ಮೊದಲ ಪತ್ನಿಯ ವಿವಾಹ ವಿಚ್ಛೇದನ ಆದೇಶಕ್ಕೆ ನ್ಯಾಯಾಲಯ ತಡೆ ನೀಡಿದ್ದರೆ, ಎರಡನೇ ಪತ್ನಿಯನ್ನು 'ಕಾನೂನುಬದ್ಧ ಪತ್ನಿ' ಎಂದು ಪರಿಗಣಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ, ಆಕೆಗೆ ಪತಿಯಿಂದ ಜೀವನಾಂಶ ಪಡೆಯುವ ಯಾವುದೇ ಕಾನೂನುಬದ್ಧ ಹಕ್ಕಿರುವುದಿಲ್ಲ ಎಂದು ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಬೆಂಗಳೂರು: ಮೊದಲ ಪತ್ನಿಯ ಜೊತೆಗಿನ ವಿವಾಹ ವಿಚ್ಛೇದನ ಆದೇಶಕ್ಕೆ ನ್ಯಾಯಾಲಯದ ತಡೆ (Stay) ಇರುವ ಸಂದರ್ಭದಲ್ಲಿ, ಎರಡನೇ ಪತ್ನಿಯನ್ನು ‘ಕಾನೂನುಬದ್ಧ ಪತ್ನಿ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಹಾಗೂ ಆಕೆಗೆ ಪತಿಯಿಂದ ಜೀವನಾಂಶ ಪಡೆಯುವ ಯಾವುದೇ ಕಾನೂನು ಹಕ್ಕಿರುವುದಿಲ್ಲ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ.
ತಾನು ಎರಡನೇ ಪತ್ನಿಯಾಗಿದ್ದು, ಪತಿಯಿಂದ ಜೀವನಾಂಶ ಕೊಡಿಸಲು ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಪಡಿಸುವಂತೆ ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಕೆ.ಬಿ. ಗೀತಾ ಅವರು ಈ ಮಹತ್ವದ ತೀರ್ಪು ನೀಡಿದ್ದಾರೆ.
ನ್ಯಾಯಪೀಠದ ಪ್ರಮುಖ ಅವಲೋಕನ:
ಅರ್ಜಿದಾರೆಯ ಪತಿಯ ಮೊದಲ ಪತ್ನಿಯ ವಿಚ್ಛೇದನ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ಈ ಹಿಂದೆ ಮಂಜೂರು ಮಾಡಿತ್ತು. ಆದರೆ, ಆ ಆದೇಶವನ್ನು ಪ್ರಶ್ನಿಸಿ ಮೊದಲ ಪತ್ನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ಹೈಕೋರ್ಟ್ ವಿಚ್ಛೇದನ ಆದೇಶಕ್ಕೆ ತಡೆ ನೀಡಿದೆ. "ಹೀಗಾಗಿ ಮೊದಲ ವಿವಾಹವು ಕಾನೂನುಬದ್ಧವಾಗಿ ಇನ್ನೂ ಜೀವಂತವಾಗಿರುತ್ತದೆ. ಮೊದಲ ಮದುವೆ ಚಾಲ್ತಿಯಲ್ಲಿರುವುದು ಎರಡನೇ ಪತ್ನಿಗೂ ತಿಳಿದಿತ್ತು. ಮೊದಲ ಪತ್ನಿಯ ವಿವಾಹ ರದ್ದತಿಗೆ ನ್ಯಾಯಾಲಯದ ತಡೆ ಇರುವಾಗ ಎರಡನೇ ಪತ್ನಿಯನ್ನು ಕಾನೂನುಬದ್ಧ ಪತ್ನಿ ಎಂದು ಪರಿಗಣಿಸಲಾಗದು. ಪರಿಣಾಮವಾಗಿ ಆಕೆಗೆ ಪತಿಯಿಂದ ಜೀವನಾಂಶ ಪಡೆಯುವ ಅರ್ಹತೆಯಿಲ್ಲ" ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ ಏನು?
ಅರ್ಜಿದಾರ ಮಹಿಳೆಯ ಪತಿಗೆ ಈ ಹಿಂದೆಯೇ ವಿವಾಹವಾಗಿತ್ತು. ಕೌಟುಂಬಿಕ ನ್ಯಾಯಾಲಯವು ಮೊದಲ ಪತ್ನಿಗೆ ವಿಚ್ಛೇದನ ನೀಡಿ ತೀರ್ಪು ನೀಡಿತ್ತು. ಇದನ್ನು ನಂಬಿ, ಕೌಟುಂಬಿಕ ನ್ಯಾಯಾಲಯದ ಆದೇಶದ ಪ್ರತಿಯನ್ನು ಪರಿಶೀಲಿಸಿದ ನಂತರ ಅರ್ಜಿದಾರೆಯ ಕುಟುಂಬಸ್ಥರು ಆಕೆಯೊಂದಿಗೆ ಎರಡನೇ ವಿವಾಹಕ್ಕೆ ಒಪ್ಪಿಗೆ ನೀಡಿದ್ದರು. ಅದರಂತೆ ಹಿಂದೂ ಸಂಪ್ರದಾಯದ ಪ್ರಕಾರ ಇಬ್ಬರ ವಿವಾಹ ನಡೆದಿತ್ತು.
ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ಹಾಗೂ ಆತನ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಅರ್ಜಿದಾರೆ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ವಿವಾಹವಾದ ನಂತರ ಕೇವಲ 8 ದಿನಗಳ ಕಾಲ ಪತಿಯ ಮನೆಯಲ್ಲಿದ್ದೆ, ಅಷ್ಟೂ ದಿನ ತನ್ನನ್ನು ಕೋಣೆಯಲ್ಲಿ ಕೂಡಿ ಹಾಕಿ, ಕಿಟಕಿಗಳನ್ನು ತೆರೆಯಲೂ ಬಿಡದೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗಿತ್ತು ಎಂದು ಆಕೆ ದೂರಿದ್ದರು.
ತರುವಾಯ ಮನೆಯಿಂದ ಹೊರಬಂದ ಆಕೆ, ಜೀವನ ನಿರ್ವಹಣೆಗೆ ಪತಿಯಿಂದ ಜೀವನಾಂಶ ಕೊಡಿಸುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಮೊದಲ ಪತ್ನಿಯ ವಿಚ್ಛೇದನಕ್ಕೆ ಹೈಕೋರ್ಟ್ ತಡೆ ನೀಡಿರುವುದರಿಂದ ಎರಡನೇ ಮದುವೆ ಕಾನೂನುಬದ್ಧವಲ್ಲ ಎಂಬ ಕಾರಣ ನೀಡಿ ಕೌಟುಂಬಿಕ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ಕೂಡ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದು ಅರ್ಜಿಯನ್ನು ವಜಾಗೊಳಿಸಿ


