ಅಮೆಜಾನ್ ಕಂಪನಿಯಿಂದ ವಜಾಗೊಂಡ ಮಾರಿಯಾ ಹರ್ಷಿತಾ ಎಂಬ ಮಹಿಳೆ, ಬೇರೆ ಉದ್ಯೋಗ ಸಿಗದಿದ್ದಾಗ ಧೃತಿಗೆಡದೆ ಕೋಳಿ ಸಾಕಣೆ ಉದ್ಯಮವನ್ನು ಆರಂಭಿಸಿದರು. ತಮ್ಮ ಪತಿಯ ಪ್ರೋತ್ಸಾಹದಿಂದ ಮೊಟ್ಟೆ ಮಾರಾಟವನ್ನು ಪ್ರಾರಂಭಿಸಿ, ಐಟಿ ಕೌಶಲ್ಯಗಳನ್ನೇ ಬಳಸಿ ಇಂದು ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.
ಅಮೆಜಾನ್‌ನಂತಹ ಪ್ರಮುಖ ಕಾರ್ಪೊರೇಟ್ ಕಂಪನಿಯಲ್ಲಿ ಉದ್ಯೋಗ ಕಳೆದುಕೊಂಡ ನಂತರ ಹೆಚ್ಚಿನವರು ಮತ್ತೊಂದು ಐಟಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಸಾಂಪ್ರದಾಯಿಕ ಕಾರ್ಪೊರೇಟ್ ರೇಖೆಯನ್ನು ದಾಟಿ ಸಂಪೂರ್ಣ ವಿಭಿನ್ನ ಹಾಗೂ ಅನಿರೀಕ್ಷಿತ ಹಾದಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕೆಲಸ ಹೋದರೂ ಧೃತಿಗೆಡದೆ ಕೋಳಿ ಸಾಕಣೆ ಹಾಗೂ ಮೊಟ್ಟೆ ಮಾರಾಟದ ಉದ್ಯಮಕ್ಕೆ ಧುಮುಕಿ, ಇಂದು ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.
ಅಮೆಜಾನ್ ವಜಾದಿಂದ ಸ್ವಂತ ಉದ್ಯಮದವರೆಗೆ
ಈ ಸ್ಪೂರ್ತಿದಾಯಕ ಕಥೆಯನ್ನು ಹಂಚಿಕೊಂಡವರು ಲಿಂಕ್ಡ್‌ಇನ್ (LinkedIn) ಬಳಕೆದಾರರಾದ ಮಾರಿಯಾ ಹರ್ಷಿತಾ. ಮಾರ್ಚ್ 2026 ರಲ್ಲಿ ಅಮೆಜಾನ್‌ನಿಂದ ವಜಾಗೊಂಡ ಸುದ್ದಿಯನ್ನು ಮ್ಯಾನೇಜರ್ ತಲುಪಿಸಿದಾಗ, ಹರ್ಷಿತಾ ಧೃತಿಗೆಡದೆ ದೈರ್ಯವಾಗಿ ಸ್ವೀಕರಿಸಿದ್ದರು. ತಮಗೆ ಅಗತ್ಯವಿದ್ದಾಗ ಈ ಕೆಲಸ ಸಿಕ್ಕಂತೆ, ಮುಂದೆಯೂ ಮತ್ತೊಂದು ಉತ್ತಮ ಅವಕಾಶ ತನ್ನನ್ನು ಅರಸಿ ಬರಲಿದೆ ಎಂಬ ನಂಬಿಕೆ ಅವರಲ್ಲಿತ್ತು.
ಆದರೆ ವಾಸ್ತವವೇ ಬೇರೆಯೇ ಆಗಿತ್ತು. ಹಿರಿಯರು, ಕುಟುಂಬಸ್ಥರು ಹಾಗೂ ಕಾಂಟ್ಯಾಕ್ಟ್‌ಗಳ ಮೂಲಕ ಕೆಲಸಕ್ಕೆ ಎಷ್ಟೇ ಅರ್ಜಿ ಸಲ್ಲಿಸಿದರೂ ಅವರಿಗೆ ಸೂಕ್ತ ಅವಕಾಶಗಳು ಸಿಗಲಿಲ್ಲ. ನನ್ನ ಇಡೀ ವೃತ್ತಿಜೀವನವು ಪ್ರಾಡಕ್ಟ್ ಮ್ಯಾನೇಜ್‌ಮೆಂಟ್ ಸುತ್ತಲೇ ಇತ್ತು. ಆ ಕ್ಷೇತ್ರದಲ್ಲಿ ಕೌಶಲ್ಯ ಹೆಚ್ಚಿಸಿಕೊಂಡು ಮುಂದೆ ಬರಬೇಕೆಂಬ ಆಸೆ ಇತ್ತು. ಆದರೆ ಪರಿಸ್ಥಿತಿ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಹರ್ಷಿತಾ ನೆನಪಿಸಿಕೊಳ್ಳುತ್ತಾರೆ.
ಈ ಸಂಕಷ್ಟದ ಸಮಯದಲ್ಲಿ ಅವರ ಪತಿ ಖಾನಿಷ್ಕಾ ಡೇವಿಡ್ ನೀಡಿದ ಸಲಹೆ ಬದುಕಿಗೇ ಹೊಸ ತಿರುವು ನೀಡಿತು. ನೀನೇ ಏಕೆ ಸ್ವಂತ ಪ್ರಾಡಕ್ಟ್ ತಯಾರಿಸಿ ಉದ್ಯಮಿಯಾಗಬಾರದು? ಎಂದು ಪತಿ ನೀಡಿದ ಪ್ರೋತ್ಸಾಹ, ಅವರಲ್ಲಿ ಹೊಸ ಭರವಸೆ ಮೂಡಿಸಿತು.
ಆರು ಹುಂಜಗಳಿಂದ ಆರಂಭವಾದ ಯಶಸ್ಸಿನ ಪಯಣ!
ಆರಂಭದಲ್ಲಿ ದಂಪತಿಗಳು ಸಣ್ಣ ಗೂಡು ನಿರ್ಮಿಸಿ ಆರು ಕೋಳಿ ಮರಿಗಳನ್ನು ತಂದರು. ಕೆಲಸಕ್ಕೆ ಅರ್ಜಿ ಸಲ್ಲಿಸುತ್ತಲೇ ಹರ್ಷಿತಾ ಅವುಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಆದರೆ ತಂದ ಆರೂ ಮರಿಗಳು ಬೆಳೆದು ಹುಂಜಗಳಾದಾಗ ಸಣ್ಣ ಹಿನ್ನಡೆಯಾಯಿತು!
ಬಿಕರಿಯಾಗದ ಹುಂಜಗಳ ನಂತರ, ಮಕ್ಕಳಿಗೆ ತಾಜಾ ಮೊಟ್ಟೆ ಸಿಗಲಿ ಎಂಬ ಉದ್ದೇಶದಿಂದ ಕೋಳಿಗಳನ್ನು ಸಾಕಲು ಪತಿಯನ್ನು ಒಪ್ಪಿಸಿದರು. ಗೂಡನ್ನು ವಿಸ್ತರಿಸಿ ಹೆಚ್ಚಿನ ಕೋಳಿಗಳನ್ನು ತರಲಾಯಿತು. ಶೀಘ್ರದಲ್ಲೇ ಮೊಟ್ಟೆಗಳ ಉತ್ಪಾದನೆ ಆರಂಭವಾಗಿ, ಹರ್ಷಿತಾ ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ತೊಡಗಿದರು. ಆಗಲೇ ತಾನೊಂದು ಪೂರ್ಣ ಪ್ರಮಾಣದ ಉದ್ಯಮವನ್ನು ಸೃಷ್ಟಿಸಿರುವುದು ಅವರ ಅರಿವಿಗೆ ಬಂದಿದ್ದು.
"ಈಗ ಮೊಟ್ಟೆಯೇ ನನ್ನ ಪ್ರಾಡಕ್ಟ್. ಅದಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ, ನಾನು ಪೂರೈಕೆ ಮಾಡುತ್ತಿದ್ದೇನೆ. ಹಿಂದೆ ಐಟಿ ಕಂಪನಿಯಲ್ಲಿ ಮಾಡುತ್ತಿದ್ದ ಪ್ರಾಡಕ್ಟ್ ಮ್ಯಾನೇಜ್‌ಮೆಂಟ್ ಅನ್ನೇ ಈಗ ಮೊಟ್ಟೆಗಳ ಉದ್ಯಮದಲ್ಲಿ ಮಾಡುತ್ತಿದ್ದೇನೆ!" ಎಂದು ಹರ್ಷಿತಾ ತಮಾಷೆಯಾಗಿ ಹೇಳುತ್ತಾರೆ. ಅಷ್ಟೇ ಅಲ್ಲ, ಉದ್ಯಮದ ಡೇಟಾ ವಿಶ್ಲೇಷಣೆಗೆ ತಾವು ಐಟಿಯಲ್ಲಿ ಬಳಸುತ್ತಿದ್ದ 'ಪವರ್ ಬಿಐ' (Power BI) ಟೂಲ್ ಅನ್ನೇ ಇಲ್ಲಿಯೂ ಬಳಸುತ್ತಿರುವುದಾಗಿ ತಿಳಿಸಿದ್ದಾರೆ.
ಈಗ ಅವರ ದೈನಂದಿನ ಸವಾಲುಗಳು ಕೂಡ ಸಂಪೂರ್ಣ ಬದಲಾಗಿವೆ. ಈಗ ನನಗೆ ಆಫೀಸ್‌ನ ಸಭೆಗಳು, ಕಂಪನಿಯ ಚೈಮ್ ಕರೆಗಳು (Chime calls) ಅಥವಾ ಕ್ವಿಪ್ ಶೀಟ್‌ಗಳ (Quip sheet) ಚಿಂತೆಯಿಲ್ಲ. ಬದಲಿಗೆ ಕೋಳಿಗಳನ್ನು ಹಾವು ಮತ್ತು ಹೆಗ್ಗಣಗಳಿಂದ ರಕ್ಷಿಸುವುದೇ ನನ್ನ ಪ್ರಮುಖ ಸವಾಲು ಎನ್ನುತ್ತಾರೆ ಹರ್ಷಿತಾ.
ನೆಟ್ಟಿಗರ ಮೆಚ್ಚುಗೆಯ ಮಹಾಪೂರ
ಮಾರಿಯಾ ಹರ್ಷಿತಾ ಅವರ ಈ ಸಾಹಸಕ್ಕೆ ಲಿಂಕ್ಡ್‌ಇನ್‌ನಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಐಟಿ ಕೆಲಸ ಕಳೆದುಕೊಂಡು ಉದ್ಯೋಗ ಹುಡುಕುವವರನ್ನು 'ಟೆಕ್ ರೆಫ್ಯೂಜಿ' ಎಂದೂ, ಸಂಪೂರ್ಣ ಹೊಸ ಕ್ಷೇತ್ರಕ್ಕೆ ಧುಮುಕಿದವರನ್ನು 'ಟೆಕ್ ಎಕ್ಸ್‌ಪ್ಯಾಟ್' ಎಂದೂ ನೆಟ್ಟಿಗರೊಬ್ಬರು ವ್ಯಾಖ್ಯಾನಿಸಿದ್ದಾರೆ. ಹಿನ್ನಡೆಯನ್ನು ಹೊಸ ಅವಕಾಶವನ್ನಾಗಿ ಪರಿವರ್ತಿಸಲು ನಿಜವಾದ ಧೈರ್ಯ ಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನೀವು ಸ್ವಂತ ಪ್ರಾಡಕ್ಟ್ ಸೃಷ್ಟಿಸಿ, ಬೇಡಿಕೆಯನ್ನು ಪೂರೈಸುತ್ತಾ ಯಶಸ್ವಿ ಉದ್ಯಮಿಯಾಗಿದ್ದೀರಿ. ಅನಿಶ್ಚಿತತೆಯೇ ಸೃಷ್ಟಿಗೆ ಮೂಲ ಎಂದು ಹಲವರು ಅವರ ಸ್ಥಿತಿಸ್ಥಾಪಕತ್ವವನ್ನು (Resilience) ಕೊಂಡಾಡಿದ್ದಾರೆ.


