಭೀರ ಆರೋಪ ಅವರ ಮೇಲಿದ್ದು, ಈ ಅಕ್ರಮದಲ್ಲಿ ಅವರ ನೇರ ಪಾತ್ರವಿರುವ ಬಗ್ಗೆ ಸಿಐಡಿಗೆ ಬಲವಾದ ಸಾಕ್ಷಿಗಳು ಲಭ್ಯವಾಗಿವೆ.
ಬೆಂಗಳೂರು (ಆ.31): ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆ ಹಗರಣ ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಬೆಳವಣಿಗೆಯೊಂದರಲ್ಲಿ, ಕೆಪಿಎಸ್‌ಸಿ ಮಾಜಿ ಪರೀಕ್ಷಾ ನಿಯಂತ್ರಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಗ್ಯಾನೇಂದ್ರ ಅವರನ್ನು ಸಿಐಡಿ (CID) ಅಧಿಕಾರಿಗಳು ಬಂಧಿಸಿದ್ದಾರೆ. ಹಾಗಾದರೆ, ಈ ಅಕ್ರಮದಲ್ಲಿ ಐಎಎಸ್ ಅಧಿಕಾರಿ ಗ್ಯಾನೇಂದ್ರ ಅವರ ಪಾತ್ರವೇನು? ಅವರ ಬಂಧನಕ್ಕೆ ಪ್ರಮುಖ ಕಾರಣಗಳೇನು ಎಂಬ ಸಂಪೂರ್ಣ ವಿವರ ಇಲ್ಲಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ರಾ ಗ್ಯಾನೇಂದ್ರ?
ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಭಾರೀ ಪ್ರಮಾಣದಲ್ಲಿ ಅಕ್ರಮ ನಡೆದಿರುವುದು ತನಿಖೆಯಿಂದ ಬಯಲಾಗಿದೆ. ಪರೀಕ್ಷೆಗೂ ಮುನ್ನವೇ ರಹಸ್ಯವಾಗಿಡಬೇಕಿದ್ದ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಗ್ಯಾನೇಂದ್ರ ಅವರ ಮೇಲಿದೆ. ಕೆಪಿಎಸ್‌ಸಿಯಲ್ಲಿ ಪರೀಕ್ಷಾ ನಿಯಂತ್ರಕರಾಗಿ (Exam Controller) ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಇವರ ನೇತೃತ್ವದಲ್ಲೇ ಈ ಅಕ್ರಮ ನಡೆದಿದೆ ಎನ್ನಲಾಗಿದೆ.
CID ಬಳಿ ಇವೆ ಬಲವಾದ ಸಾಕ್ಷಿಗಳು:
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಗ್ಯಾನೇಂದ್ರ ಅವರ ನೇರ ಪಾತ್ರವಿರುವ ಬಗ್ಗೆ ಸಿಐಡಿ (CID) ತನಿಖಾಧಿಕಾರಿಗಳಿಗೆ ನಿರ್ಣಾಯಕ ಸಾಕ್ಷಿಗಳು ಲಭ್ಯವಾಗಿವೆ ಎನ್ನಲಾಗಿದೆ. ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಂತಿಮವಾಗಿ ಆಯ್ಕೆಯಾದ ಕೆಲವೇ ಕೆಲವು ಅಭ್ಯರ್ಥಿಗಳಿಗೆ, ಪರೀಕ್ಷೆ ನಡೆಯುವುದಕ್ಕೂ ಮುನ್ನವೇ ಪ್ರಶ್ನೆ ಪತ್ರಿಕೆ ಹಾಗೂ ಉತ್ತರಗಳು ಲಭ್ಯವಾಗಿದ್ದವು ಎಂಬ ಸ್ಫೋಟಕ ಅಂಶ ತನಿಖೆಯಿಂದ ಹೊರಬಂದಿದೆ.
ಸಂವಿಧಾನಬದ್ಧ ಹುದ್ದೆಯಲ್ಲಿದ್ದುಕೊಂಡು ಪಾವಿತ್ರ್ಯತೆ ಕಾಪಾಡಬೇಕಿದ್ದ ಅಧಿಕಾರಿಯೇ ಇಂತಹ ದೊಡ್ಡ ಮಟ್ಟದ ಅಕ್ರಮದಲ್ಲಿ ಭಾಗಿಯಾಗಿರುವುದು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ, ಸಿಐಡಿ ಅಧಿಕಾರಿಗಳು ಐಎಎಸ್ ಅಧಿಕಾರಿ ಗ್ಯಾನೇಂದ್ರ ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿ ಬಂಧನ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಈ ಹಗರಣದಲ್ಲಿ ಇನ್ನೂ ಯಾರ್ಯಾರ ಕೈವಾಡವಿದೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.


